ಬೆಂಗಳೂರು : ಕನಿಷ್ಠ ವೇತನ ಹೆಚ್ಚಳ, ಕೆಲಸ ಕಾಯಂ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಬಿಎಂಪಿ ಪೌರ ಕಾರ್ಮಿಕರು ಕಾರ್ಮಿಕರ ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಿದರು.
ಬಿಬಿಎಂಪಿ ಪೌರ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಧರಣಿ ನಡೆಸಿದ ಕಾರ್ಮಿಕರು, ಹಕ್ಕೊತ್ತಾಯಗಳನ್ನು ಮಂಡಿಸಿದರು. 35 ಸಾವಿರ ರೂ ಕನಿಷ್ಠ ವೇತನ ನಿಗದಿ ಮಾಡಬೇಕು. ಘನತೆಯಿಂದ ಕೆಲಸ ಮಾಡುವ ವಾತಾವರಣ ನಿರ್ಮಾಣ ಮಾಡಬೇಕು. ನಗರವನ್ನು ಸ್ವಚ್ಛವಾಗಿಡಲು ಶ್ರಮಿಸುವ ಪೌರ ಕಾರ್ಮಿಕರಿಗೆ ಉಚಿತ ವಸತಿ ಮತ್ತು ಅವರ ಮಕ್ಕಳಿಗೆ ಉಚಿತ ಶಿಕ್ಷಣ ವ್ಯವಸ್ಥೆ ಕಲ್ಪಿಸಬೇಕು’ ಎಂದು ಬಿಬಿಎಂಪಿ ಪೌರಕಾರ್ಮಿಕರ ಸಂಘದ ಅಧ್ಯಕ್ಷೆ ನಿರ್ಮಲಾ ಆಗ್ರಹಿಸಿದರು.
ರಸ್ತೆ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಬಡಾವಣೆಗಳ ಮನೆಯವರು, ಅಂಗಡಿಯವರು ಮತ್ತು ಬಿಬಿಎಂಪಿ ಅಧಿಕಾರಿಗಳು ಪೌರ ಕಾರ್ಮಿಕರನ್ನು ಕೇವಲವಾಗಿ ಕಾಣುತ್ತಿದ್ದಾರೆ. ಕಾರ್ಮಿಕರ ಜತೆ ಮರ್ಯಾದೆಯಿಂದ ಮಾತನಾಡುವ ರೀತಿಯಲ್ಲಿ ಘನತೆ ಹೆಚ್ಚಿಸಲು ಕೆಲಸವನ್ನು ಬಿಬಿಎಂಪಿ ಮಾಡಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ಇದನ್ನೂ ಓದಿ : ಜನವರಿ 10 ರಿಂದ ಅಂಗನವಾಡಿ ನೌಕರರ ಅನಿರ್ಧಿಷ್ಟಾವದಿ ಹೋರಾಟ
‘ಬಹುತೇಕ ಪೌರ ಕಾರ್ಮಿಕರು ಮಹಿಳೆಯರೇ ಆಗಿದ್ದು, ದಲಿತ ಸಮುದಾಯಕ್ಕೆ ಸೇರಿದವರೇ ಆಗಿದ್ದಾರೆ. ನಮ್ಮನ್ನು ಕೀಳಾಗಿ ಕಾಣುವುದು ಸಹಜವಾಗಿದೆ. ಲೈಂಗಿಕ ಕಿರುಕುಳ, ಜಾತಿ ದೌರ್ಜನ್ಯ ತಪ್ಪಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
1948 ರ ಪರಿಚ್ಛೇದ 3(1)(b) ರಂತೆ 5 ವರ್ಷಗಳನ್ನು ಮೀರದ ಮಧ್ಯಂತರದಲ್ಲಿ ಸದರಿ ವೇತನವನ್ನು ಪರಿಶೀಲಿಸಬೇಕು ಮತ್ತು ಪರಿಷ್ಕರಿಸಬೇಕು. ಈ ಸಂದರ್ಭದಲ್ಲಿ 08ನೇ ಏಪ್ರಿಲ್, 2021 ರ ರೆಫರೆನ್ಸ್ (1) ರಲ್ಲಿ ಕನಿಷ್ಠ ವೇತನಗಳ ಪರಿಷ್ಕರಣೆಯನ್ನು ಖಚಿತಪಡಿಸಿಕೊಳ್ಳಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೋರಿ ಪ್ರಾತಿನಿಧ್ಯವನ್ನು ಸಲ್ಲಿಸಿದ್ದೇವೆ. 05.08.2021 ರಂದು ಪರಿಷ್ಕರಿಸಬೇಕಿದ್ದ ಕನಿಷ್ಠ ವೇತನವನ್ನು ಇನ್ನೂ ಪರಿಷ್ಕರಿಸಲಾಗಿಲ್ಲ ಎಂದು ಪ್ರತಿಭಟನೆ ಕಾರರು ಆಗ್ರಹಿಸಿದರು.
ಕನಿಷ್ಠ ವೇತನದ ಕೊನೆಯ ಪರಿಷ್ಕರಣೆ ಆಗಸ್ಟ್ 2016 ರಲ್ಲಿ ನಡೆದಿತ್ತು ಮತ್ತು ನಂತರದ ವೇತನಗಳು ಹಾಗೆಯೇ ಉಳಿದಿವೆ. ಕನಿಷ್ಠ ವೇತನವನ್ನು ಪ್ರತಿ 5 ವರ್ಷಗಳಿಗೊಮ್ಮೆ ಪರಿಷ್ಕರಿಸಬೇಕು ಎಂದು ಕಾನೂನು ಆದೇಶಿಸುತ್ತದೆ, ಆದರೆ ನೈರ್ಮಲ್ಯ ಕಾರ್ಮಿಕರ ವಿಷಯದಲ್ಲಿ ರಾಜ್ಯ ಸರ್ಕಾರವು ಅದನ್ನು ನಿರ್ಲಕ್ಷಿಸುತ್ತಿದೆ. ಸಾಂಕ್ರಾಮಿಕ ಸಮಯದಲ್ಲಿಯೂ ಕೆಲಸ ಮಾಡಿದರೂ ಮತ್ತು ಅಪಾಯಕಾರಿ ಪರಿಸ್ಥಿತಿಗಳಲ್ಲಿ ಕೆಲಸ ಮಾಡಿದರೂ, ಪೌರಕಾರ್ಮಿಕರಿಗೆ ಕೇವಲ 14 ಸಾವಿರ ರೂ ವೇತನವಾಗಿ ನೀಡಲಾಗುತ್ತಿದೆ. ಇದು ಬೆಂಗಳೂರಿನಂತಹ ನಗರದಲ್ಲಿ ವಾಸಿಸಲು ಮತ್ತು ಅವರ ಕುಟುಂಬಗಳನ್ನು ಪೋಷಿಸಲು ಸಾಕಷ್ಟು ಸಾಕಾಗುವುದಿಲ್ಲ. ಹಾಗಾಗಿ ರಾಜ್ಯ ಸರಕಾರ ಕನಿಷ್ಟ 35 ಸಾವಿರ ರೂಪಾಯಿಯನ್ನು ಪೌರ ಕಾರ್ಮಿಕರಿಗೆ ವಿತರಿಸಲು ಮುಂದಾಗಬೇಕಿದೆ.