– ಎಚ್.ಆರ್.ನವೀನ್ ಕುಮಾರ್, ಹಾಸನ
ಕಾರ್ಮಿಕರ ಹಕ್ಕುಗಳನ್ನು ಉಳಿಸಿ ಅವರ ಬೆವರಿಗೆ ತಕ್ಕ ಪ್ರತಿಫಲವನ್ನು ನೀಡಬೇಕಾದ ಪ್ರಭುತ್ವ ಕಾರ್ಮಿಕ ವರ್ಗದ ಶ್ರಮಶಕ್ತಿಯನ್ನು ಅತ್ಯಂತ ಅಗ್ಗವಾಗಿ ಲೂಟಿ ಹೊಡೆದು ಅವರಿಂದ ರಕ್ತ ಬಸಿಸಿದು ಲಾಭ ಮಾಡುವ ಮಾಲೀಕರಿಗೆ ಮತ್ತು ಕಂಪನಿಗಳಿಗೆ ಅನುಕೂಲ ಮಾಡಿಕೊಡುವಂತಹ ರೀತಿಯಲ್ಲಿ ಕಾರ್ಮಿಕ ಕಾನೂನುಗಳನ್ನು ಬದಲಾಯಿಸಿದ್ದ ಕೇಂದ್ರ ಸರ್ಕಾರದ ವಿರುದ್ಧ ಸೆಂಟರ್ ಆಫ್ ಟ್ರೇಡ್ ಯೂನಿಯನ್ CITU ನೇತೃತ್ವದಲ್ಲಿ ದೇಶದ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕ ವರ್ಗ ಈ ರ‍್ಯಾಲಿಯಲ್ಲಿ ಪಾಲ್ಗೊಂಡಿತ್ತು.
ದೆಹಲಿಯ ಸುತ್ತಮುತ್ತ ಸಮುದ್ರ ಇಲ್ಲ ಆದರೂ ದೆಹಲಿಯ ರಾಮಲೀಲಾ ಮೈದಾನ ಕೆಂಪು ಸಮುದ್ರದಂತೆ ಕಾಣುತ್ತಿತ್ತು. ದೇಶದ ವಿವಿಧ ರಾಜ್ಯಗಳಿಂದ ವಾರಗಟ್ಟಲೆ ಸಾವಿರಾರು ಕಿಲೋಮೀಟರ್ ಗಳು ಪ್ರಯಾಣ ಮಾಡಿ ರಾಜಧಾನಿ ದೆಹಲಿಗೆ ಸಾವಿರಾರು ಸಂಖ್ಯೆಯಲ್ಲಿ ರೈತ ಕಾರ್ಮಿಕ ಕೂಲಿಕಾರರು ಕೈಯಲ್ಲಿ ಕೆಂಬಾವುಟ ಹಿಡಿದು ಬಂದಿದ್ದರು. ದೇಶದ ರಾಜಧಾನಿಯ ರಸ್ತೆಗಳಲ್ಲಿ ದೇಶದ ಸಂಪತ್ತನ್ನ ಉತ್ಪಾದಿಸುವ ಶ್ರಮ ಜೀವಿಗಳು ಹೆಜ್ಜೆ ಹಾಕಿದರು. ಬಲವಾಗಿ ಕಟ್ಟಿದ್ದ ಮುಷ್ಟಿಯಲ್ಲಿ ತಮ್ಮ ಬದುಕಿನ ಮತ್ತು ದೇಶದ ಇಂದಿನ ಸ್ಥಿತಿಗೆ ಕಾರಣವಾದವರ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದರು.ಈ ದೃಶ್ಯ ದೆಹಲಿಯ ರಾಮ ಲೀಲಾ ಮೈದಾನದ ಸುತ್ತಮುತ್ತ ಸಾಮಾನ್ಯವಾಗಿತ್ತು.
ಕೇಂದ್ರದಲ್ಲಿ ಅಧಿಕಾರವನ್ನ ನಡೆಸುತ್ತಿರುವ ನರೇಂದ್ರ ಮೋದಿ ಸರ್ಕಾರ ಅನುಸರಿಸಿರುವ ಜನವಿರೋಧಿ ನೀತಿಗಳಿಂದಾಗಿ ಜನರು ಅನುಭವಿಸುತ್ತಿರುವ ಸಂಕಷ್ಟಗಳಿಗೆ ಪರಿಹಾರವನ್ನು ಹುಡುಕುವ ಕೆಲಸ ರೈತ ಕಾರ್ಮಿಕರ ಸಂಘರ್ಷ ರ‌್ಯಾಲಿಯಲ್ಲಿ ನಡೆಯಿತು. ಅನ್ನದಾತ ರೈತನ ಆಧಾಯವನ್ನು ಧ್ವಿಗುಣಗೊಳಿಸುತ್ತೇನೆಂದು ಭರವಸೆಕೊಟ್ಟು ಅಧಿಕಾರಕ್ಕೆ ಬಂದು BJP ಸರ್ಕಾರವು ಕಳೆದ 9 ವರ್ಷಗಳಲ್ಲಿ ದೇಶದ ರೈತರು ಆಧಾಯ ಮತ್ತು ಭೂಮಿಯನ್ನು ಸಂಪೂರ್ಣ ಕಳೆದುಕೊಳ್ಳುವಂತಹ ಕಾರ್ಪೋರೆಟ್ ಪರವಾದ ನೀತಿಗಳನ್ನು ಜಾರಿಗೊಳಿಸುತ್ತಾ ಬಂದಿದ್ದು ಇದರ ವಿರುದ್ಧ ನಿರಂತರವಾಗಿ ದೇಶಾದ್ಯಂತ ಹೋರಾಟಗಳನ್ನು ನಡೆಸುತ್ತಿರುವ ರೈತರು ಅಖಿಲ ಭಾರತ ಕಿಸಾನ್ ಸಭಾ AIKS ನೇತೃತ್ವದಲ್ಲಿ ಅಣಿ ನೆರೆದಿದ್ದರು.
ಕಾರ್ಮಿಕರ ಹಕ್ಕುಗಳನ್ನು ಉಳಿಸಿ ಅವರ ಬೆವರಿಗೆ ತಕ್ಕ ಪ್ರತಿಫಲವನ್ನು ನೀಡಬೇಕಾದ ಪ್ರಭುತ್ವ ಕಾರ್ಮಿಕ ವರ್ಗದ ಶ್ರಮಶಕ್ತಿಯನ್ನು ಅತ್ಯಂತ ಅಗ್ಗವಾಗಿ ಲೂಟಿ ಹೊಡೆದು ಅವರಿಂದ ರಕ್ತ ಬಸಿಸಿದು ಲಾಭ ಮಾಡುವ ಮಾಲೀಕರಿಗೆ ಮತ್ತು ಕಂಪನಿಗಳಿಗೆ ಅನುಕೂಲ ಮಾಡಿಕೊಡುವಂತಹ ರೀತಿಯಲ್ಲಿ ಕಾರ್ಮಿಕ ಕಾನೂನುಗಳನ್ನು ಬದಲಾಯಿಸಿದ್ದ ಕೇಂದ್ರ ಸರ್ಕಾರದ ವಿರುದ್ಧ ಸೆಂಟರ್ ಆಫ್ ಟ್ರೇಡ್ ಯೂನಿಯನ್ CITU ನೇತೃತ್ವದಲ್ಲಿ ದೇಶದ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕ ವರ್ಗ ಈ ರ‍್ಯಾಲಿಯಲ್ಲಿ ಪಾಲ್ಗೊಂಡಿತ್ತು.
ಕೃಷಿಯ ಆಧಾರ ಸ್ಥಂಬವಾಗಿರುವ ಕೂಲಿಕಾರರು ಒಂದೆಡೆ ಕೂಲಿ ಇಲ್ಲದೆ ಮತ್ತೊಂದೆಡೆ ಅತ್ಯಂತ ಕಡಿಮೆ ಕೂಲಿಗೆ ಜೀತದಾಳುಗಳಂತೆ ದುಡಿಯುವ ಪರಿಸ್ಥಿತಿ ಭಾರತದಲ್ಲಿ ನಿರ್ಮಾಣವಾಗಿದೆ. ಇದರ ವಿರುದ್ಧ ಕೂಲಿಕಾರರ ಬದುಕನ್ನ ಹಸನುಮಾಡುವ ನೀತಿಗಳಿಗಾಗಿ ಆಗ್ರಹಿಸಿ ಅಖಿಲ ಭಾರತ ಕೃಷಿ ಕೂಲಿಕಾರರ ಸಂಘ AIAWU ನೇತೃತ್ವದಲ್ಲಿ ಕೂಲಿಕಾರರು ದೊಡ್ಡಸಂಖ್ಯೆಯಲ್ಲಿ ಭಾಗವಹಿಸಿದ್ದರು.
ರೈತ ಕಾರ್ಮಿಕ ಕೂಲಿಕಾರರ ಬೃಹತ್ ಸಂಘರ್ಷ ರ‍್ಯಾಲಿಯಲ್ಲಿ ದೇಶದ ದುಡಿಯುವ ವರ್ಗಕ್ಕೆ ಒಂದು ಆತ್ಮವಿಶ್ವಾಸವನ್ನ ಮೂಡಿಸುವಲ್ಲಿ ಮತ್ತು ಆಳುವ ವರ್ಗಕ್ಕೆಒಂದು ಎಚ್ಚರಿಕೆಯನ್ನು ನೀಡುವಲ್ಲಿ ಯಶಸ್ವಿಯಾಗಿದೆ.
ಏಪ್ರಿಲ್ 5 ರಂದು ನಿಗದಿಯಾಗಿದ್ದ ಈ ಸಂಘರ್ಷ ರ‌್ಯಾಲಿಗೆ ಮೂರು ತಿಂಗಳ ಮೊದಲು ದೆಹಲಿಯಲ್ಲಿ ಜಂಟಿ ಸಮಾವೇಶ ನಡೆದು ರೈತ ಕಾರ್ಮಿಕ ಕೂಲಿಕಾರರ ಪ್ರಶ್ನೆಗಳು ಮತ್ತು ಕೇಂದ್ರ ಸರ್ಕಾರದ ಜನವಿರೋಧಿ ಲೂಟಿಕೋರ ನೀತಿಗಳ ವಿರುದ್ಧ CITU, AIKS, AIAWU ಸಂಘಟನೆಗಳ ನೇತೃತ್ವದಲ್ಲಿ ದೇಶಾದ್ಯಂತ ಹಳ್ಳಿ ಹಳ್ಳಿಗಳಲ್ಲಿ, ಕಾರ್ಖಾನೆಗಳ ಮಟ್ಟದಲ್ಲಿ ಜನವಸತಿ ಪ್ರದೇಶಗಳಲ್ಲಿ ವ್ಯಾಪಕ ಪ್ರಚಾರಾಂದೋಲನವನ್ನು ನಡೆಸಲಾಗಿದೆ. ಇದೆಲ್ಲದರ ಪ್ರತಿಫಲವೇ ದೊಡ್ಡ ಸಂಖ್ಯೆಯಲ್ಲಿ ರೈತರ ಕಾರ್ಮಿಕರು ದೆಹಲಿಯತ್ತ ನದಿಗಳಾಗಿ ಹರಿದು ಬಂದು ರಾಮಲೀಲ ಮೈದಾನದ ಕೆಂಪು ಸಾಗರಕ್ಕೆ ಸೇರಿದರು.
ಏಪ್ರಿಲ್ 4 ರಂದೇ ರಾಮಲೀಲ ಮೈದಾನ ಸೇರಿದಂತೆ ದೆಹಲಿಯ ವಿವಿಧ ಪ್ರದೇಶಗಳಲ್ಲಿ ಜಮಾವಣೆಗೊಳ್ಳಲು ಪ್ರಾರಂಭಿಸಿದ ರೈತ ಕಾರ್ಮಿಕ ಕೂಲಿಕಾರರು ಏಪ್ರಿಲ್ 5 ವೇದಿಕೆಯ ಮೇಲೆ ಮುಖಂಡರ ಮಾತುಗಳು ನಡೆಯುತ್ತಿರುವಾಗಲೂ ಬರುತ್ತಲೇ ಇದ್ದರು.
ದುಡಿಯುವ ವರ್ಗವಾದ ರೈತ ಕಾರ್ಮಿಕರ ಐಕ್ಯತೆಯನ್ನು ಗಟ್ಟಿಗೊಳಿಸಿ ನಮ್ಮೆದುರು ಬಲಿಷ್ಠವಾಗಿ ಬೆಳೆಯುತ್ತಿರುವ ವರ್ಗ ಶತೃವನ್ನ ಮಣಿಸಲು ಈ ಐಕ್ಯತೆ ಅತ್ಯಂತ ಮಹತ್ತರವಾದದ್ದು. ಈ ರೀತಿಯ ಐಕ್ಯ ಕಾರ್ಯಾಚರಣೆಗಳ ಮೂಲಕ ಮಾತ್ರ ದೇಶದ ಇಂದಿನ ಜನವಿರೋಧಿ ನೀತಿಗಳ ವಿರುದ್ಧ ಪರ್ಯಾಯ ಜನಪರ ನೀತಿಗಳನ್ನು ಜನರ ಮುಂದಿಡಲು ಸಾಧ್ಯ. ಇದಕ್ಕಾಗಿಯೇ ಇದು ರಾಷ್ಟ್ರ ಮಟ್ಟದಲ್ಲಿ ಎರಡನೇ ಬೃಹತ್ ಐಕ್ಯ ಚಳುವಳಿಯಾಗಿದ್ದು ತಳಮಟ್ಟದವರೆಗೆ ಈ ಐಕ್ಯತೆಯನ್ನು ಕೊಂಡೊಯ್ಯಲು ಆಮೂಲಕ ಕಾರ್ಪೊರೇಟ್ ಶಕ್ತಿಗಳಿಂದ ರೈತ ಕಾರ್ಮಿಕರು ಮತ್ತು ದೇಶವನ್ನು ರಕ್ಷಿಸಲು ಮಸ್ದೂರ್ ಕಿಸಾನ್ ಸಂಘರ್ಷ ರ‍್ಯಾಲಿಯಲ್ಲಿ ಕರೆ ನೀಡಿತು.