ಬೆಂಗಳೂರು : ಕರ್ನಾಟಕ ರಾಜ್ಯ ಸರಕಾರ ಹಿಂದುಳಿದ ವರ್ಗ 2 ಬಿ ಅಡಿಯಲ್ಲಿ ಶೇ 4 ರಷ್ಠು ಮೀಸಲಾತಿ ಹೊಂದಿದ್ದ ಮುಸ್ಲಿಂ ಸಮುದಾಯದ ಬಡವರ ಸೌಲಭ್ಯವನ್ನು ವಾಪಾಸು ಪಡೆದಿರುವುದು ಮುಸ್ಲಿಂ ದ್ವೇಷದ ಭಾಗವಾಗಿದೆಯೆಂದು ಇದನ್ನು ನಾವು ಖಂಡಿಸುತ್ತೇವೆ ಎಂದು ಸಿಪಿಐಎಂ ಕರ್ನಾಟಕ ರಾಜ್ಯ ಸಮಿತಿ ತಿಳಿಸಿದೆ.
ಈ ಕುರಿತಿ ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ್ದು, ಮುಸ್ಲಿಂ ಅಲ್ಪ ಸಂಖ್ಯಾತರ ಸಾಮಾಜಿಕ, ಆರ್ಥಿಕ ಹಿಂದುಳಿದಿರುವಿಕೆಯನ್ನು ಸಮಗ್ರವಾಗಿ ಗುರುತಿಸಿ, ಅವರ ಸಾಮಾಜಿಕ, ಶೈಕ್ಷಣಿಕ ಹಾಗೂ ಔದ್ಯೋಗಿಕ ಅಭಿವೃದ್ದಿಗಾಗಿ ಒಕ್ಕೂಟ ಸರಕಾರಗಳೇ ಈ ಹಿಂದೆ ರಚಿಸಿದ್ದ ನ್ಯಾಯ ಮೂರ್ತಿ ರಾಜೇಂದ್ರ ಸಾಚಾರ್ ಸಮಿತಿ ವರದಿ ಹಾಗೂ ಮುಸ್ಲಿಂ ಜನ ಸಮುದಾಯದ ಜನ ಸಂಖ್ಯೆಯ ಆಧಾರದಲ್ಲಿ ಮೀಸಲಾತಿ ಸೌಲಭ್ಯ ನೀಡಬೇಕೆಂದು ಡಾ.ರಂಗನಾಥ ಮಿಶ್ರಾ ಸಮಿತಿ ವರದಿಗಳು ಸ್ಪಷ್ಟವಾಗಿ ಹೇಳಿವೆ. ಹೀಗಿರುವಾಗ ಅವರ ಸೌಲಭ್ಯ ವಾಪಾಸು ಪಡೆದಿರುವುದು ಅಕ್ಷಮ್ಯವಾಗಿದೆ. ಈ ಕೂಡಲೇ ಮುಸ್ಲಿಂ ಸಮುದಾಯದ ಮೀಸಲಾತಿ ರದ್ದು ಪಡೆಸಿರುವುದನ್ನು ವಾಪಾಸು ಪಡೆದು ಅವರ ಮೀಸಲಾತಿಯನ್ನು ಮುಂದುವರಿಸಬೇಕೆಂದು ತಿಳಿಸಿದೆ.
ತೆರಿಗೆ ಹಣ ಜನ ವಿರೋಧಿ ದುಷ್ಕೃತ್ಯಗಳಿಗೆ ಬಳಕೆ : ಆರ್ಥಿಕವಾಗಿ ಹಿಂದುಳಿದ ವಿಭಾಗಗಳ ಜೊತೆ ಸೇರಿಸಿದಲ್ಲಿ ಮುಸ್ಲಿಂ ಸಮುದಾಯದ ಬಲಹೀನರು ಮೇಲ್ಜಾತಿಗಳ ಸಮುದಾಯಗಳೊಂದಿಗೆ ಸ್ಪರ್ಧಿಸಲಾಗದೇ ಹೋಗುವುದರಿಂದ ಮುಸ್ಲಿಂ ಸಮುದಾಯಕ್ಕೆ ಮೀಸಲಾತಿಯೆಂಬುದು ಮರೀಚಿಕೆಯಾಗಲಿದೆ. ಬಿಜೆಪಿ ಹಾಗೂ ಆರ್ ಎಸ್ ಎಸ್ ಮುಂತಾದ ಹಿಂದುತ್ವ ಕೋಮುವಾದಿ ಶಕ್ತಿಗಳು ರಾಜ್ಯ ಸರಕಾರದ ಅಧಿಕಾರ ಮತ್ತು ಜನತೆಯ ತೆರಿಗೆಯ ಹಣವನ್ನು ಜನ ವಿರೋಧಿ ದುಷ್ಕೃತ್ಯಗಳಿಗೆ ದುರ್ಬಳಕೆ ಮಾಡಿಕೊಂಡು ರಾಜ್ಯದಲ್ಲಿ ಮತಾಂಧತೆಯ ಹಾಗೂ ಜಾತಿ ತಾರತಮ್ಯದ ಧೃವೀಕರಣಕ್ಕೆ ಕ್ರಮವಹಿಸಿರುವುದರ ಭಾಗ ಇದಾಗಿದೆ ಎಂದು ತಿಳಿಸಿದೆ.
ಮುಸ್ಲಿಂ ಸಮುದಾಯದ ಮೀಸಲು ಸೌಲಭ್ಯವನ್ನು ವಾಪಾಸು ಪಡೆದು ಆ ಜಾಗದಲ್ಲಿ ಒಕ್ಕಲಿಗ ಹಾಗೂ ಪಂಚಮಸಾಲಿ ಸಮುದಾಯಗಳಿಗೆ ನೀಡಿರುವುದು, ಈ ಎರಡು ಸಮುದಾಯಗಳನ್ನು ಮುಸ್ಲಿಂ ಸಮುದಾಯದ ವಿರುದ್ಧ ಎತ್ತಿಕಟ್ಟುವ, ಅಸಹಿಷ್ಣುತೆಯನ್ನು ಬೆಳೆಸುವ ಕೆಟ್ಟ ಕುತಂತ್ರವಾಗಿದೆಯೆಂದು ಸಿಪಿಐಎಂ ವಿವರಿಸಿದೆ. ಇದರ ಉದ್ದೇಶ ಸಮಾಜದಲ್ಲಿ ಪರಸ್ಪರರ ನಡುವೆ ಅಶಾಂತಿಯನ್ನುಂಟು ಮಾಡಿ ವಿಭಜಿಸಿ ಆಳುವ ಮತ್ತು ಕಾರ್ಪೋರೇಟ್ ಲೂಟಿಯಿಂದ ಜನರ ಗಮನವನ್ನು ಬೇರೆಡೆ ಸೆಳೆಯುವ ಲೂಟಿಕೋರ ತಂತ್ರವಾಗಿದೆ. ಅದೇ ರೀತಿ, ಬಿಜೆಪಿ ಮತ್ತು ಹಿಂದುತ್ವವಾದಿ ದುಷ್ಟಕೂಟವು ಜನತೆಯ ಒತ್ತಾಯದ ಮೇರೆಗೆ ಒಂದು ಕಡೆ ತಾನು ಮೀಸಲಾತಿ ಪರವಾಗಿದ್ದೇನೆಂದು ತೋರಿಕೆಯ ಕ್ರಮ ವಹಿಸುತ್ತಿದ್ದರೇ, ಮತ್ತೊಂದೆಡೆ ಶಿಕ್ಷಣದ ಖಾಸಗೀಕರಣ ಮತ್ತು ವ್ಯಾಪಾರೀಕರಣದ ಮೂಲಕ ದುರ್ಬಲ ಸಮುದಾಯಗಳಿಗೆ ಮತ್ತು ಬಾಲಕಿಯರಿಗೆ ಶಿಕ್ಷಣವನ್ನು ನಿರಾಕರಿಸುತ್ತಿದೆ. ಹಾಗೂ ಲಕ್ಷಾಂತರ ಸರಕಾರಿ ಹುದ್ದೆಗಳನ್ನು ತುಂಬದೇ ರದ್ದುಪಡಿಸಲು ಕ್ರಮ ವಹಿಸುವುದು ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಿಸುವುದು, ಇಲ್ಲವೇ ಹೊರ ಗುತ್ತಿಗೆ ಆಧಾರದಲ್ಲಿ ಅತ್ಯಂತ ನಿಕೃಷ್ಠ ವೇತನಕ್ಕೆ ನಿರುದ್ಯೋಗಿಗಳನ್ನು ಶೋಷಿಸುವ ಮೂಲಕ, ಅದೇ ರೀತಿ ಖಾಸಗೀ ರಂಗದ ಉದ್ದಿಮೆಗಳು ಹಾಗೂ ಸಂಸ್ಥೆಗಳಲ್ಲಿ ಮೀಸಲಾತಿಯನ್ನು ನಿರಾಕರಿಸುವ ಮೂಲಕ, ಶಿಕ್ಷಣ ಹಾಗೂ ಉದ್ಯೋಗ ರಂಗದಲ್ಲಿ ಮೀಸಲಾತಿ ಇಲ್ಲದಂತೆ ಮಾಡಲಾಗಿದೆ. ಬಿಜೆಪಿ ಹಾಗೂ ಹಿಂದೂ ಮತಾಂಧರ ಈ ದ್ವಂದ್ವ ನಡೆಯನ್ನು ಮತ್ತು ಕೇವಲ ಮತಬ್ಯಾಂಕ್ ಗಾಗಿ ಮೀಸಲಾತಿ ಕುರಿತಂತೆ ಬಾಯುಪಚಾರದ ಮಾತುಗಳನ್ನು ರಾಜ್ಯದಲ್ಲಿ ಮೀಸಲಾತಿ ಪಡೆಯುವ ಮತ್ತು ಮೀಸಲು ಸೌಲಭ್ಯ ಕೇಳುವ ಸಮುದಾಯಗಳು ಅರ್ಥ ಮಾಡಿಕೊಳ್ಳಬೇಕೆಂದು ಸಿಪಿಐಎಂ ಮನವಿ ಮಾಡಿದೆ.
ಮುಂದುವರಿದು, ಸರ್ವರಿಗೂ ಸಮಪಾಲು ಮತ್ತು ಸಮಬಾಳು ಎಂಬಂತೆ ರಾಜ್ಯದ ಜನತೆ, ಈ ಸರಕಾರದ ಮತ್ತು ಬಿಜೆಪಿ ಹಾಗೂ ಆರ್ ಎಸ್ ಎಸ್ ಮುಂತಾದ ಹಿಂದುತ್ವ ಮತಾಂಧ ಕೂಟಗಳು ರಾಜ್ಯದ ಸಾಮರಸ್ಯ ಹಾಳು ಗೆಡಹುವ ಕುತಂತ್ರವನ್ನು ಸೋಲಿಸಲು ಒಗ್ಗೂಡಿ ಹೋರಾಡಬೇಕು ಮತ್ತು ಸಾರ್ಮುವಜನಿಕ ಶಿಕ್ಷಣದ ಉಳಿವಿಗಾಗಿ ಮತ್ತು ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಿಸದಂತೆ, ಸರಕಾರಿ ಉದ್ಯೋಗಗಳನ್ನು ತುಂಬುವಂತೆ ಮತ್ತು ಖಾಸಗೀ ರಂಗದಲ್ಲೂ ಮೀಸಲಾತಿ ವಿಸ್ಥರಿಸುವಂತೆ, ಹಾಗೂ ಮುಸ್ಲಿಂ ಸಮುದಾಯಕ್ಕಾದ ಅನ್ಯಾಯವನ್ನು ತಡೆಯುವಂತೆ, ಒಗ್ಗೂಡಿ ಒತ್ತಾಯಿಸಬೇಕೆಂದು ಮನವಿ ಮಾಡಿದ್ದಾರೆ.