Karnataka Budget 2023-24 | ರಾಜ್ಯವನ್ನು ಹಿಂದಕ್ಕೆ ತಳ್ಳುವ ರಿವರ್ಸ್‌ ಗೇರ್‌ ಬಜೆಟ್: ಮಾಜಿ ಸಿಎಂ ಬೊಮ್ಮಾಯಿ

ಒಕ್ಕೂಟ ಸರ್ಕಾರದಿಂದ ಬರಬೇಕಿದ್ದ ಜಿಎಸ್‌ಟಿ ಪರಿಹಾರ ಬರುತ್ತಿದೆ ಎಂದ ಬೊಮ್ಮಾಯಿ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಮಂಡಿಸಿದ್ದು ರಾಜ್ಯವನ್ನು ಹಿಂದಕ್ಕೆ ತಳ್ಳುವ ರಿವರ್ಸ್‌ ಗೇರ್‌ ಬಜೆಟ್ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಶುಕ್ರವಾರ ಅಸಮಾಧಾನ ವ್ಯಕ್ತಪಡಿಸಿದರು. ಬಜೆಟ್ ಮಂಡನೆ (Karnataka Budget 2023-24) ನಂತರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಬೊಮ್ಮಾಯಿ, ”ಬಜೆಟ್‌ನ ಎಲ್ಲಾ ಕಡೆ ಮಹಾತ್ಮರ ಹೇಳಿಕೆಗಳನ್ನು ಬಳಸಿಕೊಂಡಿದ್ದಾರೆ. ಆದರೆ ಇವರ ನಡೆನುಡಿಗೆ ಬಹಳ ವ್ಯತ್ಯಾಸವಿದೆ. ಇದೊಂದು ಜನವಿರೋಧಿ ಬಜೆಟ್ ಆಗಿದ್ದು, ಜನರ ಮೇಲೆ ಭಾರ ಹೊರೆಸಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬೊಮ್ಮಾಯಿ, “ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ಅಭಿವೃದ್ಧಿಗೆ ಮಾರಕವಾಗಿದ್ದು, ರೈತರಿಗೆ, ವಿದ್ಯಾರ್ಥಿಗಳಿಗೆ, ದುಡಿಯುವ ವರ್ಗಕ್ಕೆ, ಮಹಿಳೆಯರಿಗೆ, ಪರಿಶಿಷ್ಟ ಪಂಗಡ ಮತ್ತು ಜಾತಿಯ ಸಮುದಾಯಗಳಿಗೆ ಯಾವುದೆ ಭರವಸೆ ಮೂಡಿಸದೇ ನಿರಾಶೆ ಮೂಡಿಸಿದೆ” ಎಂದರು.

ಇದನ್ನೂ ಓದಿ: Karnataka Budget 2023 Live Updates | ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‌ ಸಂಕ್ಷಿಪ್ತ ಮಾಹಿತಿ

“ರಾಜ್ಯವನ್ನು ಹಿಂದಕ್ಕೆ ತಳ್ಳುವ, ರಿವರ್ಸ್‌ ಗೇರ್‌ನ ಬಜೆಟ್‌ನ ಹೆಚ್ಚಿನ ಪುಟಗಳನ್ನು ಟೀಕೆಗೆ ಬಳಸಿಕೊಳ್ಳಲಾಗಿದೆ. ಬಜೆಟ್‌ ಅನ್ನು ಟೀಕೆ ಮಾಡಲು ಮಾತ್ರ ಇಷ್ಟು ಪ್ರಮಾಣದಲ್ಲಿ ಬಳಸಿದ್ದು ದೇಶದಲ್ಲೆ ಬಹುಷಃ ಇದೊಂದೆ ಇರಬೇಕು. ಟೀಕೆ ಮಾಡಲು ಬಹಳಷ್ಟು ವೇದಿಕೆಗಳಿವೆ, ಆದರೆ ಇಲ್ಲಿ ಬಜೆಟ್‌ನಲ್ಲೂ ಟೀಕೆ ಮಾಡಲಾಗಿದೆ. ದ್ವೇಷದ ರಾಜಕಾರಣವನ್ನು ಬಜೆಟ್‌ನಲ್ಲೂ ಮುಂದುವರೆಸಲಾಗಿದೆ” ಎಂದು ಹೇಳಿದರು.

“ಜನರನ್ನು ಯಾಮಾರಿಸುವ ಕೆಲಸವನ್ನು ಸರ್ಕಾರ ಬಜೆಟ್‌ನಲ್ಲೂ ಮಾಡಿದೆ. ಅಲ್ಲದೆ ಬಜೆಟ್‌ನಲ್ಲಿ ವಿತ್ತೀಯ ಕೊರತೆಯ ಪ್ರಸ್ತಾಪವೇ ಇಲ್ಲ. ಜೊತೆಗೆ ಆರ್ಥಿಕ ಶಿಸ್ತಿನ ಪರಿಸ್ಥಿತಿಗಳ ಬಗ್ಗೆ ಏನನ್ನೂ ಹೇಳಲಾಗಿಲ್ಲ. ನಾವು ಈ ಹಿಂದೆ ಮಂಡಿಸಿದ್ದ ಬಜೆಟ್‌ನಲ್ಲಿ ಸಾಲ ಪಡೆದು ಆಸ್ತಿ ಸೃಷ್ಟಿ ಮಾಡಿದ್ದೇವೆ. ಇದರಿಂದ ಉತ್ಪಾದನೆ ಮತ್ತಷ್ಟು ಹೆಚ್ಚಲಿದ್ದು, ಅದನ್ನೆ ಭವಿಷ್ಯನಿಧಿ ಹಣಕಾಸು ನಿರ್ವಹಣೆ ಎನ್ನುತ್ತಾರೆ. ಆದರೆ ಈ ಬಜೆಟ್‌ನಲ್ಲಿ ಹಾಗೆ ಇಲ್ಲ. ಹೆಚ್ಚಿನ ಸಾಲ ಪಡೆದರೂ ಆಸ್ತಿ ಸೃಷ್ಟಿಯಾಗುವುದಿಲ್ಲ” ಎಂದು ತಿಳಿಸಿದರು.

ಅಲ್ಪ ಸಂಖ್ಯಾತರಿಗೆ ಬಂಪರ್ ಅನುದಾನ ನೀಡಲಾಗಿದೆ ಎಂಬ ಪತ್ರಕರ್ತರ ಮಾತಿಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, “ಅಲ್ಪಸಂಖ್ಯಾತರಿಗೆ ಅನುದಾನ ನೀಡುವುದರ ಬಗ್ಗೆ ನಮ್ಮ ತಕರಾರಿಲ್ಲ. ನಮ್ಮ ಸರ್ಕಾರದಲ್ಲೂ ನಾವು ಅಲ್ಪಸಂಖ್ಯಾತರ ಅಭಿವೃದ್ಧಿಗೆ ಅನುದಾನ ನೀಡಿದ್ದೆವು” ಎಂದರು.

ಇದನ್ನೂ ಓದಿ: Karnataka Budget 2023-24 | ಬೆಳಕಿಲ್ಲದ ಹಾದಿಯಯಲ್ಲಿ ನಡೆಯಬಹುದು; ಕನಸುಗಳೆ ಇಲ್ಲದ ದಾರಿಯಲ್ಲಿ ಹೇಗೆ ನಡೆಯಲಿ!

ಕೇಂದ್ರದಿಂದ ಜಿಎಸ್‌ಟಿ ಪರಿಹಾರ ರಾಜ್ಯಕ್ಕೆ ಬುರುತ್ತಿದೆ: ಬೊಮ್ಮಾಯಿ ಪ್ರತಿಪಾದನೆ

ಕೇಂದ್ರ ಸರ್ಕಾರ ಜಿಎಸ್‌ಟಿ ಪರಿಹಾರ ನೀಡಿಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಬೊಮ್ಮಾಯಿ, “ಒಕ್ಕೂಟ ಸರ್ಕಾರದಿಂದ ಎಷ್ಟು ಜಿಎಸ್‌ಟಿ ಪರಿಹಾರ ಬರಬೇಕಿತ್ತೊ, ಅದು ಬರುತ್ತಿದೆ. ಆದರೆ ಹೆಚ್ಚುವರಿಯಾಗಿ ನೀಡಬೇಕು ಎಂದು ರಾಜ್ಯ ಸರ್ಕಾರ ಪ್ರತಿಪಾದಿಸಿದರೆ ಆಡಿಟ್‌ ಪರಿಗಣನೆಗೆ ಹೋಗಿ ಬರಬೇಕಿದೆ” ಎಂದು ಹೇಳಿದರು.

“ಜಿಎಸ್‌ಟಿ ಪರಿಹಾರ ಕೇವಲ ಐದು ವರ್ಷಗಗಳು ಮಾತ್ರ ನೀಡಲಾಗುತ್ತದೆ ಎಂದು ಸಂವಿಧಾನ ತಿದ್ದುಪಡಿಯಲ್ಲೆ ಇವೆ.  ಅದರಂತೆ ಜಿಎಸ್‌ಟಿ ಪರಿಹಾರ 2022 ರಲ್ಲಿ ಮುಗಿದೆ. ಆದರೆ, ಐದು ವರ್ಷಗಳಲ್ಲಿ ಜಿಎಸ್‌ಟಿ ಪರಿಹಾರ ನಿಲ್ಲಿಸಿ ಅನ್ಯಾಯ ಎಸಗಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರ ಆರೋಪಿಸುತ್ತಿದೆ. ಜಿಎಸ್‌ಟಿ ಬಗ್ಗೆಗಿನ ಸಂವಿಧಾನದ ತಿದ್ದುಪಡಿ ತಂದಾಗ ಸಿದ್ದರಾಮಯ್ಯ ಅವರು ಸೇರಿದಂತೆ ದೇಶದ ಎಲ್ಲಾ ರಾಜ್ಯಗಳು ಇದಕ್ಕೆ ಒಪ್ಪಿಕೊಂಡಿದ್ದಾರೆ. ಅಲ್ಲದೆ ಜಿಎಸ್‌ಟಿಯನ್ನು ಮೊದಲು ಪ್ರಾರಂಭ ಮಾಡಿದ್ದೇ ಕಾಂಗ್ರೆಸ್ ಸರ್ಕಾರ” ಎಂದು ಬೊಮ್ಮಾಯಿ ಹೇಳಿದರು.

Donate Janashakthi Media

Leave a Reply

Your email address will not be published. Required fields are marked *