ಠೇವಣಿದಾರರು ತಮ್ಮ ಖಾತೆಯ 50 ಸಾವಿರ ರೂ.ಗಳನ್ನು ಮಾತ್ರ ಹಿಂಪಡೆಯಬಹುದಾಗಿದೆ ದಿ ನ್ಯಾಷನಲ್ ಕೋ-ಆಪರೇಟೆವ್ ಬ್ಯಾಂಕ್
ಬೆಂಗಳೂರು: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಜುಲೈ 24 ರಂದು ಬೆಂಗಳೂರು ಮೂಲದ ‘ದಿ ನ್ಯಾಷನಲ್ ಕೋ-ಆಪರೇಟೆವ್ ಬ್ಯಾಂಕ್ ಲಿಮಿಟೆಡ್’ಗೆ ನಿರ್ಬಂಧಗಳನ್ನು ವಿಧಿಸಿದ್ದು, ಪ್ರತಿ ಖಾತೆಗೆ 50,000 ರೂ.ಗೆ ಠೇವಣಿ ಹಿಂಪಡೆಯುವಿಕೆಯನ್ನು ಮಿತಿಗೊಳಿಸಿದೆ. ಬ್ಯಾಂಕಿನ ದುರ್ಬಲ ಆರ್ಥಿಕ ಸ್ಥಿತಿಯ ಕಾರಣಕ್ಕೆ ಆರ್‌ಬಿಐ ಈ ಕ್ರಮ ಕೈಗೊಂಡಿದೆ ಎಂದು ವರದಿಯಾಗಿದೆ.
ಪೂರ್ವಾನುಮತಿಯಿಲ್ಲದೆ ಹೊಸ ಸಾಲಗಳನ್ನು ನೀಡಲು ಅಥವಾ ಹೊಸ ಠೇವಣಿಗಳನ್ನು ಸ್ವೀಕರಿಸಲು ದಿ ನ್ಯಾಷನಲ್ ಕೋ-ಆಪರೇಟೆವ್ ಬ್ಯಾಂಕ್‌ಗೆ ಅನುಮತಿಸಲಾಗುವುದಿಲ್ಲ ಎಂದು ಆರ್‌ಬಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಠೇವಣಿದಾರರು ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಶನ್‌ನಿಂದ 5 ಲಕ್ಷ ರೂ.ವರೆಗಿನ ಠೇವಣಿ ವಿಮಾ ಕ್ಲೈಮ್ ಮೊತ್ತವನ್ನು ಸ್ವೀಕರಿಸಲು ಅರ್ಹರಾಗಿರುತ್ತಾರೆ ಎಂದು ಆರ್‌ಬಿಐ ಹೇಳಿದೆ.
ಇದನ್ನೂ ಓದಿ: ಕಾರ್ಮಿಕ ಸಂಘಟನೆಗಳ ವಿರೋಧ : ಬ್ಯಾಂಕ್ ಖಾಸಗೀಕರಣಕ್ಕೆ ತಡೆ
ಆದಾಗ್ಯೂ, ಬ್ಯಾಂಕಿನ ಮೇಲೆ ಹೇರಲಾದ ಈ ನಿರ್ಬಂಧ ಬ್ಯಾಂಕಿಂಗ್ ಪರವಾನಗಿಯ ರದ್ದತಿಯಲ್ಲ, ಬ್ಯಾಂಕ್ ತನ್ನ ಆರ್ಥಿಕ ಸ್ಥಿತಿ ಸುಧಾರಿಸುವವರೆಗೆ ನಿರ್ಬಂಧಗಳೊಂದಿಗೆ ಬ್ಯಾಂಕಿಂಗ್ ವ್ಯವಹಾರವನ್ನು ಕೈಗೊಳ್ಳುವುದನ್ನು ಮುಂದುವರಿಸುತ್ತದೆ ಎಂದು ಆರ್‌ಬಿಐ ಹೇಳಿದೆ.
ರಿಸರ್ವ್ ಬ್ಯಾಂಕ್ ಸಂದರ್ಭಗಳಿಗೆ ಅನುಗುಣವಾಗಿ ಈ ನಿರ್ದೇಶನಗಳ ಮಾರ್ಪಾಡುಗಳನ್ನು ಪರಿಗಣಿಸಬಹುದಾಗಿದೆ. 2023ರ ಜುಲೈ 24ರಿಂದ ಆರು ತಿಂಗಳ ಅವಧಿಗೆ ವ್ಯಾಪಾರ ನಿರ್ಬಂಧಗಳನ್ನು ವಿಧಿಸಲಾಗಿದ್ದು, ಬ್ಯಾಂಕ್ ಪರಿಶೀಲನೆಗೆ ಒಳಪಟ್ಟಿರುತ್ತದೆ ಎಂದು ಆರ್‌ಬಿಐ ಹೇಳಿದೆ.
ಲಭ್ಯವಿರುವ ಕೊನೆಯ ವಾರ್ಷಿಕ ವರದಿಯ ಪ್ರಕಾರ, ನ್ಯಾಷನಲ್ ಸಹಕಾರಿ ಬ್ಯಾಂಕ್ 2021ರ ಮಾರ್ಚ್ 31 ರಂತೆ ಒಟ್ಟು ರೂ 1,679 ಕೋಟಿ ಠೇವಣಿ ಮತ್ತು ರೂ. 1,128 ಕೋಟಿ ಸಾಲಗಳನ್ನು ಹೊಂದಿದೆ. ಆ ದಿನಾಂಕದ ನಂತರ ಮಾಹಿತಿ ಲಭ್ಯವಿಲ್ಲ ಎಂದು ಮನಿಕಂಟ್ರೋಲ್.ಕಾಮ್ ವರದಿ ಮಾಡಿದೆ.
ಇದನ್ನೂಓದಿ: ಗ್ರಾಮೀಣ ಕುಡಿಯುವ ನೀರು ಸರಬರಾಜಿಗೆ ವಿಶ್ವಬ್ಯಾಂಕ್‌ನಿಂದ 3,000 ಕೋಟಿ ರೂ. ನೆರವು
ಅಲ್ಲದೆ, 2021ರ ಮಾರ್ಚ್ 31 ರಂತೆ ಬ್ಯಾಂಕಿನ ನಿವ್ವಳ ಅನುತ್ಪಾದಕ ಸ್ವತ್ತುಗಳು 27.81%ದಷ್ಟಿದ್ದರೆ, ವಾರ್ಷಿಕ ವರದಿಯ ಪ್ರಕಾರ ಅದು 12.12% ಬಂಡವಾಳದ ಸಮರ್ಪಕತೆಯ ಅನುಪಾತವನ್ನು ಹೊಂದಿದೆ. ಬೆಂಗಳೂರಿನ ವಿವಿಧ ಭಾಗಗಳಲ್ಲಿ ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್ ಸುಮಾರು 13 ಶಾಖೆಗಳನ್ನು ಹೊಂದಿದೆ.
ಜನಶಕ್ತಿ ಮೀಡಿಯಾ ಜೊತೆಗೆ ಮಾತನಾಡಿದ ಬ್ಯಾಂಕಿನ ಠೇವಣಿದಾರ ಬಸವನಗುಡಿಯ ರಾಜಶೇಖರ್ ಅವರು, “ನನ್ನ ಮಗುವಿನ ಶಾಲಾ ಫೀಸ್‌ಗೆ ಎಂದು ಉಳಿಸಿದ್ದ 1.5 ಲಕ್ಷ ರೂ.ಗಳನ್ನು ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿದ್ದೆ. ಇದೀಗ ಆರು ತಿಂಗಳವರೆ ಒಂದು ಬಾರಿ ಮಾತ್ರ, ಅದೂ 50 ಸಾವಿರ ಮಾತ್ರ ಹಿಂಪಡೆಯಬಹುದು ಎಂದು ಬ್ಯಾಂಕ್‌ನ ಸಿಬ್ಬಂದಿಗಳು ಹೇಳುತ್ತಿದ್ದಾರೆ. ಈ ನಮ್ಮ ಮಗುವಿನ ಶಾಲಾ ಫೀಸ್‌ಗೆ ಏನು ಮಾಡಬೇಕು. ಇದಕ್ಕೆಲ್ಲಾ ಯಾರು ಹೊಣೆ?” ಎಂದು ಪ್ರಶ್ನಿಸುತ್ತಾರೆ.
“ನಮಗೇನೂ ದಾರಿ ತೋಚುತ್ತಿಲ್ಲ. ಬ್ಯಾಂಕ್‌ನವರು ಆರ್‌ಬಿಐ ನಿರ್ಬಂಧ ಹೇರಿದ್ದಾರೆ ಎಂದು ಹೇಳುತ್ತಿದ್ದಾರೆ. ನಾವು ಕಷ್ಟಪಟ್ಟು ದುಡಿದು ಒಂದೊಂದು ರುಪಾಯಿ ಕೂಡಿಟ್ಟು ಬ್ಯಾಂಕಿಗೆ ಕಟ್ಟಿದ್ದೆವು. ‘ನಾವು ಕೊಟ್ಟಿರುವ ಸಾಲ ಸರಿಯಾಗಿ ರಿಕವರಿ ಆಗಿಲ್ಲ. ಹಾಗಾಗಿ ಈ ನಿರ್ಬಂಧ ಹೇರಲಾಗಿದೆ’ ಎಂದು ಬ್ಯಾಂಕ್ ಕಡೆಯವರು ಹೇಳುತ್ತಿದ್ದಾರೆ. ಆದರೆ ನಮ್ಮ ಮಗುವಿನ ಭವಿಷ್ಯಕ್ಕಾಗಿ ಕೂಡಿಟ್ಟ ಹಣಕ್ಕಾಗಿ ನಾವು ಏನು ಮಾಡಬೇಕು” ಎಂದು ರಾಜಶೇಖರ್ ಕೇಳುತ್ತಾರೆ. ರಾಜಶೇಖರ್ ಅವರು ಮನೆಮನೆಗೆ ನೀರು ಮತ್ತು ಹಾಲನ್ನು ತಲುಪಿಸುವ ದುಡಿಮೆಯಲ್ಲಿದ್ದಾರೆ.
ವಿಡಿಯೊ ನೋಡಿ: ಬೇಟಿ ಬಚಾವೋ ಅಂದ್ರೆ ಬೆತ್ತಲೆ ಮಾಡೋದಾ ಪ್ರಧಾನಿಗಳೆ? ಕೇಂದ್ರದ ವಿರುದ್ದ ಕೆರಳಿದ ಪ್ರತಿಭಟನೆಕಾರರು