ಕೊಯಂಬತ್ತೂರು: ಮಾರ್ಚ್ 17 ಸೋಮವಾರದಂದು ನಡೆದ ಹಾವು ರಕ್ಷಣಾ ಕಾರ್ಯಾಚರಣೆಯ ವೇಳೆ ಕಾಳಿಂಗ ಸರ್ಪ ಕಚ್ಚಿದ ಪರಿಣಾಮ, 39 ವರ್ಷದ ಉರಗ ತಜ್ಞ ಕೆ. ಸಂತೋಷ್ ಕುಮಾರ್ ಕೊಯಂಬತ್ತೂರು ವೈದ್ಯಕೀಯ ಕಾಲೇಜು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಮೂರು ದಿನಗಳ ನರಳಾಟದ ಬಳಿಕ ಬುಧವಾರ ಸಾವನ್ನಪ್ಪಿದ್ದಾರೆ. ಕೊಯಂಬತ್ತೂರು
ಮಹಾರಾಣಿ ನಗರದ ನಿವಾಸಿಯಾಗಿದ್ದ ಕೆ. ಸಂತೋಷ್ ಕುಮಾರ್ ಅವರು ಕಳೆದ 15 ವರ್ಷಗಳಿಂದ ಹಾವು ರಕ್ಷಣೆ ಕಾರ್ಯದಲ್ಲಿ ತೊಡಗಿದ್ದರು. ಸೋಮವಾರ ವಡವಳ್ಳಿಯಲ್ಲಿ ಹಾವು ರಕ್ಷಿಸುವ ವೇಳೆ ಕಾಳಿಂಗ ಸರ್ಪ ಕಚ್ಚಿ, ಆಸ್ಪತ್ರೆಗೆ ದಾಖಲಾಗಿದ್ದರು.
ಮೂರು ದಿನಗಳ ಕಾಲ ಐಸಿಯುನಲ್ಲಿ ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರು ಪತ್ನಿ ಸಾರಣ್ಯ, ವಿಶೇಷ ಚೇತನರಾದ 11 ವರ್ಷದ ಹಿರಿಯ ಪುತ್ರಿ ಮತ್ತು ಏಳು ವರ್ಷದ ಪುತ್ರಿಯನ್ನು ಅಗಲಿದ್ದಾರೆ.
ಇದನ್ನೂ ಓದಿ: ಕುಂಪಲ – ಬಗಂಬಿಲ ನಡುವೆ ಓಡಾಡುವ ಖಾಸಗೀ, ಸರಕಾರಿ ಬಸ್ಸುಗಳ ಟ್ರಿಪ್ ಕಡಿತ ಸಮಸ್ಯೆಗಳನ್ನು ಸರಿಪಡಿಸಲು CPIM ಮನವಿ
ಪರಿಸರವಾದಿ ಮತ್ತು ಓಸೈ ಸಂಸ್ಥಾಪಕ ಕೆ. ಕಾಳಿದಾಸ್, ಸಂತೋಷ್ ಕುಮಾರ್ ಸಾವು ಕೊಯಂಬತ್ತೂರಿಗೆ ದೊಡ್ಡ ನಷ್ಟ ಎಂದು ಹೇಳಿದ್ದಾರೆ. ಎನ್. ಸಾದಿಕ್ ಅಲಿ ವನ್ಯಜೀವಿ ಮತ್ತು ಪ್ರಕೃತಿ ಸಂರಕ್ಷಣಾ ಟ್ರಸ್ಟ್ (ಡಬ್ಲ್ಯೂಎನ್‌ಸಿಟಿ) ಹಾವು ಕಡಿತದಿಂದ ಸಾಯುವವರಿಗೆ ರಾಜ್ಯ ಸರ್ಕಾರ ಪರಿಹಾರ ಘೋಷಿಸಬೇಕು ಎಂದು ಹೇಳಿದೆ.
“ಅರಣ್ಯ ಇಲಾಖೆಯು ಹಾವು ಹಿಡಿಯುವವರನ್ನು ತಾತ್ಕಾಲಿಕ ಆಧಾರದ ಮೇಲೆ ನೇಮಿಸಿಕೊಳ್ಳಬೇಕು, ಅವರಿಗೆ ಉಪಕರಣಗಳನ್ನು ಒದಗಿಸಬೇಕು ಮತ್ತು ಹಾವುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಲ್ಲಿ ತರಬೇತಿ ನೀಡಬೇಕು” ಎಂದು ಅವರು ತಿಳಿಸಿದ್ದಾರೆ.
ಇದನ್ನೂ ನೋಡಿ: ಮಾದೇಶ್ವರ ಮತ್ತು ಮಂಟೇಸ್ವಾಮಿ ಬಗ್ಗೆ ನಮಗೆಷ್ಟು ಗೊತ್ತು? Janashakthi Media