ಮೂವರು ಯುವತಿಯರು ಭಾರತ ಸರಕಾರವನ್ನು ಕಂಗೆಡಿಸಿ ದಂಗುಬಡಿಸಿ, ಭಕ್ತರ ನಿದ್ದೆಗೆಡಿಸಿದ ಕತೆ
‘ವಿಶ್ವಗುರುʼ ಎನ್ನಿಸಿಕೊಳ್ಳಲು ಪರಿಶ್ರಮಿಸುತ್ತಿರುವ ಭಾರತ ದೇಶ ಈ ಟ್ವೀಟ್‌ಗಳನ್ನು ಕಡೆಗಣಿಸಬಹುದಿತ್ತು. ಇಷ್ಟಕ್ಕೂ ಈ ಮೂವರಲ್ಲಿ ಯಾರೂ ನಮ್ಮ ದೇಶದ ಶಾಂತಿಯನ್ನು ಕದಡುವ ಯತ್ನ ಮಾಡಲಿಲ್ಲ. ದಂಗೆ ಏಳಿರೆಂದು ಕರೆ ಕೊಟ್ಟಿಲ್ಲ. ಶಸ್ತ್ರ ಕೈಗೆತ್ತಿಕೊಳ್ಳಲು ಪ್ರಚೋದನೆ ನೀಡಲಿಲ್ಲ
– ನಾಗೇಶ ಹೆಗಡೆ
ರೈತರ ಟ್ರ್ಯಾಕ್ಟರ್‌ಗಳು ಮತ್ತೊಮ್ಮೆ ದಿಲ್ಲಿಗೆ ಬಾರದಂತೆ, ಕೇಂದ್ರ ಸರಕಾರ ಮೊಳ ಉದ್ದ ಮೊಳೆಗಳನ್ನು, ಮೈಲುದ್ದದ ಮುಳ್ಳುಬೇಲಿಯನ್ನು ಹಾಕಿದ್ದನ್ನು ನೋಡಿ ಜಗತ್ತೇ ಬೆರಗಾಯಿತು.
ಪ್ರಜಾಪ್ರಭುತ್ವದ ಬಾಯಿಗೇ ಹೊಲಿಗೆ ಹಾಕುವಂತೆ ರೈತರ ಮೊಬೈಲ್‌ಗಳಿಗೆ ಸಿಗ್ನಲ್ಲೇ ಬಾರದಂತೆ ಮಾಡಿ, ರೈತರ ಟಾಯ್ಲೆಟ್‌ಗೂ ನೀರಿಲ್ಲದಂತೆ, ಧ್ವನಿವರ್ಧಕಕ್ಕೂ ಕರೆಂಟ್ ಇಲ್ಲದಂತೆ ಮಾಡಿದ್ದನ್ನು ನೋಡಿ ಜಗತ್ತು ದಂಗಾಯಿತು.
“ರೈತ ಹೋರಾಟಕ್ಕೆ ನನ್ನ ಬೆಂಬಲವಿದೆ” ಎಂದು ಮೂವರು ವಿದೇಶೀ ಯುವತಿಯರು ಟ್ಟೀಟ್ ಮಾಡಿದ್ದೇ ತಡ, ಸರಕಾರ ಧಿಗ್ಗನೆದ್ದಿತು. ಹೀಗೆ ಟ್ವೀಟ್ ಮಾಡಿದ್ದೇ ಭಾರೀ ಕ್ರಿಮಿನಲ್ ಕೆಲಸವೆಂಬಂತೆ ದಿಲ್ಲಿ ಪೊಲೀಸರು ಎಫ್‌ಐಆರ್ ಹಾಕಿದರು. ಜಗತ್ತು ನಕ್ಕಿತು.
ಟ್ವೀಟ್ ಮಾಡಿದ್ದು ಯಾರು?
- ರೆಹನ್ನಾ ಹೆಸರಿನ ಒಬ್ಬ ಖ್ಯಾತ ಹಾಡುಗಾರ್ತಿ (ಗ್ಯಾರಿ ಸೋಬರ್ಸ್ ಎಂಬ ಕ್ರಿಕೆಟಿಗನ ತಾಯ್ನಾಡಾದ ಬಾರ್ಬಡೋಸ್ ದೇಶದವಳು).
- ಹದಿಹರಯದ ಗ್ರೇಟಾ ಥನ್‌ಬರ್ಗ್ ಎಂಬ ಪರಿಸರ ಹೋರಾಟಗಾರ್ತಿ;
- ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಸೊಸೆ (ಅಡ್ವೊಕೇಟ್) ಮೀನಾ ಹ್ಯಾರಿಸ್.
‘ವಿಶ್ವಗುರುʼ ಎನ್ನಿಸಿಕೊಳ್ಳಲು ಪರಿಶ್ರಮಿಸುತ್ತಿರುವ ಭಾರತ ದೇಶ ಈ ಟ್ವೀಟ್‌ಗಳನ್ನು ಕಡೆಗಣಿಸಬಹುದಿತ್ತು. ಇಷ್ಟಕ್ಕೂ ಈ ಮೂವರಲ್ಲಿ ಯಾರೂ ನಮ್ಮ ದೇಶದ ಶಾಂತಿಯನ್ನು ಕದಡುವ ಯತ್ನ ಮಾಡಲಿಲ್ಲ. ದಂಗೆ ಏಳಿರೆಂದು ಕರೆ ಕೊಟ್ಟಿಲ್ಲ. ಶಸ್ತ್ರ ಕೈಗೆತ್ತಿಕೊಳ್ಳಲು ಪ್ರಚೋದನೆ ನೀಡಲಿಲ್ಲ.
ಜಗತ್ತಿನ ಯಾವ ದೇಶದಲ್ಲಾದರೂ ಅಲ್ಲಿನ ಸರಕಾರ ಕೋಟ್ಯಂತರ ಜನರ ಧ್ವನಿಯನ್ನು ಹತ್ತಿಕ್ಕುವ ಯತ್ನ ನಡೆಸಿದ್ದರೆ ಅಂತಃಕರಣ ಇರುವವರು ಯಾವ ದೇಶದವರಾಗಿದ್ದರೂ ಖಂಡಿಸುತ್ತಾರೆ. ಖಂಡಿಸಬೇಕು. ನಾವು ಮಯನ್ಮಾರ್ ವಿದ್ಯಮಾನವನ್ನು ಖಂಡಿಸುತ್ತೇವೆ. ಈ ಮೂವರು ಮಹಿಳೆಯರು ತಮ್ಮ ಟ್ವೀಟ್‌ನಲ್ಲಿ ಯಾರನ್ನೂ ಖಂಡಿಸಲೂ ಇಲ್ಲ. ಸುಮ್ಮನೆ ʼಭಾರತದ ರೈತರ ಶಾಂತಿಪೂರ್ಣ ಹೋರಾಟಕ್ಕೆ ನಮ್ಮ ಬೆಂಬಲವಿದೆʼ ಎಂದರು ಅಷ್ಟೆ.
ಕಳೆದ 75 ದಿನಗಳಿಂದ ಲಕ್ಷಾಂತರ ರೈತರು ತಮ್ಮ ಜಾತಿ, ಧರ್ಮ, ಭಾಷೆ, ಪಕ್ಷ ಪಂಥ ಎಲ್ಲವನ್ನೂ ಮರೆತು ಒಗ್ಗಟ್ಟಿನಿಂದ ಚಳಿ, ಮಳೆಗೂ ಬಗ್ಗದೆ ಹರತಾಳ ಆಚರಿಸುತ್ತಿದ್ದಾರೆ. ಸುಮಾರು 120 ಜನರು ಸಾವನಪ್ಪಿದ್ದಾರೆ. ಅನುಕಂಪವುಳ್ಳ ಯಾರಾದರೂ ಹೇಳುವ ಮಾತು ಅದು.
ಅಷ್ಟಕ್ಕೇ ಧಿಗ್ಗನೆದ್ದ ಸರಕಾರ, ವಿದೇಶಾಂಗ ಸಚಿವರ ಮೂಲಕ “ಭಾರತದ ವಿರುದ್ಧ ಅಪ ಪ್ರಚಾರ ಕೂಡದು” ಎಂಬರ್ಥದ ಟ್ವೀಟ್ ಮಾಡಿಸಿತು. “ಭಾರತದ ಐಕ್ಯತೆಗೆ ಧಕ್ಕೆ ತರಲೆಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆದ ಭಾರೀ ಕುತಂತ್ರ ಇದು” ಎಂದು ಕಪಿಲ್ ಮಿಶ್ರಾ ಎಂಬ ದಿಲ್ಲಿಯ ಬಿಜೆಪಿ ರಾಜಕಾರಣಿ ಘೋಷಿಸಿದರು (ಈತನ ಉದ್ರೇಕಕಾರಿ ಭಾಷಣದಿಂದಾಗಿಯೇ ಕಳೆದ ವರ್ಷ ದಿಲ್ಲಿಯಲ್ಲಿ ಕೋಮುದಂಗೆ ಭುಗಿಲೆದ್ದು 23 ಜನರು ಪ್ರಾಣ ತೆರುವಂತಾಯಿತು-ಅದಿರಲಿ).
ಈ ಯುವತಿಯರ ಟ್ವೀಟ್ ನಿಂದ ಭಾರತದ ಐಕ್ಯತೆಗೆ ಈಗ ಅದೇನು ಧಕ್ಕೆ ಬಂತೊ?
ಅಷ್ಟಕ್ಕೇ ಮುಗಿದಿದ್ದರೆ ಬೇರೆ ಮಾತಿರಲಿಲ್ಲ. ಆದರೆ , ಭಾರತ ಸರಕಾರ ಬಾಲಿವುಡ್ ಸ್ಟಾರ್‌ಗಳನ್ನು ಹಿಡಿದು ಅವರ ಮೂಲಕ ಮುಯ್ಯಿ ಮರುಟ್ವೀಟ್ ಮಾಡಿಸಲು ಮುಂದಾಯಿತು.
“ಭಾರತದ ಸಾರ್ವಭೌಮತ್ವದ ವಿಷಯದಲ್ಲಿ ರಾಜಿಯ ಪ್ರಶ್ನೆಯೇ ಇಲ್ಲ. ನಮ್ಮ ಸಮಸ್ಯೆಗಳ ಪರಿಹಾರಕ್ಕೆ ಹೊರಗಿನವರು ಬೇಕಾಗಿಲ್ಲ” ಎಂಬರ್ಥದಲ್ಲಿ ಭಾರತ ರತ್ನದ್ವಯ ಸಚಿನ್ ತೆಂಡೂಲ್ಕರ್ ಮತ್ತು ಲತಾ ಮಂಗೇಶ್ಕರ್ ಸೇರಿದಂತೆ, ಕ್ರಿಕೆಟಿಗ ಕುಂಬ್ಳೆ, ವಿರಾಟ್ ಕೊಹ್ಲಿ, ಬಾಲಿವುಡ್ ನಟ ಅಕ್ಷಯ ಕುಮಾರ್, ಕರಣ್ ಜೋಹರ್ ಮುಂತಾದವರ ಮೂಲಕ ಆಲ್ಮೋಸ್ಟ್ ಏಕರೂಪದ ಟ್ವೀಟ್ ಮಾಡಿಸಲಾಯಿತು. ಗ್ರೇತಾ ಥನ್‌ಬರ್ಗ್ ವಿರುದ್ಧ ಎಫ್‌ಐಆರ್ ಹಾಕಿತು.
ಜಗತ್ತು ಗೊಳ್ಳೆಂದು ನಕ್ಕಿತು
ಮೂವರು ವನಿತೆಯರಿಂದ ಭಾರತ ಸರಕಾರದ ಜಂಘಾಬಲ ಉಡುಗಿತೆ? ಅಷ್ಟೊಂದು ದುರ್ಬಲವೆ ನಮ್ಮ ದೇಶ? ಕಳೆದ ವರ್ಷ ಇದೇ ದಿನಗಳಲ್ಲಿ ಅಹಮ್ಮದಾಬಾದಿನ ಕೊಳೆಗೇರಿಗಳು ಟ್ರಂಪ್ ಕಣ್ಣಿಗೆ ಬೀಳಬಾರದೆಂದು ಉದ್ದುದ್ದ ಗೋಡೆ ಕಟ್ಟುವ ಕೆಲಸ ನಡೆದಿತ್ತು. ಈಗ ಮುಷ್ಕರನಿರತ ರೈತರು ಮಾಧ್ಯಮಗಳ ಕಣ್ಣಿಗೆ ಬೀಳಬಾರದೆಂದು ಬಂಗಾರ ಬಣ್ಣದ ಲೋಹದ ಗೋಡೆಗಳನ್ನು, ದಿಲ್ಲಿಯ ಹೊರವಲಯದಲ್ಲಿ ನಿರ್ಮಿಸಲಾಗಿದೆ. ಚೀನಾ ಗಡಿಯಲ್ಲೂ ಕಾಣಲಾಗದ ಬಿಗಿ ಭದ್ರತೆಯನ್ನು ಹೆದ್ದಾರಿಯಲ್ಲಿ ಜಡಿದು, ಅಂಬುಲೆನ್ಸ್ ಕೂಡ ಓಡಾಡಲಾಗದಂತೆ ಮಾಡಲಾಗಿದೆ.
ನಮ್ಮ ದೇಶದ ವಾಸ್ತವಗಳನ್ನು ಮರೆಮಾಚಲು ಹೀಗೆಲ್ಲ ಯತ್ನಿಸಿ ನಗೆಪಾಟಲಿಗೆ ತುತ್ತಾಗುವುದರಿಂದ ರಾಷ್ಟ್ರದ ಘನತೆ ಹೆಚ್ಚುತ್ತದೆಯೆ? ಘನತೆಗೆ ವಿಶೇಷ ಮೆರುಗು ಕೊಡಲೆಂದು ಸಚಿನ್ ತೆಂಡೂಲ್ಕರಂಥ ಹೆಕ್ಕಿ ತೆಗೆದ ಹೀರೋಗಳ ಮೂಲಕ ಟ್ವೀಟ್ ಮಾಡಿಸಲು ಹೋಗಿ ಅವರನ್ನೂ ನಗೆಪಾಟಲಿಗೆ ತುತ್ತಾಗಿಸಿದ್ದು ಸರಿಯೆ?
ಇದನ್ನೂ ಓದಿ : ಅನ್ನದಾತರ ಹೋರಾಟಕ್ಕೆ ಹೆಚ್ಚಿದ ಸೆಲೆಬ್ರಿಟಿಗಳ ಬೆಂಬಲ
ಇಷ್ಟೆಲ್ಲ ಕೆದಕಲು ಕಾರಣ ಏನೆಂದರೆ, ನಾನು ಗ್ರೇತಾ ಬಗ್ಗೆ ಪುಸ್ತಕ ಬರೆದಿದ್ದನ್ನು ನೆನಪಿಸಿಕೊಂಡು ಅನೇಕ ಮೋದಿಭಕ್ತರು ಇದೇ ಸುಸಂದರ್ಭವೆಂದು ನನ್ನ ಕಾಲೆಳೆಯಲು ಧಾವಿಸಿ ಬಂದರು. “ಪವನಜ ಎಂಬ ನೆಟ್ ತಜ್ಞ” “ನೀವು ಈ ಹೋರಾಟಗಾರ್ತಿ ಬಗ್ಗೆ ತಾನೆ ಪುಸ್ತಕ ಬರೆದದ್ದು? ಈಗ ನೋಡಿ. ಆಕೆಯ ಬಂಡವಾಳ ಹೊರಬಿದ್ದಿದೆ” ಎಂದು ತಮ್ಮ ಗೋಡೆಯ ಮೇಲೆ ಬರೆದುಕೊಂಡರು.”
ಅದಕ್ಕೆ ಪ್ರತ್ಯುತ್ತರವಾಗಿ ಶ್ರೀವತ್ಸ ಜೋಷಿ ಎಂಬ ಅಮೆರಿಕದ ಅನಿವಾಸಿ ಟೆಕಿಯೊಬ್ಬರು ಗ್ರೇತಾಳನ್ನು ಮತ್ತು ನನ್ನನ್ನು ಇನ್ನಷ್ಟು ಲೇವಡಿ ಮಾಡಿದರು. “(ಗ್ರೇತಾಳದು) ಬಂಡವಾಳ ಅಲ್ಲ, ಭಂಡ ಬಾಳ್ವೆ. ಅಂಥವಳನ್ನು ಎತ್ತಿಮುದ್ದಾಡುವವರಿಗೋ ತಲೆಯಲ್ಲೇನಿದೆ ಎಂದು ಅವರಿಗೇ ಗೊತ್ತಿದ್ದಂತಿಲ್ಲ” ಎಂದರು.
ಡಾ. ಕಿರಣ್ ಸೂರ್ಯ ಕೂಡ “ಪುಸ್ತಕ ಬರೆಸಿಕೊಳ್ಳುವಷ್ಟು ಘನಂದಾರಿ ಕೆಲಸವನ್ನು ಆಕೆ ಮಾಡಿರಲಿಲ್ಲ. ಪುಸ್ತಕ ರಚನೆ ತೀರಾ premature ನಿರ್ಧಾರವಾಯಿತು ಎಂದು ಅನ್ನಿಸಿತ್ತು. ಈಗ ಆಕೆ ಮಾಡುತ್ತಿರುವ ತಪ್ಪುಗಳನ್ನು ವಿಧಿಯಿಲ್ಲದೇ ಸಮರ್ಥಿಸಿಕೊಳ್ಳಬೇಕಾದ ಅನಿವಾರ್ಯತೆ ಬಂದಿದೆ! ಬಿಸಿತುಪ್ಪ!” ಎಂದು ಕಣ್ಣೀರು ಸುರಿಸುವ ಐಕಾನ್ ಹಾಕಿದರು.
ಈ ಮೂವರು ಗೌರವಾನ್ವಿತರೂ ಗ್ರೇತಾ ಮಾಡಿದ ತಪ್ಪು ಏನೆಂದು ಬರೆಯಲಿಲ್ಲ. ಸುಮ್ಮನೆ ಬೇರೆ ಯಾರದೋ ಉಗುಳಿದ್ದನ್ನು ಪವನಜ ತಮ್ಮ ಗೋಡೆಗೆ ಅಂಟಿಸಿಕೊಂಡು ನನ್ನನ್ನು ಹೀಗಳೆಯಲು ಬಳಸಿಕೊಂಡರು. ತನಗೆ ತುರಿಕೆ ಹತ್ತಿದಾಗಲೆಲ್ಲ ಬೇರೆಯವರ ಮೈಯನ್ನು ಕೆರೆಯಲು ಹೊರಟ ಹಾಗೆ.
ಗ್ರೇತಾ ಥನ್‌ಬರ್ಗ್ ರೈತರನ್ನು ಬೆಂಬಲಿಸಿದ್ದು ತಪ್ಪೆ? ಅವಳದು ಭಂಡ ಬಾಳ್ವೆಯೆ?
18 ವರ್ಷದ ಆ ಹುಡುಗಿಯ ಗೌರವಾರ್ಥ ಅವಳ ದೇಶವಾದ ಸ್ವೀಡನ್ನಿನಲ್ಲಿ ಅಂಚೆ ಚೀಟಿ ಬಿಡುಗಡೆ ಮಾಡಲಾಗುತ್ತಿದೆ. ಅವಳಿಗೆ ಬದಲೀ ನೊಬೆಲ್ ಪ್ರಶಸ್ತಿ ಸಿಕ್ಕಿದೆ. ಗೌರವ ಡಾಕ್ಟರೇಟ್ ನೀಡಲಾಗಿದೆ. ಟೈಮ್ ವಾರಪತ್ರಿಕೆಯೂ ಸೇರಿದಂತೆ ಅನೇಕ ಪತ್ರಿಕೆಗಳು ಅವಳನ್ನು ಹೊಸಪೀಳಿಗೆಯ ಗಟ್ಟಿಧ್ವನಿ ಎಂದೆಲ್ಲ ಶ್ಲಾಘಿಸಿ ಎತ್ತಿ ಮೆರೆದಿವೆ. ಬ್ರಿಟನ್, ಫ್ರಾನ್ಸ್ ಮತ್ತು ಐರೋಪ್ಯ ಸಂಸತ್ತಿಗೆ, ದಾವೋಸ್ ಆರ್ಥಿಕ ಸಮ್ಮೇಳನಕ್ಕೆ, ಅಷ್ಟೇಕೆ ವಿಶ್ವಸಂಸ್ಥೆಯ ಮಹಾಸಭೆಗೆ ಅವಳನ್ನು ಉಪನ್ಯಾಸಕ್ಕೆ ಕರೆಸಿ ಗೌರವಿಸಲಾಗಿದೆ.
ಇದನ್ನೂ ಓದಿ : ರೈತರ ಹೋರಾಟಕ್ಕೆ ವಿದೇಶಿ ಆಟಗಾರರ ಬೆಂಬಲ
ಅವಳ ಬಗ್ಗೆ ನಾನು ಪುಸ್ತಕ ಬರೆದಿದ್ದು ತೀರಾ premature ಅನ್ನಿಸಿತೆ, ಡಾಕ್ಟರ್ ಕಿರಣ್ ಸೂರ್ಯರೆ? ಆ ಹುಡುಗಿ ಮೋದಿ ಸರಕಾರವನ್ನು ಬೆಂಬಲಿಸಿದ್ದಿದ್ದರೆ ಆಗ mature ಆಗುತ್ತಿದ್ದಳೆ? ಅವಳ ನಡೆಯಲ್ಲಿ ಈಗೇನು ತಪ್ಪು ಕಾಣಿಸಿದೆ?
ಅವಳದ್ದು ಭಂಡ ಬಾಳ್ವೆಯೆ ಶ್ರೀವತ್ಸ ಜೋಷಿಯವರೆ? ಅವಳನ್ನುಎತ್ತಿ ಮುದ್ದಾಡಿದವರೆಲ್ಲರ ತಲೆ ಖಾಲಿಯೆ? ನನ್ನ ತಲೆಯಲ್ಲಿ ಹೆಚ್ಚೇನೂ ಇರಲಿಕ್ಕಿಲ್ಲ ಸರಿ. ಆದರೆ ನಾನು ಹಿಂದೆ ಕಾಂಗ್ರೆಸ್ ಸರಕಾರದ ನೀತಿಗಳನ್ನು ಆಗೀಗ ಟೀಕಿಸುತ್ತಿದ್ದಾಗ ನನಗೆ ಅಷ್ಟೆಲ್ಲ ಗೌರವ ಸಮ್ಮಾನ ಮಾಡಿ ನಿಮ್ಮ ಪುಸ್ತಕದ ಬಿಡುಗಡೆಗೂ ನನ್ನನ್ನೇ ಆಮಂತ್ರಿಸಿ ಎತ್ತಿ ಮೆರೆದಿರಲ್ಲ! ಆಗ ನನ್ನ ತಲೆಯಲ್ಲಿ ಏನೇನು ಕಂಡಿತೊ ನಿಮಗೆ? ನನ್ನ ವೃತ್ತಿಧರ್ಮಕ್ಕೆ ಬದ್ಧನಾಗಿ ಈಗಿನ ಸರಕಾರದ ಕೆಲವು ಧೋರಣೆಗಳನ್ನು ಪ್ರಶ್ನಿಸತೊಡಗಿದ ನಂತರ ನನ್ನ ಮೇಲೆ ಪದೇ ಪದೇ ತಿರುಗಿ ಬೀಳತೊಡಗಿದಿರಿ. ನಿಮ್ಮ ವೃತ್ತಿಧರ್ಮವನ್ನು, ಪ್ರತಿಭೆ, ಪಾಂಡಿತ್ಯವನ್ನು ನಾನು ಎಂದಾದರೂ ಜರೆದಿದ್ದಿದೆಯೆ? ನಾನು ಬರೆದುದನ್ನು ಇನ್ನೆಂದೂ ಓದುವುದಿಲ್ಲವೆಂದು ನಿಮಗೆ ನೀವೇ ಕಣ್ಣಿಗೆ ಪಟ್ಟಿ ಹಾಕಿಕೊಂಡಂತೆ ನನ್ನನ್ನು ಬ್ಲಾಕ್ ಮಾಡಿದಿರಿ. ನಂತರ ನೀವೇ ಬ್ಲಾಕ್ ತೆರವು ಮಾಡಿಕೊಂಡು, ಮತ್ತೆ ನನ್ನ ಗೋಡೆಗೆ ಬಂದು ಕೆರೆಯತೊಡಗಿದಿರಿ.
ಜೋಷಿಯವರೆ, ನೀವು ಮತ್ತು ನಿಮ್ಮ ಗೆಳೆಯರು ಈಗಲೂ ಕಣ್ಣಿಗೆ ಪಟ್ಟಿ ಕಟ್ಟಿಕೊಂಡೇ ಇದ್ದೀರಿ ಗೊತ್ತು. ಆದರೆ ಕೆರೆತ ಉಂಟಾದಾಗ ನಿಮ್ಮ ಅಂಗಾಂಗಗಳಲ್ಲೇ ಕೈಯಾಡಿಸಿ ಮಾರಾಯ್ರೆ, ನನ್ನ ಬಳಿ ಯಾಕೆ ಬರ್ತೀರಿ?