ಐಜಿಎಸ್‌ಟಿ ಹಿಂಬಾಕಿ ಕಡಿತ | ಸಿಎಂ ಸಿದ್ದರಾಮಯ್ಯ ಆಕ್ಷೇಪ

ಬೆಂಗಳೂರು: ಎರಡು ರಾಜ್ಯಗಳ ಮಧ್ಯ ನಡೆಯುವ ಸರಕು ಮತ್ತು ಸೇವೆಗಳ ವಹಿವಾಟಿಗೆ ವಿಧಿಸುವ ಸಂಯುಕ್ತ ಸರಕು ಮತ್ತು ಸೇವಾ ತೆರಿಗೆ (ಐಜಿಎಸ್‌ಟಿ) ಹಿಂಬಾಕಿ  ಕಡಿತಕ್ಕೆ ಕೇಂದ್ರ ಸರ್ಕಾರ ಅನುಸರಿಸುತ್ತಿರುವ ವಿಧಾನ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ಷೇಪ ಎತ್ತಿದ್ದಾರೆ. ಆಕ್ಷೇಪ

ಈ ಕುರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಡಿಸೆಂಬರ್-1 ಶುಕ್ರವಾರ ಪತ್ರ ಬರೆದಿರುವ ಅವರು, ‘ರಾಜ್ಯಕ್ಕೆ ಮುಂಗಡವಾಗಿ ಪಾವತಿಸಿದ್ದ ಐಜಿಎಸ್‌ಟಿಯಲ್ಲಿ ಹಿಂಬಾಕಿ ಇದೆ ಎಂಬ ಕಾರಣ ನೀಡಿ 2022ರ ಡಿಸೆಂಬರ್‌ 26ರಂದು ರೂ.798.03 ಕೋಟಿಯನ್ನು ಮರುಹೊಂದಾಣಿಕೆ ಮಾಡಿಕೊಳ್ಳಲಾಗಿತ್ತು. ಈ ರೀತಿ ರಾಜ್ಯಕ್ಕೆ ಸಂದಾಯವಾಗಬೇಕಾದ ತೆರಿಗೆ ಪಾಲನ್ನು ಬಾಕಿ ಹೆಸರಿನಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದರಿಂದ ರಾಜ್ಯಗಳು ಆರ್ಥಿಕವಾಗಿ ಸಮಸ್ಯೆಗೆ ಸಿಲುಕುತ್ತವೆ ಎಂದು ಹೇಳಿದ್ದಾರೆ. ಆಕ್ಷೇಪ

ಇದನ್ನೂ ಓದಿ:ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವ ಕೆಲಸಗಳ ಜೊತೆ ನಮ್ಮ ಸರ್ಕಾರ ನಿಲ್ಲಲಿದೆ| ಸಿಎಂ ಸಿದ್ದರಾಮಯ್ಯ

ರೂ.34,000 ಕೋಟಿಗಳಷ್ಟು ಮೊತ್ತದ ಐಜಿಎಸ್‌ಟಿ ಹಿಂಬಾಕಿ ಇದೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಇಷ್ಟೊಂದು ದೊಡ್ಡ ಮೊತ್ತದ ಹಿಂಬಾಕಿ ಉಳಿಯಲು ಕಾರಣಗಳೇನು? ಈ ರೀತಿ ಬೃಹತ್‌ ಮೊತ್ತದ ಹಿಂಬಾಕಿಯು ರಾಜ್ಯ ಸರ್ಕಾರಗಳ ಹಣಕಾಸು ನಿರ್ವಹಣೆಯ ಮೇಲೆ ಬೀರಬಹುದಾದ ಪರಿಣಾಮಗಳ ಕುರಿತು ಕಳವಳ ಮೂಡಿದೆ ಎಂದು ತಿಳಿಸಿದ್ದಾರೆ.

ಐಜಿಎಸ್‌ಟಿ ಹಿಂಬಾಕಿಯ ಕುರಿತು ಸ್ಪಷ್ಟವಾಗಿ ಅರ್ಥೈಸಿಕೊಳ್ಳಬೇಕಿದೆ. ಈ ಕಾರಣದಿಂದ ಈಗ ಇರುವ ಒಟ್ಟು ಹಿಂಬಾಕಿ ಮತ್ತು ಅದನ್ನು ರಾಜ್ಯಗಳ ಮಧ್ಯೆ ಹಂಚಿಕೆ ಮಾಡುವಲ್ಲಿ ಅನುಸರಿಸುತ್ತಿರುವ ಸೂತ್ರದ ಕುರಿತು ಪಾರದರ್ಶಕವಾಗಿ ಮಾಹಿತಿ ಹಂಚಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

‘ಹಿಂಬಾಕಿಯನ್ನು ಒಂದೇ ಕಂತಿನಲ್ಲಿ ಕಡಿತ ಮಾಡಿಕೊಳ್ಳುವುದರಿಂದ ಆರ್ಥಿಕ ಸಮಸ್ಯೆಗಳು ಉದ್ಭವವಾಗುತ್ತವೆ. ಆದ್ದರಿಂದ ಹಿಂಬಾಕಿಯನ್ನು ಕಂತುಗಳಲ್ಲಿ ಮರುಭರಿಸಲು ಅವಕಾಶ ಕಲ್ಪಿಸಬೇಕು. ರಾಜ್ಯ ಸರ್ಕಾರಗಳ ಆರ್ಥಿಕ ಸ್ಥಿತಿ ಮೇಲೆ ತಕ್ಷಣ ಪರಿಣಾಮಗಳಾಗದಂತೆ ತಡೆಯಲು ಹಿಂಬಾಕಿಯನ್ನು ಹತ್ತು ಕಂತುಗಳಲ್ಲಿ ಕಡಿತ ಮಾಡುವ ಪದ್ಧತಿ ಜಾರಿಗೊಳಿಸಬೇಕು’ ಎಂದು ಒತ್ತಾಯಿಸಿದ್ದಾರೆ.

‘ಈ ಸಮಸ್ಯೆಗಳನ್ನು ಪರಿಹರಿಸಲು ಪಾರದರ್ಶಕ ಮತ್ತು ಸಂಘಟಿತ ಪ್ರಯತ್ನ ನಡೆಸುವುದರಿಂದ ಆರ್ಥಿಕ ವ್ಯವಸ್ಥೆಯನ್ನು ಸುರಕ್ಷಿತವಾಗಿಡಬಹುದು ಎಂಬುದು ನಮ್ಮ ನಂಬಿಕೆ. ಈ ವಿಚಾರದಲ್ಲಿ ತಕ್ಷಣ ಮಧ್ಯ ಪ್ರವೇಶ ಮಾಡಬೇಕು’ ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ. ಆಕ್ಷೇಪ

ವಿಡಿಯೋ ನೋಡಿ: ಕಂಪನಿಗಳಿಂದ ಕಾರ್ಮಿಕರ ಶ್ರಮದ ಲೂಟಿ – ಮೀನಾಕ್ಷಿ ಸುಂದರಂ

Donate Janashakthi Media

Leave a Reply

Your email address will not be published. Required fields are marked *