ಬೆಳಗಾವಿ: ಡಿಸೆಂಬರ್ 10ರ ಅಧಿವೇಶನದಲ್ಲಿ ಬಗರ್ ಹುಕುಂ ಸಾಗುವಳಿದಾರರ ಅರ್ಜಿಗಳ ವಿಲೇವಾರಿ ಕುರಿತು, ಫಾರಂ-50, ಫಾರಂ-53, ಫಾರಂ-57 ಹಾಕಿದವರಲ್ಲಿ 2.27 ಲಕ್ಷ ಅರ್ಜಿಗಳನ್ನು ತಿರಸ್ಕರಿಸಿದ ಮಾಹಿತಿ ನೀಡಿದ್ದಾರೆ ಎಂದು ಸಿಪಿಐಎಂ ಕಾರ್ಯದರ್ಶಿ ಯು.ಬಸವರಾಜ ಹೇಳಿದ್ದಾರೆ.
ಸದರಿ ಅರ್ಜಿಗಳನ್ನು ವಯಸ್ಸು ಕಡಿಮೆಯೆಂದು, ಗುಂಡು ತೋಪು,ದೇವರಕಾಡು ಮತ್ತು ಸಾರ್ವಜನಿಕ ಉದ್ದೇಶ ಹಾಗು ಬಫರ್ ಜೋನ್ ನಲ್ಲಿ ಬರುವವರೆಂದು ತಿರಸ್ಕರಿಸಲಾಗಿದೆಯೆಂದು ತಿಳಿಸಿದ್ದಾರೆ.
ಆದರೆ, ಇದನ್ನು ಬಗರ್ ಹುಕುಂ ಭೂಮಿಯ ಅರ್ಜಿ ವಿಲೇವಾರಿ ಮಾಡುವ ಅಕ್ರಮ ಸಕ್ರಮ ಸಮಿತಿಗಳು ಪರಿಶೀಲಿಸಿ ತಿರಸ್ಕರಿಸದೇ, ಸಮಿತಿಗಳ ಮುಂದೆ ಬರುವ ಮುಂಚೆಯೆ ಅಧಿಕಾರಿಗಳು ತಿರಸ್ಕರಿಸಿದ್ದಾರೆ. ಇದು ಅಕ್ರಮವಾಗಿದೆಯೆಂದು ಭಾರತ ಕಮ್ಯುನಿಸ್ಟ್ ಪಕ್ಷ ( ಮಾರ್ಕ್ಸವಾದಿ ) ರಾಜ್ಯ ಸಮಿತಿ ಬಲವಾಗಿ ಖಂಡಿಸಿದೆ ಎಂದರು.
ಇದನ್ನೂ ಓದಿ: ನ್ಯಾಯಮೂರ್ತಿ ಶೇಖರ್ ಕುಮಾರ್ ಮಾಡಿರುವ ವಿವಾದಾತ್ಮಕ ಭಾಷಣದ ವಿವರಗಳು
ಸಚಿವರು ವಿವರಿಸುತ್ತಾ 12,000 ಅರ್ಜಿಗಳನ್ನು ಅರಣ್ಯವೆಂದು ತಿರಸ್ಕರಿಸಲಾಗಿದೆ ಎಂದಿದ್ದಾರೆ. ಪಹಣಿಗಳಲ್ಲಿ ಸರಕಾರ ಎಂದಿದೆ ಆದರೆ ಡಯಾಗ್ಲಾಟ್ ನಲ್ಲಿ ಅರಣ್ಯ ಎಂದಿದೆ ಎಂದು ಹೇಳಲಾಗುತ್ತದೆ. ಸರಕಾರ ಇವುಗಳಲ್ಲಿ ಯಾವುದು ಸರಿಯಾದ ದಾಖಲೆಯೆಂದು ಸ್ಪಷ್ಠೀಕರಣ ನೀಡಬೇಕೆಂದು ಸಿಪಿಐಎಂ ಒತ್ತಾಯಿಸುತ್ತದೆ.
ಅದೇ ರೀತಿ, ನಗರಗಳು, ಪಟ್ಟಣಗಳು, ಪಂಚಾಯತ್ ಪ್ರದೇಶಗಳು ವಿಸ್ತರಣೆಯಾದ ಹಾಗೆ ಸಾಗುವಳಿದಾರರು ಅವುಗಳ ಮಿತಿಯೊಳಗೆ ಬಂದು ಒಕ್ಕಲೆಬ್ಬಿಸಲ್ಪಡುವುದು ಅಕ್ರಮವಾಗಿದೆ. ಅಂತಹ ಅರ್ಜಿಗಳನ್ನು ತಿರಸ್ಕರಿಸುವ ಬದಲು ವಿಶೇಷವಾಗಿ ಪರಿಗಣಿಸಿ ಅಂತಹ ಜಮೀನುಗಳ ವಿಲೇವಾರಿ ಕುರಿತು, ರೈತರೊಂದಿಗೆ ವಿಶೇಷ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಲು ಕ್ರಮವಹಿಸಬೇಕು ಎಂದು ಹೇಳಿದರು.
ರಾಜ್ಯದ ಹಲವಾರು ಕಡೆ ಕೆರೆ, ಹಳ್ಳ, ಗೋಮಾಳ ಮುಂತಾದ ಹೆಸರಿನಲ್ಲಿರುವ ಜಮೀನುಗಳು ಅವು ಹಾಗೆ ಉಳಿದಿಲ್ಲ, ಹಳ್ಳಗಳ ದಿಕ್ಕು ಬದಲಾಗಿ ಕೃಷಿ ಜಮೀನುಗಳಾಗಿ ಬದಲಾಗಿವೆ. ಹಾಗೆ ಕೆರೆಗಳು ಜಲ ಮೂಲಗಳಿಲ್ಲದೆ ಬತ್ತಿ ಹೋಗಿ ಕೃಷಿ ಭೂಮಿಗಳಾಗಿ ಬದಲಾಗಿವೆ.
ಹೀಗಾಗಿ, ಒಟ್ಟಾರೆ, ರಾಜ್ಯದ ಒಟ್ಟು ಭೂಮಿಯನ್ನು ಇರುವಂತೆ ವಾಸ್ತವಿಕ ಸರ್ವೆ ( ಗಣತಿ )ಮಾಡಿ ಅದರಂತೆ ದಾಖಲಾತಿ ಮಾಡಿದಲ್ಲಿ ಬಗರ್ ಹುಕುಂ ಸಾಗುವಳಿದಾರರಿಗೆ ಅನ್ಯಾಯವಾಗುವುದಿಲ್ಲ. ಈ ಕುರಿತಂತೆ ಒಟ್ಟು ಭೂಮಿ ಸರ್ವೆಗೆ ಮುಂದಾಗುವಂತೆ ಸಿಪಿಐಎಂ ಆಗ್ರಹಿಸುತ್ತದೆ ಎಂದರು.
ಇದನ್ನೂ ನೋಡಿ: ಎಸ್‌ಎಂ ಕೃಷ್ಣ ನಿಧನಕ್ಕೆ ಸಿದ್ದರಾಮಯ್ಯ ಸಂತಾಪ | ಬೆಳಗಾವಿ ವಿಧಾನಸಭೆ ಅಧಿವೇಶನ Janashakthi Media