ಬೆಂಗಳೂರು: ಜಿಎಸ್‌ಟಿಗೆ ನೋಂದಣಿ ಮಾಡಿಸದೇ ಇದ್ದರೂ ತೆರಿಗೆ ಕಟ್ಟಿ ಎಂದು ನೋಟಿಸ್ ಬಂದಿರುವ ಬೇಕರಿ, ಹೋಟೆಲ್, ಟೀ-ಅಂಗಡಿ ಮಾಲೀಕರು, ಶೀಘ್ರವೇ ನೋಟಿಸ್‌ಗೆ ಉತ್ತರ ನೀಡಬೇಕು. ಇದರಿಂದ ದಂಡ ಮತ್ತು ಬಡ್ಡಿ ವಿಧಿಸಿಕೊಳ್ಳುವುದರಿಂದ ತಪ್ಪಿಸಿಕೊಳ್ಳಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ.
ರಾಜ್ಯದ ಎಲ್ಲೆಡೆ ಸಣ್ಣ ಬೇಕರಿ, ಹೋಟೆಲ್, ಟೀ ಅಂಗಡಿ, ಸಲೂನ್‌ಗಳನ್ನು ನಡೆಸುತ್ತಿರುವ ವ್ಯಾಪಾರಿಗಳು ಯುಪಿಐ ಮೂಲಕ ಹಣ ಪಡೆಯುತ್ತಿದ್ದರೆ, ಅಂತಹವರ ಹಣಕಾಸು ವಹಿವಾಟಿನ ವಿವರವನ್ನು ವಾಣಿಜ್ಯ ತೆರಿಗೆ ಇಲಾಖೆಯು ಕಲೆಹಾಕಿದೆ. ಇಲಾಖೆಯು ಈಗಾಗಲೇ ಹೇಳಿರುವಂತೆ, ಯುಪಿಐ ಮೂಲಕ ವಾರ್ಷಿಕ ₹40 ಲಕ್ಷಕ್ಕಿಂತ ಹೆಚ್ಚು ಇದ್ದವರಿಗೆ ನೋಟಿಸ್ ನೀಡಲಾಗಿದೆ.
‘ನೋಟಿಸ್ ಪಡೆದವರು ಜಿಎಸ್‌ಟಿ ನೋಂದಣಿ ಮಾಡಿಸಲೇಬೇಕು ಮತ್ತು ಜಿಎಸ್‌ಟಿ ಕಟ್ಟದೇ ವಿಧಿ ಇಲ್ಲ. ಆದರೆ, ತಾವು ನಡೆಸಿದ ವಹಿವಾಟಿನಲ್ಲಿ ಯಾವುದಕ್ಕೆ ಮಾತ್ರ ಜಿಎಸ್‌ಟಿ ಅನ್ವಯವಾಗುತ್ತದೆ, ಎಂಬುದನ್ನು ಕಂಡುಕೊಂಡರೆ ತೆರಿಗೆಯ ಪ್ರಮಾಣ ಕಡಿಮೆ ಆಗುತ್ತದೆ’ ಎನ್ನುತ್ತಾರೆ ನಗರದ ರೆಜಿನಾ ಜಿಎಸ್‌ಟಿ ಕನ್ಸಲ್ಟೆಂಟ್ಸ್‌ನ ಎಂ.ಚಂದ್ರಶೇಖರ್.
‘ವಾರ್ಷಿಕ ₹40 ಲಕ್ಷ ವಹಿವಾಟು ದಾಟಿದ ಸರಕು ಪೂರೈಕೆದಾರರು, ವಾರ್ಷಿಕ ₹20 ಲಕ್ಷ ವಹಿವಾಟು ದಾಟಿದ ಸೇವಾ ಪೂರೈಕೆದಾರರು ಜಿಎಸ್‌ಟಿಗೆ ನೋಂದಣಿ ಮಾಡಿಸುವುದು ಕಡ್ಡಾಯ. ಹೀಗಾಗಿ ಅಷ್ಟು ಮೊತ್ತದ ವಹಿವಾಟು ನಡೆಸುತ್ತಿರುವವರು ಶೀಘ್ರವೇ ಜಿಎಸ್‌ಟಿ ನೋಂದಣಿ ಮಾಡಿಸಿ’ ಎಂಬುದು ಅವರ ಸಲಹೆ ನೀಡಿದ್ದಾರೆ.
