ಕರ್ನಾಟಕದಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ಕಾಲೇಜು ಆವರಣ ಹಾಗೂ ತರಗತಿ ಪ್ರವೇಶಕ್ಕೆ ನಿರಾಕರಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ನೊಬೆಲ್ ಪ್ರಶಸ್ತಿ ಪುರಸ್ಕೃತೆ ಮತ್ತು ಶಿಕ್ಷಣ ಹಕ್ಕುಗಳ ಹೋರಾಟಗಾರ್ತಿ ಮಲಾಲಾ ಯೂಸುಫ್, “ಹಿಜಾಬ್ ಧರಿಸಿ ಶಾಲೆಗಳಿಗೆ ಹೋಗಲು ಅವಕಾಶ ನೀಡದಿರುವುದು ಭಯಾನಕ” ಎಂದು ಟ್ವೀಟ್ ಮಾಡಿದ್ದಾರೆ.
ಹೆಣ್ಣು ಮಕ್ಕಳು ಹಿಜಾಬ್ ಧರಿಸಿ ಶಾಲೆ ಪ್ರವೇಶಿಸುವುದನ್ನು ತಡೆಯುವುದು ಭಯಾನಕವಾಗಿದೆ ಎಂದು ಮಲಾಲಾ ಯೂಸುಫ್ಜಾಯ್ ಹೇಳಿದ್ದಾರೆ. ಈ ಕುರಿತು ಟ್ವೀಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಮಲಾಲಾ ‘ಹಿಜಾಬ್ ಧರಿಸಿರುವ ಹುಡುಗಿಯರನ್ನು ಶಾಲೆಗಳಿಗೆ ಪ್ರವೇಶಿಸದಂತೆ ತಡೆಯುವುದು ಭಯಾನಕವಾಗಿದೆ. ಮಹಿಳೆಯರು ಹೆಚ್ಚು ಕಡಿಮೆ ಬಟ್ಟೆ ಧರಿಸುವಂತೆ ಒತ್ತಡ ಹೇರುತಿದ್ದಾರೆ. ಭಾರತೀಯ ನಾಯಕರು ಮುಸ್ಲಿಂ ಮಹಿಳೆಯರನ್ನು ಕಡೆಗಣಿಸುವುದನ್ನು ನಿಲ್ಲಿಸಬೇಕು ಎಂದು ಬರೆದುಕೊಂಡಿದ್ದಾರೆ.
ಮಲಾಲಾ ಯೂಸುಫ್ 1997ರಲ್ಲಿ ಪಾಕಿಸ್ತಾನದ ಮಿಂಗೋರಾ ಎಂಬಲ್ಲಿ ಜನಿಸಿದ್ದಾರೆ. ತಮ್ಮ ಚಿಕ್ಕವಯಸ್ಸಿನಿಂದಲೇ ಹೆಣ್ಣುಮಕ್ಕಳ ಶಿಕ್ಷಣ, ವಿದ್ಯಾಭ್ಯಾಸದ ಹಕ್ಕನ್ನು ಪ್ರತಿಪಾದಿಸುತ್ತ ಬಂದಿರುವ ಅವರು, ಹೆಣ್ಣುಮಕ್ಕಳ ಶಿಕ್ಷಣದ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದಾರೆ. 2012ರಲ್ಲಿ ಅವರಿಗೆ ಕೇವಲ 11ವರ್ಷವಾಗಿದ್ದಾಗ ಒಮ್ಮೆ ಸಾರ್ವಜನಿಕವಾಗಿ ಹೆಣ್ಣುಮಕ್ಕಳ ಶಿಕ್ಷಣ ಹಕ್ಕಿನ ಬಗ್ಗೆ ಮಾತನಾಡುದ್ದರು.
ಆಗ ಅವರಿಗೆ ತಾಲಿಬಾನ್ ಉಗ್ರರು ಗುಂಡು ಹೊಡೆದಿದ್ದರು. ತಾಲಿಬಾನಿಗಳು ಮೊದಲಿನಿಂದಲೂ ಹೆಣ್ಣುಮಕ್ಕಳು ಶಿಕ್ಷಣ ಕಲಿಯುವುದನ್ನು ವಿರೋಧಿಸುತ್ತಲೇ ಇದ್ದಾರೆ. ಅಂಥ ತಾಲಿಬಾನಿಗಳ ಕ್ರೌರ್ಯಕ್ಕೂ ಹೆದರದೆ ಮಲಾಲಾ ನಿರ್ಭಿಡೆಯಿಂದ ಮಾತನಾಡಿದ್ದರು. ಅಂದು ಗುಂಡೇಟಿನಿಂದ ಗಾಯಗೊಂಡಿದ್ದ ಮಲಾಲಾರನ್ನು ಬರ್ಮಿಂಗ್ಹ್ಯಾಂ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು. ಗುಣಮುಖರಾದ ಬಳಿಕ ಕೂಡ ಅವರು ಹೆಣ್ಣುಮಕ್ಕಳ ಶಿಕ್ಷಣದ ಬಗೆಗಿನ ಹೋರಾಟವನ್ನೇ ಮುಂದುವರಿಸಿದ್ದಾರೆ. ಅದಾದ ಬಳಿಕ ಯುಕೆಯಲ್ಲಿಯೇ ವಾಸಿಸುತ್ತಿದ್ದಾರೆ.
ಹಿಜಾಬ್ ಧರಿಸಿದ ಕಾರಣಕ್ಕೆ ತಮಗೆ ತರಗತಿಗೆ ಪ್ರವೇಶ ನೀಡುತ್ತಿಲ್ಲ ಎಂದು ಉಡುಪಿಯ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನ ಆರು ಮಂದಿ ವಿದ್ಯಾರ್ಥಿನಿಯರು ಆರೋಪ ಮಾಡುವ ಮೂಲಕ ಹಿಜಾಬ್ ವಿವಾದ ಭುಗಿಲೆದ್ದಿತ್ತು. ಉಡುಪಿ ಹಾಗೂ ಚಿಕ್ಕಮಗಳೂರಿನ ಬಲಪಂಥೀಯ ಸಂಘಟನೆಗಳು, ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಗೆ ಬರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದವು. ಇದೀಗ ಈ ವಿವಾದ ಬಿಜೆಪಿ ಆಡಳಿತದ ಮಧ್ಯಪ್ರದೇಶ ಹಾಗೂ ಪುದುಚೇರಿಗೂ ಹರಡಿದೆ.