ಕಾರ್ಲ್ ಮಾರ್ಕ್ಸ್ ಅವರ ಮೇರುಕೃತಿಯೆಂದು ಕರೆಯಲಾಗುವ ‘ಬಂಡವಾಳ’ (ದಾಸ್ ಕ್ಯಾಪಿಟಲ್)ದ ಸಂಪುಟ 2ರ ಕನ್ನಡ ಅನುವಾದವಾಗಿದ್ದು ಅದನ್ನು ಜೂನ್ 2ರಂದು ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಇದನ್ನು ‘ಕ್ರಿಯಾ ಮಾಧ್ಯಮ’ ಪ್ರಕಟಿಸಿದ್ದು, ಅದು ನವಕರ್ನಾಟಕ ದ ಜೊತೆಗೆ ಹಮ್ಮಿಕೊಂಡಿದ್ದ ಜಂಟಿ ಯೋಜನೆಯಾದ ‘ಏಂಗೆಲ್ಸ್-200 ಮಾಲಿಕೆ’ಯ 6 ಪುಸ್ತಕಗಳಲ್ಲಿ ಕೊನೆಯ ಪುಸ್ತಕವಾಗಿದೆ. ಬಂಡವಾಳ ಸಂಪುಟ-1 ನ್ನು ಇವೇ ಎರಡೂ ಪ್ರಕಾಶನ ಸಂಸ್ಥೆಗಳು ಹಮ್ಮಿಕೊಂಡಿದ್ದ ‘ಮಾರ್ಕ್ಸ್-200 ಮಾಲಿಕೆ’ಯ ಭಾಗವಾಗಿ 2019ರಲ್ಲಿ ಪ್ರಕಟಿಸಲಾಗಿತ್ತು.
ಬಂಡವಾಳ ಸಂಪುಟ-2ನ್ನು ನುರಿತ ಅನುವಾದಕರಾದ ಪಿ.ಎ.ಕುಮಾರ್ ಮತ್ತು ವಿ.ಎನ್.ಲಕ್ಷ್ಮೀ ನಾರಾಯಣ ಸಮರ್ಥವಾಗಿ ಅನುವಾದಿಸಿದ್ದಾರೆ. ಈ ಗ್ರಂಥದಲ್ಲಿ ಬಂಡವಾಳ ಸಂಫುಟ 2ರ ಪೂರ್ಣ ಪಠ್ಯದ ಅನುವಾದವಲ್ಲದೆ ಈ ಕೃತಿಯು ಒಂದು ಸಮಗ್ರವಾದ ‘ಪ್ರವೇಶಿಕೆ’ಯನ್ನು ಒಳಗೊಂಡಿದೆ. ‘ಪ್ರವೇಶಿಕೆ’ ‘ಬಂಡವಾಳ’ ಸಂಪುಟ 2 (ಮತ್ತು ಇಡೀ ಸರಣಿಯ) ಮಹತ್ವ, ಹಿನ್ನೆಲೆ, ಚಾರಿತ್ರಿಕ ಪಾತ್ರ, ಉದ್ದೇಶ, ವಿಧಾನ, ಹೂರಣ, ಪ್ರಸ್ತುತತೆಗಳನ್ನು ಸ್ಥೂಲವಾಗಿ ಪರಿಚಯಿಸುವ ಮೂಲಕ ಸಂಪುಟದ ಪೂರ್ಣ ಓದಿಗೆ ಪ್ರೇರೇಪಿಸುತ್ತದೆ. ಇದಲ್ಲದೆ, ಬಂಡವಾಳ ಸಂಪುಟ-2ರ ಪ್ರತಿ ಭಾಗ ಮತ್ತು ಅಧ್ಯಾಯವನ್ನು ಪರಿಚಯಿಸುವ, ಓದಿಗೆ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುವ, ಅದರ ಸಾರಸತ್ವವನ್ನು ನೀಡುವ ಸಾರಾಂಶ ಅಥವಾ ‘ಗೈಡ್’ ಗಳನ್ನು ಒಳಗೊಂಡಿದೆ. ‘ಗೈಡ್’ ಬಂಡವಾಳ ಸಂಪುಟ–2 ರ ಗಂಭೀರ ಅಧ್ಯಯನಕ್ಕೆ ಸಹಾಯಕವಾಗಿದೆ. ಪ್ರತಿ ಭಾಗ ಅಥವಾ ಅಧ್ಯಾಯದ ಓದಿಗೆ ಮೊದಲು ಅದನ್ನು ಪರಿಚಯಿಸಲು ಹಾಗೂ ಈ ಬೃಹತ್ ಪುಸ್ತಕದ ಓದಿನಲ್ಲಿ ಅನಿವಾರ್ಯವಾದ ನಿಲುಗಡೆಗಳು ಬಂದಾಗ, ಪ್ರಸ್ತುತ ಮತ್ತು ಹಿಂದಿನ ಅಧ್ಯಾಯಗಳ ಸಾರಾಂಶ ನೆನಪಿಸಿಕೊಂಡು ಓದಿನ ಮುಂದುವರಿಕೆಗೂ ಅನುವು ಮಾಡುವಂತಿದೆ.
ಇಂತಹ “ಪ್ರವೇಶಿಕೆ” ಮತ್ತು ‘ಗೈಡ್’ ಬಂಡವಾಳ ಸಂಪುಟ-1ರಲ್ಲಿ ಸಹ ಇತ್ತು. ಇವನ್ನು ಕೆಲವು ಅಗತ್ಯ ಬದಲಾವಣೆಗಳೊಂದಿಗೆ “ಬಂಡವಾಳ ಸಂಪುಟ-1 ಪ್ರವೇಶಿಕೆ” ಮತ್ತು “ಬಂಡವಾಳ ಸಂಪುಟ-1 ಗೈಡ್” ಎಂಬ ಸ್ವತಂತ್ರ ಕೃತಿಯಾಗಿ ಪ್ರಕಟಿಸಲಾಗಿದ್ದು ಜೂನ್ 2ರ ಸಮಾರಂಭದಲ್ಲಿ ಇವನ್ನೂ ಬಿಡುಗಡೆ ಮಾಡಲಾಗುತ್ತಿದೆ. ಬಂಡವಾಳ ಸಂಪುಟ-1ರ ಪೂರ್ಣ ಅಧ್ಯಯನದ ಉದ್ದೇಶ ಅಥವಾ ಪ್ರೇರಣೆಯಿಲ್ಲದ, ಅಥವಾ ಅದಕ್ಕೆ ಬೇಕಾದ ವ್ಯವಧಾನವಿಲ್ಲದ ಓದುಗರಿಗೆ ಅದರ ಸಾರವನ್ನು ನೀಡಲು ಈ ಕೃತಿಗಳು ಸಹಾಯವಾಗುತ್ತದೆ. ಆ ಮೂಲಕ ಆಸಕ್ತರನ್ನು ಇನ್ನಷ್ಟು ವ್ಯಾಪಕವಾಗಿ ತಲುಪುತ್ತದೆ. ಇಂತಹ ಓದು ಕೆಲವರನ್ನು ಸಂಪುಟ-1ರ ಸಂಪೂರ್ಣ ಓದಿಗೆ ಪ್ರೇರೇಪಿಸಬಹುದು. ಹಿಂದೆ ಸಂಪುಟ-1ನ್ನು ಓದಿದ್ದರೂ, ಓದಿಲ್ಲದಿದ್ದರೂ, ಸಂಪುಟ-2ನ್ನು ಓದಲು ಆರಂಭಿಸುವ ಮೊದಲು ಸಂಪುಟ-1ರ ಸಾರವನ್ನು ನೆನಪಿಸಿಕೊಳ್ಳಲು ಇದು ಉಪಯೋಗಿಯಾಗಿದೆ.
ಇಂದು ಬಂಡವಾಳಶಾಹಿ ವ್ಯವಸ್ಥೆ ಜಾಗತಿಕವಾಗಿ ವ್ಯಾಪಕವಾದ ವ್ಯವಸ್ಥೆ. ಇಂದಿನ ಭೀಕರ ಸಮಸ್ಯೆಗಳಿಗೆ ಈ ವ್ಯವಸ್ಥೆಯೇ ಕಾರಣವೇ? ವ್ಯವಸ್ಥೆಯ ನ್ಯೂನತೆಗಳೇನು? ಅದನ್ನು ಸುಧಾರಿಸಲು ಸಾಧ್ಯವೇ? ಇಲ್ಲವೆ ಆಮೂಲಾಗ್ರವಾಗಿ ಬದಲಾಯಿಸಬೇಕೆ ?- ಈ ಪ್ರಶ್ನೆಗಳ ಉತ್ತರ ಕಂಡುಕೊಳ್ಳಲು ‘ಬಂಡವಾ¼’ ಗ್ರಂಥದ ಓದು ಸಹಾಯಕವಾಬಲ್ಲದು.
ಇದನ್ನು ಓದಿ : ದಶಕದ ಮಹಿಳೆಯರ ದುಃಸ್ಥಿತಿಯ ಕಥನ : ಪುಸ್ತಕ ಬಿಡುಗಡೆ
‘ಬಂಡವಾಳ’ ಅರ್ಥಶಾಸ್ತçದ ಸಾರ್ವಕಾಲಿಕ ಕ್ಲಾಸಿಕ್ ಗಳಲ್ಲಿ ಸಹ ಒಂದು. ಅತ್ಯಂತ ಹೆಚ್ಚು ಓದಿಗೆ, ಉದ್ಧರಣೆಗೆ, ಚರ್ಚೆಗೆ ಒಳಗಾದ ಅರ್ಥಶಾಸ್ತçದ ಕ್ಲಾಸಿಕ್ ಇದು. ಆಡಂ ಸ್ಮಿತ್ ಅವರ ‘ವೆಲ್ತ್ ಆಫ್ ನೇಶನ್ಸ್’ ಎಂಬ ಇನ್ನೊಂದು ಕ್ಲಾಸಿಕ್ ದೂರದ ಎರಡನೆಯ ಸ್ಥಾನದಲ್ಲಿದೆ. ‘ಬಂಡವಾಳ’ ವಿಶ್ವದ 72 ಭಾಷೆಗಳಲ್ಲಿ ಅನುವಾದವಾಗಿದೆ. ಭಾರತದ ಪ್ರಮುಖ 13 ಭಾಷೆಗಳಲ್ಲಿ 10 ಭಾಷೆಗಳಲ್ಲಿ ಪ್ರಕಟವಾಗಿದೆ. ಇಂದಿನ ಅರ್ಥಶಾಸ್ತçದ ವಿಶ್ಲೇಷಣೆಗಳಲ್ಲಿ, ಸಂವಾದ-ವಾಗ್ವಾದಗಳಲ್ಲಿ ಪ್ರಬಲ ಸೆಲೆಗಳಲ್ಲಿ ಒಂದಾದ ಮಾರ್ಕ್ಸ್ವಾದಿ ರಾಜಕೀಯ ಅರ್ಥಶಾಸ್ತ್ರದ ಮೂಲ ಆಕರ ಗ್ರಂಥವಿದು. ಬರೆದು 150 ವರ್ಷಗಳಿಗಿಂತ ಹೆಚ್ಚು ಸಮಯ ಕಳೆದಿದ್ದರೂ ತನ್ನ ಪ್ರಸ್ತುತತೆ ಉಳಿಸಿಕೊಂಡಿದೆ.
ಬಂಡವಾಳ ಸಂಪುಟ-1ರಲ್ಲಿ ಮಾರ್ಕ್ಸ್ ಬಂಡವಾಳಶಾಹಿ ಉತ್ಪಾದನೆಯ ಪ್ರಕ್ರಿಯೆಯನ್ನು ಅನ್ವೇಷಿಸಿ ನಿರೂಪಿಸುತ್ತಾರೆ. ಬಂಡವಾಳಶಾಹಿ ಉತ್ಪಾದನೆಯ ಪ್ರಕ್ರಿಯೆ ಅಂದರೆ, ಸರಕುಗಳ ಉತ್ಪಾದನೆಯ ಅಥವಾ ಮೌಲ್ಯ ಮತ್ತು ಹೆಚ್ಚುವರಿ ಮೌಲ್ಯದ ಉತ್ಪಾದನೆಯ ಪ್ರಕ್ರಿಯೆ. ಅವರು ಈ ವಿಶ್ಲೇಷಣೆಯ ಮೂಲಕ ಬಂಡವಾಳಶಾಹಿ ಶೋಷಣೆಯ ಮೂಲಭೂತ ಸ್ವರೂಪವನ್ನು ಬಯಲಿಗೆಳೆದರು. ಬಂಡವಾಳದ ಕೇಂದ್ರೀಕರಣ ಮತ್ತು ಸಾಂದ್ರೀಕರಣ, ಸಾಪೇಕ್ಷ ಹೆಚ್ಚುವರಿ ಮೌಲ್ಯ ಉತ್ಪಾದನೆ, ಕಾರ್ಮಿಕರ ಮೀಸಲು ಪಡೆಯ ರಚನೆ, ಇತ್ಯಾದಿ. ಬಂಡವಾಳಶಾಹಿ ಸಂಚಯನ ಪ್ರಕ್ರಿಯೆಯ ಕೆಲವು ಮೂಲಭೂತ ಪ್ರವೃತ್ತಿಗಳನ್ನು ಅವರ ವಿಶ್ಲೇಷಣೆ ಬೆಳಕಿಗೆ ತಂದಿತು. ಆದರೂ ಇದು ಬಂಡವಾಳಶಾಹಿ ಉತ್ಪಾದನಾ ವಿಧಾನದ ಸಮಗ್ರ ವಿಶ್ಲೇಷಣೆಯಾಗಿ ಅಪೂರ್ಣವಾಗಿತ್ತು. ಏಕೆಂದರೆ ಬಂಡವಾಳಶಾಹಿ ಉತ್ಪಾದನಾ ವಿಧಾನವು ಸರಕುಗಳ ಉತ್ಪಾದನೆಯಲ್ಲದೆ ಚಲಾವಣೆಯ ಪ್ರಕ್ರಿಯೆಯನ್ನು ಒಳಗೊಂಡಿದೆ. ಮಾರ್ಕ್ಸ್ ಸಂಪುಟ 2 ರಲ್ಲಿ ಬಂಡವಾಳಶಾಹಿ ಚಲಾವಣೆಯ ವಿಶ್ಲೇಷಣೆಗೆ, ಅಂದರೆ ಬಂಡವಾಳದ ಚಲಾವಣೆಯ ಪ್ರಕ್ರಿಯೆಯ ವಿಶ್ಲೇಷಣೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಬಂಡವಾಳದ ವಿಸ್ತರಣೆಗೆ ಚಲಾವಣೆ ನಿರ್ಣಾಯಕವಾಗಿದೆ, ಏಕೆಂದರೆ ಚಲಾವಣೆಯ ಪ್ರಕ್ರಿಯೆಯಲ್ಲಿ ಮಿಗುತಾಯ-ಮೌಲ್ಯವನ್ನು ಉತ್ಪಾದಿಸುವ ಸರಕುಗಳ ಮಾರಾಟದಲ್ಲಿ ಲಾಭದ ರೂಪದಲ್ಲಿ ಸಾಕಾರಗೊಳ್ಳುವ ಮೂಲಕ ಮತ್ತು ಅದನ್ನು ಮತ್ತೆ ಬಂಡವಾಳವಾಗಿ ಹೂಡುವ ಮೂಲಕ ಮಾತ್ರ ಬಂಡವಾಳದ ವಿಸ್ತರಣೆ ಸಾಧ್ಯವಾಗುತ್ತದೆ. ಅಂತಿಮವಾಗಿ, ಸಂಪುಟ 3 ರಲ್ಲಿ, ಉತ್ಪಾದನೆಯ ಮತ್ತು ಚಲಾವಣೆಗಳ ಪ್ರಕ್ರಿಯೆಗಳ ಜಂಟಿ ಕರ‍್ಯಾಚರಣೆಯನ್ನು ಅವರು ವಿಶ್ಲೇಷಿಸುವ ಮೂಲಕ ಒಟ್ಟಾರೆಯಾಗಿ ಬಂಡವಾಳಶಾಹಿ ಉತ್ಪಾದನಾ ವಿಧಾನದ ಸಮಗ್ರವಾದ ವಿಶ್ಲೇಷಣೆಯನ್ನು ಪೂರ್ಣಗೊಳಿಸಿದರು.
ಬೆಂಗಳೂರಿನ ಬಸವನಗುಡಿಯಲ್ಲಿರುವ ‘ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಡ್ಲ್ ಕಲ್ಚರ್’ ನ ‘ವಾಡಿಯಾ ಸಭಾಂಗಣ’ ಜೂನ್ 2 ರ ಸಮಾರಂಭದಲ್ಲಿ 3 ಪುಸ್ತಕಗಳ ಬಿಡುಗಡೆ, ‘ಇಂದಿನ ಬಂಡವಾಳಶಾಹಿಯನ್ನು ಅರ್ಥೈಸಲು ‘ಬಂಡವಾಳ’ದ ಓದು’ ವಿಷಯದ ಕುರಿತು ವಿಚಾರ ಸಂಕಿರಣ ಮತ್ತು ಏಂಗೆಲ್ಸ್ 200 ಕೃತಿಕಾರರಿಗೆ ಸನ್ಮಾನವಿರುತ್ತದೆ. ಡಾ.ಜಿ.ರಾಮಕೃಷ್ಣ ಅವರು “ಬಂಡವಾಳ ಸಂಪುಟ-2”ನ್ನು ಬಿಡುಗಡೆ ಮಾಡಿ ಮಾತನಾಡುತ್ತಾರೆ. ಡಾ. ಟಿ.ಆರ್. ಚಂದ್ರಶೇಖರ್ “ಬಂಡವಾಳ ಸಂಪುಟ-1 ಗೈಡ್” ಮತ್ತು “ಬಂಡವಾಳ ಸಂಪುಟ-1 ಪ್ರವೇಶಿಕೆ”ಗಳನ್ನು ಬಿಡುಗಡೆ ಮಾಡಿ ಮಾತನಾಡುತ್ತಾರೆ. ಪ್ರೊ. ವೆಂಕಟೇಶ ಆತ್ರೇಯ ಅವರು ವಿಚಾರ ಸಂಕಿರಣದ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಡಾ.ರಾಜೇಂದ್ರ ಚೆನ್ನಿ, ಡಾ. ರತಿ ರಾವ್ ಮತ್ತು ಕೆ.ಎನ್.ಉಮೇಶ್ ವಿಷಯ ವಿಸ್ತರಣೆ ಮಾಡಿ ಮಾತನಾಡಲಿದ್ದಾರೆ. ಏಂಗೆಲ್ಸ್ 200 ಕೃತಿಕಾರರಾದ ಪಿ.ಎ.ಕುಮಾರ್, ವಿ.ಎನ್.ಲಕ್ಷ್ಮಿ ನಾರಾಯಣ, ನಾ ದಿವಾಕರ, ಡಾ.ಎಚ್.ಜಿ.ಜಯಲಲಕ್ಷ್ಮಿ, ಸುಬ್ರಹ್ಮಣ್ಯ ಗುಡ್ಗೆ ಇವರುಗಳನ್ನು ಸನ್ಮಾನಿಸಲಾಗುತ್ತದೆ.
ಜೂನ್ 2ರ ವರೆಗೆ ಶೇ.25+ ರಿಯಾಯಿತಿ ನಂತರ ಬಂಡವಾಳ ಸಂಪುಟ-2 ರೂ.750 ಕ್ಕೆ ಮತ್ತು ಬಿಡುಗಡೆಯಾಗಲಿರುವ ಮೂರೂ ಪುಸ್ತಕಗಳ ಸೆಟ್ ಗೆ ರೂ. 900 ನ ವಿಶೇಷ ಬೆಲೆಗೆ ದೊರೆಯುತ್ತದೆ. ಪ್ರತಿಗಳಿಗೆ 96060 16471/2/3/4, 99165 95916 ಸಂಪರ್ಕಿಸಿ,
ಇದನ್ನು ನೋಡಿ : ಏಂಗೆಲ್ಸ್ 200 : ಪ್ರಕೃತಿಯ ಗತಿತಾರ್ಕಿಕತೆ ಪುಸ್ತಕ ಬಿಡುಗಡೆJanashakthi Media