ಕೇರಳದಲ್ಲಿನ ಸ್ಥಳೀಯ ಸ್ವಯಮಾಡಳಿತ ಸಂಸ್ಥೆಗಳ ಚುನಾವಣೆಗಳಲ್ಲಿ ಎಡ ಪ್ರಜಾಸತ್ತಾತ್ಮಕ ರಂಗ(ಎಲ್.ಡಿ.ಎಫ್.)ವು ಅದ್ಭುತ ಜಯ ಸಾಧಿಸಿದೆ. ಎಲ್.ಡಿ.ಎಫ್. ಜಿಲ್ಲಾ ಪಂಚಾಯತುಗಳಲ್ಲಿ 14 ರಲ್ಲಿ 11, ಬ್ಲಾಕ್ ಪಂಚಾಯತುಗಳಲ್ಲಿ 152 ರಲ್ಲಿ 108, 941 ರಲ್ಲಿ 514 ಗ್ರಾಮ ಪಂಚಾಯತುಗಳಲ್ಲಿ ಜಯಗಳಿಸಿದೆ. ಆರು ಕಾರ್ಪೊರೇಷನ್ನುಗಳಲ್ಲಿ ಐದರಲ್ಲಿ ಮತ್ತು 86 ಮುನಿಸಿಪಾಲಿಟಿಗಳ ಪೈಕಿ 35 ರಲ್ಲಿ ಎಲ್.ಡಿ.ಎಫ್. ಗೆಲುವು ಸಾಧಿಸಿದೆ. (ಈ ಸಂಚಿಕೆ ಮುದ್ರಣಕ್ಕೆ ಹೋಗುವ ವೇಳೆಗೆ ಎಲ್.ಡಿ.ಎಫ್. 551 ಗ್ರಾಮ ಪಂಚಾಯತುಗಳಲ್ಲಿ ಮತ್ತು 42 ನಗರಸಭೆಗಳಲ್ಲಿ ಬಹುಮತ ಪಡೆದಿದೆ, ಯು.ಡಿ.ಎಫ್. ಸಂಖ್ಯೆ ಅನುಕ್ರಮವಾಗಿ 315 ಮತ್ತು 36ಕ್ಕೆ ಇಳಿದಿದೆ, ಎಂದು ವರದಿಯಾಗಿದೆ:
ಐದು ವರ್ಷಗಳ ಹಿಂದೆ, 2015ರ ಚುನಾವಣೆಯ ಗೆಲುವಿಗಿಂತ ಈ ಬಾರಿ ಎಲ್.ಡಿ.ಎಫ್. ಇನ್ನೂ ಉತ್ತಮ ಸಾಧನೆ ಮಾಡಿರುವುದು ಮಹತ್ವಪೂರ್ಣವಾದುದು. ಆಗ, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಧಿಕಾರದಲ್ಲಿತ್ತು. ಈ ಚುನಾವಣೆಗಳು ಎಲ್.ಡಿ.ಎಫ್. ಸರ್ಕಾರದ ನಾಲ್ಕೂವರೆ ವರ್ಷಗಳ ನಂತರ ನಡೆದಿದೆ. ಆದ್ದರಿಂದ, ಈ ತೀರ್ಪು ಪಿಣರಾಯಿ ವಿಜಯನ್ ಸರ್ಕಾರದ ಸಾಧನೆಗಾಗಿ ಜನರ ಮೆಚ್ಚುಗೆಯೆಂದು ನೋಡಬಹುದು.
ಲೈಫ್ ಮಿಷನ್(ವಸತಿ ಯೋಜನೆ), ಆರ್ದ್ರಂ (ಆರೋಗ್ಯ ಯೋಜನೆ), ಸರ್ಕಾರಿ ಶಾಲೆಗಳನ್ನು ಉತ್ತಮಪಡಿಸುವ ಹಾಗೂ ಆಧುನೀಕರಣಗೊಳಿಸುವ ಮತ್ತು ಸಾಮಾಜಿಕ ಭದ್ರತೆ ಸವಲತ್ತುಗಳನ್ನು ಹೆಚ್ಚಿಸುವ ಎಲ್.ಡಿ.ಎಫ್. ಸರ್ಕಾರದ ವ್ಯಾಪಕವಾದ ಅಭಿವೃದ್ಧಿ ಕಾರ್ಯಕ್ರಮಗಳು ಈ ಜನಪ್ರಿಯ ತೀರ್ಪಿಗೆ ಕಾರಣವಾಗಿವೆ.
ಕೇರಳದಲ್ಲಿನ ಸ್ವಯಮಾಡಳಿತ ಸಂಸ್ಥೆಗಳು ಇಡೀ ದೇಶಕ್ಕೇ ಮಾದರಿಯಾಗಿವೆ. 25 ವರ್ಷಗಳ ಹಿಂದೆ 1996ರಲ್ಲಿ ಎಲ್.ಡಿ.ಎಫ್. ಸರ್ಕಾರವು ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರವನ್ನು ಪರಿಣಾಮಕಾರಿಯಾಗಿ ವಿಕೇಂದ್ರೀಕರಿಸಿ, ಹಣಕಾಸನ್ನು ವರ್ಗಾಯಿಸಲು ಶಾಸನಗಳ ಬೆಂಬಲವನ್ನು ಒದಗಿಸಿತು. ಮೂರು ಸ್ತರಗಳ ಪಂಚಾಯತ್ ವ್ಯವಸ್ಥೆಯು ಅದರಡಿಯಲ್ಲಿ ಬರುವ ಸಂಸ್ಥೆಗಳಿಗೆ ಅಧಿಕಾರ ಹಾಗೂ ಜವಾಬ್ದಾರಿಯನ್ನು ಸ್ಪಷ್ಟವಾಗಿ ಗೊತ್ತು ಮಾಡಿದೆ. ಜಿಲ್ಲಾ ಮಟ್ಟದವರೆಗಿನ ಶಾಲೆಗಳು ಹಾಗೂ ಆಸ್ಪತ್ರೆಗಳು ಮತ್ತು ಜನರ ದಿನನಿತ್ಯದ ಬದುಕಿನ ಅಗತ್ಯತೆಗಳಿಗೆ ಒದಗುವ ಕೃಷಿ, ಮೀನುಗಾರಿಕೆ, ಸಣ್ಣ ನೀರಾವರಿ ಹಾಗೂ ಸಣ್ಣ ಕೈಗಾರಿಕಾ ವಲಯದ ಸಂಸ್ಥೆಗಳು ಮೂರು ಸ್ತರಗಳ ಪಂಚಾಯತ್ ವ್ಯಾಪಿಗೆ ಒಳಪಡುತ್ತವೆ. ರಸ್ತೆಗಳ ನಿರ್ವಹಣೆ ಹಾಗೂ ವಸತಿ, ನೈರ್ಮಲ್ಯ ಮತ್ತು ಕುಡಿಯುವ ನೀರಿನ ಸೌಲಭ್ಯಗಳಂತಹ ಮೂಲಭೂತ ಸೇವೆಗಳನ್ನು ಒದಗಿಸುವುದು ಅವುಗಳ ಹೊಣೆಯಾಗಿರುತ್ತವೆ.
ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಜತೆಯಲ್ಲೇ, ಕಳೆದ ನಾಲ್ಕೂವರೆ ವರ್ಷಗಳ ಎಲ್.ಡಿ.ಎಫ್. ಸರ್ಕಾರದ ಅಡಿಯಲ್ಲಿ, ಅಧಿಕಾರಯುತ ಸ್ಥಳೀಯ ಸಂಸ್ಥೆಗಳು 2018 ಹಾಗೂ 2019 ರ ತೀವ್ರತರದ ಪ್ರವಾಹ ನಿರ್ವಹಿಸುವಲ್ಲಿ ಮತ್ತು ಕೋವಿಡ್ ಮಹಾರೋಗವನ್ನು ಎದುರಿಸುವಲ್ಲಿ ಗಮನ ಸೆಳೆಯುವ ಸಾಧನೆ ಮಾಡಿವೆ. ಕೋವಿಡ್ ಮಹಾರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ, ಕೋವಿಡ್ ಬಾಧಿತ ಜನರ ದತ್ತಾಂಶಗಳನ್ನು ಸಂಗ್ರಹಿಸುವಲ್ಲಿ, ಕ್ವಾರಂಟೈನ್ ನಿಯಮಗಳನ್ನು ಜಾರಿಗೊಳಿಸುವಲ್ಲಿ ಮತ್ತು ಜನರಿಗೆ, ಮುಖ್ಯವಾಗಿ ಕೋವಿಡ್ ಬಾಧಿತರಿಗೆ ಜೀವನಾವಶ್ಯಕ ವಸ್ತುಗಳನ್ನು ಪೂರೈಸುವಲ್ಲಿ ಸರಿಸುಮಾರು 1200 ಸ್ಥಳೀಯ ಸಂಸ್ಥೆಗಳು ರಾಜ್ಯ ಸರ್ಕಾರದೊಂದಿಗೆ ಸೇರಿಕೊಂಡು ವಿಶ್ವಸನೀಯ ಸಾಧನೆ ಮಾಡಿವೆ.
ಆದರೆ ಈ ಸಾಧನೆ ಅಥವಾ ಸ್ಥಳೀಯ ಬೆಳವಣಿಗೆಗಳಿಗೆ ಸಂಬಂಧಪಟ್ಟ ಪ್ರಶ್ನೆಗಳು ವಿರೋಧಿಗಳಾದ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗಾಗಲೀ ಅಥವಾ ಬಿಜೆಪಿಗಾಗಲೀ ಮುಖ್ಯವೆನಿಸಲಿಲ್ಲ. ಅವರ ಚುನಾವಣಾ ಪ್ರಚಾರವು ಕೇವಲ ಅಪಪ್ರಚಾರ ಹಾಗೂ ಮುಖ್ಯಮಂತ್ರಿಗಳು, ಸಚಿವರು ಹಾಗೂ ಸಿಪಿಐ(ಎಂ) ಮುಖಂಡರುಗಳ ಮೇಲೆ ಇಲ್ಲಸಲ್ಲದ ಭ್ರಷ್ಟಾಚಾರದ ಆರೋಪಗಳನ್ನು ಮಾಡುವುದಕ್ಕೇ ಸೀಮಿತವಾಗಿತ್ತು. ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣ ಹಾಗೂ ಲೈಫ್ ಮಿಷನ್ ಮತ್ತಿತರ ಸರ್ಕಾರಿ ಯೋಜನೆಗಳಲ್ಲಿ ನೀತಿಭಂಗವಾಗಿದೆಯೆಂಬ ಬಗ್ಗೆ ಕಪೋಲಕಲ್ಪಿತ ಆಪಾದನೆಗಳನ್ನು ಮುಖ್ಯವಾಹಿನಿ ಮಾಧ್ಯಮಗಳೊಂದಿಗೆ ಸೇರಿಕೊಂಡು ಜನರಲ್ಲಿ ತಪ್ಪು ಕಲ್ಪನೆಗಳನ್ನು ಉಂಟುಮಾಡುವಲ್ಲಿ ಅವು ನಿರತವಾಗಿದ್ದವು. ದುರುದ್ದೇಶಪೂರಿತ ಸುಳ್ಳು ಸುದ್ದಿಗಳನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿ ಚುನಾವಣೆಯ ಸಂದರ್ಭದಲ್ಲಿ ಎಲ್.ಡಿ.ಎಫ್. ಸರ್ಕಾರದ ಹೆಸರು ಕೆಡಿಸಲು ಜಾರಿ ನಿರ್ದೇಶನಾಲಯ(ಇಡಿ)ಗಳಂತಹ ಕೇಂದ್ರ ಸರ್ಕಾರದ ಸಂಸ್ಥೆಗಳನ್ನು ಬಳಸಿಕೊಳ್ಳಲಾಯಿತು.
ಲೈಫ್ ಮಿಷನ್(ವಸತಿ ಯೋಜನೆ), ಆರ್ದ್ರಂ (ಆರೋಗ್ಯ ಯೋಜನೆ), ಸರ್ಕಾರಿ ಶಾಲೆಗಳನ್ನು ಉತ್ತಮಪಡಿಸುವ ಹಾಗೂ ಆಧುನೀಕರಣಗೊಳಿಸುವ ಮತ್ತು ಸಾಮಾಜಿಕ ಭದ್ರತೆ ಸವಲತ್ತುಗಳನ್ನು ಹೆಚ್ಚಿಸುವ ಎಲ್.ಡಿ.ಎಫ್ ಸರ್ಕಾರದ ವ್ಯಾಪಕವಾದ ಅಭಿವೃದ್ಧಿ ಕಾರ್ಯಕ್ರಮಗಳು ಈ ಜನಪ್ರಿಯ ತೀರ್ಪಿಗೆ ಕಾರಣವಾಗಿವೆ.
ಇದು ಎಲ್.ಡಿ.ಎಫ್ ಗೆ ತಕ್ಕುದಾದ ಯೋಗ್ಯವಾದ ವಿಜಯವಾಗಿದೆ. ಕೇರಳದ ಅಭಿವೃದ್ಧಿಯ ಕಥನದಲ್ಲಿ ಚೈತನ್ಯಶೀಲ ಪಾತ್ರ ವಹಿಸಿರುವ ಸ್ವಯಮಾಡಳಿತ ಸಂಸ್ಥೆಗಳಿಗೆ ಅದು ಈಗ ನವಚೈತನ್ಯ ಕೊಡಲಿದೆ ಹಾಗೂ ಬಲಪಡಿಸಲಿದೆ.
ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಇಂತಹ ಅಪಪ್ರಚಾರ ಮಾಡುವಲ್ಲಿ ಪೈಪೋಟಿ ನಡೆಸಿದವು. ಜನರ ಸೇವೆಯಲ್ಲಿ ಎಲ್.ಡಿ.ಎಫ್. ಸರ್ಕಾರ ಹಾಗೂ ಸ್ವಯಮಾಡಳಿತ ಸಂಸ್ಥೆಗಳ ಆದರ್ಶಪ್ರಾಯ ಸಾಧನೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಎಲ್.ಡಿ.ಎಫ್. ಸರ್ಕಾರದ ಹೆಸರು ಕೆಡಿಸುವುದೊಂದೇ ಕಾಂಗ್ರೆಸ್-ಬಿಜೆಪಿಗೆ ಉಳಿದ ದಾರಿಯಾಗಿತ್ತು.
ಈ ನಕಾರಾತ್ಮಕ ಹಾಗೂ ಭಂಡ ಪ್ರಚಾರವನ್ನು ಕೇರಳದ ಜನತೆ ತಿರಸ್ಕರಿಸಿದೆ ಮತ್ತು ಎಲ್.ಡಿ.ಎಫ್. ಸರ್ಕಾರದ ಸಾಧನೆಯ ಬಗೆಗಿನ ಅವರದೇ ಆದ ಅನುಭವದ ಆಧಾರದಲ್ಲಿ ಮತಚಲಾವಣೆ ಮಾಡಿದ್ದಾರೆ.
ತನ್ನ ಸುಭದ್ರ ಕೋಟೆಯಾದ ಕೊಟ್ಟಾಯಂ ಜಿಲ್ಲೆ ಹಾಗೂ ಕೊಚ್ಚಿ ಮಹಾನಗರಪಾಲಿಕೆಯಲ್ಲಿ ಯುಡಿಎಫ್ ಸೋತಿರುವುದನ್ನು ಫಲಿತಾಂಶ ತೋರಿಸಿದೆ. ತಿರುವಂತಪುರ ಮಹಾನಗರಪಾಲಿಕೆಯಲ್ಲಿ ಗೆಲ್ಲಲೇಬೇಕೆಂದು ಹಠ ತೊಟಿದ್ದ ಬಿಜೆಪಿ ಹಿಂದಿನ ಬಾರಿಗಿಂತ ಕಡಿಮೆ ಸ್ಥಾನ ಗಳಿಸಿದೆ.
ಇದು ಎಲ್.ಡಿ.ಎಫ್.ಗೆ ತಕ್ಕುದಾದ ಯೋಗ್ಯವಾದ ವಿಜಯವಾಗಿದೆ. ಕೇರಳದ ಅಭಿವೃದ್ಧಿಯ ಕಥನದಲ್ಲಿ ಚೈತನ್ಯಶೀಲ ಪಾತ್ರ ವಹಿಸಿರುವ ಸ್ವಯಮಾಡಳಿತ ಸಂಸ್ಥೆಗಳಿಗೆ ಅದು ಈಗ ನವಚೈತನ್ಯ ಕೊಡಲಿದೆ ಹಾಗೂ ಬಲಪಡಿಸಲಿದೆ. ಮುಂದಿನ ವರ್ಷದ ಏಪ್ರಿಲ್–ಮೇನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗಾಗಿ ನಡೆಸುವ ತಯಾರಿಗೆ ಈ ವಿಜಯವು ಎಲ್.ಡಿ.ಎಫ್.ನ ಆತ್ಮವಿಶ್ವಾಸವನ್ನು ಮತ್ತು ಸ್ಥೈರ್ಯವನ್ನು ಹೆಚ್ಚಿಸಲಿದೆ.
ಅನು: ಟಿ. ಸುರೇಂದ್ರ ರಾವ್