ಉದ್ಯೋಗ ಖಾತ್ರಿ ಯೋಜನೆಯಡಿ ದುಡಿಯುವ ಕೂಲಿಕಾರ್ಮಿಕರ ಸಮಸ್ಯೆ ಆಲಿಸಿದ ಬೃಂದಾ ಕಾರಟ್‌

ಮಂಡ್ಯ: ಮಹಾತ್ಮ ಗಾಂಧಿ ರಾಷ್ಟ್ರೀ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ(ರೇಗಾ)ಯಡಿಯಲ್ಲಿ ದುಡಿಮೆ ಮಾಡುವ ಕೂಲಿ ಕಾರ್ಮಿಕರು ಸಾಕಷ್ಟು ಅಡೆತಡೆಗಳ ಮೂಲಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕಾರ್ಮಿಕರ ಸಮಸ್ಯೆಗಳನ್ನು ಆಲಿಸಲು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್‌ ಬ್ಯೂರೋ ಸದಸ್ಯರಾದ ಬೃಂದಾ ಕಾರಟ್‌ ಅವರು ಇಂದು(ಸೆಪ್ಟಂಬರ್‌ 22) ಮಳವಳ್ಳಿ ತಾಲ್ಲೂಕು ಹಲಗೂರಿಗೆ ಆಗಮಿಸಿದರು.

ಮಹಾತ್ಮ ಗಾಂಧಿ ರಾಷ್ಟ್ರೀ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆಲಸದಲ್ಲಿ ತೊಡಗಿಸಿಕೊಂಡವರ ಅನುಭವಗಳು, ಕಾಯ್ದೆಯನ್ನು ವಿಸ್ತರಿಸಲು ಹಾಗೂ ಬಲಪಡಿಸಲು ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಖುದ್ದಾಗಿ ತಿಳಿಯುವ ಉದ್ದೇಶದಿಂದ ಬೃಂದಾ ಕಾರಟ್‌ ಅವರು ದೇಶದಾದ್ಯಂತ ಹಲವು ಗ್ರಾಮಗಳಿಗೆ ಭೇಟಿ ನೀಡುತ್ತಿದ್ದಾರೆ.

ಈ ನಿಟ್ಟಿನಲ್ಲಿ ಉದ್ಯೋಗ ಖಾತ್ರಿಯಡಿ ದುಡಿಮೆ ಮಾಡುವ ಕಾರ್ಮಿಕರೊಟ್ಟಿಗೆ ಬಸಾಪುರ ಹಲಗೂರು ಹೋಬಳಿಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಬೃಂದಾ ಕಾರಟ್‌ ಅವರು ಮಾತನಾಡಿದರು ಮತ್ತು ಕೂಲಿಕಾರ್ಮಿಕರ ಸಮಸ್ಯೆಗಳನ್ನು ಆಲಿಸಿದರು. ಅಲ್ಲದೆ, ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಗೊಲ್ಲರಹಳ್ಳಿ, ಬಾಣಸಮುದ್ರ, ಹಾಡ್ಲಿ ಸೇರಿದಂತೆ ವಿವಿಧ ಹೋಬಳಿಗಳಿಗೂ ಅವರು ಭೇಟಿ ನೀಡಿದರು.

ಮಳವಳ್ಳಿ ಹಾಗೂ ಮದ್ದೂರು ತಾಲ್ಲೂಕಿನ ತಲಾ ಎರಡು ರೇಗಾ ಸ್ಥಳಗಳು ಮತ್ತು ಭಾರತಿನಗರದ ಕೃಷಿ ಕೂಲಿಕಾರರ ಸಹಕಾರ ಸಂಘ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಬೃಂದಾ ಕಾರಟ್‌ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಮೀನಾಕ್ಷಿ ಸುಂದರಂ, ಜಿಲ್ಲಾ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ, ರಾಜ್ಯ ಮುಖಂಡರಾದ ದೇವಿ, ಕುಮಾರಿ, ಗೌರಮ್ಮ, ಪುಟ್ಟಮಾದು, ಎನ್‌.ಎಲ್.‌ ಭರತ್‌ ರಾಜ್‌, ಮಂಡ್ಯ ಜಿಲ್ಲೆ ಮತ್ತು ತಾಲ್ಲೂಕು ಮುಖಂಡರು ಸೇರಿದಂತೆ  ಕೂಲಿಕಾರರ ಸಂಘ, ರೈತ ಸಂಘ, ಜನವಾದಿ ಮಹಿಳಾ ಸಂಘಟನೆ, ಮುಖಂಡರು ಕಾರ್ಯಕರ್ತರು ಹಾಜರಿದ್ದರು.

Donate Janashakthi Media

Leave a Reply

Your email address will not be published. Required fields are marked *