ಕಣ್ಣೂರು : ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಶಾಮೀಲಿನೊಂದಿಗೆ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಪಟ್ಟುಬಿಡದೆ ಹೆಚ್ಚಿಸುತ್ತಿರುವುದನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) 23ನೇ ಮಹಾಧಿವೇಶನ ಪ್ರತಿಭಟಿಸಿದೆ. ಎನ್ಡಿಎ ಆಡಳಿತದ ಅವಧಿಯಲ್ಲಿ ಹೇರಲಾದ ಹೆಚ್ಚುವರಿ ತೆರಿಗೆಗಳನ್ನು ತಕ್ಷಣವೇ ಹಿಂಪಡೆಯುವಂತೆ ಆಗ್ರಹಿಸಿದೆ.
ಸರ್ಕಾರವು ಶ್ರೀಮಂತರ ಮೇಲೆ ತೆರಿಗೆಯನ್ನು ಹೆಚ್ಚಿಸಬೇಕು, ನಿಯಂತ್ರಣಗಳನ್ನು ಹಾಕಬೇಕು ಮತ್ತು ಪೆಟ್ರೋಲ್ ಉತ್ಪನ್ನಗಳ ಚಿಲ್ಲರೆ ಬೆಲೆಗಳನ್ನು ಇಳಿಸಬೇಕು ಮತ್ತು ಪೆಟ್ರೋಲಿಯಂ ರಂಗದಲ್ಲಿ ಸಾರ್ವಜನಿಕ ವಲಯದ ಉದ್ಯಮಗಳ ಖಾಸಗೀಕರಣವನ್ನು ನಿಲ್ಲಿಸಬೇಕು ಎಂದೂ ಅದು ಒತ್ತಾಯಿಸಿದೆ. ಇದನ್ನು ದೇಶದಾದ್ಯಂತ ಬೃಹತ್ ಪ್ರಮಾಣದಲ್ಲಿ ಪ್ರತಿಭಟಿಸಬೇಕು ಎಂದು ಈ ದೇಶದ ಜನಗಳನ್ನು ಮಹಾಧಿವೇಶನ ಆಗ್ರಹಪಡಿಸಿದೆ.
ಪೆಟ್ರೋಲಿಯಂ ಬೆಲೆಗಳ ಏರಿಕೆಗಳು ಹಣದುಬ್ಬರಕ್ಕೆ ಇಂಧನವಾಗುತ್ತಿವೆ, ಮತ್ತು ಆ ಮೂಲಕ ದುಡಿಯುವ ಜನರಿಂದ ಆಳುವ ವರ್ಗಗಳಿಗೆ ಮತ್ತು ಭಾರತ ಸರ್ಕಾರಕ್ಕೆ ಸಂಪನ್ಮೂಲಗಳ ದೊಡ್ಡ ಪ್ರಮಾಣದ ವರ್ಗಾವಣೆಯನ್ನು ಸೂಚಿಸುತ್ತವೆ. ಬಿಜೆಪಿ ನೇತೃತ್ವದ ಸರ್ಕಾರದ ಮೊದಲ ವರ್ಷವಾದ 2014-15ರಲ್ಲಿ ತೈಲ ವಲಯದಿಂದ ಕೇಂದ್ರ ಸರ್ಕಾರದ ತೆರಿಗೆ ಸಂಗ್ರಹವು 0.74 ಲಕ್ಷ ಕೋಟಿಯಿದ್ದದ್ದು 2021-22ರಲ್ಲಿ ಸುಮಾರು 3.5 ಲಕ್ಷ ಕೋಟಿಗಳಿಗೆ ಏರಿದೆ. ಕೇಂದ್ರ ಸರ್ಕಾರದ ಆದಾಯದಲ್ಲಿ ಪೆಟ್ರೋಲಿಯಂ ತೆರಿಗೆಗಳ ಪಾಲು ಶೇ.5.4ರಿಂದ ಶೇ.12.2ಕ್ಕೆ ಏರಿದೆ.
ಇದನ್ನು ಓದಿ: ಸಂವಿಧಾನಿಕ ಗಣತಂತ್ರದ ರಕ್ಷಣೆಗೆ ಹಿಂದುತ್ವ ಕೋಮುವಾದದ ವಿರುದ್ಧ ಜಾತ್ಯತೀತ ಶಕ್ತಿಗಳ ವಿಶಾಲ ರಂಗ- ದೇಶಪ್ರೇಮಿಗಳಿಗೆ ಯೆಚುರಿ ಮನವಿ
ಮಾರ್ಚ್ 22 ರಿಂದ ಪೆಟ್ರೋಲ್ ಮತ್ತು ಡೀಸೆಲ್ ಚಿಲ್ಲರೆ ಬೆಲೆಗಳು ಪ್ರತಿದಿನ ಹೆಚ್ಚುತ್ತಲೇ ಇವೆ. ಅಂದಿನಿಂದ ಈ ಮಹಾಧಿವೇಶನದ ಉದ್ಘಾಟನೆಯ ದಿನದ ವರೆಗೆ ಒಟ್ಟಾಗಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಕ್ರಮವಾಗಿ 10.83ರೂ. ಮತ್ತು 10.47 ರೂ. ಏರಿಕೆಯಾಗಿದೆ ಎಂದು ಈ ನಿರ್ಣಯ ಗಮನಿಸಿದೆ.
ಪೆಟ್ರೋಲಿಯಂ ಬೆಲೆಗಳ ನಿಯಂತ್ರಣವನ್ನು ತೆಗೆದುಹಾಕುವುದು ಮತ್ತು ತೈಲ ಮಡು (ಆಯಿಲ್ ಪೂಲ್) ಖಾತೆ ವ್ಯವಸ್ಥೆಯನ್ನು ದುರ್ಬಲಗೊಳಿಸುವುದರಿಂದ, ತೈಲ ಕಂಪನಿಗಳಿಗೆ ಚಿಲ್ಲರೆ ಬೆಲೆಗಳನ್ನು ನಿಗದಿಪಡಿಸಲು ಮುಕ್ತ ಅವಕಾಶವನ್ನು ಕೊಟ್ಟಂತಾಗಿದೆ. ಆಯಿಲ್ ಪೂಲ್ ಖಾತೆಯಿಂದ ಸಬ್ಸಿಡಿ ನೀಡಲಾಗದ ರಿಲಯನ್ಸ್ ಪೆಟ್ರೋಲಿಯಂನಂತಹ ಚಿಲ್ಲರೆ ವಲಯಕ್ಕೆ ಹೊಸದಾಗಿ ಪ್ರವೇಶಿಸುವ ಖಾಸಗಿಯವರಿಗೆ ಅನುಕೂಲಗಳನ್ನು ನೀಡುವುದು ನಿಯಂತ್ರಣಗಳನ್ನು ತೆಗೆಯುವುದರ ಹಿಂದಿನ ನಿಜವಾದ ಉದ್ದೇಶವಾಗಿತ್ತು ಎಂದು ಈ ನಿರ್ಣಯ ಹೇಳಿದೆ.
ರಾಜ್ಯ ಸರ್ಕಾರಗಳು ರಾಜ್ಯ ತೆರಿಗೆಯನ್ನು ಕಡಿಮೆ ಮಾಡುವ ಮೂಲಕ ಜನರ ಮೇಲಿನ ಹೊರೆಯನ್ನು ತಗ್ಗಿಸಬೇಕು ಎಂದು ಬಿಜೆಪಿ ವಾದಿಸುತ್ತಿದೆ. ಆದರೆ ಕಚ್ಚಾ ತೈಲ ಬೆಲೆ ಕುಸಿದಾಗ ತೆರಿಗೆ ಹೆಚ್ಚಿಸಿದ್ದು ರಾಜ್ಯ ಸರ್ಕಾರಗಳಲ್ಲ ಕೇಂದ್ರ ಸರ್ಕಾರ. ಜನಗಳ ಒತ್ತಡದಿಂದಾಗಿ, ಕೇಂದ್ರ ಸರ್ಕಾರವು ನವೆಂಬರ್ನಲ್ಲಿ ತೆರಿಗೆ ಹೆಚ್ಚಳವನ್ನು ಭಾಗಶಃ ಹಿಂತೆಗೆದುಕೊಳ್ಳಲೇ ಬೇಕಾಯಿತು. ಈಗಲೂ ಸಹ, ಕೋವಿಡ್ ನಂತರದ ಚೇತರಿಕೆಯ ಉಸಿರುಗಟ್ಟಿಸುವ ಬೆಲೆ ಸುರುಳಿಯ ಅಪಾಯವನ್ನು ದೇಶವು ಎದುರಿಸುತ್ತಿರುವಾಗ, ಸರ್ಕಾರವು ವಿಧಿಸಿರುವ ಹೆಚ್ಚುವರಿ ತೆರಿಗೆಯನ್ನು ಸಂಪೂರ್ಣವಾಗಿ ಹಿಂಪಡೆಯಲು ನಿರಾಕರಿಸುತ್ತಿದೆ.
ಒಕ್ಕೂಟ ಸರಕಾರ ಕ್ರೋಢೀಕರಿಸಿದ ಹೆಚ್ಚುವರಿ ಆದಾಯವನ್ನು ರಾಜ್ಯ ಸರ್ಕಾರಗಳೊಂದಿಗೆ ಹಂಚಿಕೊಳ್ಳುವುದನ್ನು ತಪ್ಪಿಸಲು, ಹಂಚಿಕೊಳ್ಳಬಹುದಾದ ಸಂಗ್ರಹದ ವ್ಯಾಪ್ತಿಯಿಂದ ಹೊರಗಿರುವ ತೆರಿಗೆಗಳನ್ನು ಅವಲಂಬಿಸುತ್ತಿದೆ. 2018-19 ರ ಬಜೆಟ್ನಲ್ಲಿ, ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್ಗೆ 9 ರೂ.ಗಳಷ್ಟು ಕಡಿಮೆಗೊಳಿಸಿದರೆ, ರಾಜ್ಯಗಳೊಂದಿಗೆ ಹಂಚಿಕೊಳ್ಳಲಾಗದ ರಸ್ತೆ ಸೆಸ್ ಅನ್ನು ಅದೇ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ನವೆಂಬರ್ 2021ರಲ್ಲಿ, ತೆರಿಗೆಗಳನ್ನು ಕಡಿಮೆ ಮಾಡಲೇ ಬೇಕಾಗಿ ಬಂದಾಗ, ಬಿಜೆಪಿ ಸರ್ಕಾರವು ರಾಜ್ಯ ಸರಕಾರಗಳೊಂದಿಗೆ ಹಂಚಿಕೊಳ್ಳಬೇಕಾದ ಅಬಕಾರಿಯನ್ನು ಕಡಿಮೆ ಮಾಡಿತು.
ಪ್ರಸ್ತುತ ಪೆಟ್ರೋಲಿಯಂ ಬೆಲೆ ಏರಿಕೆಗೆ ರಾಜ್ಯ ಸರ್ಕಾರಗಳ ಕ್ರಮಗಳು ಯಾವುದೇ ರೀತಿಯಲ್ಲಿ ಕೊಡುಗೆ ನೀಡಿಲ್ಲ ಎಂಬ ಸಂಗತಿಯತ್ತವೂ ಗಮನ ಸೆಳೆದಿರುವ ಸಿಪಿಐ(ಎಂ)ನ 23ನೇ ಮಹಾಧಿವೇಶನ ಎನ್ಡಿಎ ಆಡಳಿತದ ಅವಧಿಯಲ್ಲಿ ಹೇರಲಾದ ಹೆಚ್ಚುವರಿ ತೆರಿಗೆಗಳನ್ನು ತಕ್ಷಣವೇ ಹಿಂಪಡೆಯುವಂತೆ ಆಗ್ರಹಿಸಿದೆ. ಸರ್ಕಾರವು ಶ್ರೀಮಂತರ ಮೇಲೆ ತೆರಿಗೆಯನ್ನು ಹೆಚ್ಚಿಸಬೇಕು, ನಿಯಂತ್ರಣಗಳನ್ನು ಹಾಕಬೇಕು ಮತ್ತು ಪೆಟ್ರೋಲ್ ಉತ್ಪನ್ನಗಳ ಚಿಲ್ಲರೆ ಬೆಲೆಗಳನ್ನು ಇಳಿಸಬೇಕು ಮತ್ತು ಪೆಟ್ರೋಲಿಯಂ ರಂಗದಲ್ಲಿ ಸಾರ್ವಜನಿಕ ವಲಯದ ಉದ್ಯಮಗಳ ಖಾಸಗೀಕರಣವನ್ನು ನಿಲ್ಲಿಸಬೇಕು ಎಂದು ಸಿಪಿಐಎಂ ಒತ್ತಾಯಿಸಿದೆ.