“ಆಡಳಿತ ಪಕ್ಷದಲ್ಲಿರುವ ಎಲ್ಲಾ ಸದಸ್ಯರು ತುರ್ತು ಪರಿಸ್ಥಿತಿಯನ್ನು ಖಂಡಿಸಿ ಮಾತನಾಡುತ್ತಾರೆ. ಆದರೆ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿಯೇ ಸಂವಿಧಾನದ 42 ನೇ ತಿದ್ದುಪಡಿಯ ಮೂಲಕ ಶಿಕ್ಷಣವನ್ನು ರಾಜ್ಯ ಪಟ್ಟಿಯಿಂದ ತೆಗೆದುಹಾಕಲಾಯಿತು. ತುರ್ತು ಪರಿಸ್ಥಿತಿ ಘೋಷಣೆಯ ಬಗ್ಗೆ ನೀವು (ಬಿಜೆಪಿ) ನಿಜವಾಗಿಯೂ ಪ್ರಾಮಾಣಿಕರಾಗಿದ್ದರೆ, ಶಿಕ್ಷಣವನ್ನು ರಾಜ್ಯ ಪಟ್ಟಿಗೆ ಹಿಂತಿರುಗಿಸಿ!” ಎಂದು ರಾಜ್ಯಸಭೆಯಲ್ಲಿ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ಸದಸ್ಯ ಡಾ.ಜಾನ್ ಬ್ರಿಟ್ಟಾಸ್ ಮನವಿ ಮಾಡಿದ್ದಾರೆ. ಒಕ್ಕೂಟ
-ಸಿಚಿ
ಸಂಸತ್ತಿನ 2025-26ರ ಬಜೆಟ್ ಅಧಿವೇಶನದ ಎರಡನೇ ಅಧಿವೇಶನದಲ್ಲಿ ಶಿಕ್ಷಣಕ್ಕೆ ಸಂಭಂದಿಸಿದ ವಿಷಯಗಳ ಕುರಿತು ಚರ್ಚಿಸುವಾಗ, ಕೇರಳದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ ವಾದಿ) ಸಂಸದ ಜಾನ್ ಬ್ರಿಟ್ಟಾಸ್ ಅವರು, ಒಕ್ಕೂಟ ವ್ಯವಸ್ಥೆಯ ಮನೋಭಾವವನ್ನು ಗೌರವಿಸದ ಕೇಂದ್ರ ಸರ್ಕಾರದ ಧೋರಣೆಯನ್ನು ತೀವ್ರವಾಗಿ ಟೀಕಿಸಿದರು. ಒಕ್ಕೂಟ
ತುರ್ತು ಪರಿಸ್ಥಿತಿಯಲ್ಲಿ ಕಸಿದುಕೊಳ್ಳಲ್ಪಟ್ಟ ಹಕ್ಕು
ಬ್ರಿಟ್ಟಾಸ್ ತಮ್ಮ ಭಾಷಣದಲ್ಲಿ, ಐತಿಹಾಸಿಕ ಸಂಗತಿಗಳನ್ನು ಪ್ರಸ್ತುತಪಡಿಸುವ ಮೂಲಕ ಬಿಜೆಪಿಯ ದ್ವಂದ್ವ ನೀತಿಯನ್ನು ಬಹಿರಂಗಪಡಿಸಿದರು: “ಆಡಳಿತ ಪಕ್ಷದಲ್ಲಿರುವ ಎಲ್ಲಾ ಸದಸ್ಯರು ತುರ್ತು ಪರಿಸ್ಥಿತಿಯನ್ನು ಖಂಡಿಸಿ ಮಾತನಾಡುತ್ತಾರೆ. ಆದರೆ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿಯೇ ಸಂವಿಧಾನದ 42 ನೇ ತಿದ್ದುಪಡಿಯ ಮೂಲಕ ಶಿಕ್ಷಣವನ್ನು ರಾಜ್ಯ ಪಟ್ಟಿಯಿಂದ ತೆಗೆದುಹಾಕಲಾಯಿತು. ನೀವು (ಬಿಜೆಪಿ) ತುರ್ತು ಪರಿಸ್ಥಿತಿಯನ್ನು ಖಂಡಿಸುವಲ್ಲಿ ನಿಜವಾಗಿಯೂ ಪ್ರಾಮಾಣಿಕರಾಗಿದ್ದರೆ, ಅಂದು ರಾಜ್ಯ ಪಟ್ಟಿಯಿಂದ ತೆಗೆದುಹಾಕಲಾದ ಶಿಕ್ಷಣವನ್ನು ಮತ್ತೆ ರಾಜ್ಯ ಸರ್ಕಾರಗಳಿಗೆ ಹಸ್ತಾಂತರಿಸಿ.” ಎಂದು ಅವರು ಒತ್ತಾಯಪೂರ್ವಕವಾಗಿ ಮನವಿ ಮಾಡಿದರು.
ಇದನ್ನೂ ಓದಿ: ಮಂಗಳೂರು| ಪಿಜಿಗೆ ಹೆಚ್ಚಿನ ಗೂಗಲ್ ರೇಟಿಂಗ್ ನೀಡುವಂತೆ ವಿದ್ಯಾರ್ಥಿಯ ಮೇಲೆ ಹಲ್ಲೆ
ಕೇರಳ ಶಿಕ್ಷಣದಲ್ಲಿ ಮುಂಚೂಣಿಯಲ್ಲಿದೆ
“ನಾನು ಕೇರಳದಿಂದ ಬಂದಿದ್ದೇನೆ. ಶಿಕ್ಷಣದ ವಿಚಾರದಲ್ಲಿ ಭಾರತದಲ್ಲಿನ ಸರ್ಕಾರಗಳು ಹೇಗೆ ನಡೆದುಕೊಳ್ಳಬೇಕು ಎಂಬುದಕ್ಕೆ ಕೇರಳ ದಾರಿ ತೋರಿಸಿದೆ” ಎಂದು ಬ್ರಿಟ್ಟಾಸ್ ಹೆಮ್ಮೆಯಿಂದ ತಮ್ಮ ಮಾತು ಆರಂಭಿಸಿದರು. ದೇಶದ ವೈವಿಧ್ಯತೆಯನ್ನು ಗೌರವಿಸಬೇಕಾದ ಅಗತ್ಯವನ್ನು ಅವರು ಒತ್ತಿ ಹೇಳಿದರು. “ನಮ್ಮ ದೇಶವು ಶ್ರೀಮಂತ ವೈವಿಧ್ಯತೆಯನ್ನು ಹೊಂದಿರುವ ದೇಶ. ನೀವು ದೆಹಲಿಯಲ್ಲಿ ಕುಳಿತುಕೊಂಡು, ರಾಜ್ಯ ಸರ್ಕಾರಗಳಿಗೆ ಆದೇಶಗಳನ್ನು ಹೊರಡಿಸಿದರೆ, ಈ ವೈವಿಧ್ಯತೆ ಕೊನೆಗೊಳ್ಳುತ್ತದೆ” ಎಂದು ಅವರು ಎಚ್ಚರಿಸಿದರು.
ವಿಶ್ವವಿದ್ಯಾಲಯಗಳನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಯತ್ನ
ಉನ್ನತ ಶಿಕ್ಷಣದಲ್ಲಿ ಪ್ರಾಬಲ್ಯ ಸಾಧಿಸಲು ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರ ಮಾಡುತ್ತಿರುವ ಪ್ರಯತ್ನಗಳನ್ನು ಟೀಕಿಸಿದ ಬ್ರಿಟ್ಟಾಸ್, “ಈ ಸರ್ಕಾರವು ಉನ್ನತ ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣವಾಗಿ ತನ್ನ ವಶಕ್ಕೆ ತೆಗೆದುಕೊಳ್ಳಲು ಬಯಸುತ್ತಿದೆ. ವಿಶ್ವವಿದ್ಯಾಲಯ ಅನುದಾನ ಆಯೋಗದ ಶಿಫಾರಸುಗಳು ಬಂದಿವೆ. ಈ ಶಿಫಾರಸುಗಳ ಪರಿಣಾಮಗಳು ಹೇಗಿರುತ್ತದೆ ಎಂದು ಅವರಿಗೆ ತಿಳಿದಿದೆ” ಎಂದು ಗಮನಸೆಳೆದರು.
“ದೇಶದಲ್ಲಿ 1,074 ವಿಶ್ವವಿದ್ಯಾಲಯಗಳಿವೆ. ಇವುಗಳಲ್ಲಿ 54 ಮಾತ್ರ ಕೇಂದ್ರೀಯ ವಿಶ್ವವಿದ್ಯಾಲಯಗಳಾಗಿವೆ. ಒಂದಷ್ಟು ಖಾಸಗಿ ವಿಶ್ವವಿದ್ಯಾಲಯಗಳೂ ಇವೆ. ರಾಜ್ಯಗಳ ರಕ್ತ ಮತ್ತು ಬೆವರಿನಿಂದ ನಿರ್ಮಿಸಲಾದ ಎಲ್ಲಾ ವಿಶ್ವವಿದ್ಯಾಲಯಗಳನ್ನು ಸ್ವಾಧೀನಪಡಿಸಿಕೊಳ್ಳಲು ಅವರು ಬಯಸುತ್ತಾರೆ” ಎಂದರು.
ಒಂದು ದೇಶ, ಒಂದು ಭಾಷೆ, ಒಂದು ಪಕ್ಷ ನೀತಿಗಳು ಅಪಾಯಕಾರಿ
ವೈವಿಧ್ಯತೆಯೇ ಭಾರತದ ಶಕ್ತಿ ಎಂದು ಒತ್ತಿ ಹೇಳಿದ ಬ್ರಿಟ್ಟಾಸ್, “ಈ ದೇಶದಲ್ಲಿರುವ ಪ್ರತಿಯೊಂದು ಭಾಷೆಯೂ ನಮ್ಮ ಭಾಷೆ. ಹಿಂದಿ ಕೂಡ ನಮ್ಮ ಭಾಷೆ. ಆದರೆ ಒಬ್ಬನೇ ನಾಯಕ, ಒಂದೇ ರಾಜಕೀಯ ಪಕ್ಷ, ಒಂದೇ ಭಾಷೆ ಎಂದು ಏಕರೂಪತೆ (uniformity)ಯನ್ನು ತರಲು ಬಯಸಿದರೆ, ಈ ದೇಶವು ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. ಈ ದೇಶ ನಮ್ಮೆಲ್ಲರದ್ದು” ಎಂದು ಎಚ್ಚರಿಸಿದರು.
ಕೇಂದ್ರ ಯೋಜನೆಗಳಲ್ಲಿ ಜೋಕು
ಕೇಂದ್ರ ಸರ್ಕಾರದ ಯೋಜನೆಗಳ ನೈಜ ಸ್ವರೂಪವನ್ನು ತೆರೆದಿಟ್ಟ ಬ್ರಿಟಾಸ್, “ಕೇಂದ್ರ ಸರ್ಕಾರದ ಯೋಜನೆಗಳು ತುಂಬಾ ತಮಾಷೆಯಾಗಿವೆ. ಒಕ್ಕೂಟ ಸರ್ಕಾರವು ಕೆಲವು ಯೋಜನೆಗಳನ್ನು ಘೋಷಿಸುತ್ತದೆ. ಅದು ಸ್ವಲ್ಪವೇ ಹಣವನ್ನು ಹಂಚಿಕೆ ಮಾಡುತ್ತದೆ. ರಾಜ್ಯ ಸರ್ಕಾರಗಳು ಸಹ ಹಣವನ್ನು ಮೀಸಲಿಡಬೇಕು ಎಂದು ಅದು ಒತ್ತಾಯಿಸುತ್ತದೆ. ಆದರೆ ಇಡೀ ಯೋಜನೆಯನ್ನು ಕೇಂದ್ರ ಸರ್ಕಾರವೇ ಮಾಡುತ್ತಿದೆ ಎಂಬಂತೆ ಬಿಂಬಿಸಲಾಗಿದೆ. ರಾಜ್ಯ ಸರ್ಕಾರಗಳು ಒಟ್ಟು ಮೊತ್ತದ ನಾಲ್ಕನೇ ಮೂರು ಭಾಗವನ್ನು ವಸತಿ ಯೋಜನೆಗಳಿಗೆ ಖರ್ಚು ಮಾಡುತ್ತವೆ. ಆದರೆ ಅವರು ಆ ಯೋಜನೆಗಳನ್ನು ಕೇಂದ್ರ ಸರ್ಕಾರದ ಯೋಜನೆಗಳೆಂದು ಬ್ರಾಂಡ್ ಮಾಡಲು ಬಯಸುತ್ತಾರೆ. ಸಮಗ್ರ ಶಿಕ್ಷಾ ಅಭಿಯಾನ ಎಂಬ ಸಮಗ್ರ ಶಾಲಾ ಶಿಕ್ಷಣ ಯೋಜನೆಯು ಅಂತಹ ಒಂದು ಯೋಜನೆಯಾಗಿದೆ” ಎಂದು ಅವರು ವಿವರಿಸಿದರು.
ಕೇರಳಕ್ಕೆ ನಿಧಿ ತಡೆ
“ಕೇರಳಕ್ಕೆ ಬರಬೇಕಾದ 849 ಕೋಟಿ ರೂ.ಗಳನ್ನು ತಡೆಹಿಡಿಯಲಾಗಿದೆ. ಏಕೆ ಗೊತ್ತಾ? ನಾವು (ಕೇರಳ ಸರ್ಕಾರ) ಪಿಎಂ ಶ್ರೀ ಯೋಜನೆಯನ್ನು ಜಾರಿಗೆ ತಂದಿಲ್ಲ. ಪಿಎಂ ಶ್ರೀ ಯೋಜನೆಯು ಸಮಗ್ರ ಶಿಕ್ಷಾ ಅಭಿಯಾನದ ಭಾಗವಾಗಿರಲಿಲ್ಲ. ಪಿಎಂ ಶ್ರೀ ಯೋಜನೆಗೆ ಸಹ ರಾಜ್ಯ ಸರ್ಕಾರವು ಶೇಕಡಾ 40 ರಷ್ಟು ಹಣವನ್ನು ವಿನಿಯೋಗಿಸಬೇಕಾಗಿದೆ.” ಎಂದರು.
ಕೇರಳ ಪ್ರಗತಿ ಸಾಧಿಸಿದೆ
ಕೇರಳವು ಎಲ್ಲಾ ವಲಯಗಳಲ್ಲಿ ಪ್ರಗತಿ ಸಾಧಿಸುತ್ತಿದೆ. ಒಕ್ಕೂಟ ಸರ್ಕಾರದ ಕೆಲವು ಅಧಿಕಾರಿಗಳು ಕೆಲವು ಯೋಜನೆಗಳನ್ನು ಸಿದ್ಧಪಡಿಸಿ, ಅವುಗಳನ್ನು ನಾವು ಅನುಸರಿಸಬೇಕೆಂದು ಬಯಸುತ್ತಾರೆ. ನಾವು ಈಗಾಗಲೇ ಆ ಎಲ್ಲಾ ಹಂತಗಳನ್ನು ದಾಟಿದ್ದೇವೆ. ಬಿಹಾರಕ್ಕೆ ಯಾವುದು ಸೂಕ್ತವೋ, ಒಡಿಸ್ಸಾಗೆ ಯಾವುದು ಸೂಕ್ತವೋ, ಅದು ಕೇರಳಕ್ಕೆ ಅನ್ವಯವಾಗದೇ ಇರಬಹುದು. ಶಿಕ್ಷಣದ ವಿಷಯಕ್ಕೆ ಬಂದರೆ, ನಾವು ಈ ದೇಶಕ್ಕೇ ಬೆಳಕಾಗಿದ್ದೇವೆ” ಎಂದು ಅವರು ಹೆಮ್ಮೆಯಿಂದ ಹೇಳಿದರು.
ರಾಜ್ಯಗಳನ್ನು ಗೌರವಿಸಿ
ಕೊನೆಯಲ್ಲಿ, ಬ್ರಿಟಾಸ್ ಅವರು ಮೋದಿ ಸರ್ಕಾರಕ್ಕೆ ಗಂಭೀರವಾದ ಮನವಿ ಮಾಡಿದರು: “ಗೌರವಾನ್ವಿತ ಸಚಿವರು ಇಲ್ಲಿಯೇ ದೆಹಲಿಯಲ್ಲಿ ಕುಳಿತುಕೊಂಡು ಎಲ್ಲವನ್ನೂ ಕೇಂದ್ರೀಕೃತಗೊಳಿಸಿ ಕೆಲಸ ಮಾಡುವುದನ್ನು ನಿಲ್ಲಿಸಬೇಕು. ಇದನ್ನು ಸಂಪೂರ್ಣವಾಗಿ ನಿಲ್ಲಿಸಿ; ರಾಜ್ಯಗಳನ್ನು, ರಾಜ್ಯ ಸರ್ಕಾರಗಳನ್ನು ಗೌರವಿಸಿ. ಅಲ್ಲಿಯೂ ಪ್ರತಿಭಾನ್ವಿತರಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಿ. ಪ್ರತಿಯೊಂದು ರಾಜ್ಯ ಸರ್ಕಾರಕ್ಕೂ ಒಂದು ದೂರದೃಷ್ಟಿ ಇರುತ್ತದೆ. ದಯವಿಟ್ಟು ಭಾರತದ ಸಂವಿಧಾನದ ಭಾವನೆಗಳನ್ನು ಎತ್ತಿಹಿಡಿಯಿರಿ. ತುರ್ತು ಪರಿಸ್ಥಿತಿ ಘೋಷಣೆಯ ಬಗೆಗಿನ ನಿಮ್ಮ ವಿರೋಧದಲ್ಲಿ ನೀವು (ಬಿಜೆಪಿ) ನಿಜವಾಗಿಯೂ ಪ್ರಾಮಾಣಿಕರಾಗಿದ್ದರೆ, ಶಿಕ್ಷಣವನ್ನು ಮತ್ತೆ ರಾಜ್ಯ ಪಟ್ಟಿಗೆ ತನ್ನಿ.” ಎಂದು ಒಕ್ಕೂಟ ಸರ್ಕಾರಕ್ಕೆ ಮನವಿ ಮಾಡಿದರು.
ಇದನ್ನೂ ನೋಡಿ: ಎಲ್ಲಾ ವಲಯಗಳಲ್ಲಿ ಮಹಿಳೆಯರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿ – ರೂಪಾ ಹಾಸನ Janashakthi Media