ನವದೆಹಲಿ: ಆರ್ಥಿಕವಾಗಿ ದುರ್ಬಲವಾಗಿರುವ ವಿಭಾಗ(ಇಡಬ್ಲ್ಯುಎಸ್)ಗಳಿಗೆ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್ ನ ವಿಭಜಿತ ತೀರ್ಪಿನ ಬಗ್ಗೆ ವ್ಯಾಪಕ ಕಳವಳ ವ್ಯಕ್ತಗೊಂಡಿದ್ದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಕೂಡ ಅದನ್ನು ಹಂಚಿಕೊಳ್ಳುತ್ತದೆ ಎಂದು ಪಕ್ಷದ ಪೊಲಿಟ್‍ಬ್ಯುರೊ ಈ ಕುರಿತು ನೀಡಿರುವ ಹೇಳಿಕೆಯಲ್ಲಿ ತಿಳಿಸಿದೆ.
ಸಿಪಿಐ(ಎಂ), ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಇಡಬ್ಲ್ಯುಎಸ್ ಗೆ ಮೀಸಲಾತಿಯನ್ನು ವಿರೋಧಿಸುವುದಿಲ್ಲ. ಆದರೆ ಸುಪ್ರೀಂ ಕೋರ್ಟ್ ನ ಆದೇಶವು ಕೆಲವು ಪ್ರಮುಖ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ, ಅವನ್ನು ಪರಿಶೀಲಿಸಬೇಕಾಗಿದೆ ಎಂದು ಅದು ಹೇಳಿದೆ.
ಆರ್ಥಿಕವಾಗಿ ದುರ್ಬಲ ವಿಭಾಗಗಳನ್ನು ನಿರೂಪಿಸುವ ಮಾನದಂಡಗಳನ್ನು ಸಿಪಿಐ(ಎಂ) ಸದಾ ಪ್ರಶ್ನಿಸಿದೆ. ಇಡಬ್ಲ್ಯುಎಸ್ ಕೋಟಾಕ್ಕೆ ಮೀಸಲಾತಿಯನ್ನು ಪಡೆಯಲು 8 ಲಕ್ಷ ರೂ.ಗಳಷ್ಟು ವಾರ್ಷಿಕ ಆದಾಯ ಮತ್ತು 5 ಎಕರೆ ಕೃಷಿ ಭೂಮಿ, ಅಧಿಸೂಚಿತ ಪುರಸಭೆಯಲ್ಲಿ 1000 ಚದರ ಅಡಿಗಳ ವಸತಿ ಫ್ಲಾಟ್ ಮತ್ತು 100 ಚದರ ಗಜಗಳ ವಸತಿ ನಿವೇಶನದ ಮಿತಿಯನ್ನು ನಿಗದಿಪಡಿಸಲಾಗಿದೆ.
ಕನಿಷ್ಠ ವೇತನ ಮತ್ತು ತೆರಿಗೆ ಮುಕ್ತತೆಯ ಮಿತಿಯನ್ನು ಇದಕ್ಕಿಂತ ಬಹಳಷ್ಟು ಕೆಳಮಟ್ಟದಲ್ಲಿ ಇರಿಸಿದ್ದು, ಈ ಮಾನದಂಡಗಳು ನಿಜವಾಗಿಯೂ ಬಡವರು ಮತ್ತು ನಿರ್ಗತಿಕರಲ್ಲದ ದೊಡ್ಡ ಜನಸಂಖ್ಯೆ ಈ ಮೀಸಲಾತಿಯ ಪ್ರಯೋಜನಗಳನ್ನು ಪಡೆಯಲು ಅನುವು ಮಾಡಿಕೊಡುತ್ತವೆ. ಪರಿಣಾಮವಾಗಿ, ಇದು ಬಡವರಲ್ಲಿ ಬಡವರ ವಿರುದ್ಧ ತಾರತಮ್ಯ ಮಾಡುತ್ತದೆ. ಆದ್ದರಿಂದ, ಇಡಬ್ಲ್ಯುಎಸ್ ಮೀಸಲಾತಿಯ ತನ್ನ ನೀತಿಯಲ್ಲಿ ಈ ಆತಂಕವನ್ನು ಸರಕಾರ ಒಳಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಹೇಳಿದೆ.