ಮಹಾಡ್ ಸತ್ಯಾಗ್ರಹ ನೆನಪು : ‘ಅಸ್ಪೃಶ್ಯತೆ ಬೇರುಗಳನ್ನು ಸಡಿಲಿಸಿದ ಬಂಡಾಯʼ

ಕೆ. ಮಹಾಂತೇಶ
1927 ಮಾರ್ಚ 19 ಹಾಗೂ 20 ರ ಸಮಾವೇಶ ಐತಿಹಾಸಿಕವಾಗಿತ್ತು. ಮಾಹರಾಷ್ಟ್ರದ ಕೊಂಕಣ ಪ್ರದೇಶದ ಮುಂಬೈ, ಥಾಣಾ, ಕುಲಬಾ ಮತ್ತು ರತ್ನಗಿರಿ ಜಿಲ್ಲೆಗಳ ಸುಮಾರು 5000 ದಷ್ಟು ಮಹಾರ್ ಜನರು, ಮೋರೆಯವರು ಅತ್ಯಂತ ಶ್ರಮವಹಿಸಿ ಸಂಘಟಿಸಿದ್ದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಮಾವೇಶದಲ್ಲಿ ಡಾ. ಅಂಬೇಡ್ಕರ್ ಹಾಗೂ ಅವರ ಜೊತೆ ಆಗಮಿಸಿದ್ದ ಅವರ ಸಹವರ್ತಿಗಳಾದ ಆನಂತ ಚೈತ್ರೆ, ಬಾಬುಸಹರಾಬುದ್ದೆ ಮತ್ತು ಸೀತಾರಾಮ ಸವಿತ್ರಕರ್ ಅವರನ್ನು ಸ್ವತಃ ಮೋರೆಯವರೆ ಸಭೆಗೆ ಪರಿಚಯಿಸಿದರು. ಮಹಾಡ್

ಅದು 1945 ನೇ ಇಸ್ವಿಯ ಒಂದು ಸಂಜೆ. ಮುಂಬೈನಲ್ಲಿ ಅಂಬೇಡ್ಕರ್ ಅವರು ಒಂದು ಬಹಿರಂಗ ಸಭೆಯಲ್ಲಿ ಭಾಷಣ ಮಾಡುವ ಕಾರ್ಯಕ್ರಮವನ್ನು ಅಯೋಜಿಸಲಾಗಿತ್ತು. ಆಗ ಡಾ.ಬಾಬಾ ಸಾಹೇಬ ಅವರು ‘ವೈಸ್‌ರಾಯ್ ಎಕ್ಸಿಕೂಟಿವ್ ಕೌನ್ಸಿಲ್’ (ಅಂದರೆ ಈಗಿನ ಕೇಂದ್ರ ಮಂತ್ರಿ ರೀತಿ) ಸದಸ್ಯರಾಗಿ ಬ್ರಿಟಿಷ್ ಸರಕಾರದಿಂದ ನೇಮಕವಾಗಿದ್ದರು. ವೇದಿಕೆ ಮುಂಭಾಗದಲ್ಲಿ ಅಂಬೇಡ್ಕರ ಅವರ ಮಾತುಗಳನ್ನು ಆಲಿಸಲು ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು, ಸಾರ್ವಜನಿಕರು ಸೇರಿದ್ದರು. ಆ ಜನರ ನಡುವೆ ದೂರದ ಮೂಲೆಯೊಂದರಲ್ಲಿ ನಿಂತಿದ್ದ ಒಬ್ಬ ವ್ಯಕ್ತಿ ಅಂಬೇಡ್ಕರ್ ಕಣ್ನಿಗೆ ಬಿದ್ದರು. ಕೂಡಲೇ ಅವರ ಹೆಸರನ್ನು ಹಿಡಿದು ಕರೆದು ವೇದಿಕೆ ಮೇಲೆ ಬರುವಂತೆ ಸ್ವತಃ ಅಂಬೇಡ್ಕರ್ ಅವರನ್ನು ಕೇಳಿಕೊಂಡರು. ಆದರೆ ಅದಕ್ಕೊಪ್ಪದ ಆ ವ್ಯಕ್ತಿ ಮತ್ತಷ್ಟು ಜನರ ಮಧ್ಯ ಹಿಂದಕ್ಕೆ ಸರಿಯತೊಡಗಿದರು. ಇದನ್ನು ವೇದಿಕೆಯಿಂದಲೇ ಗಮನಿಸಿದ ಬಾಬಾ ಸಾಹೇಬರು ಅವರನ್ನು ದೈಹಿಕವಾಗಿಯಾದರೂ ಸರಿಯೇ ಎತ್ತಿಕೊಂಡು ನನ್ನ ಬಳಿ ಕರೆತರುವಂತೆ ತಮ್ಮ ಅನುಯಾಯಿಗಳಿಗೆ ಆದೇಶವನ್ನು ನೀಡಿಯೇ ಬಿಟ್ಟರು.! ಇಷ್ಟಾದ ಮೇಲೆ ಪಾಪಾ ಆ ವ್ಯಕ್ತಿಗೆ ವೇದಿಕೆ ಹತ್ತಿ ಅಂಬೇಡ್ಕರ್ ಬಳಿ ಬರದೇ ಬೇರೆ ಮಾರ್ಗವೇ ಇರಲಿಲ್ಲ. ಹೀಗೆ ವೇದಿಕೆ ಹತ್ತಿ ತಮ್ಮ ಬಳಿ ಬಂದ ಆ ವ್ಯಕ್ತಿಯನ್ನು ನೆರೆದ ಸಭೆಗೆ ಡಾ: ಅಂಬೇಡ್ಕರರು ಪರಿಚಯಿಸುತ್ತಾ ‘ಇವರೊಬ್ಬ ಮಹಾನ್ ವ್ಯಕ್ತಿ. ನಾನು ರಾಜಕೀಯ ಜೀವನಕ್ಕೆ ಪಾದಾರ್ಪಣೆ ಮಾಡಲು ಪ್ರೇರೇಪಣೆ ನೀಡಿದ ಕೇಲವೇ ಕೆಲವು ಜನರಲ್ಲಿ ಇವರು ಒಬ್ಬರು’ ಎಂದು ಸಭೆಗೆ ತಿಳಿಸುತ್ತಾ ಅವರ ಬಗ್ಗೆ ಇನ್ನೂ ಕೆಲ ಗೌರವದ ಮಾತುಗಳನ್ನಾಡಿದರು.

ಹೀಗೆ ಡಾ. ಬಾಬಾ ಸಾಹೇಬ ಅಂಬೇಡ್ಕರ ಅವರಿಂದ ಆ ರೀತಿಯ ಗೌರವಕ್ಕೆ ಪಾತ್ರರಾದವರು ಮತ್ತು ಅವರ ಕೊನೆಗಾಲದವರೆಗೂ ಅವರ ಆತ್ಮೀಯ ಬಳಗದ ಸದಸ್ಯರಾಗಿ ಅವರೊಂದಿಗಿದ್ದವರು ಬೇರೆ ಯಾರು ಅಲ್ಲ ಅವರೇ ಮಹಾರಾಷ್ಟದ ಕಮ್ಯೂನಿಷ್ಟ್ ಚಳವಳಿಯ ಹಿರಿಯ ನೇತಾರನಾಗಿದ್ದ ಕಾಮ್ರೇಡ್ ಆರ್.ಬಿ. ಮೋರೆ. ಮಹಾರಾಷ್ಟ್ರದಲ್ಲಿ ಅಂಬೇಡ್ಕರ ಅವರ ನೇತೃತ್ವದಲ್ಲಿ ನಡೆದ ಐತಿಹಾಸಿಕ ‘ಮಹಾಡ್‌ನ ಚವ್ದಾರ್ ಕೆರೆ ನೀರು ಕುಡಿಯುವ ಸತ್ಯಾಗ್ರಹ’ ಮತ್ತು ನಂತರದಲ್ಲಿ ನಡೆದ ಬಹಿರಂಗವಾಗಿ ‘ಮನುಸ್ಮುತಿ’ ಸುಡುವ ಎರಡೂ ಕಾರ್ಯಕ್ರಮಗಳನ್ನು ಸಂಘಟಿಸುವಲ್ಲಿ ಮೋರೆಯವರೇ ಪ್ರಮುಖ ಸೂತ್ರದಾರಿ. ಆಗಷ್ಟೇ ಭಾರತಕ್ಕೆ ಹಿಂತಿರುಗಿದ್ದ ಅಂಬೇಡ್ಕರ್ ಅವರನ್ನು ‘ಮಹಾಡ್’ ಎನ್ನುವ ನಗರಕ್ಕೆ ಕರೆದೊಯ್ದು ಅಲ್ಲಿ ‘ಚವ್ದಾರ್ ಕೆರೆ ನೀರನ್ನು ಮುಟ್ಟುವ’ ಚಳವಳಿಯನ್ನು ಸಂಘಟಿಸಿ ದೇಶಕ್ಕೆ ಪರಿಚಯಿಸಿದ್ದು ಕೂಡ ಇದೇ ಆರ್.ಬಿ. ಮೋರೆಯೇ ಎಂಬ ಸಂಗತಿಯನ್ನು ಖ್ಯಾತ ಲೇಖಕ ಆನಂದ ತೇಲ್‌ತುಂಬ್ಢೆ ಇತ್ತೀಚಿಗಷ್ಟೇ ಪ್ರಕಟಿಸಿರುವ ‘ MAHAD’ the making of the first dalith revoltʼ (ಈ ಕೃತಿಯನ್ನು ಆಧಾರಿಸಿ ಡಾ:ನಟರಾಜ್ ಹುಳಿಯಾರ್ ‘ಸಂವಾದದಲ್ಲಿ ಬರೆದ ಲೇಖನ ಓದಬಹುದು) ಎನ್ನುವ ಕೃತಿಯಲ್ಲಿ ಸ್ಮರಿಸಿಕೊಂಡಿದ್ದಾರೆ. ಬಹುಶಃ ಈ ಸಂಗತಿ ಮಹಾರಾಷ್ಟ್ರದಾಚೆಯ ದಲಿತ ಮತ್ತು ಕಮ್ಯೂನಿಷ್ಟ ಚಳವಳಿಯಲ್ಲಿ ಸಕ್ರಿಯವಾಗಿರುವ ಬಹುಪಾಲು ಜನರಿಗೂ ಕೂಡ ತಿಳಿದಂತಿಲ್ಲ.

ಇದನ್ನೂ ಓದಿ“ಮಹಾಡ್ ನಿಂದ ದಲಿತ ಚಳುವಳಿ ಏನು ಕಲಿಯಬಹುದು?” : ಸಂವಾದ

ಹೈದ್ರಾಬಾದ್‌ನ ಪ್ರತಿಭಾವಂತ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಅನ್ಯಾಯದ ಸಾವು ಹಾಗೂ ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯಕುಮಾರ್ ಅವರ ‘ದೇಶದ್ರೋಹ’ದ ಬಂಧನದ ಬಳಿಕಾ ದೇಶದೆಲ್ಲಡೆ ಕೆಂಪು ಮತ್ತು ನೀಲಿಯ ಬಣ್ಣದ ಶ್ರಮಿಕರನ್ನು ಪ್ರತಿನಿಧಿಸುವ ಎರಡೂ ಈ ಚಳವಳಿಗಳು ಒಂದಾಗಿ ಈ ಮನುವಾದ ಹಾಗೂ ಬಂಡವಾಳವಾದದಿಂದ ಆಜಾದಿ ಪಡೆಯಲು ಒಂದಾಗುವುದು ಅನಿವಾರ್ಯ ಎಂಬ ಚರ್ಚೆಗಳು ನಡೆಯುತ್ತಿರುವ ಈ ಸನ್ನಿವೇಶದಲ್ಲೇ ಸುಮಾರು 89 ವರ್ಷಗಳ ಹಿಂದೆಯೇ ಕೆಂಪು ಮತ್ತು ನೀಲಿ ಎಂಬ ಎರಡೂ ಶೋಷಿತ ಮನಸ್ಸುಗಳೆರಡು ಒಂದುಗೂಡಿ ಅಮಾನವೀಯ ಅಸ್ಪೃಶ್ಯತೆ ಮತ್ತು ಜಾತಿತಾರತಮ್ಯ ಹಾಗೂ ಶೋಷಣಾ ವ್ಯವಸ್ಥೆಗಳ ವಿರುದ್ದ ನಡೆಸಿದ ‘ಮಹಾಡ್ ಸತ್ಯಾಗ್ರಹ’ದ ನೆನಪು ಮತ್ತು ಸ್ಪೂರ್ತಿಯೊಂದಿಗೆ ಒಂದು ಹೊಸ ಸಮಾಜವನ್ನು ನಿರ್ಮಿಸುವತ್ತಾ ಹೆಜ್ಜೆ ಹಾಕಬೇಕಿದೆ.

ಮಹಾಡ್ ಸತ್ಯಾಗ್ರಹದ ಮುನ್ನುಡಿ ಕಥನ…

ಅದು 1923 ಇಸ್ವಿ, ಮಹಾರಾಷ್ಟ್ರದ ಅಂದಿನ ಸಾಮಾಜಿಕ ಸುಧಾರಕ ಸಿ.ಕೆ. ಭೋಸ್ಲೇ ನಡೆಸಿದ ನಿರಂತರ ಹೋರಾಟದ ಪರಿಣಾಮ ಮುಂಬೈ ಶಾಸನ ಸಭೆಯು ಪ್ರಥಮ ಬಾರಿಗೆ ಎಲ್ಲಾ ದಲಿತರಿಗೂ ಬಾವಿ, ಧರ್ಮಶಾಲಾ ಮತ್ತಿತರೆ ಸಾರ್ವಜನಿಕ ಸ್ಥಳಗಳಲ್ಲಿ ಮುಕ್ತ ಪ್ರವೇಶಕ್ಕೆ ಅವಕಾಶ ಮಾಡಿಕೊಡುವ ಕುರಿತು ನಿರ್ಣಯ ಮಾಡಿತ್ತು. ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಮಹಾಡ್ ತಹಸೀಲ್ ವ್ಯಾಪಿಯ ದೇಸಗಾಂವ್‌ನ ಎನ್ನುವ ತನ್ನ ಸ್ವಂತ ಗ್ರಾಮದಲ್ಲಿ ಶಾಸನ ಸಭೆಯ ಈ ನಿರ್ಣಯವನ್ನು ಜಾರಿಗೊಳಿಸಲು ಆರ್.ಬಿ. ಮೋರೆ ಎನ್ನುವ ಯುವಕ ನಿರ್ಧರಿಸಿ ಸುತ್ತಮುತ್ತಲಿನ ಮಹಾರ್ ಜನಾಂಗದ ನೂರಾರು ಜನರೊಂದಿಗೆ ಸೇರಿ ತನ್ನೂರಿನ ಕ್ರಾಪೊರ್ಡ ಎನ್ನುವ ಸ್ಥಳದಲ್ಲಿದ್ದ ಸಾರ್ವಜನಿಕ ಕೆರೆಯ ನೀರನ್ನು ಸಾಮೂಹಿಕವಾಗಿ ಕುಡಿಯುವ ಮೂಲಕ ಹೋರಾಟ ನಡೆಸಿ ಯಶಸ್ವಿಯಾದ. ಮಹಾರ್ ಜನಾಂಗಕ್ಕೆ ಸೇರಿದ ಮೋರೆ ಎನ್ನುವ ಯುವಕನ ನಾಯಕತ್ವದಲ್ಲಿ ದಲಿತರು ನಡೆಸಿದ ಈ ಚಳವಳಿಯು ಆ ಭಾಗದ ಹತ್ತಾರು ಹಳ್ಳಿಗಳ ದಲಿತರಲ್ಲಿ ಸ್ವಾಭಿಮಾನದ ಕಿಚ್ಚನ್ನು ಹೊತ್ತಿಸಿತು. ಇದ್ದುದ್ದರಲ್ಲೇ ಆರ್ಥಿಕವಾಗಿ ಉತ್ತಮ ಮನೆತನದಲ್ಲಿ ಹುಟ್ಟಿದ್ದರೂ ಆಸ್ಪೃಶ್ಯತೆ ಎಂಬ ಭೂತ ಮಾತ್ರ ಅವರ ಮನೆಯನ್ನು ಬಿಟ್ಟಿರಲಿಲ್ಲ. ಅವರ ಅಜ್ಜ ಸ್ವಂತದ್ದೊಂದು ಮನೆ ಕಟ್ಟಿಸಿದಾಗ ಅದನ್ನು ಸಹಿಸದ ಪುರೋಹಿತಶಾಹಿಗಳು ಕಾಡಿನಿಂದ ಮರಕದ್ದ ಆರೋಪ ಹೊರಿಸಿ ಮೋರೆ ತಂದೆಯನ್ನೇ ಜೈಲಿಗೆ ಕಳಿಸುವಲ್ಲಿ ಯಶಸ್ವಿಯಾಗುತ್ತಾರೆ. ಹುಟ್ಟೂರು ದೇಸಗಾಂವ್‌ನಲ್ಲೇ ಬ್ರಿಟಿಷ್ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದ ದಲಿತ ಕುಟುಂಬದ ಮಕ್ಕಳಿಗಾಗಿ ಬ್ರಿಟಿಷರು ಪ್ರತ್ಯೇಕ ‘ದಲಿತಶಾಲೆ’ ತೆರೆದಿದ್ದರು. ಆ ಶಾಲೆಯಲ್ಲಿ ಬ್ರಿಟಿಷ ಸರಕಾರ ಪ್ರತಿಭಾವಂತರಿಗೆ ನೀಡುತ್ತಿದ್ದ ವಿದ್ಯಾರ್ಥಿವೇತನ ಪುರಸ್ಕಾರ ಪಡೆದು ತನ್ನ ಪ್ರಾಥಮಿಕ ಶಿಕ್ಷಣ ಪೂರೈಸಿದ ಮೋರೆಗೆ ನಂತರ ದಲಿತನೆಂಬ ಕಾರಣದಿಂದಾಗಿಯೇ ಮಹಾಡ್ ಹೈಸ್ಕೂಲ್‌ನಲ್ಲಿ ಪ್ರವೇಶ ನಿರಾಕರಿಸಲಾಗುತ್ತದೆ. ಇದರಿಂದ ತೀರ ಅವಮಾನಿತನಾದ 11 ವರ್ಷದ ಬಾಲಕ ಈ ರೀತಿಯ ತಾರತಮ್ಯ ಮತ್ತು ಅಸ್ಪೃಶ್ಯತೆಯ ವಿರುದ್ದ ಕೆಲವು ಸಮಾಜ ಸುಧಾರಕರ ಬೆಂಬಲದಿAದ ಬ್ರಿಟಿಷ್ ಸರಕಾರಕ್ಕೆ ಮತ್ತು ಅಂದಿನ ಡಿಸ್ಟ್ರಿಕ್ಟ್ ಕಲೆಕ್ಟರ್‌ಗೆ ಸ್ವತಃ ಪತ್ರಬರೆದು ಅದರ ಒಂದು ಪ್ರತಿಯನ್ನು ಒಂದು ಪತ್ರಿಕೆಗೆ ಪ್ರಕಟಣೆಗಾಗಿ ಕಳುಹಿಸುವ ಧೈರ್ಯ ಮಾಡುತ್ತಾನೆ. ಮೋರೆ ಕಳುಹಿಸಿದ ಆ ಪತ್ರ ಪತ್ರಿಕೆಯಲ್ಲಿ ಪ್ರಕಟವಾಗಿದ್ದೆ ತಡ, ಎಚ್ಚೆತ್ತುಕೊಂಡ ಶಾಲಾ ಆಡಳಿತ ಮಂಡಳಿಯು ಮೋರೆಗೆ ಮಹಾಡ್ ಹೈಸ್ಕೂಲ್‌ನಲ್ಲಿ ಪ್ರವೇಶವೇನೊ ನೀಡಿ, ಅಲ್ಲಿಯೂ ದಲಿತನೆಂಬ ಕಾರಣಕ್ಕೆ ಆತನನ್ನು ಹೊರಗಡೆಯೇ ಕುಳಿಸುತ್ತದೆ. ಆದರೆ ಏನೇ ಆಗಲಿ ಬಾಲಕ ಮೋರೆ ಇಂತಹ ಸಾಮಾಜಿಕ ತಾರತಮ್ಯದ ವಿರುದ್ದ ನಡೆಸಿದ ಈ ಐತಿಹಾಸಿಕ ಗೆಲುವು ಶೋಷಿತ ಸಮುದಾಯಗಳಲ್ಲಿ ಒಂದು ಹೊಸದಾದ ಸಂಚಲನವನ್ನೇ ಮೂಡಿಸುತ್ತದೆ. ಹೀಗೆ ಅಮಾನವೀಯ ಅಸ್ಪೃಶ್ಯತೆ ಆಚರಣೆಗಳ ವಿರುದ್ದ ತನ್ನ ಹೋರಾಟವನ್ನು ಬಾಲ್ಯದಿಂದಲೇ ಆರಂಭಿಸಿದ್ದ ಮೋರೆಗೆ 1923 ರಲ್ಲಿ ತನ್ನ ಗ್ರಾಮದಲ್ಲೇ ನಡೆಸಿದ ಯಶಸ್ವಿ ‘ಕೆರೆ ನೀರು ಕುಡಿಯುವ ಚಳವಳಿ’ಯು ಮತ್ತಷ್ಟು ಹುಮ್ಮಸ್ಸನ್ನು ನೀಡುತ್ತದೆ.

ಡಾ: ಅಂಬೇಡ್ಕರ್‌ಗೆ ಆಹ್ವಾನ:

1924 ರ ಸುಮಾರಿನಲ್ಲಿ ಮಹಾಡ್ ಪ್ರದೇಶ ವ್ಯಾಪ್ತಿಯ ಪ್ರಮುಖ ದಲಿತ ಕಾರ್ಯಕರ್ತರ ಸಭೆಯೊಂದನ್ನು ನಡೆಸಿದ ಮೋರೆಯವರು ಆ ಸಭೆಯಲ್ಲಿ ‘ದಲಿತ ಸಮ್ಮೇಳನ’ವನ್ನು ಆಯೋಜಿಸಲು ಮತ್ತು ಅದರ ಅಧ್ಯಕ್ಷತೆಯನ್ನು ಡಾ. ಅಂಬೇಡ್ಕರ ವಹಿಸುವಂತೆ ಕೋರಲು ನಿರ್ಣಯ ಮಾಡಿದರು. ಅಷ್ಟೋತ್ತಿಗೆ ಲಂಡನ್ ಮತ್ತು ಕೊಲಂಬಿಯಾ ಎರಡರಿಂದಲೂ ಡಾಕ್ಟರೇಟ್ ಮತ್ತು ಬಾರ್ ಅಟ್ ಲಾ ಗೌರವಗಳಿಗೆ ಪಾತ್ರವಾಗಿದ್ದ ಅಂಬೇಡ್ಕರ್ ಕುರಿತಾಗಿ ಮೋರೆಯವರಲ್ಲಿ ಅಪಾರವಾದ ಅಭಿಮಾನ ಮತ್ತು ಹೆಮ್ಮೆ ಮೂಡಿತ್ತು. ಅಂತಹ ಮಹಾನ್ ಸಾಧನೆ ಮಾಡಿದ ವ್ಯಕ್ತಿಯನ್ನು ನಮ್ಮ ಪ್ರದೇಶಕ್ಕೆ ಕರೆಸಿ ಗೌರವಿಸುವುದು ಮತ್ತು ಆ ಪ್ರದೇಶದ ಮಕ್ಕಳಲ್ಲಿ ಅವರಂತೆ ಓದಲು ಸ್ಪೂರ್ತಿ ತುಂಬಬೇಕು ಮತ್ತು ಆ ಮೂಲಕ ದಲಿತರನ್ನು ಕೀಳಾಗಿ ಕಾಣುವ ಮೇಲ್ವರ್ಗದ ಜನರಿಗೆ ನಾಚಿಕೆ ಭರಿಸುವಂತಾಗಬೇಕು ಎಂಬ ಬಯಕೆ ಮೋರೆಯವರಲ್ಲಿ ಇತ್ತು. ಹೀಗೆ ಮೋರೆ ಮತ್ತು ಅವರ ಗೆಳೆಯರು ನಡೆಸಿದ ನಿರಂತರ ಪ್ರಯತ್ನದ ಫಲವಾಗಿ ಡಾ. ಬಿ.ಆರ್. ಅಂಬೇಡ್ಕರ್ 1927 ಮಾರ್ಚ 19-20, ಮಹಾಡ್‌ನಲ್ಲಿ ಆಯೋಜಿಸಲಾದ ‘ದಲಿತ ಸಮ್ಮೇಳನದ’ ಅಧ್ಯಕ್ಷತೆ ವಹಿಸಲು ಒಪ್ಪಿಕೊಂಡರು. ಆದರೆ ಹಾಗೆ ಒಪ್ಪಿಕೊಳ್ಳುವ ಮುನ್ನ ಬಾಬಾ ಸಾಹೇಬರು ಈ ಯುವಕನಿಗೆ ಅಂತಹ ಸಮ್ಮೇಳನವನ್ನು ಆಯೋಜಿಸುವ ಸಾಮರ್ಥವಿದೆಯಾ ಎಂಬುದನ್ನು ಮನವರಿಕೆ ಮಾಡಿಕೊಳ್ಳಲು ತನ್ನ ಅನುಯಾಯಿಗಳನ್ನು ಮಹಾಡ್‌ಗೆ ಕಳುಹಿಸಿದ ನಂತರವೇ ಸಮ್ಮೇಳನಕ್ಕೆ ಬರುವ ಬಗ್ಗೆ ಖಾತ್ರಿಪಡಿಸಿದರು. ಮಹಾಡ್‌ನ ಈ ದಲಿತ ಸಮಾವೇಶದ ತಯಾರಿಗಾಗಿ ಮೋರೆ ಮತ್ತು ಅವರ ಸಂಗಾತಿಗಳು ಸುಮಾರು ಮೂರು ವರ್ಷಗಳ ಕಾಲ ಅಪಾರವಾಗಿ ಓಡಾಡಿದರು. ವಿಶೇಷವಾಗಿ ದಲಿತರಲ್ಲಿ ಭೌಧ್ದಿಕ ಜಾಗೃತಿಯನ್ನು, ಸಾಮಾಜಿಕ ಎಚ್ಚರವನ್ನು ಹಾಗೂ ಸಮಾವೇಶದ ಯಶಸ್ವಿಗೆ ಅಗತ್ಯವಿದ್ದ ಆರ್ಥಿಕ ಹಾಗೂ ಜನ ಬೆಂಬಲವನ್ನು ಕ್ರೂಢಿಕರಿಸಲು ಆ ಇಡೀ ಅವಧಿಯನ್ನು ಬಳಸಿಕೊಂಡರು. ಇವರ ಈ ಪ್ರಯತ್ನದಿಂದ ಎಚ್ಚತ್ತುಕೊಂಡಿದ್ದ ಮಹಾಡ್ ಮುನಿಸಿಪಾಲಿಟಿ ಸಮಾವೇಶಕ್ಕಿಂತ ಕೆಲವು ದಿನಗಳ ಮುಂಚೆಯೇ ‘ಚವ್ದಾರ್ ಕೆರೆನೀರು’ ಬಳಸುವ ಅವಕಾಶ ಎಲ್ಲ ಜಾತಿಯವರಿಗೂ ಸೇರಿದೆ ಎನ್ನುವ ನಿರ್ಣಯವನ್ನು ಪಾಸು ಮಾಡಿತ್ತು.

‘ಮಹಾಡ್’ ಎನ್ನುವ ಐತಿಹಾಸಿಕ ಸಮಾವೇಶ

1927 ಮಾರ್ಚ 19 ಹಾಗೂ 20 ರ ಸಮಾವೇಶ ಐತಿಹಾಸಿಕವಾಗಿತ್ತು. ಮಾಹರಾಷ್ಟ್ರದ ಕೊಂಕಣ ಪ್ರದೇಶದ ಮುಂಬೈ, ಥಾಣಾ, ಕುಲಬಾ ಮತ್ತು ರತ್ನಗಿರಿ ಜಿಲ್ಲೆಗಳ ಸುಮಾರು 5000 ದಷ್ಟು ಮಹಾರ್ ಜನರು, ಮೋರೆಯವರು ಅತ್ಯಂತ ಶ್ರಮವಹಿಸಿ ಸಂಘಟಿಸಿದ್ದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಮಾವೇಶದಲ್ಲಿ ಡಾ. ಅಂಬೇಡ್ಕರ್ ಹಾಗೂ ಅವರ ಜೊತೆ ಆಗಮಿಸಿದ್ದ ಅವರ ಸಹವರ್ತಿಗಳಾದ ಆನಂತ ಚೈತ್ರೆ, ಬಾಬುಸಹರಾಬುದ್ದೆ ಮತ್ತು ಸೀತಾರಾಮ ಸವಿತ್ರಕರ್ ಅವರನ್ನು ಸ್ವತಃ ಮೋರೆಯವರೆ ಸಭೆಗೆ ಪರಿಚಯಿಸಿದರು. ಡಾ: ಅಂಬೇಡ್ಕರ್ ಅಂದು ಮಾಡಿದ ‘ಎಲ್ಲಾ ಸ್ವರೂಪದ ಅಸ್ಪೃಶ್ಯತೆ ಆಚರಣೆಗಳ ವಿರುದ್ದ ನಾವು ಬಂಡಾಯ ಸಾರಬೇಕು’ ಎಂಬ ಭಾಷಣ ನೆರೆದಿದ್ದವರಲ್ಲಿ ವಿದ್ಯುತ್ ಸಂಚಾರ ಮೂಡಿಸಿತು. ಮಾರನೇ ದಿನ ಅಂದರೆ ಮಾರ್ಚ 20 ರಂದು ಸಮ್ಮೇಳನದ ಅಧ್ಯಕ್ಷರಾದ ಡಾ. ಅಂಬೇಡ್ಕರ್ ನೇತೃತ್ವದಲ್ಲಿ ಸಮ್ಮೇಳನ ಸಭಾಂಗಣದಿಂದ ಆರಂಭಗೊಳ್ಳುವ ಸಾವಿರಾರು ಜನರ ರ‍್ಯಾಲಿಯು ಮಹಾಡ್ ನಗರದ ಸಿಹಿನೀರಿನ ‘ಚವ್ದಾರ್ ಕೆರೆ’ಯತ್ತ ಧಾವಿಸುತ್ತದೆ. ಕೆರೆಗೆ ಇಳಿದ ಅಂಬೇಡ್ಕರ ಮೊದಲು ಬೊಗಸೆ ತುಂಬ ನೀರನ್ನು ಕುಡಿಯುವ ಮೂಲಕ ಸಾವಿರಾರು ವರ್ಷಗಳ ಜಾತಿ ವ್ಯವಸ್ಥೆಯ ಬೇರುಗಳನ್ನು ಕತ್ತರಿಸುವ ಕೆಲಸಕ್ಕೆ ಕೈ ಹಾಕುತ್ತಾರೆ. ಉಳಿದವರು ಸಾಲುಗಟ್ಟಿ ಚವ್ದಾರ್ ಕೆರೆಯ ಆ ಸಿಹಿನೀರನ್ನು ಕುಡಿಯುವ ಮೂಲಕ ಮಲೆತು ಹೋಗಿದ್ದ ಇಂಡಿಯಾದ ಜಾತಿ ವ್ಯವಸ್ಥೆಯನ್ನು ಧಿಕ್ಕರಿಸುವ ಧೈರ್ಯ ಮಾಡುತ್ತಾರೆ. ಇಂತಹದೊಂದು ಐತಿಹಾಸಿಕ ಪ್ರತಿಭಟನೆ ಮೂಲಕ ಮುಂಬರುವ ಹತ್ತಾರು ಸಾಮಾಜಿಕ ಚಳವಳಿಗಳಿಗೆ ಈ ಮಹಾಡ್‌ನ ಸಮಾವೇಶ ಮುನ್ನುಡಿ ಬರೆಯುತ್ತದೆ. ‘ಚವ್ದಾರ್ ಕೆರೆ ನೀರು ಕುಡಿಯುವ ಚಳವಳಿ’ ಯಶಸ್ವಿಯಾಗಿ ಕಾರ್ಯಕ್ರಮಕ್ಕೆ ಬಂದವರೆಲ್ಲಾ ತಮ್ಮ ಊರುಗಳಿಗೆ ವಾಪಸ್ಸಾಗುವ ಸಂಧರ್ಭದಲ್ಲಿ ನಮ್ಮ ನೀರನ್ನು ಅಪವಿತ್ರಗೊಳಿಸಲಾಗಿದೆ. ನಮ್ಮ ದೇವಸ್ಥಾನವನ್ನು ಮಲಿನಗೊಳಿಸಲಾಗುತ್ತಿದೆ ಎಂಬ ಸುಳ್ಳು ಸುದ್ದಿಗಳನ್ನು ಹರಡಿದ ಸವಣ            ಯರು, ಗುಂಪುಕೂಡಿ ಕಲ್ಲು ಮ್ತತು ದೊಣ್ಣೆಗಳಿಂದ ಮಾರಾಣಾಂತಿಕ ಹಲ್ಲೆಗಳನ್ನು ಮಹಾರ್ ಜನರ ಮೇಲೆ ಹರಿಯ ಬಿಟ್ಟು ಅವರ                ಆತ್ಮಸ್ಥೆ  ರ್ಯವನ್ನು ಕುಗ್ಗಿಸುವ ಪ್ರಯತ್ನಗಳನ್ನು ನಡೆಸಿದರು. ಆದರೆ ಇದರಿಂದ ಕಿಂಚಿತ್ತು ವಿಚಲಿತರಾಗದ ಅಂಬೇಡ್ಕರ್, ಮೋರೆ ಹಾಗೂ ಅವರ ಸಹವರ್ತಿಗಳ ಬೆಂಬಲದೊಂದಿಗೆ ಮುಂದೆ ಅಂತಹುದೇ ಹೋರಾಟವೊಂದನ್ನು ಮತ್ತದೇ ಮಹಾಡ್‌ನಲ್ಲೇ ನಡೆಸುವ ನಿರ್ಧಾರಕ್ಕೆ ಬಂದರು.

ಮನುಸ್ಮೃತಿಗೆ ಬಹಿರಂಗ ಬೆಂಕಿ.!

ಐತಿಹಾಸಿಕ ಮಹಾಡ್ ಯಶಸ್ವಿ ಸತ್ಯಾಗ್ರಹ ಬಳಿಕಾ ತನ್ನ ಸಾಮಾಜಿಕ ತಾರತಮ್ಯದ ವಿರುದ್ದದ ಚಳವಳಿವನ್ನು ತೀವ್ರಗೊಳಿಸಲು ಅಂಬೇಡ್ಕರ ನಿರ್ಧರಿಸಿದರು. ಅದಕ್ಕೆ ಪೂರಕವಾಗಿ ‘ಬಹಿಷ್ಕೃತ ಭಾರತ್’ ಎನ್ನುವ ಮಾಸಿಕ ಪತ್ರಿಕೆಯನ್ನು ಆರಂಭಿಸಿದರು. ಅದರಲ್ಲಿ ‘ಐತಿಹಾಸಿಕ ಮಹಾಡ್ ಸತ್ಯಾಗ್ರಹ’ ದ ಮಹತ್ವ ಮತ್ತು ನಿರ್ಣಯಗಳು ಮತ್ತು ಅದರ ಮುಂದುವರೆದ ಭಾಗವಾಗಿ ಎರಡನೇ ಸಮಾವೇಶವನ್ನು ಅದೇ ವರ್ಷದ ಕೊನೆಯಲ್ಲಿ ಅಲ್ಲೆ ನಡೆಸಲು ನಿರ್ಧರಿಸಿರುವ ಅಂಶಗಳ ಕುರಿತು ಲೇಖನ ಬರೆದರು. ಈ ಎರಡನೇ ಮಹಾಡ್ ದಲಿತ ಸಮ್ಮೇಳನದ ತಯಾರಿಗಳು ಆರಂಭಗೊಳ್ಳುವ ವೇಳೆಗೆ ಸಂಘಟಕರು ಮತ್ತು ಅಲ್ಲಿ ಸೇರುವ ಜನರ ಮೇಲೆ ದೈಹಿಕ ಹಲ್ಲೆಗಳು ನಡೆಯುವ ಎಲ್ಲಾ ಲಕ್ಷಣಗಳು ಕಂಡು ಬಂದವು. ಇದನ್ನು ಅರಿತ ಮೋರೆ ಎರಡನೇ ಸಮ್ಮೇಳನದ ವಿಚಾರಗಳನ್ನು ಪ್ರಚುರಪಡಿಸುವ ಸಲುವಾಗಿ ಮತ್ತು ಎದುರಾಗಬಹುದಾದ ದೈಹಿಕ ಹಲ್ಲೆಗಳನ್ನು ತಡೆಯುವ ಗುರಿಯೊಂದಿಗೆ ಮುಂಬೈನಲ್ಲಿ ಕಾಂಗ್ರೆಸ್ ಸೇವಾ ದಳದ ಮಾದರಿಯಲ್ಲೇ ದಲಿತ ಯುವಕರನ್ನು ಒಳಗೊಂಡ ‘ಅಂಬೇಡ್ಕರ ಸೇವಾದಳ’ ಎನ್ನುವ ಸಂಘಟನೆಯನ್ನು ಕಟ್ಟಿದರು. ಆದರೆ ಅಂಬೇಡ್ಕರ್ ಸ್ವತಃ ಅದರ ಹೆಸರನ್ನು ‘ಸಮತಾ ಸೈನಿಕಾದಳ’ ಎಂದು ಬದಲಾಯಿಸಿ ಸೈನ್ಯದಿಂದ ನಿವೃತ್ತರಾದ ದಲಿತ ಯುವಕರು ಇದಕ್ಕೆ ಸೇರುವಂತೆ ಪ್ರೇರೇಪಣೆ ನೀಡಿದರು. ಹೀಗೆ ಎರಡನೇ ಐತಿಹಾಸಿಕ ಸಮ್ಮೇಳನದತ್ತ ಎಲ್ಲರೂ ಗಮನ ಕೇಂದ್ರೀಕರಿಸಿದರು.

ಆದರೆ 1927 ಡಿಸೆಂಬರ್ 25-26 ರಂದು ಸಮ್ಮೇಳನವನ್ನು ನಡೆಸುವ ವೇಳೆಗೆ ಮಹಾಡ್‌ನ ಆ ‘ಚವ್ದಾರ್’ ಸಿಹಿನೀರನ್ನು ದಲಿತರು ಕುಡಿಯುವುದರ ವಿರುದ್ದ ನ್ಯಾಯಲಯ ನಿಷೇಧ ಹೇರಿತ್ತು. ಈ ಬಾರಿಯ ಸಮಾವೇಶದಲ್ಲಿ ಇಡೀ ಮಹಾರಾಷ್ಟçದ ಎಲ್ಲಾ ಭಾಗಗಳಿಂದಲೂ ದಲಿತ ಪುರುಷರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಇಂತಹ ಸನ್ನಿವೇಶದಲ್ಲಿ ನ್ಯಾಯಲಯದ ಆ ನಿಷೇಧಾಜ್ಞೆಯನ್ನು ನಾವು ಉಲ್ಲಂಘಿಸಿ ‘ಚವ್ದಾರ್’ ಕೆರೆಯ ನೀರನ್ನು ಮುಟ್ಟಬೇಕು ಎಂಬುದು ಮೋರೆ ಮತ್ತು ಇತರೆ ಸಂಗಾತಿಗಳ ಆಗ್ರಹವಾಗಿತ್ತು. ಈ ಬಗ್ಗೆ ಸುದೀರ್ಘ ಚರ್ಚೆಗಳು ನಡೆದವು. ನಂತರದಲ್ಲಿ ಹಾಗೆ ಮಾಡದೇ ಅಂಬೇಡ್ಕರ್ ನೇತೃತ್ವದಲ್ಲೇ ಮಹಾಡ್‌ನ ಪ್ರಮುಖ ಸ್ಥಳದಲ್ಲಿಯೇ ಸಾವಿರಾರು ಜನರ ಸಮ್ಮುಖದಲ್ಲಿ ಸಾವಿರಾರು ವರ್ಷಗಳಿಂದ ಅಮಾನವೀಯ ಜಾತಿ ವ್ಯವಸ್ಥೆಯನ್ನು ಕಾಪಾಡಿಕೊಂಡು ಬಂದಿರುವ ಆ ಮೂಲಕ ಜಾತಿ ತಾರತಮ್ಯಕ್ಕೆ ಕಾರಣವಾದ ‘ಮನುಸ್ಮೃತಿ’ಯನ್ನೇ ಸುಡುವ ಮತ್ತೊಂದು ಐತಿಹಾಸಿಕ ತೀರ್ಮಾನವನ್ನು ಆ ಸಮಾವೇಶ ಕೈಗೊಂಡಿತು.

ಹೀಗೆ ಭಾರತೀಯ ಜಾತಿ ವ್ಯವಸ್ಥೆಯ ಭಾಗವಾಗಿ ಬಂದಿರುವ ಮನುಷ್ಯವಿರೋಧಿ ಅಸ್ಪೃಶ್ಯತೆ ಹಾಗೂ ತಾರತಮ್ಯಗಳ ವಿರುದ್ದ ನಡೆದ ಈ ಎರಡು ಐತಿಹಾಸಿಕ ಹೋರಾಟಗಳಿಗೆ ನಾಯಕತ್ವ ನೀಡುವ ಮೂಲಕ ಅಂಬೇಡ್ಕರ್ ಇಡೀ ದೇಶದ ಉದ್ದಗಲಕ್ಕೂ ಹೆಸರುವಾಸಿಯಾದರೆ, ಆ ಎರಡು ಹೋರಾಟಗಳನ್ನು ವ್ಯವಸ್ಥಿತವಾಗಿ ಸಂಘಟಿಸುವ ಮೂಲಕ ಬಿ.ಆರ್. ಮೋರೆಯವರು ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆ ವಿರುದ್ದದ ಚಳವಳಿಯಲ್ಲಿ ಮಹಾರಾಷ್ಟçದಲ್ಲಿ ಅಂಬೇಡ್ಕರ್‌ಗೆ ತೀರ ಹತ್ತಿರವೂ ಮತು ಆತ್ಮೀಯರು ಆದರು.

ಈ ಐತಿಹಾಸಿಕ ಎರಡನೇ ಮಹಾಡ್ ಸತ್ಯಾಗ್ರಹದ ಬಳಿಕಾ ಆರ್.ಬಿ. ಮೋರೆಯವರಿಗೆ ಮುಂಬೈನ ಗಿರಣ ಕಾಮಗಾರ್ ಯೂನಿಯನ್ ಸಂಪರ್ಕ ಸಿಕ್ಕಿತ್ತು. ಅಲ್ಲಿಯೂ ಬ್ರಿಟಿಷ ಆಳರಸರಿಂದ ಮತ್ತು ಹತ್ತಿಗಿರಣ ಮಾಲೀಕರಿಂದ ಬಡ ಕಾರ್ಮಿಕರ ಮೇಲಾಗುತ್ತಿದ್ದ ತೀವ್ರ ರೀತಿ ಶೋಷಣೆ ವಿರುದ್ದ ಮೋರೆ ತನ್ನ ಹೋರಾಟವನ್ನು ಮುಂದುವರೆಸಿದರು. ಅದರ ಜೊತೆ ಜೊತೆಯಲ್ಲೇ ಕಮ್ಯೂನಿಸ್ಟರಾಗಿದ್ದುಕೊಂಡೇ ಅಂಬೇಡ್ಕರ ಜೊತೆಗೂಡಿ ಮಹಾರಾಷ್ಟçದಾದ್ಯಂತ ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆಯ ಹೋರಾಟಗಳನ್ನು ಮುನ್ನಡೆಸಿದರು. ವಿಶೇಷವಾಗಿ ಮಹಾರಾಷ್ಟçದ ಕೊಂಕಣ ಪ್ರದೇಶಗಳಲ್ಲಿ ಬಿ.ಆರ್. ಮೋರೆ ನಡೆಸಿದ ರೈತ ಕಾರ್ಮಿಕ ಆಂಧೋಲನಗಳು ಮತ್ತು ದಲಿತ ಚಳವಳಿಗಳು ಅಲ್ಲಿ ಶೋಷಿತ ಜನಸಮುದಾಯಗಳನ್ನು ಅವರ ಮೇಲೆ ನಡೆಯುತ್ತಿದ್ದ ಎಲ್ಲಾ ರೀತಿ ಶೋಷಣೆಗಳನ್ನು ಕೊನೆಗಾಣ ಸಲು ಸಹಾಯವಾದವು. ಹೀಗೆ ಆರ್.ಬಿ. ಮೋರೆಯವರು ಐತಿಹಾಸಿಕ ಮಹಾಡ್ ಚಳವಳಿಯನ್ನು ಸಂಘಟಿಸಿದ ಮತ್ತು ಆ ನಂತರವೂ ಅಂತಹ ಹತ್ತಾರು ಚಳವಳಿಗಳನ್ನು ಮುನ್ನಡೆಸಿದ ಕಾರಣಕ್ಕಾಗಿ ಒಂದಡೆ ಮಹಾರಾಷ್ಟ್ರದ ದಲಿತ ಚಳವಳಿಗಳಿಂದಲೂ ಆ ನಂತರ ಕಮ್ಯೂನಿಷ್ಟ ಚಳವಳಿ ಎರಡರಿಂದಲೂ ಗೌರವಕ್ಕೆ ಪಾತ್ರರಾದರು.

ಐತಿಹಾಸಿಕ ಮಹಾಡ್ ಸತ್ಯಾಗ್ರಹ ನಡೆದು ಸುಮಾರು ಇದೀಗ ಒಂಬತ್ತು ದಶಕಗಳ ನಂತರವೂ ಆರ್.ಬಿ. ಮೋರೆ ಮತ್ತು ಡಾ. ಅಂಬೇಡ್ಕರ್ ನಾಯಕತ್ವದಲ್ಲಿ ನಡೆಸಿದ ಅಂತಹ ಚಳವಳಿಗಳು ಅನಿವಾರ್ಯಗಳಾಗಿವೆ. ಸಾವಿರಾರು ವರ್ಷಗಳಿಂದ ಮಾನವ ವಿರೋಧಿಯಾದ, ಜಾತಿ ವ್ಯವಸ್ಥೆಯನ್ನೇ ಪುನರುತ್ಥಾನಗೊಳಿಸುವ ಗುರಿಯನ್ನು ಹೊಂದಿದ ಪ್ರತಿಗಾಮಿ ವ್ಯವಸ್ಥೆಯೊಂದು ನಮ್ಮ ಮೇಲೆ ಸವಾರಿ ಮಾಡುತ್ತಿದೆ. ಈ ಸಂದರ್ಭದಲ್ಲಿ ಮಹಾಡ್ ನಂತಹ ನೂರಾರು ಸತ್ಯಾಗ್ರಹಗಳ ಅವಶ್ಯಕತೆ ಜರೂರಿದೆ. ಅದಕ್ಕಾಗಿ ನಮ್ಮೆಲ್ಲಾ ಸಣ್ಣ ಪುಟ್ಟ ಭಿನ್ನಾಭಿಪ್ರಾಯ, ಮತಭೇಧ ಮತ್ತು ಬಾವುಟಗಳನ್ನು ಬದಿಗಿಟ್ಟು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ತುಳಿತಕ್ಕೊಳಗಾಗದ ಎಲ್ಲಾ ಸಮುದಾಯಗಳನ್ನು ಒಂದುಗೂಡಿಸಬೇಕಿದೆ. ಆ ಮೂಲಕ ಮನುವಾದಿಗಳಿಂದ, ಬ್ರಾಹ್ಮಣವಾದಿಗಳಿಂದ ಮತ್ತು ಭೂಮಾಲೀಕ-ಬಂಡವಾಳಿಗ ಶೋಷಣಾ ವ್ಯವಸ್ಥೆಯಿಂದ ಮುಕ್ತಿ ಹೊಂದಿ ಸಾಮಾಜಿಕ, ಆರ್ಥಿಕ ಮತ್ತು ಸಮಾನ ರಾಜಕೀಯ ಸ್ವಾತಂತ್ರ್ಯಗಳನ್ನು ಗಳಿಸಬೇಕಿದೆ. ಭವಿಷ್ಯದ ನಮ್ಮ ಇಂತಹ ಎಲ್ಲಾ ಹೋರಾಟಗಳಿಗೆ ಅಂಬೇಡ್ಕರ ಮತ್ತು ಮೋರೆಯವರು ಜೊತೆಗೂಡಿ ನಡೆಸಿದ ‘ಮಹಾಡ್ ಸತ್ಯಾಗ್ರಹ’ ಎಂಬ ಬಂಡಾಯ ಒಂದು ಸ್ಪೂರ್ತಿಯಾಗಲಿ.

 

Donate Janashakthi Media

Leave a Reply

Your email address will not be published. Required fields are marked *