ಬೆಂಗಳೂರು: ರಾಜ್ಯ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಲಕ್ಷಾಂತರ ಆಕಾಂಕ್ಷಿಗಳಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಭರ್ಜರಿ ಸಿಹಿಸುದ್ದಿ ನೀಡಿದೆ. 2026–27ನೇ ಸಾಲಿಗೆ ಕೆಎಎಸ್ ಸೇರಿದಂತೆ ಒಟ್ಟು 319 ಗೆಜೆಟೆಡ್ ಪ್ರೊಬೇಷನರಿ (ಗ್ರೂಪ್ ‘ಎ’ ಮತ್ತು ‘ಬಿ’) ಹುದ್ದೆಗಳ ಭರ್ತಿಗೆ ಆಯೋಗವು ಜುಲೈ 31ರಂದು ಅಧಿಕೃತ ಅಧಿಸೂಚನೆ ಹೊರಡಿಸಲಿದೆ. ಮಾದರಿ
ಜುಲೈ 30ರಂದು ನಡೆದ ತುರ್ತು ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಈ ಬಾರಿ ನೇಮಕಾತಿ ಪ್ರಕ್ರಿಯೆಯನ್ನು ವೇಗವಾಗಿ ಮತ್ತು ಪಾರದರ್ಶಕವಾಗಿ ನಡೆಸಲು ಯುಪಿಎಸ್ಸಿ ಮಾದರಿಯನ್ನು ಅಳವಡಿಸಿಕೊಳ್ಳಲಾಗಿದೆ. ಮಾದರಿ
ಒಟ್ಟು 319 ಹುದ್ದೆಗಳ ಪೈಕಿ 117 ಗ್ರೂಪ್ ‘ಎ’ ಮತ್ತು 202 ಗ್ರೂಪ್ ‘ಬಿ’ ಹುದ್ದೆಗಳಿವೆ. ಪ್ರಮುಖ ಹುದ್ದೆಗಳಲ್ಲಿ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರು (50), ಕಾರ್ಯನಿರ್ವಾಹಕ ಅಧಿಕಾರಿ (15), ತಹಶೀಲ್ದಾರ್ ಗ್ರೇಡ್-2 (25), ವಾಣಿಜ್ಯ ತೆರಿಗೆ ಅಧಿಕಾರಿ (74) ಮತ್ತು ಮುಖ್ಯಾಧಿಕಾರಿ ಗ್ರೇಡ್-1 (20) ಹುದ್ದೆಗಳು ಸೇರಿವೆ.
ಇದನ್ನೂ ಓದಿ: ಐಶೆ ಘೋಷ್ಗೆ ಕೋರ್ಟ್ ರಿಲೀಫ್: 2021ರ ಪ್ರತಿಭಟನೆ ಪ್ರಕರಣದ ಜಾಮೀನು ರಹಿತ ವಾರಂಟ್ ರದ್ದು
ಅಭ್ಯರ್ಥಿಗಳು ಆಗಸ್ಟ್ 1ರಿಂದ ಆಗಸ್ಟ್ 30ರವರೆಗೆ ಕೆಪಿಎಸ್ಸಿ ಅಧಿಕೃತ ಜಾಲತಾಣದ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಮೀಸಲಾತಿ ನಿಯಮಗಳ ಪ್ರಕಾರ ಹುದ್ದೆಗಳ ವರ್ಗೀಕರಣ ಮಾಡಲಾಗಿದೆ.
ಈ ಬಾರಿ ನೇಮಕಾತಿ ಪ್ರಕ್ರಿಯೆಯನ್ನು ಕೇವಲ 10 ತಿಂಗಳಲ್ಲಿ ಪೂರ್ಣಗೊಳಿಸಲು ಆಯೋಗ ಸ್ಪಷ್ಟ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಪೂರ್ವಭಾವಿ ಪರೀಕ್ಷೆ 2026ರ ನವೆಂಬರ್ 15ರಂದು ನಡೆಯಲಿದ್ದು, ಡಿಸೆಂಬರ್ 15ರಂದು ಫಲಿತಾಂಶ ಪ್ರಕಟವಾಗಲಿದೆ. ಮುಖ್ಯ ಪರೀಕ್ಷೆಗಳು 2027ರ ಫೆಬ್ರವರಿ 12, 14, 16 ಮತ್ತು 18ರಂದು ನಡೆಯಲಿದ್ದು, ಏಪ್ರಿಲ್ 27ರಂದು ಫಲಿತಾಂಶ ಪ್ರಕಟವಾಗಲಿದೆ. ಮೇ 10ರಿಂದ 31ರವರೆಗೆ ಸಂದರ್ಶನ ನಡೆಯಲಿದ್ದು, ಜೂನ್ 5ರಂದು ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟವಾಗಲಿದೆ.
ಪಾರದರ್ಶಕತೆ ಕಾಯ್ದುಕೊಳ್ಳಲು ಈ ಬಾರಿ ಹೈ-ರೆಸಲ್ಯೂಶನ್ ಸಿಸಿಟಿವಿ, ಫೇಶಿಯಲ್ ರೆಕಗ್ನಿಷನ್ ತಂತ್ರಜ್ಞಾನ, ಮೊಬೈಲ್ ಜಾಮರ್ಗಳು ಸೇರಿದಂತೆ ಹಲವು ಹೈಟೆಕ್ ಭದ್ರತಾ ಕ್ರಮಗಳನ್ನು ಜಾರಿಗೆ ತರಲಾಗಿದೆ. ಪರೀಕ್ಷಾ ನಂತರ ಉತ್ತರ ಪತ್ರಿಕೆಗಳನ್ನು ನೇರವಾಗಿ ಪೊಲೀಸ್ ಭದ್ರತೆಯಲ್ಲಿ ಆಯೋಗದ ಕಚೇರಿಗೆ ಸಾಗಿಸಿ ತಕ್ಷಣ ಸ್ಕ್ಯಾನಿಂಗ್ ಪ್ರಕ್ರಿಯೆ ಆರಂಭಿಸಲಾಗುತ್ತದೆ.
ಈ ಕ್ರಮಗಳ ಮೂಲಕ ನೇಮಕಾತಿ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮಗಳಿಗೆ ಅವಕಾಶ ನೀಡದಂತೆ ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ಇದನ್ನೂ ನೋಡಿ: ಕನಿಷ್ಠ ವೇತನ ಪುನರ್ಪರಿಶೀಲಿಸಿದರೆ ಸರ್ಕಾರಕ್ಕೆ ಪಾಠ ಕಲಿಸುತ್ತೇವೆ! | ಕಾರ್ಮಿಕರ ಎಚ್ಚರಿಕೆ Janashakthi Media
