ಸಿಂಧನೂರು: ಸಿಂಧನೂರು ತಾಲ್ಲೂಕಿನ ಆರ್.ಎಚ್.ನಂ-1 ಕ್ಯಾಂಪ್ ಗ್ರಾ.ಪಂ 2ನೇ ಅವಧಿಗೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು,ಕಾಂಗ್ರೆಸ್ ಬೆಂಬಲಿತ,ಮುಸ್ಲಿಂ ಸಮುದಾಯದವರಾದ ಎ.ರಹೆಮದ್ ಪಾಷಾ ಅಧ್ಯಕ್ಷರಾಗಿರುವುದನ್ನು ವಿರೋಧಿಸಿ 19 ಸದಸ್ಯರು ರಾಜೀನಾಮೆ ನೀಡಿದ್ದಾರೆ.
ಗ್ರಾ.ಪಂನಲ್ಲಿ ಒಟ್ಟು 38 ಸದಸ್ಯರಿದ್ದಾರೆ. ಆ ಪೈಕಿ 19 ಸದಸ್ಯರು ಅಧ್ಯಕ್ಷರ ಆಯ್ಕೆ ವಿರೋಧಿಸಿ ರಾಜೀನಾಮೆ ನೀಡಲು ಗ್ರಾ.ಪಂ ಕಚೇರಿಗೆ ಶುಕ್ರವಾರ ಬಂದಿದ್ದರು. ಅಧ್ಯಕ್ಷರು ಇಲ್ಲದಿರುವುದರಿಂದ ಪಂಚಾಯಿತಿಯ ಆವಕ-ಜಾವಕ ಶಾಖೆಯಲ್ಲಿ ರಾಜೀನಾಮೆ ಪತ್ರಗಳನ್ನು ಸಲ್ಲಿಸಿದರು. ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಪ್ರಕ್ರಿಯಿಂದ ಈ 19 ಸದಸ್ಯರೂ ದೂರ ಉಳಿದಿದ್ದರು.
ಇದನ್ನೂ ಓದಿ:ನಾಳೆ ಗ್ರಾಮ ಪಂಚಾಯತಿಗಳಿಗೆ ಚುನಾವಣೆ; ಅ.31ಕ್ಕೆ ಫಲಿತಾಂಶ ಪ್ರಕಟ
ಸದಸ್ಯತ್ವ ರದ್ದುಪಡಿಸಲು ಆಗ್ರಹ ಸಿಂಧನೂರು ತಾಲ್ಲೂಕಿನ ಆರ್.ಎಚ್.ಕ್ಯಾಂಪ್ ಗ್ರಾಮ ಪಂಚಾಯಿತಿಯ 15 ಸದಸ್ಯರು ಬಿಜೆಪಿ ಮತ್ತು ಜೆಡಿಎಸ್ ಮುಖಂಡರ ಕೋಮುವಾದ ಮತ್ತು ಜೆಡಿಎಸ್ ಮುಖಂಡರ ಕೋಮುವಾದ ಮತ್ತು ಜಾತಿವಾದದ ಪ್ರಭಾವಕ್ಕೆ ಒಳಗಾಗಿ ಸಾಮೂಹಿಕ ರಾಜೀನಾಮೆ ನೀಡಿರುವುದರಿಂದ ಅವರ ಸದಸ್ಯತ್ವ ರದ್ದುಪಡಿಸಿ ಭವಿಷ್ಯದಲ್ಲಿ ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧ ಹೇರಬೇಕು ಎಂದು ದೇವಸೂಗೂರು ಬ್ಲಾಕ್ ಕಾಂಗ್ರೆಸ್ ಅಲ್ಪಾಸಂಖ್ಯಾತರ ಕಾರ್ಯದರ್ಶಿ ಮುಜಾಹಿದ್ ಮರ್ಜೆಡ್ ಒತ್ತಾಯಿಸಿದ್ದಾರೆ.
ಭಾನುವಾರ ಹೇಳಿಕೆ ನೀಡಿರುವ ಅವರು ಗ್ರಾಮ ಪಂಚಾಯಿತಿ ಎರಡನೆಯ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಈಚೆಗೆ ನಡೆದ ಚುನಾವಣೆಯಲ್ಲಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್‌ಗಳಿಗೆ ಮೀಸಲಾತಿ ನೀಡಿದಂತೆ ಆರ್.ಎಚ್.ಕ್ಯಾಂಪ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಅಲ್ಲಿಯ ಸದಸ್ಯರ ಪ್ರೀತಿ ಒತ್ತಡಕ್ಕೆ ಮಣಿದು ರಹಮದ್ ಪಾಷ ವಿಜೇತರಾಗಿದ್ದಾರೆ. ಎರಡು ದಿನಗಳ ನಂತರ ರಾಜಕೀಯ ಪ್ರೇರಿತರಾಗಿ ಸಾಮೂಹಿಕ ರಾಜೀನಾಮೆ ನೀಡಿರುವ ಸದಸ್ಯರು ಸಂವಿಧಾನ ಮತ್ತು ಮೀಸಲಾತಿ ನೀತಿ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಕೆಲವೊಂದು ಕಡೆ ಮೀಸಲಾತಿ ವಿಚಾರವಾಗಿ ನ್ಯಾಯಾಲಯದ ತಡೆಯಾಜ್ಞೆ ಇದೆ. ಅಂತಹ ಗ್ರಾಮ ಪಂಚಾಯಿತಿಗಳಲ್ಲಿ ಇನ್ನೂ ಚುನಾವಣೆ ಆಗಿಲ್ಲ. ಆದರೆ, ಇಲ್ಲಿಯ ಸದಸ್ಯರು ಮುಸ್ಲಿಂ ವ್ಯಕ್ತಿಗೆ ಅಧ್ಯಕ್ಷ ಸ್ಥಾನ ಲಭಿಸಿರುವುದನ್ನು ಸಹಿಸದೆ ಸದಸ್ಯರು ರಾಜೀನಾಮೆ ನೀಡುವ ಮೂಲಕ ಪ್ರಜಾಸತ್ಯಾತ್ಮಕ ಮೌಲ್ಯಗಳಿಗೆ ಅಪಚಾರ ಎಸಗಿದ್ದಾರೆ. ಅವರಿಗೆ ಭವಿಷ್ಯದಲ್ಲಿ ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧ ಹೇರಬೇಕು ಎಂದು ಅಗ್ರಹಿಸಿದ್ದಾರೆ.