ಲಂಡನ್: ಲಿಜ್ ಟ್ರಸ್ ರಾಜೀನಾಮೆ ನೀಡಿದ ಬಳಿಕ ಮುಂದಿನ ಪ್ರಧಾನಿ ಯಾರು ಅನ್ನೋ ಚರ್ಚೆ ಆರಂಭವಾಯಿತು. ಬ್ರಿಟನ್ ಪ್ರಧಾನಿ ಆಯ್ಕೆ ಸಂಬಂಧ ಕನ್ಸರ್ವೇಟೀವ್ ಪಕ್ಷ ರಿಷಿ ಸುನಕ್(42 ವರ್ಷ) ಅವರನ್ನ ಆಯ್ಕೆ ಮಾಡಿದೆ.
ಬ್ರಿಟನ್ ಪ್ರಧಾನಿಯಾಗಿ ರಿಷಿ ಸುನಕ್ ಆಯ್ಕೆಯಾದ ಬಗ್ಗೆ ಸಂಜೆ 6.30ರ ಸುಮಾರಿಗೆ ಅಧಿಕೃತವಾಗಿ ಅವರ ಹೆಸರನ್ನು ಘೋಷಣೆ ಮಾಡಲಾಯಿತು. ಅಕ್ಟೋಬರ್ 28ರಂದು ರಿಷಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಿಷಿ ಸುನಕ್ ಗೆ 193 ಸಂಸದರು ಬೆಂಬಲ ನೀಡಿದ್ದು, ಅವರ ಪ್ರಬಲ ಸ್ಪರ್ಧಿಯಾಗಿದ್ದ ಸಂಸದೆ ಪೆನ್ನಿ ಮೋರ್ಡಾಂಟ್ ಅವರಿಗೆ 26 ಸಂಸದರು ಬೆಂಬಲ ನೀಡಿದ್ದರಿಂದ ಪ್ರಧಾನಿ ಹುದ್ದೆ ಸ್ಪರ್ಧೆಯಿಂದ ಹಿಂದೆ ಸರಿಯಬೇಕಾಯಿತು.
ಬೋರಿಸ್ ಜಾನ್ಸನ್ ರಾಜೀನಾಮೆಯಿಂದ ತೆರವಾದ ಪ್ರಧಾನಿ ಸ್ಥಾನಕ್ಕೆ ಮತದಾನದ ಮೂಲಕ ಲಿಜ್ ಟ್ರಸ್ ಆಯ್ಕೆಯಾಗಿದ್ದರು. ಈ ಚುನಾವಣೆಯಲ್ಲಿ ರಿಷಿ ಸುನಕ್ ಹಿನ್ನಡೆ ಅನುಭವಿಸಿದ್ದರು. ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ 45 ದಿನಕ್ಕೆ ಲಿಜ್ ಟ್ರಸ್ ರಾಜೀನಾಮೆ ನೀಡಿದ್ದರು. ಇದರ ಬೆನ್ನಲ್ಲೇ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಹಾಗೂ ಸುನಕ್ ನಡುವೆ ತೀವ್ರ ಸ್ಪರ್ಧೆ ಎರ್ಪಟ್ಟಿತ್ತು.
ಬೋರಿಸ್ ಆಡಳಿತ ಅವಧಿಯಲ್ಲಿ ಬ್ರಿಟನ್ 40 ವರ್ಷಗಳಲ್ಲೇ ಅತ್ಯಂತ ಭೀಕರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡಿತು. ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿ ಜನರ ಜೀವನ ಕಷ್ಟವಾಗಿತ್ತು. ಇದೇ ಸಮಯದಲ್ಲಿ ನಡೆದ ಪಕ್ಷದ ಆಂತರಿಕ ಸಭೆಯಲ್ಲಿ, ಬೋರಿಸ್‌ನ ತಲೆದಂಡ ಕೇಳಲು ಪ್ರಮುಖ ಕಾರಣವಾಯಿತು. ಕೊನೆಗೂ ಸಂಸದರ ಒತ್ತಾಯಕ್ಕೆ ಮಣಿದು ಜಾನ್ಸನ್ ರಾಜೀನಾಮೆ ಸಲ್ಲಿಸಿದರು.
ಇಂಗ್ಲೆಂಡ್ನಲ್ಲಿ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿರುವ ಸಮಯದಲ್ಲಿ ಕನ್ಸರ್ವೇಟಿವ್ ಪಕ್ಷದ ಲಿಜ್ ಟ್ರಸ್ ಅಧಿಕಾರಕ್ಕೆ ಬಂದಿದ್ದರು. ದೇಶದ ಪರಿಸ್ಥಿತಿ ಬಿಗಡಾಯಿಸಿತು. ಈ ಸಂದರ್ಭದಲ್ಲಿ ಆರ್ಥಿಕ ಸುಧಾರಣೆ ಸಾಧ್ಯವಾಗದ ಕಾರಣ ಲಿಜ್ ಟ್ರಸ್ ರಾಜೀನಾಮೆ ನೀಡಬೇಕಾಯಿತು. ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ 45 ದಿನಗಳಲ್ಲೇ ಅವರು ರಾಜೀನಾಮೆ ನೀಡಿದ್ದರು.
ಭಾನುವಾರದಂದು, ಪ್ರಧಾನಿ ಹುದ್ದೆ ರೇಸ್‍ನಿಂದ ಹಿಂದೆ ಸರಿದಿರುವುದಾಗಿ ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಪ್ರಕಟಿಸಿರುವ ಹಿನ್ನೆಲೆಯಲ್ಲಿ ಭಾರತೀಯ ಮೂಲದ ರಿಷಿ ಸುನಕ್ ಹಾದಿ ಸುಗಮವಾಗಿದೆ. ಪ್ರಧಾನಿ ಹುದ್ದೆ ರೇಸ್‍ನಲ್ಲಿ ಗೆದ್ದವರು ಹಾಲಿ ಪ್ರಧಾನಿ ಲಿಝ್ ಟ್ರುಸ್ ಅವರ ಉತ್ತರಾಧಿಕಾರಿಯಾಗಲಿದ್ದಾರೆ. ತಮಗೆ 102 ಸಂಸದರ ಬೆಂಬಲ ಇದೆ ಎಂದು ಹೇಳಿಕೊಂಡಿದ್ದ ಬೋರಿಸ್ ಜಾನ್ಸನ್ ಇದು ಸೂಕ್ತ ಸಮಯವಲ್ಲ ಎಂಬ ಕಾರಣಕ್ಕೆ ತಾವು ಸ್ಪರ್ಧೆಯಿಂದ ಹಿಂದೆ ಸರಿಯುತ್ತಿರುವುದಾಗಿ ಪ್ರಕಟಿಸಿದ್ದರು.
ರಿಷಿ ಸುನಕ್ ಕಿಂಗ್ ಚಾರ್ಲ್ಸ್ III ಅವರನ್ನು ಭೇಟಿಯಾಗಿ, ಮಾತುಕತೆ ನಡೆಸಲಿದ್ದಾರೆ. ಆ ಬಳಿಕ ಬ್ರಿಟನ್‌ನ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಭಾರತೀಯ ಸಂಜಾತ ರಿಷಿ ಸುನಕ್ ಮಾಹಿತಿ ತಂತ್ರಜ್ಞಾನ ಉದ್ಯಮ ಕ್ಷೇತ್ರದ ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕ ನಾರಾಯಣ ಮೂರ್ತಿ-ಸುಧಾ ಮೂರ್ತಿ ಅವರ ಅಳಿಯ. ರಿಷಿ ಸುನಕ್ ಅವರ ಪತ್ನಿ ಅಕ್ಷತಾ ಮತ್ತು ಮಕ್ಕಳು ಕೃಷ್ಣ ಮತ್ತು ಅನುಷ್ಕಾ ಅವರು.