ಬೆಂಗಳೂರು | ತೇಜಸ್ವಿ ಜೀವನದ ಸ್ಮರಣೆಗೆ ಹೂವಿನ ಹಬ್ಬ: ದಾಖಲೆ 8.10 ಲಕ್ಷ ಮಂದಿಯಿಂದ ವೀಕ್ಷಣೆ

ಬೆಂಗಳೂರು: ಜನವರಿ 15 ರಿಂದ ನಡೆದ ರಾಷ್ಟ್ರ ಕವಿ ಕುವೆಂಪು ಅವರ ಮಗ ಖ್ಯಾತ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಜೀವನ ಕುರಿತ ವಿಷಯ ವಸ್ತುವನ್ನಾಧರಿಸಿ  ಗಣರಾಜ್ಯೋತ್ಸವದ ಪ್ರಯುಕ್ತ ಲಾಲ್ ಬಾಗ್ ಗಾಜಿನ ಮನೆಯಲ್ಲಿ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನ ಸೋಮವಾರ ತೆರೆ ಕಂಡಿದ್ದು, ಮಕ್ಕಳು ಸೇರಿದಂತೆ ಒಟ್ಟು 8.10 ಲಕ್ಷ ಮಂದಿ ವೀಕ್ಷಣೆ ಮಾಡಿದ್ದಾರೆ.

ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಲಾಲ್ ಬಾಗ್​ಗೆ ಪ್ರವೇಶಿಸುವುದರಿಂದ 2.46 ಲಕ್ಷ ರೂ.ಗಳು ಮತ್ತು ಪ್ರದರ್ಶನದ ಪ್ರಾರಂಭಿಸಿದ್ದ ವಿವಿಧ ಮಳಿಗೆಗಳಿಂದ 28 ಲಕ್ಷ ರೂಪಾಯಿ ಸೇರಿದಂತೆ ಒಟ್ಟು 2.74 ಕೋಟಿ ರೂಪಾಯಿ ಹಣ ಸಂಗ್ರಹವಾಗಿದೆ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತೇಜಸ್ವಿ ಜೀವನ ಕುರಿತ ಫಲಪುಷ್ಪ ಪ್ರದರ್ಶನವನ್ನು 85 ಸಾವಿರ ಮಕ್ಕಳು, 2.08 ಲಕ್ಷ ಶಾಲಾ ಮಕ್ಕಳು ಸೇರಿ ಉಟ್ಟು 2.93 ಲಕ್ಷ ಮಕ್ಕಳು ಪ್ರದರ್ಶನವನ್ನು ವೀಕ್ಷಿಸಿದ್ದಾರೆ, ಆ ಮೂಲಕ ಮಕ್ಕಳು ಕನ್ನಡ ಸಾಹಿತ್ಯದ ಅರಿವು ಮತ್ತು ವೈಜ್ಞಾನಿಕ ಚಿಂತನೆಗಳನ್ನು ಬೆಳೆಸಿಕೊಳ್ಳುವುದಕ್ಕೆ ಪ್ರಯತ್ನ ಮಾಡಿದ್ದಾರೆ.

ಇದನ್ನೂ ಓದಿ : ಬೆಂಗಳೂರು | ಫಕೀರ್‌ ಕಾಲೋನಿ, ಕೋಗಿಲು ಲೇಔಟ್‌ ನಲ್ಲಿ ಬಡವರ ಗಣರಾಜ್ಯೋತ್ಸವ ಆಚರಣೆ

ತೇಜಸ್ವಿ ಕುರಿತ ಪ್ರದರ್ಶನದ ಹಿನ್ನೆಲೆಯಲ್ಲಿ ಸಾವಿರಾರು ಮಂದಿ ಕನ್ನಡ ಸಾಹಿತ್ಯಾಸಕ್ತರು ಮತ್ತು ಚಲನಚಿತ್ರ ಪ್ರೇಮಿಗಳು ಆಗಮಿಸಿದ್ದರು. ಪರಿಣಾಮ ಪ್ರದರ್ಶನದಲ್ಲಿ ಅವರ ಪುಸ್ತಕಗಳು ಮಾರಾಟವಾಗಿವೆ. ವೈಜ್ಞಾನಿಕ ಲೇಖಕರೂ ಆಗಿದ್ದ ತೇಜಸ್ವಿ ಅವರು ಹಲವು ಪುಸ್ತಕಗಳನ್ನು ಬರೆದಿದ್ದಾರೆ. ಹಾರುವ ಓತಿಯ ಬೆನ್ನು ಹತ್ತಿ ಬರೆದಿರುವ ಕರ್ವೋಲೊ ಕಾದಂಬರಿ ವೈಜ್ಞಾನಿಕ ತಳಹದಿಯನ್ನು ಹೊಂದಿದೆ. ಅಬಚೂರಿನ ಪೋಸ್ಟ್ ಆಫೀಸು, ತಬರನ ಕತೆ ಮತ್ತು ಕಿರುಗೂರಿನ ಗಯ್ಯಾಳಿಗಳು ಪುಸ್ತಕಗಳನ್ನು ಚಲನಚಿತ್ರಗಳನ್ನು ಮಾಡಲಾಗಿದೆ.

ಹಲವು ಮಂದಿ ಕರ್ವೋಲೋ ಪುಸ್ತಕವನ್ನು ಕೇಳಿ ಬರೀ ಕೈಯಲ್ಲಿ ಮನೆಗೆ ಹಿಂದಿರುಗಿದರು ಎಂದು ತೋಟಗಾರಿಕೆ ಇಲಾಖೆ ಅಪರ ನಿರ್ದೇಶಕ ಡಾ.ಎಂ.ಜಗದೀಶ್ ಈಟಿವಿ ಭಾರತಕ್ಕೆ ಮಾಹಿತಿ ನೀಡಿದರು. ತೇಜಸ್ವಿಯವರ ವೈಜ್ಞಾನಿಕ ಕಾದಂಬರಿ ಕರ್ವೋಲೋ ಒಂದೇ ಪುಸ್ತಕದ 3200ಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗಿದ್ದು, ಕಳೆದ ಎರಡು ದಿನಗಳಿಂದ ಸ್ಟಾಕ್ ಇಲ್ಲದಂತಾಗಿತ್ತು.

ಮಳಿಗೆಗಳಲ್ಲೂ ಪೇಪರ್ ಬ್ಯಾಗ್, ಬಾಳೆ ಎಲೆ, ಅಡಿಕೆ ಪಟ್ಟೆಗಳನ್ನು ಬಳಕೆ ಮಾಡಿದ್ದರು. ಇದರಿಂದ ಉದ್ಯಾನದಲ್ಲಿ ಸಾವಯವ ತ್ಯಾಜ್ಯ ಮಾತ್ರವೇ ದೊರೆತಿದ್ದು, ಸುಮಾರು 2 ಟನ್ ಗೂ ಹೆಚ್ಚು ತ್ಯಾಜ್ಯ ಸಂಗ್ರವಾಗಿದೆ. ಪ್ರಸಕ್ತ ಅವಧಿಯ ಫಲಪುಷ್ಪ ಪ್ರದರ್ಶನದಲ್ಲಿ ಪ್ಲಾಸ್ಟಿಕ್ ಬಳಕೆಗೆ ಸಂಪೂರ್ಣ ನಿಷೇಧ ಹೇರಲಾಗಿತ್ತು. ಈ ತ್ಯಾಜ್ಯವನ್ನು ಮಣ್ಣಿನಲ್ಲಿ ಬೆರೆಸಿದಲ್ಲಿ ಗೊಬ್ಬರವಾಗಿ ಪರಿವರ್ತನೆಗೊಂಡು ಉದ್ಯಾನದಲ್ಲಿ ಬಳಕೆಗೆ ಸಾಧ್ಯವಾಗಲಿದೆ ಎಂದು ಅವರು ವಿವರಿಸಿದರು.

ತೇಜಸ್ವಿ ಕುರಿತ ಫಲಪುಷ್ಪ ಪ್ರದರ್ಶನದ ಅಂತಿಮ ದಿನವಾದ ಸೋಮವಾರ ಕುವೆಂಪು ಅವರ ಮಗಳು ತಾರಣಿ ಹಾಗೂ ಅಳಿಯ ಚಿದಾನಂದಗೌಡ, ಎರಡನೇ ಮಗಳು ಇಂದುಕಲಾ ಅವರ ಪುತ್ರಿ, ತೇಜಸ್ವಿ ಅವರ ಕೆ.ಪಿ. ಸುಸ್ಮಿತಾ ಹಾಗೂ ಕೆ.ಪಿ. ಈಶಾನ್ಯೆ ದಂಪತಿ ಮತ್ತು ಮಕ್ಕಳು ಕುಟುಂಬ ಸಮೇತರಾಗಿ ಪ್ರದೇಶನವನ್ನು ವೀಕ್ಷಣೆ ಮಾಡಿದರು.

ಇದನ್ನೂ ನೋಡಿ : ಲಾಲ್‌ಬಾಗ್‌ ಫ್ಲವರ್‌ ಶೋ| ಬಣ್ಣಬಣ್ಣದ ಹೂಗಳ ಚಿತ್ತಾರದಲ್ಲಿ ‘ತೇಜಸ್ವಿ ವಿಸ್ಮಯ’ Janashakthi Media

Donate Janashakthi Media

Leave a Reply

Your email address will not be published. Required fields are marked *