ಒಕ್ಕೂಟ ಪದ್ಧತಿಯಲ್ಲಿ ಪ್ರಾದೇಶಿಕತೆ ಮತ್ತು ರಾಷ್ಟ್ರೀಯತೆ

ಪ್ರೊ.ಬರಗೂರು ರಾಮಚಂದ್ರಪ್ಪ

ರಾಷ್ಟ್ರೀಯತೆ ಮತ್ತು ಪ್ರಾದೇಶಿಕತೆಯ ಪರಿಕಲ್ಪನೆಗಳು ಪರಸ್ಪರ ಪೂರಕವಾಗಿರಬೇಕೇ ಹೊರತು ಮಾರಕವಾಗಿ ಅಲ್ಲ. ಆದ್ದರಿಂದ, ಪ್ರಾದೇಶಿಕ ಪಕ್ಷಗಳು ಮತ್ತು ರಾಷ್ಟ್ರೀಯ ಪಕ್ಷಗಳು ಈ ಸತ್ಯವನ್ನು ಅರ್ಥ ಮಾಡಿಕೊಳ್ಳಬೇಕು. ಪ್ರಾದೇಶಿಕ ಪಕ್ಷಗಳು ಆಯಾ ಪ್ರದೇಶದ ಅಭ್ಯುದಯದ ಬಗೆಗೆ ಹೆಚ್ಚು ಗಮನ ಹರಿಸುವ ಆಸೆ ಹೊಂದಿರುತ್ತವೆಯೆಂಬುದು ನಿಜ. ಆದರೆ ಈ ಪಕ್ಷಗಳೂ ರಾಷ್ಟ್ರದ ಸಂವಿಧಾನದ ಚೌಕಟ್ಟಿನೊಳಗೆ ಕೆಲಸ ಮಾಡಬೇಕಾಗಿದೆಯೆಂಬುದನ್ನು ಮರೆಯಬಾರದು.

ನಮ್ಮ ದೇಶದಲ್ಲಿ ಪ್ರಾದೇಶಿಕತೆಯ ಪರವಾಗಿ ನಡೆಯುತ್ತಿರುವ ವಿವಿಧ ಶೈಲಿಯ ಹುರುಪು, ಹೋರಾಟಗಳ ಹಿನ್ನೆಲೆಯಲ್ಲಿ ಪ್ರಾದೇಶಿಕತೆ ಮತ್ತು ರಾಷ್ಟ್ರೀಯತೆಗಳು ಪರಸ್ಪರ ವಿರುದ್ಧ ನೆಲೆಯ ಪರಿಕಲ್ಪನೆಗಳೆ ಎಂಬ ಪ್ರಶ್ನೆ ಮೂಡುತ್ತದೆ. ನನಗನ್ನಿಸಿದಂತೆ ಇವೆರಡೂ ಪೂರಕ ಪರಿಕಲ್ಪನೆಗಳು, ವಾಸ್ತವ ಸಂಗತಿಯೆಂದರೆ ಪ್ರಾದೇಶಿಕ ಹಿತಾಸಕ್ತಿ ಮತ್ತು ರಾಷ್ಟ್ರೀಯ ಸಮಗ್ರತೆಯ ಬಗ್ಗೆ ಮಾತಾಡುವ ಎರಡೂ ಕಡೆಯ ಕೆಲವರು ಈ ಎರಡು ನೆಲೆಗಳನ್ನು ಪರಿಕಲ್ಪನೆಯ ಮಟ್ಟದಲ್ಲಿ ಒಟ್ಟಾಗಿ ಮನಸ್ಸು, ಮೆದುಳುಗಳಿಗೆ ತಂದುಕೊಂಡಿಲ್ಲ. ಬಹುಪಾಲು ತಮ್ಮದೇ ಪರಿಭಾಷೆಯ ಸಂಪ್ರದಾಯದಲ್ಲಿ ತಂತಮ್ಮ ಭಾವಕೋಶವನ್ನು ಬಸವಳಿಯುವಂತೆ ಮಾಡುವ ಇಂಥವರು ಪ್ರಾದೇಶಿಕತೆ ಮತ್ತು ರಾಷ್ಟ್ರೀಯತೆಗಳಿಗಿರುವ ಆರ್ಥಿಕ ಹಾಗೂ ರಾಜಕೀಯ ಸಂಬಂಧಗಳನ್ನು ಮರೆಯುತ್ತಾರೆ.

ಪ್ರಾದೇಶಿಕತೆ ರಾಷ್ಟ್ರೀಯತೆಗಳೆರಡನ್ನೂ ಒಳಗೊಳ್ಳುತ್ತಲೇ ಇಂಡಿಯಾದ ಇಡೀ ವ್ಯಕ್ತಿತ್ವ ರೂಪುಗೊಳ್ಳಬೇಕೆಂಬ ಅಂಶವು ಇತ್ತಂಡದ ಮುಖಾಮುಖಿಯಲ್ಲಿ ಮರೆಯಾಗುತ್ತದೆ. ನಿಜದ ನೆಲೆಯೆಂದರೆ, ಪ್ರಾದೇಶಿಕತೆಯು ರಾಷ್ಟ್ರೀಯ ಸಮಗ್ರತೆಯನ್ನೂ ರಾಷ್ಟ್ರೀಯ ಸಮಗ್ರತೆಯು ಪ್ರಾದೇಶಿಕ ಪರಿಕಲ್ಪನೆಯನ್ನೂ ಅರ್ಥ ಮಾಡಿಕೊಂಡರೆ, ಒಂದರೊಳಗೊಂದಾಗಿ ಅನನ್ಯ ಅಪ್ಪುಗೆಯ ಅಂತರ್ ಸಂಬಂಧದಲ್ಲಿ ಪ್ರಕ್ರಿಯೆಯಲ್ಲಿ ಭಾರತದ ವ್ಯಕ್ತಿತ್ವ ಅರಳುತ್ತದೆ.

ಈ ದಿಕ್ಕಿನಲ್ಲಿ ಪ್ರಾದೇಶಿಕ ಭಾವನೆಗಳ ಬೆಳವಣಿಗೆಯನ್ನು ಕುರಿತು ಮೊದಲು ಯೋಚಿಸೋಣ. ನಮಗೆ ತೀರಾ ಹತ್ತಿರವಾದ ಕನ್ನಡ-ಕರ್ನಾಟಕವನ್ನು ಉದಾಹರಣೆಯಾಗಿ ನೋಡೋಣ. ಇಲ್ಲಿ ಭಾಷಿಕವಾದ ಪ್ರಾದೇಶಿಕ ಭಾವನೆ ಮೂಡಿದ್ದು, ಸಂಸ್ಕೃತ, ಇಂಗ್ಲೀಷ್, ಹಿಂದಿ ಭಾಷೆಗಳ ಪ್ರಭಾವದಿಂದ ಪಾರಾಗುವ ಪ್ರತಿಕ್ರಿಯೆಯಾಗಿ, ಪಂಪನಂಥ ಮಹಾಕವಿ ಸಂಸ್ಕೃತ ಮಾರ್ಗವನ್ನು ಮೀರುತ್ತ ಕನ್ನಡದ ದೇಸಿಯನ್ನು ಬಳಸಿದ್ದು, ನಯಸೇನ ಕವಿ ತುಪ್ಪ ಮತ್ತು ಎಣ್ಣೆಯನ್ನು ಬೆರೆಸುವುದು ಸಲ್ಲದೆಂದು ಖಡಾಖಂಡಿತವಾಗಿ ಹೇಳುತ್ತ, ಸಂಸ್ಕೃತದ ಬೆರಕೆಯನ್ನು ವಿರೋಧಿಸಿದ್ದು, ಆಂಡಯ್ಯ ಕವಿ ಸಂಸ್ಕೃತ ಪದ ಪ್ರಯೋಗವನ್ನೇ ಧಿಕ್ಕರಿಸಿ ಕನ್ನಡ ತದ್ಭವಗಳನ್ನು ರೂಪಿಸಿ ಕಾವ್ಯ ರಚಿಸಿದ್ದು, ಇವೆಲ್ಲ ಸಂಸ್ಕೃತದ ದಟ್ಟ ಪ್ರಭಾವದೆದುರು ಕನ್ನಡವನ್ನು ಗಟ್ಟಿಗೊಳಿಸುವ ಕ್ರಮಗಳು. ಮುಂದೆ, ಬ್ರಿಟಿಷರ ಆಡಳಿತದ ಪ್ರಭಾವದಿಂದ ಸ್ವಾತಂತ್ರ‍್ಯಪೂರ್ವ ಮತ್ತು ಸ್ವಾತಂತ್ರೋತ್ತರ ಕಾಲದಲ್ಲಿ ಇಂಗ್ಲೀಷ್ ಪ್ರಭಾವ ಹೆಚ್ಚಾಯಿತು, ಸ್ವಾತಂತ್ರ‍್ಯ ಬಂದ ನಂತರದ ಭಾರತದಲ್ಲಿ ಹಿಂದಿ ಹೇರಿಕೆಯ ಪ್ರಯತ್ನಗಳು ಪ್ರಬಲಗೊಂಡವು.

ಹೀಗೆ ಅನ್ಯ ಭಾಷೆಗಳ ಹೇರಿಕೆಯನ್ನು ಪ್ರತಿರೋಧಿಸುವ ಫಲವಾಗಿ ಪ್ರಾದೇಶಿಕ ಭಾಷೆ ಮತ್ತು ಸಂಸ್ಕೃತಿಗಳ ಪರವಾದ ಪ್ರತಿಪಾದನೆ ಮುನ್ನಲೆಗೆ ಬಂದಿದೆ. ಭಾಷೆಗಳ ಕಲಿಕೆ ಬೇರೆ, ಹೇರಿಕೆ ಬೇರೆ. ಪ್ರಾದೇಶಿಕ ಪ್ರಜ್ಞೆಯು ಕಲಿಕೆಗೆ ವಿರೋಧಿಯಲ್ಲ. ಹೇರಿಕೆಗೆ ವಿರೋಧಿ. ಇಲ್ಲಿ ಮುಖ್ಯವಾದದ್ದು, ಪ್ರತಿರೋಧದಲ್ಲಿ ಹುಟ್ಟಿದ ಸಾಂಸ್ಕೃತಿಕ ಸ್ವಾಭಿಮಾನ. ಸ್ವಂತಿಕೆಯು ಕರಗಿ ಹೋಗುತ್ತಿರುವ ಅನುಭವ ಉಂಟಾದಾಗ ಈ ರೀತಿಯ ಪ್ರತಿರೋಧ ಪ್ರಕಟವಾಗುತ್ತದೆ. ಅಂದರೆ ಇದು ನಮ್ಮನ್ನು ನಾವು ಕಂಡುಕೊಳ್ಳುವ, ಗುರುತಿಸಿಕೊಳ್ಳುವ ಪ್ರಕ್ರಿಯೆ. ಈ ಪ್ರಕ್ರಿಯೆಯೇ ಪ್ರಾದೇಶಿಕತೆಯ ಮೊದಲ ಮಜಲು.

ಇದನ್ನೂ ಓದಿ: ಕರ್ನಾಟಕ ರಾಜ್ಯೋತ್ಸವ: ಕನ್ನಡ, ಪ್ರಜಾಪ್ರಭುತ್ವದ ಅಳಿವು-ಉಳಿವಿನ ಪ್ರಶ್ನೆ

ಅನಂತರ ಬ್ರಿಟಿಷರ ಕಾಲದಲ್ಲಿ ರಾಷ್ಟ್ರೀಯತೆಯ ಪರಿಕಲ್ಪನೆ ರೂಪುಗೊಂಡಂತೆ ಕಾಣುತ್ತದೆ. ಇಲ್ಲಿ ರಾಷ್ಟ್ರೀಯತೆಯೆನ್ನುವುದು ಅನ್ಯ ಸಾಂಸ್ಕೃತಿಕ ಪ್ರಭಾವಕ್ಕೆ ತೋರಿದ ಪ್ರತಿಕ್ರಿಯೆ. ವಿವಿಧ ಪ್ರದೇಶದ ಭಾಷೆ, ಸಂಸ್ಕೃತಿಗಳು ಕಳೆದು ಹೋಗುತ್ತಿರುವ ಭಾವನೆಯಲ್ಲಿ ಪ್ರಾದೇಶಿಕ ಭಾವಕೋಶಕ್ಕೆ ಹೇಗೆ ಬಾಯಿ ಬಂದಿತೋ, ಹಾಗೆಯೇ ಬ್ರಿಟಿಷರ ಪ್ರಭಾವದಿಂದ ಬಿಡುಗಡೆ ಹೊಂದುವ ಹುಡುಕಾಟ, ಹೋರಾಟದ ಫಲವಾಗಿ ಭಾರತದಲ್ಲಿ ಸಂಸ್ಕೃತಿಯ ಪುನರುಜ್ಜಿವನ ಪ್ರಕ್ರಿಯೆ ಪ್ರಾರಂಭವಾಯಿತು. ಆಗ, ರಾಷ್ಟ್ರೀಯತೆ ಎನ್ನುವುದು ಒಂದು ಸಾಂಸ್ಕೃತಿಕ ಸಮರ್ಥನೆಯ ಕ್ರಿಯೆಯಾಯಿತು. ಅನ್ಯ ಪ್ರಭಾವದಲ್ಲಿ ಮುಳುಗಿಹೋಗದೆ ಪುಟದ ಚೆಂಡಾಗಿ ಜಿಗಿಯುವ ಆಗಿನ ರಾಷ್ಟ್ರೀಯತೆ ಒಂದು ರೀತಿಯಲ್ಲಿ ಪ್ರಾದೇಶಿಕತೆಯೂ ಹೌದು. ಯಾಕೆಂದರೆ, ಅದು ಬ್ರಿಟಿಷರ ವಿರುದ್ಧ ಭಾರತವೆಂಬ ಪ್ರದೇಶದ ವೈಶಿಷ್ಟ್ಯಗಳನ್ನು ಉಳಿಸಿಕೊಳ್ಳುವ ಪ್ರಯತ್ನವಾಗಿತ್ತು. ಆದರೆ, ಭಾರತವೆಂಬ ಪ್ರಧಾನ ಪ್ರದೇಶದ ಒಳಗೆ ವಿವಿಧ ಪುಟ್ಟ ಪ್ರದೇಶಗಳೂ ಇದ್ದದ್ದರಿಂದ, ಅವುಗಳ ಸಾಂಸ್ಕೃತಿಕ ಸ್ವಾಯತ್ತತೆಯ ಪ್ರಶ್ನೆಯೂ ಪುಟಿದೆದ್ದಿತು. ಆಗ ಭಾರತದೊಳಗಿನ ಪ್ರಾದೇಶಿಕ ಭಾವನೆಗಳೂ ಬೆಳೆಯತೊಡಗಿದವು. ಈ ಪ್ರಾದೇಶಿಕತೆಯನ್ನು ಉಪರಾಷ್ಟ್ರೀಯತೆಯೆಂದೂ ಕರೆಯುತ್ತಾರೆ.

ಹೀಗೆ, ಬ್ರಿಟಿಷರ ಕಾಲದಲ್ಲಿ ಸಾಂಸ್ಕೃತಿಕ ಸ್ವಾಯತ್ತತೆಗಾಗಿ ನಡೆದ ಪ್ರಯತ್ನದಲ್ಲಿ ರಾಷ್ಟ್ರೀಯತೆ ಮತ್ತು ಪ್ರಾದೇಶಿಕತೆಗಳೆರಡೂ ಸೇರಿರುವುದು ಇಂಡಿಯಾದ ವಿಶಿಷ್ಟ ವ್ಯಕ್ತಿತ್ವದ ಪ್ರತೀಕ. ಸತ್ಯದ ಸರಳತೆಯನ್ನು ಅರಿಯುತ್ತಲೇ ಸೂಕ್ಷ್ಮತೆ ಸಂಕೀರ್ಣತೆಗಳನ್ನು ಒಳಗೊಂಡು ಸ್ಪಟಿಕ ಸ್ಪಷ್ಟತೆಯ ಕಡೆಗೆ ತುಡಿಯಬೇಕಾದ್ದು ಭಾರತ ವ್ಯಕ್ತಿತ್ವದ ವಿಶೇಷ. ಈ ತುಡಿತದ ತೀವ್ರತೆಯನ್ನು ಉಳಿಸಿಕೊಂಡಾಗ ಸೂಕ್ಷ್ಮತೆ ದಕ್ಕುತ್ತದೆ. ರಾಷ್ಟ್ರೀಯತೆಯೊಳಗೆ ಪ್ರಾದೇಶಿಕತೆಯನ್ನು ಮಿಡಿಯುವ ನಿಜನಡಿಗೆಯ ಅನುಭವ ಲಭ್ಯವಾಗುತ್ತದೆ. ಸಂವೇದನಾಶೀಲ ಮನಸ್ಸು ಇಂಥ ಸೂಕ್ಷ್ಮತೆ, ಸರಳತೆಗಳೆರಡನ್ನೂ ಒಟ್ಟಿಗೇ ಒಳಗೊಳ್ಳಲು ಸಾಧ್ಯ. ಅಂದರೆ ಸದಾ ತುಡಿಯುವ ಸಂವೇದನಾಶೀಲತೆಯಲ್ಲಿ ನಿಜವಾದ ಭಾರತದ ವ್ಯಕ್ತಿತ್ವವಿದೆ.

ಪ್ರಾದೇಶಿಕ ಭಾವನೆಯ ಕಾರಣಗಳನ್ನು ಸ್ವತಃ ಪ್ರಾದೇಶಿಕತಾ ವಾದಿಗಳೂ ಸರಿಯಾಗಿ ಶೋಧಿಸಬೇಕಾಗಿದೆ. ಭಾಷೆ – ಸಂಸ್ಕೃತಿಗಳನ್ನು ಭಾವೋದ್ರೇಕದ ಬಾಣವಾಗಿ ಬಳಸುವ ಬದಲು ಒಟ್ಟು ಬದುಕಿನ ಭಾಗವಾಗಿ ಪರಿಶೋಧಿಸಬೇಕಾಗಿದೆ.

ಸ್ವಾತಂತ್ರ್ಯೋತ್ತರ ಭಾರತದಲ್ಲಿ ರೂಪಿಸಿದ ಯೋಜನೆಗಳು ಮತ್ತು ಅವುಗಳ ಅನುಷ್ಠಾನದಲ್ಲಿ ಉಂಟಾದ ತಾರತಮ್ಯವು ಪ್ರಾದೇಶಿಕ ವಾದಕ್ಕೆ ಒಂದು ಪ್ರಮುಖ ಪ್ರೇರಣೆ. ಈಗಾಗಲೇ ಇರುವ ಅಸಮಾನತೆಯ ಅಂತರವನ್ನು ವಿಸ್ತರಿಸುತ್ತಲೇ ಹೋಗುವ ನಮ್ಮ ರಾಜಕೀಯ ವ್ಯವಸ್ಥೆ, ಇಡೀ ದೇಶದ ಸಾಮಾಜಿಕ – ಆರ್ಥಿಕ ಬದಲಾವಣೆಯನ್ನು ತೀವ್ರಗೊಳಿಸುವ ಬದಲು ಯಥಾಸ್ಥಿತಿವಾದೀ ನೆಲೆಯಲ್ಲಿ ಸುಧಾರಣೆಯ ಪ್ರಹಸನಕ್ಕೆ ತೊಡಗಿರುವುದು ಕೂಡ ಕಾರಣ. ಕೇಂದ್ರೀಕೃತ ಆರ್ಥಿಕ ವ್ಯವಸ್ಥೆ ಮತ್ತು ಅಧಿಕಾರಶಾಹಿ ಧೋರಣೆಗಳು, ಈ ದೇಶದ ಬಂಡವಾಳಗಾರರ ಬಾಯಾಗಿ ಬಡವರಿಗೆ ಬಣ್ಣದ ಬೆಲೂನಾಗಿ, ಸಾಮಾನ್ಯ ಜನತೆಯ ಸಂವೇದನೆಯನ್ನೇ ಹಾಳುಗೆಡವಿದ ರಾಜಕೀಯವು ಪ್ರಾದೇಶಿಕ ಅಸಮತೋಲನಕ್ಕೂ ಕಾರಣವಾಗಿದೆ. ಆದ್ದರಿಂದ ಅಸಮತೋಲನ ಮತ್ತು ಅಸಮಾನತೆಗಳು ಪ್ರಾದೇಶಿಕ ಭಾವನೆ ಕೆರಳಲು ಕಾರಣವಾಗುತ್ತವೆ.

‘ಮಣ್ಣಿನ ಮಕ್ಕಳಿಗೆ ಉದ್ಯೋಗ’ವೆಂಬ ಘೋಷಣೆಯನ್ನೇ ಪರಿಶೀಲಿಸಬಹುದು. ಇಲ್ಲಿ ಹುಟ್ಟಿ ಬೆಳೆದವರಿಗೆ ಪ್ರಾದೇಶಿಕ ಆದ್ಯತೆ ಮೇಲೆ ಉದ್ಯೋಗ ಸಿಗಬೇಕೆಂಬ ವಾದ ಸರಿಯಾದದ್ದೆ ಆಗಿದೆ. ನಾವು ಭಾರತದೇಶದ ಮಣ್ಣಿನ ಮಕ್ಕಳೂ ಹೌದು; ಆಯಾ ರಾಜ್ಯದ ಮಣ್ಣಿನ ಮಕ್ಕಳೂ ಹೌದು. ಆಯಾ ರಾಜ್ಯದವರಿಗೆ ಮಾತ್ರವೇ ಆಯಾ ರಾಜ್ಯಗಳ ಉದ್ಯೋಗ ಎಂದು ಕಾನೂನೇ ಆಯಿತೆಂದುಕೊಳ್ಳೋಣ. ಆಗ ಆಯಾ ರಾಜ್ಯದಲ್ಲಿರುವ ಮಣ್ಣಿನ ಮಕ್ಕಳೆಲ್ಲರಿಗೂ ಉದ್ಯೋಗ ಸಿಗುತ್ತದೆಯೋ ಅಥವಾ ಆಯಾ ರಾಜ್ಯದ ‘ಹೊನ್ನಿನ ಮಕ್ಕಳಿಗೆ’ ಮಾತ್ರ ಉದ್ಯೋಗ ಸಿಗುತ್ತದೆಯೋ? ಜೊತೆಗೆ, ರಾಜ್ಯದ ಎಲ್ಲ ನಿರುದ್ಯೋಗಗಳಿಗೂ ಇಲ್ಲೇ ಉದ್ಯೋಗ ದೊರೆಯುತ್ತದೆಯೇ? ರಾಜ್ಯದ ಮಣ್ಣಿನ ಮಕ್ಕಳಿಗೇ ಉದ್ಯೋಗ ಕೊಡುತ್ತೇವೆಂದುಕೊಂಡರೂ ಇಲ್ಲಿನ ಮಣ್ಣಿನ ಮಕ್ಕಳ ನಡುವೆಯೇ ಜಾತಿ – ವರ್ಗಗಳಾಗಿ ವಿಂಗಡಿಸಲ್ಪಟ್ಟಿರುವ ವ್ಯವಸ್ಥೆಯ ಮೂಲ ಸೂಕ್ಷ್ಮಗಳು ಮೇಲುಗೈಯಾಗುತ್ತವೆ.

ಹಾಗೆಂದು ಆಯಾ ರಾಜ್ಯದ ಸ್ಥಳೀಯ ಅರ್ಹರಿಗೆ ಉದ್ಯೋಗದಲ್ಲಿ ಆದ್ಯತೆ ನೀಡುವುದು ಸರಿಯಲ್ಲವೆಂಬುದು ನನ್ನ ಅಭಿಪ್ರಾಯವಲ್ಲ. ಸ್ಥಳೀಯರಿಗೆ ಆದ್ಯತೆ ಕೊಡಲೇಬೇಕು. ಸ್ಥಳೀಯ ಅರ್ಹರಿಗೆ ಉದ್ಯೋಗದಲ್ಲಿ ಆದ್ಯತೆ ನೀಡುವುದು ಒಂದು ರಾಷ್ಟ್ರೀಯ ನೀತಿಯಾಗಬೇಕು. ಜೊತೆಗೆ ಭ್ರಷ್ಟಾಚಾರವಿಲ್ಲದ ಪಾರದರ್ಶಕ ವಿಧಾನವನ್ನು ಅನುಸರಿಸಬೇಕು. ಪ್ರಾದೇಶಿಕ ಭಾಷೆ, ಸಂಸ್ಕೃತಿ ಮತ್ತು ಜನರಿಗೆ ಕೊಡುವ ಮಹತ್ವವು ರಾಷ್ಟ್ರೀಯತೆಗೆ ವಿರುದ್ಧವಲ್ಲ. ನಿಜವಾದ ರಾಷ್ಟ್ರೀಯ ಸಂವೇದನೆಯು ರಾಷ್ಟ್ರದಲ್ಲಿರುವ ಅಸಮಾನತೆಯನ್ನು ನಾಶಪಡಿಸುವ ತೀವ್ರ ಪ್ರಯತ್ನದ ಮೂಲಕ ಪ್ರಾದೇಶಿಕ ಅಸಮತೋಲನವನ್ನು ತೊಡೆಯುತ್ತದೆ.

ನಾನು ಮೊದಲೇ ಹೇಳಿದಂತೆ ರಾಷ್ಟ್ರೀಯತೆ ಮತ್ತು ಪ್ರಾದೇಶಿಕತೆಯ ಪರಿಕಲ್ಪನೆಗಳು ಪರಸ್ಪರ ಪೂರಕವಾಗಿರಬೇಕೇ ಹೊರತು ಮಾರಕವಾಗಿ ಅಲ್ಲ. ಆದ್ದರಿಂದ, ಪ್ರಾದೇಶಿಕ ಪಕ್ಷಗಳು ಮತ್ತು ರಾಷ್ಟ್ರೀಯ ಪಕ್ಷಗಳು ಈ ಸತ್ಯವನ್ನು ಅರ್ಥ ಮಾಡಿಕೊಳ್ಳಬೇಕು. ಪ್ರಾದೇಶಿಕ ಪಕ್ಷಗಳು ಆಯಾ ಪ್ರದೇಶದ ಅಭ್ಯುದಯದ ಬಗೆಗೆ ಹೆಚ್ಚು ಗಮನ ಹರಿಸುವ ಆಸೆ ಹೊಂದಿರುತ್ತವೆಯೆಂಬುದು ನಿಜ. ಆದರೆ ಈ ಪಕ್ಷಗಳೂ ರಾಷ್ಟ್ರದ ಸಂವಿಧಾನದ ಚೌಕಟ್ಟಿನೊಳಗೆ ಕೆಲಸ ಮಾಡಬೇಕಾಗಿದೆಯೆಂಬುದನ್ನು ಮರೆಯಬಾರದು. ಪ್ರಾದೇಶಿಕ ಪಕ್ಷವಾಗಲೀ, ರಾಷ್ಟ್ರೀಯ ಪಕ್ಷವಾಗಲೀ, ನನಗೆ ಮುಖ್ಯವಾದದ್ದು, ಅವುಗಳ ಸೈದ್ಧಾಂತಿಕ ನೆಲೆ. ರಾಷ್ಟ್ರೀಯ, ಪ್ರಾದೇಶಿಕ ಎಂಬ ಭೌಗೋಳಿಕ ಪದ ಪ್ರಯೋಗಕ್ಕಿಂತ ಒಂದು ರಾಜಕೀಯ ಪಕ್ಷ, ಜನಪರವೋ ಜನವಿರೋಧಿಯೋ ಎಂಬ ಪ್ರಶ್ನೆ ಮುಖ್ಯವಾಗುತ್ತದೆ. ಜನಪರವಾಗಿದ್ದರೆ ಅಸಮತೋಲನದ ಪ್ರಶ್ನೆ ಗೌಣವಾಗುತ್ತದೆ. ರಾಷ್ಟ್ರೀಯ ಪಕ್ಷಗಳಿಗೆ ಪ್ರಾದೇಶಿಕ ಪ್ರಜ್ಞೆ ಮತ್ತು ಪ್ರಾದೇಶಿಕ ಪಕ್ಷಗಳಿಗೆ ರಾಷ್ಟ್ರೀಯ ಪ್ರಜ್ಞೆ ಇರಬೇಕಾಗುತ್ತದೆ.

ಇನ್ನೊಂದು ಮುಖ್ಯ ಸಂಗತಿಯೆಂದರೆ, ಸಂವಿಧಾನದ ಪ್ರಕಾರ ನಮ್ಮದು ಒಕ್ಕೂಟ ರಾಜ್ಯ ಪದ್ಧತಿ. ಅಂದರೆ ಫೆಡರಲ್ ಪದ್ಧತಿ. ಇಲ್ಲಿ ರಾಷ್ಟ್ರವೂ ಮಾನ್ಯ; ಅದರೊಳಗಿರುವ ರಾಜ್ಯವೂ ಮಾನ್ಯ. ರಾಷ್ಟ್ರೀಯತೆ ಮತ್ತು ಪ್ರಾದೇಶಿಕತೆಗಳ ಸಂಬಂಧಕ್ಕೆ ಫೆಡರಲ್ ಪದ್ಧತಿಯೇ ಒಂದು ಸಮರ್ಥ ಪ್ರತೀಕ. ಹೀಗಿರುವಾಗ ಮೂಲ ಸಮಸ್ಯೆ ಪ್ರಾದೇಶಿಕ ಪಕ್ಷ ಅಥವಾ ರಾಷ್ಟ್ರೀಯ ಪಕ್ಷಗಳದಲ್ಲ. ಪ್ರಾದೇಶಿಕ ಮತ್ತು ರಾಷ್ಟ್ರೀಯ ನೆಲೆಗಳನ್ನು ಎರಕಹೊಯ್ದು ರೂಪಿಸುವ ಸಾಮಾಜಿಕ, ಆರ್ಥಿಕ ನೀತಿ ನಿಲುವುಗಳು ಮಾತ್ರವೇ ರಾಜಕೀಯ ಪಕ್ಷವೊಂದರ ಮೌಲ್ಯಮಾಪನಕ್ಕೆ ಮಾನದಂಡವಾಗುತ್ತವೆ.

ಇದನ್ನೂ ಓದಿ: ಹೈದರಾಬಾದ್ ಕರ್ನಾಟಕ ವಿಮೋಚನಾ ದಿನ : ಮರೆಮಾಚಿದ ಸತ್ಯಗಳು

ಈಗ ಮುಖ್ಯವಾಗಿ, ಕೇಂದ್ರ – ರಾಜ್ಯಗಳ ಸಂಬಂಧ ಮತ್ತು ಅಧಿಕಾರಗಳನ್ನು ಒಕ್ಕೂಟ ಪದ್ಧತಿಯ ಭಾಗವಾಗಿ ಅರ್ಥಮಾಡಿಕೊಂಡು ಅನುಸರಿಸಬೇಕಾಗಿದೆ. ರಾಷ್ಟ್ರೀಯತೆ ಮತ್ತು ಪ್ರಾದೇಶಿಕತೆಯ ಸಂಬಂಧವು ಸಾಂಸ್ಕೃತಿಕ ಸ್ವಾಯತ್ತತೆಯ ಪ್ರಶ್ನೆಯಾಗಿರುವಂತೆ, ಆರ್ಥಿಕ ಸ್ವಾಯತ್ತತೆಯ ಪ್ರಶ್ನೆಯೂ ಆಗಿದೆ. ರಾಜಕೀಯವಾಗಿಯಂತೂ ಇದು ಪ್ರಧಾನವಾಗಿ ಆರ್ಥಿಕ ಸ್ವಾಯತ್ತತೆಯ ಪ್ರಶ್ನೆ. ಆದ್ದರಿಂದ ರಾಜ್ಯಗಳಿಗೆ ಆರ್ಥಿಕವಾಗಿ ಸಾಕಷ್ಟು ಸ್ವಾಯತ್ತತೆ ದೊರಕಿಸಿಕೊಳ್ಳುವ ವೈಚಾರಿಕ ಹೋರಾಟ ಇಂದಿನ ಅಗತ್ಯ. ಇಂಥ ವೈಚಾರಿಕತೆಯು ರಾಷ್ಟ್ರೀಯತೆಗೆ ವಿರೋಧಿಯಾಗಬೇಕಿಲ್ಲ; ವಿರೋಧಿಯಾಗುವುದಿಲ್ಲ. ಹಾಗೆಂದು ಕೇಂದ್ರ ಸರ್ಕಾರಗಳು ರಾಜ್ಯಗಳ ಅಧಿಕಾರವನ್ನು ಮೊಟಕುಗೊಳಿಸಿ ಅಧಿಕಾರ ಕೇಂದ್ರೀಕರಣ ಮಾಡಿಕೊಂಡರೆ ವಿರೋಧಿಸದೆ ಇರಬೇಕಾಗಿಲ್ಲ. ರಾಜ್ಯಗಳ ಸ್ವಾಯತ್ತ ಅಸ್ತಿತ್ವಕ್ಕೆ ಧಕ್ಕೆ ತರುವ ಪ್ರಯತ್ನಗಳನ್ನು ವಿರೋಧಿಸಬೇಕಾಗುತ್ತದೆ.

ಪ್ರಾದೇಶಿಕ ಸ್ವಾಯತ್ತತೆಯು ಪ್ರತ್ಯೇಕತೆಯಲ್ಲ. ಪ್ರಾದೇಶಿಕತೆಯ ವಾದ ಯಾವತ್ತೂ ಪ್ರತ್ಯೇಕತಾವಾದವಾಗಬಾರದು. ಅಂತೆಯೇ ರಾಷ್ಟ್ರೀಯ ಸಮಗ್ರತೆಯು ಪ್ರಾದೇಶಿಕ ಅನನ್ಯತೆಯ ಮನ್ನಣೆ ಮೂಲಕವೇ ಸಮಗ್ರತೆಯನ್ನು ರೂಪಿಸಿಕೊಳ್ಳಬೇಕು. ಪ್ರಾದೇಶಿಕ ಸ್ವಾಯತ್ತತೆ ಮತ್ತು ರಾಷ್ಟ್ರೀಯ ಸಮಗ್ರತೆಗಳು ಪರಸ್ಪರ ಪ್ರತಿರೋಧಿಯಾಗದೆ ಬದುಕುವುದೇ ಭಾರತದ ಒಕ್ಕೂಟ ಪದ್ಧತಿಯ ನೀತಿ. ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರು ‘ರಾಷ್ಟ್ರೀಯತೆಯೆನ್ನುವುದು ವಿವಿಧ ಪ್ರಭೇಧಗಳ ಪ್ರಜ್ಞೆ’ ಎಂದು ವ್ಯಾಖ್ಯಾನಿಸಿದ್ದು ಇಲ್ಲಿ ಉಲ್ಲೇಖನೀಯ. ‘ವಿವಿಧತೆಯಲ್ಲಿ ಏಕತೆ’ ಎನ್ನುವುದು ಒಕ್ಕೂಟ ಪದ್ಧತಿಯ ಆಶಯ.

ಕೃಪೆ:`ಮನುಷ್ಯ ಜಾತಿ ತಾನೊಂದೆ ವಲಂ’ ಪುಸ್ತಕದಿಂದ ಆಯ್ಕೆ.

ವಿಡಿಯೋ ನೋಡಿ: ಕರ್ನಾಟಕ ರಾಜ್ಯೋತ್ಸವ : ಜನರ ಬದುಕಿನ‌ಪ್ರಶ್ನೆಗಳು ಯಾಕಿಲ್ಲ? – ಜಿ.ಎನ್ ನಾಗರಾಜ ಅವರ ವಿಶ್ಲೇಷಣೆ Janashakthi Media

Donate Janashakthi Media

Leave a Reply

Your email address will not be published. Required fields are marked *