ಚೆನ್ನೈ: ಕೋವಿಡ್ -19 ಲಸಿಕೆಗಳು ಹಾಗೂ ಇತರ ಔಷಧಿಗಳನ್ನು ರಾಜ್ಯ ಸರ್ಕಾರಗಳೇ ಖರೀದಿಸುತ್ತಿರುವುದರಿಂದ ನಿರ್ದಿಷ್ಟ ಅವಧಿಗೆ ಔಷಧಿಗಳ ಮೇಲಿನ ಜಿಎಸ್‌ಟಿಯನ್ನು ಮನ್ನಾ ಮಾಡಬೇಕೆಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸಿದ್ದಾರೆ.
ತಮಿಳುನಾಡಿಗೆ ಬರಬೇಕಿರುವ ಜಿಎಸ್‌ಟಿ ಬಾಕಿ ಪರಿಹಾರ ಹಾಗೂ ಅಕ್ಕಿ ಸಬ್ಸಿಡಿಯನ್ನು ತಕ್ಷಣ ವಿತರಿಸಬೇಕು. ರಾಜ್ಯದ ಸಾಲ ಮಿತಿಯನ್ನು ರಾಜ್ಯ ಜಿಡಿಪಿಯ 3 ಶೇಕಡಾ ದಿಂದ 4 ಶೇಕಡಕ್ಕೆ ಹೆಚ್ಚಿಸುವುದು ಮತ್ತು ನಷ್ಟವನ್ನು ಸರಿದೂಗಿಸಲು ದೊಡ್ಡ ಮೊತ್ತದ ಅನುದಾನ ಸಹಾಯ ಬಿಡುಗಡೆ ಮಾಡಬೇಕೆಂದು ಮುಖ್ಯಮಂತ್ರಿ ಸ್ಟಾಲಿನ್ ಅವರು ಪ್ರಧಾನಮಂತ್ರಿಗೆ ವಿನಂತಿಸಿಕೊಂಡಿದ್ದಾರೆ.
ಇದನ್ನು ಓದಿ: ಆಮ್ಲಜನಕ ಪೂರೈಸಬೇಕೆಂದು ಪ್ರಧಾನಿಗೆ ಪತ್ರ ಬರೆದ ಕೇರಳ ಸಿಎಂ
ಎಲ್ಲಾ ರಾಜ್ಯಗಳು ಕೋವಿಡ್ ನಿವಾರಣೆಗಾಗಿ ಸಮರೋಪಾಧಿಯಲ್ಲಿ ಲಸಿಕೆಗಳನ್ನು ಹಾಗೂ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡುವ ಔಷಧಿಗಳನ್ನು ಸಂಗ್ರಹಿಸುತ್ತಿವೆ. ಇದನ್ನು ಪರಿಗಣಿಸಿ, ಜಿಎಸ್‌ಟಿ ಕೌನ್ಸಿಲ್ ನೊಂದಿಗೆ ಸಮಾಲೋಚಿಸಿ, ಕೇಂದ್ರವು ಲಸಿಕೆಗಳು ಹಾಗೂ ಔ ಷಧಿಗಳಿಗೆ ನಿರ್ದಿಷ್ಟ ಅವಧಿಗೆ ಶೂನ್ಯ ದರವನ್ನು ನಿಗದಿಪಡಿಸಬೇಕು ಎಂದು ಅಧಿಕೃತ ಹೇಳಿಕೆಯೊಂದ ಮೂಲಕ ತಿಳಿಸಿದ್ದಾರೆ.
ಸರ್ವಪಕ್ಷಗಳ ಸಭೆ ನಡೆಸಿದ ತಮಿಳುನಾಡು ಸಿಎಂ
ಇಂದು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಲಾಕ್‌ಡೌನ್ ಜಾರಿಯಾದ ನಾಲ್ಕು ದಿನಗಳ ಕ್ರಮಗಳ ಬಗ್ಗೆ ಚರ್ಚಿಸಲು ಸರ್ವಪಕ್ಷಗಳ ಸಭೆಯನ್ನು ಕರೆದಿದ್ದರು.
ಇದನ್ನು ಓದಿ: ಆರೋಗ್ಯ ಬಿಕ್ಕಟ್ಟಿನ ನಡುವೆ ಲಸಿಕೆ ಬೆಲೆಯಲ್ಲೂ ಹಗರಣ!
ವಿಧಾನಸಭೆಯ ಎಲ್ಲಾ ಪಕ್ಷಗಳು ಹಾಜರಿದ್ದ ಸಭೆಯಲ್ಲಿ ಮುಖ್ಯಮಂತ್ರಿಗಳು ರಾಜ್ಯದಲ್ಲಿ ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ತೆಗೆದುಕೊಂಡ ಕ್ರಮಗಳ ಬಗ್ಗೆ ವಿವರಣೆ ನೀಡಿದರು. ರಾಜ್ಯದಲ್ಲಿ ಲಾಕ್‌ಡೌನ್ ಜಾರಿಯಲ್ಲಿದ್ದರೂ ಅದರ ದುರುಪಯೋಗ ಪಡಿಸಿಕೊಳ್ಳುತ್ತಿವರು ಸಾಕಷ್ಟು ಮಂದಿ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಅಲ್ಲದೆ, ಜನರು ಅನಾವಶ್ಯಕವಾಗಿ ಓಡಾಡುವುದನ್ನು ಮುಂದುವರೆಸಿದ್ದಾರೆ. ಹಾಗಾಗಿ ಮತ್ತಷ್ಟು ಕಠಿಣವಾದ ನಿರ್ಬಂಧಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಎಂ ಕೆ ಸ್ಟಾಲಿನ್ ಸಭೆಯಲ್ಲಿ ವಿವರಿಸಿದರು.