ಬೆಂಗಳೂರು: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026-27ರ ಆಯವ್ಯಯ ಫೆಬ್ರವರಿ 1(ನಾಳೆ)ರಂದು ಕೇಂದ್ರ ಬಜೆಟ್ ಮಂಡನೆ ಗೆ ರಾಜ್ಯ ಸರ್ಕಾರವು ಈ ಬಾರಿಯೂ ಹತ್ತು ಹಲವು ಬೇಡಿಕೆಯ ಬಜೆಟ್ ವಿಷ್ ಲಿಸ್ಟ್ನ್ನು ಕೇಂದ್ರ ಸರ್ಕಾರದ ಮುಂದಿಟ್ಟಿದೆ.
ದೇಶದ ಅಭಿವೃದ್ಧಿ ವೇಗಕ್ಕೆ ಪೂರಕವಾಗಿ ಕಾರ್ಯಕ್ರಮಗಳನ್ನು ಘೋಷಿಸುವ ಸಾಧ್ಯತೆಯಿದೆ. ಈ ಮಧ್ಯೆ ರಾಜ್ಯ ಸರ್ಕಾರ ಕೇಂದ್ರ ಬಜೆಟ್ ಮೇಲೆ ಹತ್ತು ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಈಗಾಗಲೇ ಬಜೆಟ್ ಪೂರ್ವಬಾವಿ ಸಭೆಯಲ್ಲಿ ರಾಜ್ಯ ಸರ್ಕಾರ ರಾಜ್ಯದ ಅಧಿಕೃತ ಬೇಡಿಕೆಯ ಪಟ್ಟಿಯನ್ನು ಕೇಂದ್ರ ಹಣಕಾಸು ಸಚಿವೆ ಮುಂದಿಟ್ಟಿದೆ. ಕೇಂದ್ರ ಹಣಕಾಸು ಸಚಿವರು 2026-27ರ ಬಜೆಟ್ನಲ್ಲಿ ಅನೇಕ ಆರ್ಥಿಕ ಸುಧಾರಣಾ ಕ್ರಮಗಳಿಗೆ ಒತ್ತು ನೀಡುವ ನಿರೀಕ್ಷೆಯಿದೆ. ಹೆಚ್ಚಿನ ಅನುದಾನ, ಬೆಂಗಳೂರು ಅಭಿವೃದ್ಧಿಗಾಗಿ ಅನುದಾನ ಸೇರಿ ಹಲವು ಪ್ರಮುಖ ಬೇಡಿಕೆಗಳನ್ನು ಕೇಂದ್ರದ ಮುಂದಿಡಲಾಗಿದೆ.
ಕೇಂದ್ರದ ಮುಂದೆ ರಾಜ್ಯ ಸರ್ಕಾರ ಪ್ರಮುಖ ಬೇಡಿಕೆಗಳು ಮುಂದಿಟ್ಟ ಈ ಕೆಳಗಿನಂತಿವೆ.
ತಂಬಾಕದ ಮೇಲೆ ವಿಧಿಸಲಾಗುವ ಸುಂಕ ಹಾಗೂ ಪಾನ್ ಮಸಾಲ ಮೇಲಿನ ಸೆಸ್ನ್ನು 50:50 ಅನುಪಾತದಲ್ಲಿ ಹಂಚಿ, ಒಕ್ಕೂಟ ಸಹಕಾರ ಮತ್ತು ವಿತ್ತೀಯ ಸಮಾನತೆಯನ್ನು ಮರುಸ್ಥಾಪಿಸಬೇಕು ಎಂದು ಮನವಿ ಮಾಡಲಾಗಿದೆ.
ಇದನ್ನೂ ಓದಿ : ತುಮಕೂರು | ಕಾರ್ಮಿಕ ಹಕ್ಕು ರಕ್ಷಣೆಗೆ ಹೋರಾಟ: ಸಂಹಿತೆ ರದ್ದುಪಡಿಸುವಂತೆ ಬಂದ್‌ಗೆ ಕರೆ
ಜಿಎಸ್ಟಿ ಸರಳೀಕರಣದ ಬಳಿಕ ಕರ್ನಾಟಕದ ಜಿಎಸ್ಟಿ ಬೆಳವಣಿಗೆ 12%ರಿಂದ 5%ಕ್ಕೆ ಇಳಿಕೆಯಾಗಿದೆ. ಇದರಿಂದ ಈ ವರ್ಷ ಸುನಾರು 5,000 ಕೋಟಿ ರೂ. ಕೊರತೆಯಾಗಿದ್ದು, ವಾರ್ಷಿಕ 9,000 ಕೋಟಿ ರೂ. ಆದಾಯ ಕೊರತೆಯಾಗಲಿದೆ. ಕೇಂದ್ರ ಸರ್ಕಾರ ಪಾನ್ ಮಸಾಲ ಮೇಲಿನ ಸೆಸ್ ಮತ್ತು ತಂಬಾಕು ಮೇಲಿನ ಸುಂಕದ ಮೂಲಕ ತನ್ನ ನಷ್ಟವನ್ನು ಹೊಂದಿಸಿಕೊಂಡಿದೆ. ಆದರೆ, ರಾಜ್ಯಗಳಿಗೆ ಆ ಅವಕಾಶ ಇಲ್ಲದಾಗಿದೆ. ಹೀಗಾಗಿ, ರಾಜ್ಯಗಳಿಗೆ ಸದೃಢ ಆದಾಯ ರಕ್ಷಣೆ ವ್ಯವಸ್ಥೆ ಕಲ್ಪಿಸಬೇಕು. ಆದಾಯ ನಷ್ಟಕ್ಕೆ ಸಂಪೂರ್ಣ ಪರಿಹಾರ ನೀಡುವಂತೆ ರಾಜ್ಯ ಸರ್ಕಾರ ಮನವಿ ಮಾಡಿದೆ.
ಬೇಡಿಕೆ ಆಧಾರಿತ ಮನರೇಗಾವನ್ನು ಅನುದಾನ ಹಂಚಿಕೆ ಆಧಾರಿತ G-RAM-Gಗೆ ಬದಲಾಯಿಸುವುದರಿಂದ ಪರಿಣಾಮಕಾರಿ ಉದ್ಯೋಗ ದಿನಗಳು ಕಡಿಮೆಯಾಗಿವೆ. ಇದರಿಂದಾಗಿ 13 ಕೋಟಿ ಮಾನವ ದಿನಗಳ ಜೀವನೋಪಾಯ ಭದ್ರತೆಯನ್ನು ಒದಗಿಸುವುದನ್ನು ಮುಂದುವರೆಸಲು, ಕರ್ನಾಟಕಕ್ಕೆ ಸುಮಾರು 2,000 ಕೋಟಿ ರೂ.ಗಳು ಬೇಕಾಗುತ್ತದೆ. ಇದನ್ನು ಒದಗಿಸಲು ವಿತ್ತೀಯ ಅವಕಾಶವಿಲ್ಲ. ಅಲ್ಲದೆ, G-RAM-G ಯೋಜನೆಯಲ್ಲಿ ರಾಜ್ಯಗಳು ಕೂಡ ಅನುದಾನ ಹಂಚಿಕೆ ಮಾಡಬೇಕಾಗಿದ್ದು, ರಾಜ್ಯದ ಹೊರೆಯನ್ನು ಇದು ಹೆಚ್ಚಿಸಿದೆ. ಆದ್ದರಿಂದ ಯೋಜನಾ ವಿನ್ಯಾಸವನ್ನು ಮರು ಪರಿಶೀಲಿಸಿ, ಬೇಡಿಕೆ ಆಧಾರಿತ ಉದ್ಯೋಗ ವ್ಯವಸ್ಥೆಯನ್ನು ಪುನಃಸ್ಥಾಪಿಸಿ, ಸಮರ್ಪಕ ಮತ್ತು ಮಿತಿರಹಿತ ಕೇಂದ್ರ ಅನುದಾನ ಒದಗಿಸುವಂತೆ ಒತ್ತಾಯಿಸಲಾಗಿದೆ.
ಜಲಜೀವನ ಮಿಷನ್ ಯೋಜನೆಯ ಕೇಂದ್ರದ ಪಾಲಿನ ಬಾಕಿ ಅನುದಾನ ಬಿಡುಗಡೆ ಮಾಡಬೇಕು. ಕೇಂದ್ರ ಸರ್ಕಾರ ಈ ಯೋಜನೆಯಡಿ ಈವರೆಗೆ 11,786 ಕೋಟಿ ರೂ. ಹಣ ಬಿಡುಗಡೆ ಮಾಡಿದ್ದರೆ, ರಾಜ್ಯ ಸರ್ಕಾರ 24,598 ಕೋಟಿ ರೂ. ಹಣ ಬಿಡುಗಡೆ ಮಾಡಿದೆ. ಯೋಜನೆ ಅನುಷ್ಠಾನಕ್ಕೆ ಅಡ್ಡಿಯಾಗದಂತೆ ರಾಜ್ಯ ಸರ್ಕಾರ ಮುಂಗಡವಾಗಿ ಹೆಚ್ಚುವರಿ 13,004 ಕೋಟಿ ರೂ. ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರ ಕೂಡಲೇ ಬಾಕಿ ಹಣ ಬಿಡುಗಡೆ ಮಾಡಬೇಕು ಎಂದು ಬೇಡಿಕೆ ಇಡಲಾಗಿದೆ.
ಅನೇಕ ಬೆಳೆಗಳಲ್ಲಿ ಕಡಿಮೆ ಖರೀದಿ ಮತ್ತು ಕೊಳೆಯುವಿಕೆಯಿಂದಾಗಿ ಕನಿಷ್ಠ ಬೆಂಬಲ ಬೆಲೆ (MSP) ಖರೀದಿ ಸಾಕಷ್ಟು ಪರಿಣಾಮಕಾರಿಯಾಗಿಲ್ಲ. ಮೆಕ್ಕೆಜೋಳ, ಸೋಯಾಬೀನ್, ಮಾವು, ಮೆಣಸಿನಕಾಯಿ, ಈರುಳ್ಳಿ, ಟೊಮೆಟೊ, ಅರಿಶಿನ ಮತ್ತು ಶುಂಠಿ ಸೇರಿದಂತೆ 8 ಬೆಳೆಗಳಿಗೆ PDPS ಜಾರಿಗೆ ಕರ್ನಾಟಕವು ಪ್ರಸ್ತಾಪಿಸಿದೆ. 2026–27ರಲ್ಲಿ ಸಮಯೋಚಿತ ಅನುಷ್ಠಾನಕ್ಕಾಗಿ PM-AASHA ಅಡಿಯಲ್ಲಿ 796 ಕೋಟಿ ರೂ. ಹೆಚ್ಚುವರಿ ಅನುದಾನ ನೀಡುವಂತೆ ಬೇಡಿಕೆ ಇಡಲಾಗಿದೆ.
ರಾಷ್ಟ್ರೀಯ ಯೋಜನೆ ಎಂದು ಘೋಷಿಸಲು ಮತ್ತು 2023-24 ಕೇಂದ್ರ ಆಯವ್ಯಯದಲ್ಲಿ ಘೋಷಿಸಿದಂತೆ 5,300 ಕೋಟಿ ರೂ. ಕೇಂದ್ರ ಸಹಾಯವನ್ನು ಬಿಡುಗಡೆ ಮಾಡಲು ವಿನಂತಿಸಲಾಗಿದೆ.
ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಅಡುಗೆ ಸಿಬ್ಬಂದಿ ಮತ್ತು ಸಹಾಯಕಿಯರಿಗೆ ಕೇಂದ್ರ ಸರ್ಕಾರ ನೀಡುವ ಗೌರವಧನವು ಹಲವು ವರ್ಷಗಳಿಂದ ಹೆಚ್ಚಳವಾಗಿಲ್ಲ. ಆದ್ದರಿಂದ ಕೇಂದ್ರ ಪಾಲನ್ನು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ತಿಂಗಳಿಗೆ 8,000 ರೂ., ಅಡುಗೆ ಸಿಬ್ಬಂದಿ ಮತ್ತು ಸಹಾಯಕಿಯರಿಗೆ ತಿಂಗಳಿಗೆ 5,000 ರೂ., ರಾಷ್ಟ್ರೀಯ ಸಾಮಾಜಿಕ ಭದ್ರತಾ ಕಾರ್ಯಕ್ರಮದ (NSAP) ವ್ಯಾಪ್ತಿಯನ್ನು ಒಟ್ಟು ಅರ್ಹ ಫಲಾನುಭವಿಗಳ 50%ಕ್ಕೆ ವಿಸ್ತರಿಸಿ, ಪಿಂಚಣಿ ಮೊತ್ತವನ್ನು ಹೆಚ್ಚಿಸುವಂತೆ ಕೋರಲಾಗಿದೆ.
ವಿಶೇಷ ಅನುದಾನ 5,495 ಕೋಟಿ ರೂ., ರಾಜ್ಯ ಕೇಂದ್ರಿತ ಅನುದಾನ 6,000 ಕೋಟಿ ರೂ., 15ನೇ ಹಣಕಾಸು ಆಯೋಗದ ಅನುದಾನ ಕೊರತೆ 4,044 ಕೋಟಿ ರೂ. ಇದೆ 15ನೇ ಹಣಕಾಸು ಆಯೋಗದ ಬಾಕಿ ಅನುದಾನ ಮತ್ತು ವಿಪತ್ತು ಪರಿಹಾರ ಮೊತ್ತಗಳನ್ನು ತ್ವರಿತವಾಗಿ ಬಿಡುಗಡೆ ಮಾಡುವಂತೆ ವಿನಂತಿಸಿದ್ದಾರೆ.
ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶವು ಕಡಿಮೆ ಅಂಕ ಹೊಂದಿದೆ. ಇದನ್ನು ಉತ್ತಮಗೊಳಿಸಲು ವಾರ್ಷಿಕ 5,000 ಕೋಟಿ ರೂ. ಅನುದಾನವನ್ನು ಹೆಚ್ಚುವರಿಯಾಗಿ ಒದಗಿಸುವಂತೆ ಕೇಂದ್ರ ಸರ್ಕಾರವನ್ನು ಕೋರಲಾಗಿದೆ.
ಬೆಂಗಳೂರು ಮೂಲಸೌಕರ್ಯ ಅಭಿವೃದ್ಧಿಗಾಗಿ ಕನಿಷ್ಠ 27,793 ಕೋಟಿ ರೂ. ಬೆಂಗಳೂರು ಸಮಗ್ರ ಅಭಿವೃದ್ಧಿಗಾಗಿ ಸುಮಾರು 1.5 ಲಕ್ಷ ಕೋಟಿ ರೂ. ಅಗತ್ಯವಿದೆ. ಅನುದಾನ ಹಂಚಿಕೆ ಮಾಡುವಂತೆ ಮನವಿ ಮಾಡಲಾಗಿದೆ.
ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಗೆ ಟನಲ್ ರಸ್ತೆ ನಿರ್ಮಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಮೆಟ್ರೋ 2ನೇ ಹಂತದ ಯೋಜನೆ ಪೂರ್ಣಗೊಳಿಸುವ ಪರಿಷ್ಕೃತ ವೆಚ್ಚ 26,405 ಕೋಟಿ ರೂ.ಗಳಿಂದ 40,425 ಕೋಟಿ ರೂ.ವರೆಗೆ ಏರಿಕೆಯಾಗಿದ್ದು, ಈ ಪ್ರಸ್ತಾವನೆಗೆ ಒಪ್ಪಿಗೆ ನೀಡುವ ನಿರೀಕ್ಷೆ ಹೊಂದಲಾಗಿದೆ. ಈ ಯೋಜನೆಗಾಗಿ ರಾಜ್ಯ ಸರ್ಕಾರದ 19 ಸಾವಿರ ಕೋಟಿ ರೂ. ವೆಚ್ಚವಾಗಲಿದ್ದು, ಕೇಂದ್ರದ ಅನುದಾನದ ನಿರೀಕ್ಷೆಯಲ್ಲಿದೆ.
ನಗರದ ಸಂಚಾರ ದಟ್ಟಣೆ ಇರುವ 11 ಜಂಕ್ಷನ್ಗಳಲ್ಲಿ 99.50 ಕಿ.ಮೀ.ಗಳಷ್ಟು ದೂರ 17 ಮೇಲ್ಸೇತುವೆ ನಿರ್ಮಾಣದ ಅಗತ್ಯವಿದೆ. ಇದಕ್ಕಾಗಿ 12 ಸಾವಿರ ಕೋಟಿ ರೂ. ಹಣ ಬೇಕಾಗಿದ್ದು, ಕೇಂದ್ರದ ಅನುದಾನದ ನಿರೀಕ್ಷೆಯಲ್ಲಿದೆ. ಇನ್ನು ಜೆ.ಪಿ.ನಗರದಿಂದ ಹೆಬ್ಬಾಳದವರೆಗೆ ಹಾಗೂ ಹೊಸಹಳ್ಳಿಯಿಂದ ಕಡಬಗೆರೆವರೆಗೂ 45 ಕಿ.ಮೀ ಉದ್ದದ ಡಬಲ್ ಡೆಕ್ಕರ್ ಮೇಲ್ಸೇತುವೆ ಮಾರ್ಗಕ್ಕೆ ಹೆಚ್ಚುವರಿಯಾಗಿ 8916 ಕೋಟಿ ರೂ. ಅಗತ್ಯವಿದ್ದು, ಕೇಂದ್ರದ ಅನುದಾನದ ಬೇಡಿಕೆ ಇಟ್ಟಿದೆ. ಅದೇ ರೀತಿ ಪಿಆರ್ಆರ್ ಹಾಗೂ ನೀರು ಸರಬರಾಜು ಯೋಜನೆಗೆ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಿದೆ.
ಇತರ ಬೇಡಿಕೆ ಈ ಕೆಳಗಿನಂತಿದೆ.
- ಪರಿಸರ ಸೂಕ್ಷ್ಮ ಪಶ್ಚಿಮಘಟ್ಟ ಪ್ರದೇಶಕ್ಕೆ ಐದು ವರ್ಷಗಳಿಗೆ 10,000 ಕೋಟಿ ರೂ. ವಿಶೇಷ ಅನುದಾನಕ್ಕೆ ಬೇಡಿಕೆ ಇಡಲಾಗಿದೆ.
- ಬೆಂಗಳೂರು, ಹುಬ್ಬಳ್ಳಿ ಮತ್ತು ಮೈಸೂರು ನಗರಗಳ ಮೂಲಸೌಕರ್ಯ ಅಭಿವೃದ್ಧಿಗಾಗಿ ಸಮಗ್ರ ಯೋಜನೆ ಘೋಷಿಸಲು ಮನವಿ ಮಾಡಲಾಗಿದೆ.
- ಆರ್ಥಿಕ ಸಂಕಷ್ಟದಲ್ಲಿರುವ ರಾಜ್ಯದ ವಿದ್ಯುತ್ ವಿತರಣಾ ಕಂಪನಿಗಳಿಗೆ ಸಾಲ ನೀಡುವಂತೆ ಕೋರಿಕೆ.
- ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಾದ ವಿಧವಾ ಪಿಂಚಣಿ, ಹಿರಿಯ ನಾಗರಿಕರ ಪಿಂಚಣಿಗಳಿಗೆ ಕೇಂದ್ರದ ಅನುದಾನ ಹೆಚ್ಚಿಸಲು ಕೋರಲಾಗಿದೆ.
- ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಕೇಂದ್ರದ ಅನುದಾನವನ್ನು ಮುಂಗಡ ಅನುದಾನ ಹಂಚಿಕೆ ಮಾದರಿಗೆ ಬದಲಾಯಿಸಲು ಮನವಿ ಮಾಡಲಾಗಿದೆ.
ಇದನ್ನೂ ನೋಡಿ : ಕೋಗಿಲು ಗಣರಾಜ್ಯೋತ್ಸವ | ” ನಾವು ದುಡಿಯಲು ಬಂದವರು, ಯಾರ ಆಸ್ತಿಯನ್ನು ಕಸಿಯಲು ಬಂದವರಲ್ಲ” Janashakthi Media
