ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ಮಾಧ್ಯಮಗಳ ಸುದ್ದಿಯ ಬಗ್ಗೆ ಶನಿವಾರ ಸ್ಪಷ್ಟನೆ ನೀಡಿರುವ ನಳಿನ್ ಕುಮಾರ್ ಕಟೀಲ್, “ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿಲ್ಲ. ಈ ಕುರಿತಂತೆ ಮಾಧ್ಯಮಗಳಲ್ಲಿ ಬರುತ್ತಿರುವ ಮಾಹಿತಿ ಸತ್ಯಕ್ಕೆ ದೂರವಾದುದು” ಎಂದು ಹೇಳಿದ್ದಾರೆ.
“ಬಳ್ಳಾರಿಯಲ್ಲಿ ಮಾತನಾಡಿದ್ದ ನಳಿನ್ ಕುಮಾರ್ ಕಟೀಲ್ ರಾಜೀನಾಮೆ ಪತ್ರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ನೀಡಿದ್ದೇನೆ ಹಾಗೂ ತನ್ನ ನಿರ್ಧಾರದ ಬಗ್ಗೆ ಮೌಖಿಕವಾಗಿಯೂ ತಿಳಿಸಿದ್ದೇನೆ” ಎಂದು ನಳಿನ್ ಕುಮಾರ್ ಹೇಳಿದ್ದಾಗಿ ಮಾಧ್ಯಮಗಳು ವರದಿ ಮಾಡಿದ್ದವು.
ಇದನ್ನೂ ಓದಿ: ನಾಯಕತ್ವ ಬದಲಾವಣೆ ಚರ್ಚೆಯೇ ನಡೆದಿಲ್ಲ: ನಳಿನ್ ಕುಮಾರ್ ಕಟೀಲ್
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ನಳಿನ್ ಕುಮಾರ್, “ಬಳ್ಳಾರಿಯಲ್ಲಿ ವಿ. ಸೋಮಣ್ಣ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷೆಯನ್ನು ಪ್ರಕಟಿಸಿದ ಕುರಿತ ಪ್ರಶ್ನೆಗೆ ಉತ್ತರಿಸುವ ವೇಳೆ ಸೋಲಿನ ನೈತಿಕ ಹೊಣೆ ಹೊರುತ್ತೇನೆ ಎಂದಿದ್ದ. ಸೋಲಿನ ಕಾರಣಗಳ ಕುರಿತಂತೆ ಪಕ್ಷದ ಹಿರಿಯರಿಗೆ ಮಾಹಿತಿ ನೀಡಿದ್ದೇನೆ. 4 ವರ್ಷಗಳಿಂದ ನಾನು ಅಧ್ಯಕ್ಷ ಸ್ಥಾನದಲ್ಲಿದ್ದೇನೆ ಎಂದು ತಿಳಿಸಿದ್ದೆ” ಎಂದು ಅವರು ಹೇಳಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಲ್ಲಿ ಆಂತರಿಕ ಚಟುವಟಿಕೆಗಳು ಈಗಾಗಲೆ ಗರಿಗೆದರಿದೆ. ವಿ. ಸೋಮಣ್ಣ, ಸಿ.ಟಿ. ರವಿ, ಅಶ್ವತ್ ನಾರಾಯಣ ಹಾಗೂ ಆರ್. ಅಶೋಕ್, ಅರವಿಂದ್ ಬೆಲ್ಲದ್, ಬಸನಗೌಡ ಪಾಟೀಲ್ ಯತ್ನಾಳ್, ವಿ. ಸುನಿಲ್ ಕುಮಾರ್, ಕೆ.ಎಸ್. ಈಶ್ವರಪ್ಪ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.
ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಸೋಮಣ್ಣ ಅವರು,”ಚುನಾವಣಾ ಬಳಿಕ ಎರಡು ಬಾರಿ ದೆಹಲಿಗೆ ಹೋಗಿ ಬಂದಿದ್ದೇನೆ. ಯಾರ ಮೇಲೆ ಏನು ಅಭಿಪ್ರಾಯ ಎಂದು ಹೇಳುವುದಕ್ಕಿಂತ ನನ್ನ 45 ವರ್ಷದ ಅನುಭವ ಹೇಳಿದ್ದೇನೆ. ನನ್ನನ್ನು ರಾಜ್ಯಾಧ್ಯಕ್ಷ ಮಾಡಿ ಎಂದು ಹೇಳಿದ್ದೇನೆ. ಕೇಂದ್ರ ನಾಯಕರಿಗೆ ಪತ್ರ ಬರೆದಿದ್ದೇನೆ. ಅದು ಎಷ್ಟು ಚರ್ಚೆ ಆಗುತ್ತಿದೆ ಎನ್ನುವ ಬಗ್ಗೆ ಗೊತ್ತಿಲ್ಲ” ಎಂದಿದ್ದರು.
ಇದನ್ನೂ ಓದಿ: ನಳಿನ್ ಕುಮಾರ್ ವಿರುದ್ಧ ಆಕ್ರೋಶದಿಂದ ತುಳು ನಾಡು ರಕ್ಷಣೆ ಸಾಧ್ಯವಿಲ್ಲ, ಬಿಜೆಪಿಯೇ ಮೂಲೆಗುಂಪಾಗಬೇಕು
“ನಾನು ಬಿಜೆಪಿಗೆ ಬಂದು 15 ವರ್ಷ ಆಯಿತು. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿಯನ್ನು ಒಟ್ಟಿಗೆ ನಡೆಸಿಕೊಂಡು ಹೋಗಬೇಕಿದೆ. ಹೈಕಮಾಂಡ್ ನನಗೆ ನೀಡಿದ್ದ ಎಲ್ಲಾ ಟಾಸ್ಕ್ ಮಾಡಿದ್ದೇನೆ. ಆದರೆ ಆರ್. ಅಶೋಕ್ ಅವರು ಟಾಸ್ಕ್‌ಅನ್ನು ಸರಿಯಾಗಿ ನಿಭಾಯಿಸಿಲ್ಲ. ಅವರು ಡಿಕೆ ಶಿವಕುಮಾರ್ ವಿರುದ್ಧ ಸ್ಪರ್ಧೆ ಮಾತ್ರ ಮಾಡಿದರು. ಆದರೆ ಪೈಪೋಟಿ ನೀಡುವ ಪ್ರಯತ್ನ ಮಾಡಲಿಲ್ಲ” ಎಂದು ಆರೋಪಿಸಿದ್ದಾರೆ.
“ನಾನು ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆ ಮಾಡಿ ಪ್ರಬಲ ಪೈಪೋಟಿ ನೀಡಿದ್ದೇನೆ. ನನ್ನ ತವರು ಕ್ಷೇತ್ರ ಬಿಟ್ಟು ಬೇರೆ ಎರಡು ಕಡೆಗಳಲ್ಲಿ ನನಗೆ ಸ್ಪರ್ಧೆ ಮಾಡಲು ಟಾಸ್ಕ್ ಕೊಟ್ಟರು, ನಾನು ಅದಕ್ಕೆ ಒಪ್ಪಿದೆ. ನಾನು ಪಕ್ಷ ಹೇಳಿದಂತೆ ನಡೆದುಕೊಂಡು ಬಂದಿದ್ದೇನೆ ಹಾಗಾಗಿ ನನಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಬೇಕು ಎಂದು ನಮ್ಮ ವರಿಷ್ಠರಿಗೆ ಒತ್ತಾಯ ಮಾಡಿದ್ದೇನೆ” ಎಂದು ಸೋಮಣ್ಣ ತಿಳಿಸಿದ್ದರು.