ಸುಳ್ಳು ಹೇಳಿ, ಜನರಿಗೆ ಸಿಗದ ಆ 15 ಸಚಿವರನ್ನ ತೆಗೆದುಹಾಕಿ : ರೇಣುಕಾಚಾರ್ಯ

ಹೊನ್ನಾಳಿ: ಶಾಸಕರಿಗೆ ಸುಳ್ಳು ಹೇಳಿ, ಜನರ ಕೈಗೆ ಸಿಗದ ಓಡಾತ್ತಿರುವ 15ಕ್ಕೂ ಹೆಚ್ಚು ದುರಹಂಕಾರಿ ಸಚಿವರನ್ನು ಸಚಿವ ಸಂಪುಟದಿಂದ ವಜಾ ಮಾಡುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ‌. ರೇಣುಕಾಚಾರ್ಯ ಒತ್ತಾಯಿಸಿದರು.

ಭಾನುವಾರ ಹೊನ್ನಾಳಿ ಪಟ್ಟಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ದುರಹಂಕಾರಿ ಸಚಿವರನ್ನು ಸಂಪುಟದಿಂದ ಕೈಬಿಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್, ಸಿಎಂ ಬಸವರಾಜ ಬೊಮ್ಮಾಯಿ ಒತ್ತಾಯಿಸಿದ್ದೇನೆ ಎಂದು ತಿಳಿಸಿದರು.

ಜನವರಿ 27ರಂದು ಒಬ್ಬ ಸಚಿವರಿಗೆ ನಾನು ಕರೆ ಮಾಡಿದ್ದೆ, ಅವರು ನನ್ನ ಕರೆ ಸ್ವೀಕರಿಸಿರಲಿಲ್ಲ. ಅವರ ಆಪ್ತಸಹಾಯಕರು ಕರೆ ಸ್ವೀಕರಿಸಿ ಸಚಿವರಿಗೆ ಕೊರೊನಾ ಎಂದರು. ನಾನು ಸುಮ್ಮನಾಗಿದ್ದೆ. ಆದರೆ ಮರುದಿ‌ನ ಅವರು ಸಚಿವ ಸಂಪುಟ ಸಭೆಗೆ ಹಾಜರಾಗಿದ್ದರು. ಸಚಿವರು ಈ ರೀತಿಯಾಗಿ ಮಾಡಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಾಗೇ ಕೆಲವು ಸಚಿವರು ತಮ್ಮಿಂದಲೇ ಸರ್ಕಾರ ಬಂದಿದೆ. ತಮ್ಮಿಂದಲೇ ಎಲ್ಲವೂ ನಡೆಯುತ್ತದೆ ಎಂಬ ಅಹಂನಲ್ಲಿದ್ದಾರೆ. ನಾನು ಎಲ್ಲ ಸಚಿವರ ಬಗ್ಗೆ ಟೀಕೆ ಮಾಡುವುದಿಲ್ಲ. ಕೆಲವು ಸಚಿವರು ನಮ್ಮ ಮನವಿಗೆ ಸ್ಪಂದಿಸಿ ನಮ್ಮನ್ನು ಗೌರವದಿಂದ ಕಾಣುತ್ತಾರೆ. ಕ್ಷೇತ್ರದ ಕೆಲಸಗಳನ್ನು ಮಾಡಿಕೊಡುತ್ತಾರೆ. ಅಂಥವರ ಬಗ್ಗೆ ನಮಗೆ ಯಾವುದೇ ಅಸಮಾಧಾನವಿಲ್ಲ ಎಂದು ಸ್ಪಷ್ಟಪಡಿಸಿದರು.

ನಾನು ಯಾವುದೇ ಸಚಿವರ ಬಗ್ಗೆ ಲಿಖಿತವಾಗಿ ದೂರು ಕೊಟ್ಟಿಲ್ಲ. ಪ್ರಮುಖರನ್ನು ಭೇಟಿಯಾದಾಗ ಸಚಿವರ ವಿರುದ್ಧ ಏನು ಹೇಳಬೇಕೋ ಅದನ್ನೇ ಹೇಳಿದ್ದೇನೆ. ಎಲ್ಲ ಸಚಿವರ ಬಗ್ಗೆ ನಾನು ಮಾತನಾಡಿಲ್ಲ. ಯಾರು ಕೆಲಸ ಮಾಡಿಕೊಟ್ಟಿಲ್ಲವೋ ಅವರ ಬಗ್ಗೆ ಮಾತನಾಡಿದ್ದೇನೆ ಎಂದರು.

Donate Janashakthi Media

Leave a Reply

Your email address will not be published. Required fields are marked *