ಬೆಂಗಳೂರು: ಒಳ ಮೀಸಲಾತಿ ಜಾರಿಯಾಗುವವರೆಗೆ ರಾಜ್ಯದಲ್ಲಿ ಯಾವುದೇ ನೇಮಕಾತಿ, ಬಡ್ತಿ ಪ್ರಕ್ರಿಯೆಗೆ ತಡೆ ನೀಡಲಾಗಿದೆ. ಬೆಂಗಳೂರು
ಸರ್ಕಾರವು ಒಳ ಮೀಸಲಾತಿಗೆ ಸಂಬಂಧಿಸಿದಂತೆ ರಚಿಸಲಾಗಿರುವ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ನೇತೃತ್ವದ ಸಮಿತಿ ವರದಿ ನೀಡಿ ಒಳ ಮೀಸಲಾತಿಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವವರೆಗೆ ಯಾವುದೇ ರೀತಿಯ ನೇಮಕಾತಿ, ಬಡ್ತಿ ಸೇರಿ ಇನ್ನಿತರ ಪ್ರಕ್ರಿಯೆಗಳನ್ನು ನಡೆಸದಿರಲು ನಿರ್ಧಾರ ಕೈಗೊಂಡಿದೆ.
ಈ ವಾರದೊಳಗೆ ಮಧ್ಯಂತರ ವರದಿ ನೀಡುವಂತೆ ಸಭೆಯಲ್ಲಿ ಹಾಜರಿದ್ದ ವರದಿ ಹೊಣೆಗಾರಿಕೆ ಹೊಂದಿರುವ ನ್ಯಾಯಮೂರ್ತಿ ನಾಗಮೋಹನದಾಸ್ ಅವರಿಗೆ ಸೂಚಿಸಲಾಗಿದೆ.
ಇದನ್ನೂ ಓದಿ: ಬಳ್ಳಾರಿ| ಕುಡಿಯುವ ನೀರಿನ ಕೊರತೆ: ನದಿಗಳಲ್ಲಿಯೇ ಬೋರ್‌ವೆಲ್
ಬುಧವಾರದೊಳಗೆ ಮಧ್ಯಂತರ ವರದಿ ಸಲ್ಲಿಸಲು ಸೂಚನೆ ನೀಡಲಾಗಿದೆ. ನಂತರ ಸಂಪೂರ್ಣ ಸಮೀಕ್ಷೆ ನಡೆಸಿ ಒಂದು ತಿಂಗಳಲ್ಲಿ ಅಂತಿಮ ವರದಿ ಸಲ್ಲಿಸಲು ನಿರ್ದೇಶಿಸಲಾಗಿದೆ. ಅಂತಿಮ ವರದಿ ಸಂಪುಟದಲ್ಲಿ ಮಂಡಿಸಿ ಅಲ್ಲಿ ಚರ್ಚಿಸಿದ ಬಳಿಕ ಜಾರಿ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು.
ಸೋಮವಾರ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳಲ್ಲಿ ಒಳ ಮೀಸಲಾತಿ ಕಲ್ಪಿಸುವ ಸಂಬಂಧ ಮುಖ್ಯಮಂತ್ರಿಗಳ ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಕುರಿತಾಗಿ ತೀರ್ಮಾನ ಕೈಗೊಳ್ಳಲಾಗಿದೆ. ಒಳ ಮೀಸಲಾತಿ ಜಾರಿಯಾಗುವವರೆಗೆ ಸರ್ಕಾರದ ಇಲಾಖೆ, ನಿಗಮ ಮಂಡಳಿ, ಸರ್ಕಾರಿ ಸಂಸ್ಥೆಗಳಲ್ಲಿ ನೇಮಕಾತಿ, ಬಡ್ತಿ ಪ್ರಕ್ರಿಯೆ ನಡೆಸದಂತೆ ತೀರ್ಮಾನ ಕೈಗೊಳ್ಳಲಾಗಿದೆ.
ಸಭೆಯಲ್ಲಿ ಸಚಿವರಾದ ಡಾ. ಜಿ. ಪರಮೇಶ್ವರ್, ಡಾ. ಹೆಚ್.ಸಿ. ಮಹದೇವಪ್ಪ, ಕೆ.ಹೆಚ್. ಮುನಿಯಪ್ಪ, ಆರ್.ಬಿ. ತಿಮ್ಮಾಪುರ, ಪ್ರಿಯಾಂಕ್ ಖರ್ಗೆ, ಶಿವರಾಜ ತಂಗಡಗಿ, ಸರ್ಕಾರದ ಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್ ಮೊದಲಾದವರು ಇದ್ದರು.
ಇದನ್ನೂ ನೋಡಿ: ವಚನಾನುಭವ – 23 ಅನ್ನವ ನೀಡುವವರಿಂಗೆ ಧಾನ್ಯವೇ ಶಿವಲೋಕ | ಅಕ್ಕಮಹಾದೇವಿ ವಚನ Janashakthi Media