ಬೆಂಗಳೂರು: ಖಾಸಗಿ ಸುದ್ದಿವಾಹಿನಿಯ ಸಿಬ್ಬಂದಿಯನ್ನು ಸುದ್ದಿ ಪ್ರಸಾರ ತಡೆಗೆ ಹಣ ಪಡೆದಿದ್ದ ಆರೋಪದಲ್ಲಿ ಬಂಧಿಸಲಾಗಿದೆ.
ಹೆಣ್ಣೂರು ಠಾಣೆ ಪೊಲೀಸರಿಂದ ತೀರ್ಥಪ್ರಸಾದ್ ಎಂಬಾತನ ಬಂಧನವಾಗಿದೆ. ವ್ಯಕ್ತಿ ಕಾರಿನಲ್ಲಿ ಹಣದ ಕಂತೆಗಳ ಜತೆ ಕುಳಿತಿದ್ದ ವಿಡಿಯೋ ವೈರಲ್ ಆಗಿದೆ. ತೀರ್ಥಪ್ರಸಾದ್‌ಗೆ ಹಣ ನೀಡಿದ್ದವರಿಂದಲೇ ಠಾಣೆಗೆ ದೂರು ನೀಡಲಾಗಿದೆ ಎಂದು ಹೇಳಲಾಗಿದೆ. ಆರೋಪಿ ತೀರ್ಥಪ್ರಸಾದ ಬಿಟಿವಿಯಲ್ಲಿ ವಿಡಿಯೋ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ.
ಲಭ್ಯವಾಗಿರುವ ಆಡಿಯೋ, ವಿಡಿಯೋ ದಾಖಲೆಗಳನ್ನು ಪರಿಶೀಲಿಸಿ ಪೊಲೀಸರು ತನಿಖೆ ನಡೆಸಿತ್ತಿದ್ದಾರೆ.
ಬಿಟಿವಿ ಸ್ಪಷ್ಟನೆ : ಪೊಲೀಸರು ಬಂಧಿಸಿರುವ ತೀರ್ಥಪ್ರಸಾದ್ ಬಿಟಿವಿಯಲ್ಲಿ ಕೆಲಸ ಬಿಟ್ಟು ಬಹಳ ತಿಂಗಳಾಗಿವೆ. ಹಾಗಾಗಿ ಈ ಪ್ರಕರಣದಲ್ಲಿ ಬಿಟಿವಿಯನ್ನು ತಳಕುಹಾಕುವುದು ಸರಿಯಲ್ಲ. ಆತನ ಮೇಲೆ ಕಾನೂನು ಕ್ರಮ ಜರುಗಿಸುವಂತೆ ನಾವೆ ದೂರು ನೀಡಿದ್ದೇವೆ ಎಂದು ಬಿಟಿವಿ ಸಂಪಾದಕರು ಸ್ಪಷ್ಟ ಪಡಿಸಿದ್ದಾರೆ.
ಬಿಟಿವಿಯಿಂದ ಕೆಲಸ ಬಿಟ್ಟು ಹೋದ ಬಳಿಕ ತೀರ್ಥ ಪ್ರಸಾದ್ ಮತ್ತು ಬೇರೆ ಬೇರೆ ಚಾನಲ್ ಗಳ 7 ಜನರು ಒಂದು ತಂಡ ವ್ಯವಸ್ಥಿತವಾಗಿ ಕಾರ್ಯಾಚರಣೆ ನಡೆಸುತ್ತಿತ್ತು. ಈ ಕುಖ್ಯಾತ ಗ್ಯಾಂಗ್ ನ ಮಾಹಿತಿ ಬಿಟಿವಿ ಕಚೇರಿಗೆ ತಲುಪುತ್ತಿದ್ದಂತೆ ಅಲರ್ಟ್ ಆದ ಬಿಟಿವಿ ಈ ಗ್ಯಾಂಗ್ ಮೇಲೆ ಹದ್ದಿನ ಕಣ್ಣಿಟ್ಟಿತ್ತು.
ಬಿಟಿವಿ ಹಿರಿಯ ಸಿಬ್ಬಂದಿಯ ಹೆಸರುಗಳಲ್ಲಿ ನಕಲಿ ಮೊಬೈಲ್ ನಂಬರ್ ನೋಟ್ ಮಾಡಿಕೊಂಡಿದ್ದ ತೀರ್ಥ ಪ್ರಸಾದ್ ಬಿಟಿವಿ ಹಿರಿಯ ಸಿಬ್ಬಂದಿ ಜೊತೆ ಮಾತನಾಡಿದ್ದೇನೆಂದು ಸುಳ್ಳು ಹೇಳಿ ವಂಚಿಸುತ್ತಿದ್ದ. ಈತನ ವಿರುದ್ಧ ಎರಡು ಪೊಲೀಸ್ ಠಾಣೆಗಳಲ್ಲಿ ಎಫ್ ಐ ಆರ್ ದಾಖಲಾಗಿದೆ. ತೀರ್ಥ ಪ್ರಸಾದ್ ಜೊತೆ ಇನ್ನೂ 7 ಮಂದಿಯ ತಂಡವಿದೆ. ಈ ತಂಡದಲ್ಲಿ ಬೇರೆ ಬೇರೆ ಚಾನೆಲ್ಗಳ ಪತ್ರಕರ್ತರೂ ಈ ಟೀಮ್ನಲ್ಲಿ ಇದ್ದಾರೆ. ಅವರನ್ನು ತನಿಖೆಗೆ ಒಳಪಡಿಸಬೇಕು ಎಂದು ಬಿಟಿವಿ ಸ್ಪಷ್ಟಪಡಿಸಿದೆ.