ರಾತ್ರಿ ಪಾಳಿಯ ಕೆಲಸದಲ್ಲಿ ದುಡಿಯುವ ಮಹಿಳೆಯರ ಸಂಕಷ್ಟಗಳು

ಹೆಚ್.ಎಸ್.ಸುನಂದ

ದುಡಿಯುವ ಮಹಿಳೆಯರನ್ನು ರಾತ್ರಿ ಪಾಳಿಯಲ್ಲಿ ದುಡಿಸಿಕೊಳ್ಳಲು ಅವಕಾಶ ಕಲ್ಪಿಸಿ ಕಾರ್ಖಾನೆ ಕಾಯ್ದೆ 1948 ಕ್ಕೆ ತಿದ್ದುಪಡಿ ಮಾಡಿ ವಿಧೇಯಕ 2023ನ್ನು ಬಂಡವಾಳಗಾರರ ಲಾಭಕ್ಕಾಗಿ ಮಾಲೀಕರ ಪರ ರಾಜ್ಯ ಬಿ.ಜೆ.ಪಿ. ಸರ್ಕಾರ ವಿದಾನಸಭೆಯಲ್ಲಿ ಮಂಡಿಸಿತು. ದುಡಿಯುವ ಜನತೆಯ ಹಾಗೂ ಕಾರ್ಮಿಕ ಸಂಘಟನೆಗಳಿಗೂ ಚರ್ಚಿಸಲು ಅವಕಾಶ ನೀಡದೇ ವಿದಾನ ಸಭೆಯಲ್ಲಿಯೇ ವಿರೋಧ ವ್ಯಕ್ತಪಡಿಸಿದರು ಲೆಕ್ಕಿಸದೇ ಏಕ ಪಕ್ಷೀಯವಾಗಿ ಅಂಗೀಕರಸಿರುವುದು ಬಿ.ಜೆ.ಪಿ. ಸರ್ಕಾರದ ಮಹಿಳಾ ವಿರೋಧಿ ನಡೆಯಾಗಿದೆ.

ಈಗಾಗಲೇ ಕೋವಿಡ್ ಸಂದರ್ಭದಲ್ಲಿ ಉದ್ಯೋಗ ಕಡಿತಮಾಡಿ ಮತ್ತೆ ಕಡಿಮೆ ವೇತನಕ್ಕೆ ದುಡಿಸಿಕೊಂಡು ಅಧಿಕ ಉತ್ಪಾದನೆ ಮಾಡಿಸಿಕೊಳ್ಳುವುದರ ಇತ್ತೀಚಿನ ಅವಧಿಯಲ್ಲಿ ಹೆಚ್ಚಾಗಿದೆ. ಸಾರಿಗೆ ಸೌಲಭ್ಯ, ಕ್ಯಾಂಟೀನ್, ಪ್ರತ್ಯೇಕ ಶೌಚಾಲಯ, ವಿಶ್ರಾಂತಿ ಕೊಠಡಿ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದೆ ದುಡಿಸಿಕೊಳ್ಳುವ ಕೈಗಾರಿಕೆಗಳು, ಗಾರ್ಮೆಂಟ್‌ಗಳು ಹೆಚ್ಚಾಗಿದೆ. ಇಂತಹ ಪರಿಸ್ಥತಿಯಲ್ಲಿ ರಾತ್ರಿಪಾಳಿ ಕೆಲಸದ ವಿಧೇಯಕ ಮಂಡನೆಯಿಂದ ದುಡಿಯುವ ಮಹಿಳೆಯ ಮೇಲೆ ಮತ್ತಷ್ಟು ಮಾಲೀಕರ ಹಿಡಿತ, ಶೋಷಣೆ, ದಬ್ಬಾಳಿಕೆ ಹೆಚ್ಚಾಗಲಿದೆ. ಸರ್ಕಾರಗಳು ದುಡಿಯುವ ಮಹಿಳೆಯರಿಗೆ ಸುರಕ್ಷತೆ, ಸೂಕ್ತ ಭದ್ರತೆ ಒದಗಿಸದೇ ರಾತ್ರಿ ಪಾಳಿ ಕೆಲಸ ಜಾರಿಗೆ ಮುಂದಾಗಿರುವುದರಿಂದ ಮಹಿಳೆಯರು ಮತ್ತಷ್ಟು ಅಭದ್ರತೆಗೆ, ಬೀದಿಕೋರರ ದಾಳಿಗೆ ತುತ್ತಾಗಲೂ ಸರ್ಕಾರವೇ ಎಡೆ ಮಾಡಿಕೊಟ್ಟಿದೆ.

ಇದನ್ನು ಓದಿ: ದುಡಿಮೆಯ ಅವಧಿ 12 ಗಂಟೆಗೆ ಏರಿಕೆ: ಕಾರ್ಮಿಕರನ್ನು ಗುಲಾಮಗಿರಿಗೆ ನೂಕುವ ಯತ್ನ!

ಕೆಲಸಕ್ಕೆ ಹೋಗಬೇಕಾದರೆ ಗಾರ್ಮೆಂರ್ಟ್‌ ಗಳಲ್ಲಿ, ಸಣ್ಣ-ಪುಟ್ಟ ಕೈಗಾರಿಕೆಗಳಲ್ಲಿ ವಾಹನ ವ್ಯವಸ್ಥೆ ಇಲ್ಲ, ಹೇಗೆ ಹೋಗಬೇಕು? ಕೆಲವೆಡೆ ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಾದ ಐಟಿ ಮತ್ತು ಬಿಟಿ ಸಂಸ್ಥೆಗಳ ವತಿಯಿಂದ ವಾಹನ ಸೌಲಭ್ಯ ಇದ್ದಗ್ಯೂ ಚಾಲಕರಿಂದಲೇ ಅತ್ಯಾಚಾರ ಆದ ಪ್ರಕರಣಗಳು ನಮ್ಮ ಮುಂದೆ ಇದೆ. ಅಂತಹದರಲ್ಲಿ ರಾತ್ರಿಪಾಳಿಗೆ ಹೇಗೆ ಹೋಗಬೇಕು? ಪಾಳಿ ಮುಗಿಸಿ ಹೇಗೆ ಬರಬೇಕೆಂಬ ಪ್ರಶ್ನೆ ಇದೆ. ಅದೂ ಅಲ್ಲದೇ ಸರ್ಕಾರ ತನ್ನ ಮಹಿಳಾ ವಿರೋಧಿ ನೀತಿಯನ್ನ ಮರೆ ಮಾಚಿಕೊಳ್ಳಲು ʻʻಸ್ವ ಇಚ್ಚೆಯಿಂದʼʼ ಎಂಬ ಪದ ಬಳಕೆ ಕೇವಲ ನಾಮಕಾವಸ್ತೆಯೇ ಆಗಿದೆ. ಯಾವ ಮಾಲೀಕನೂ ಕಾರ್ಮಿಕರಿಗೆ ಅವರ ಸ್ವ ಇಚ್ಚೆಗೆ ಅವಕಾಶ ನೀಡುವುದೇ ಇಲ್ಲ. ಉದ್ಯೋಗ ಕಡಿತಗೊಳಿಸುವ ಸಲುವಾಗಿ ಆದರೂ ಒತ್ತಡ ಹೇರಿ ಭಯಪಡಿಸಿ ಜೀವನದ ಅನಿವಾರ್ಯತೆಗಾಗಿ ಅಪಾಯಗಳ ಅರಿವಿದಾಗ್ಯೂ ದುಡಿಯಲೇ ಬೇಕಾದ ಪರಿಸ್ಥಿತಿಗೆ ದೂಡಲಿದೆ. ಮನೆ ಒಳಗೂ ಮಹಿಳೆಗೆ ಕೆಲಸ ಮಕ್ಕಳ ಲಾಲನೆ-ಪಾಲನೆ, ಕುಟುಂಬದ ಪೋಷಣೆ, ಹೊರಗಡೆಯ ದುಡಿತದಿಂದ ಹೈರಾಣಾದ ಮಹಿಳೆಯರಿಗೆ ಈಗಾಗಲೇ ಸಹಜವಾಗಿ ಅನಾರೋಗ್ಯ ಕಾಡುತ್ತಿರುತ್ತದೆ.

ಕೆಲವು ಕೈಗಾರಿಕೆಗಳಲ್ಲಿ ನಿಂತೇ ಕೆಲಸ ಮಾಡಬೇಕು, ಮುಟ್ಟಾದ ಸಂದರ್ಭದಲ್ಲಿಯೂ ಕೂಡ ವಿನಾಯಿತಿ ದೊರೆಯುವುದಿಲ್ಲ. ಒಟ್ಟಿಗೆ ಊಟಕ್ಕೂ ಹೋಗದೇ ಅದಕ್ಕೂ ಪಾಳಿಯ ಮೇಲೆ ದುಡಿಸಿಕೊಳ್ಳುವ ಅವರ ಶ್ರಮವನ್ನ ಲೂಟಿ ಮಾಡುತ್ತಿರುವ ಮಾಲೀಕರ ಪರ ತಿದ್ದುಪಡಿಯಿಂದ ದುಡಿಯುವ ಮಹಿಳೆಯರನ್ನು ಶೋಷಿಸಲು ನೇರವಾಗಿ ದಾರಿಮಾಡಿಕೊಟ್ಟಿದೆ. ಈಗಾಗಲೇ ಸಾರಿಗೆಯಲ್ಲಿ, ಆರೋಗ್ಯ, ಪೊಲೀಸ್ ಇಲಾಖೆಗಳಲ್ಲಿ ದುಡಿಯುವ ಮಹಿಳೆಯರ ಸಂಕಷ್ಟಗಳು ಬೆಟ್ಟದಷ್ಟಿದ್ದು ಕೇಳುವವರೇ ಇಲ್ಲದೆ ಇರುವ ಪರಿಸ್ಥಿತಿಗಳಿಗೆ ಈ ವೀಧೇಯಕ ಮತ್ತಷ್ಟು ಪುಷ್ಠಿ ನೀಡಲಿದೆ. ಗ್ರಾಮೀಣ ಪ್ರದೇಶದಲ್ಲಿ ಆಶಾ ಕಾರ್ಯಕರ್ತೆಯಾಗಿ ದುಡಿಯುವ ಮಹಿಳೆಯನ್ನು ಆ ಗ್ರಾಮದಲ್ಲಿ ಎಂತಹ ಅನಾರೋಗ್ಯಕ್ಕೆ ತುತ್ತಾದವರು, ಹೆರಿಗೆಗೆ ತಾಯಂದಿರನ್ನ ಮಧ್ಯ ರಾತ್ರಿ ಕರೆದುಕೊಂಡು ಜಿಲ್ಲಾ/ತಾಲ್ಲೂಕು ಕೇಂದ್ರಗಳಿಗೆ ಹೋಗಬೇಕು. ವಾಹನ ವ್ಯವಸ್ಥೆ ಇಲ್ಲ, ಭದ್ರತೆ ಇಲ್ಲ. ಅಲ್ಲಿಯ ಅಧಿಕಾರಿಗಳ ದಬ್ಬಾಳಿಕೆಯಿಂದ ಕೇವಲ ಪ್ರೋತ್ಸಾಹ ಧನಕ್ಕಾಗಿ ದುಡಿಸಿಕೊಳ್ಳುತ್ತಿವೆ. ದುಡಿಯುವ ಮಹಿಳೆಯರ ಮೇಲೆ ಯಾವುದೇ ಕಾಳಜಿ ಇಲ್ಲದೆ ಕೇವಲ ಚುನಾವಣಾ ಸಂದರ್ಭದಲ್ಲಿ ಮಾತ್ರ ಕಾಳಜಿಯ ಸುಳ್ಳು ಭರವಸೆ ನೀಡುವ ಭ್ರಷ್ಟ ಸರ್ಕಾರಗಳು ದೇಶದಲ್ಲಿ 1 ಕೋಟಿಗೂ ಅಧಿಕ ಮಹಿಳೆಯರನ್ನ ಸ್ಕೀಮ್‌ ಗಳಲ್ಲಿ ಗೌರವಧನದ ಹೆಸರಿನಲ್ಲಿ ಅಂಗನವಾಡಿ ಕಾರ್ಯಕರ್ತೆ, ಸಂಭಾವನೆಯ ಹೆಸರಿನಲ್ಲಿ ಬಿಸಿಯೂಟ, ಪ್ರೋತ್ಸಾಹಧನದಲ್ಲಿ ಆಶಾ ಕಾರ್ಯಕರ್ತೆ, ಬಳಸಿ ಬೀಸಾಡು ಎಂಬಂತೆ ಪದವೀಧರರೂ, ಉತ್ತಮ ಕೌಶಲ್ಯ ಹೊಂದಿದ ಅತಿಥಿ ಉಪನ್ಯಾಸಕರನ್ನು, ಎನ್‌ಹೆಚ್‌ಎಂ ಗಳಲ್ಲಿ ದುಡಿಯುವ ನರ್ಸ್ ಸಿಬ್ಬಂದಿಗಳನ್ನು ವೇತನ ತಾರತಮ್ಯ, ಕಡಿಮೆ ವೇತನದಲ್ಲಿ ದುಡಿಸಿಕೊಳ್ಳುತ್ತಿದೆ. ಬಂಡವಾಳಶಾಹಿ, ಕಾರ್ಪೋರೇಟ್ ಸರ್ಕಾರಗಳು ಅವಿರತ ಹೋರಾಟಗಳ ಮೂಲಕ ಪಡೆದ ಕಾನೂನುಗಳನ್ನು ಕಸಿಯಲು ಮುಂದಾಗಿದೆ. ಐಕ್ಯ ಹೋರಾಟಗಳ ಮೂಲಕ ನಮ್ಮ ಹಕ್ಕನ್ನು ಉಳಿಸಿಕೊಳ್ಳಲು ಹೋರಾಟ ಒಂದೇ ಮಾರ್ಗ ಎಂಬುದನ್ನು ಜನತೆಗೆ ಮನವರಿಕೆ ಮಾಡಬೇಕಿದೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *