ಬೆಂಗಳೂರು: ‘ಆರ್.ಬಿ. ಮೋರೆ ಮೊದಲ ದಲಿತ ಕಮ್ಯುನಿಸ್ಟ್’ ಅವರ ಸ್ವ-ಚರಿತ್ರೆ ಮತ್ತು ಜೀವನ ಚರಿತ್ರೆಯ ಕನ್ನಡ ಅನುವಾದ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ‘ಅಂಬೇಡ್ಕರ್, ಮೋರೆ ಮತ್ತು ಇಂದಿನ ಸಮರಶೀಲ ಚಳವಳಿ: ಸವಾಲುಗಳು, ಸಾಧ್ಯತೆಗಳು’ ವಿಚಾರ ಸಂಕಿರಣದಲ್ಲಿ ಅಖಿಲ ಭಾರತ ಕಿಸಾನ್ ಸಭಾ ಅಧ್ಯಕ್ಷ ಅಶೋಕ ಧವಳೆ ಮಾತನಾಡಿದರು.
‘ದಲಿತ ಚಳವಳಿ ಮತ್ತು ಕಮ್ಯುನಿಸ್ಟ್ ಚಳವಳಿಗಳ ನಡುವಿನ ಸೇತುವೆಯಂತೆ ಆರ್.ಬಿ. ಮೋರೆ ಇದ್ದರು’ ಎಂದು ತಿಳಿಸಿದರು.
‘ಅಂಬೇಡ್ಕರ್ ಅಭಿಮಾನಿಯಾಗಿದ್ದ ಮೋರೆ, ಅಂಬೇಡ್ಕರ್ ನಡೆಸಿದ ಮಹಾಡ್ ಕೆರೆ ಚಳವಳಿಯ ರೂವಾರಿ ಆಗಿದ್ದರು. ಅಂಬೇಡ್ಕರ್ ಮನುಸ್ಮೃತಿಯನ್ನು ಸಾರ್ವಜನಿಕವಾಗಿ ಸುಟ್ಟಾಗ, ಕಾಳಾರಾಂ ದೇವಸ್ಥಾನ ಪ್ರವೇಶ ಆಂದೋಲನ ನಡೆಸಿದಾಗ ಅವರ ಬಲಗೈಯಂತೆ ಮೋರೆ ಕೆಲಸ ಮಾಡಿದ್ದರು. ಮೋರೆಗೆ ಜಾತಿ ಸಮಸ್ಯೆಯ ಬಗೆಗಿನ ಪ್ರಜ್ಞೆ ಇದ್ದಷ್ಟೇ ವರ್ಗ ಪ್ರಜ್ಞೆಯೂ ಇತ್ತು’ ಎಂದು ನೆನಪು ಮಾಡಿಕೊಂಡರು.
ಹೃದಯದಲ್ಲಿ ಅಂಬೇಡ್ಕರ್ ಸಿದ್ಧಾಂತ ಇರುವವರು ಬಿಜೆಪಿ, ಆರ್‌ಎಸ್‌ಎಸ್‌ಗೆ ಸೇರುವುದು ಬಿಡಿ, ಅವರ ಹತ್ತಿರವೂ ಕುಳಿತುಕೊಳ್ಳುವುದಿಲ್ಲ. ಆದರೆ, ಇಂದು ಬಾಯಲ್ಲಿ ಅಂಬೇಡ್ಕರ್ ಮಾತನಾಡುತ್ತಾ ಬಿಜೆಪಿಯೊಂದಿಗೆ ಕೈಜೋಡಿಸುವವರು ಹೆಚ್ಚಾಗಿದ್ದಾರೆ ಎಂದರು.
ಇದನ್ನೂ ಓದಿ: ಮಹಾರಾಷ್ಟ್ರ: ಇಂಡಿಯಾ ಕೂಟ ಮತ್ತೆ ಜಯಭೇರಿ ಬಾರಿಸುವುದೆ?
ಬರಹಗಾರ ಬಂಜಗೆರೆ ಜಯಪ್ರಕಾಶ್ ಮಾತನಾಡಿ, ‘ಸಮಗ್ರ ಕ್ರಾಂತಿಯ ಹೊರತಾಗಿ ಜಾತಿ ರಹಿತ ಸಮಾಜ ಸೃಷ್ಟಿಸಲು ಸಾಧ್ಯವಿಲ್ಲ ಎಂದು ದಲಿತರಿಗೆ ಹೇಳುತ್ತಿದ್ದ ಮೋರೆಯವರು, ಜಾತಿಯನ್ನು ಅರ್ಥ ಮಾಡಿಕೊಂಡು ಕಾರ್ಯಕ್ರಮ ರೂಪಿಸದೇ ಇದ್ದರೆ ಪಕ್ಷ ಬೆಳೆಯಲು ಸಾಧ್ಯವಿಲ್ಲ ಎಂದು ಕಮ್ಯುನಿಸ್ಟರಿಗೂ ಹೇಳುತ್ತಿದ್ದರು. ದಲಿತರಿಗೂ ಕಮ್ಯುನಿಸ್ಟರಿಗೂ ಕನ್ನಡಿ ಹಿಡಿದಂತಿರುವ ಈ ಪುಸ್ತಕವನ್ನು ಎರಡೂ ಕಡೆಯವರು ಓದಬೇಕು’ ಎಂದರು.
‘ಒಟ್ಟಿಗೆ ಸಾಗಬೇಕಿದ್ದ ದಲಿತ ಮತ್ತು ಕಮ್ಯುನಿಸ್ಟ್ ಚಳವಳಿಗಳು ಪರಸ್ಪರ ಅಪನಂಬಿಕೆಯಿಂದ ವಿರೋಧಿಸಿಕೊಂಡೇ ಬಹಳ ಸಮಯದ ಬಂದಿದ್ದರಿಂದ ಅತ್ತ ಜಾತಿ ವಿಮೋಚನೆಯೂ ಆಗಲಿಲ್ಲ, ಇತ್ತ ಸಮಗ್ರ ಕ್ರಾಂತಿಯೂ ಆಗಲಿಲ್ಲ’ ಎಂದು ಹೇಳಿದರು.
ಅನುವಾದಕ ಅಬ್ದುಲ್ ರೆಹಮಾನ್ ಪಾಷಾ, ಹೋರಾಟಗಾರರಾದ ಇಂದಿರಾ ಕೃಷ್ಣಪ್ಪ, ಗೋಪಾಲಕೃಷ್ಣ ಹರಳಹಳ್ಳಿ, ಆರ್. ಮೋಹನ್‌ರಾಜ್, ಸುಬ್ಬು ಹೊಲೆಯಾರ್, ಎನ್. ನಾಗರಾಜ್, ಕ್ರಿಯಾ ಮಾಧ್ಯಮದ ವಸಂತರಾಜ್ ಎನ್.ಕೆ, ಕೆ.ಎಸ್. ವಿಮಲಾ ಭಾಗವಹಿಸಿದ್ದರು.