ದುಡಿಮೆಯ ಅವಧಿ  12 ಗಂಟೆಗೆ ಏರಿಕೆ: ಕಾರ್ಮಿಕರನ್ನು ಗುಲಾಮಗಿರಿಗೆ ನೂಕುವ ಯತ್ನ!

ಲಿಂಗರಾಜು ಮಳವಳ್ಳಿ

ನಾನು ವಾಸವಿರುವ ಬೇಗೂರು ರಸ್ತೆ ವಿಶ್ವಪ್ರಿಯಾ ಬಡಾವಣೆಯಿಂದ ಬಿಡದಿಯಲ್ಲಿರುವ ಬಾಷ್ (ಮೈಕೋ) ಕಂಪನಿಗೆ ಕಾರ್ಮಿಕರನ್ನು ಬಸ್ ಮೂಲಕ ಕರೆದುಕೊಂಡು ಹೋಗಲಾಗುತ್ತೆ. ಫ್ಯಾಕ್ಟರಿ ತಲುಪಲು ಕನಿಷ್ಟ 2 ತಾಸು ಪ್ರಯಾಣ. ಫ್ಯಾಕ್ಟರಿಯಲ್ಲಿ ಊಟದ ವಿರಾಮ ಸೇರಿ 9 ತಾಸು ದುಡಿಮೆ, ಚೆಕ್ ಔಟ್ ಮಾಡಿ ಹೊರಬರಲು ಅರ್ಧ ಗಂಟೆ, ವಾಪಸ್ ಮನೆ ತಲುಪಲು ಮತ್ತೆ 2 ಗಂಟೆ ಗಂಟೆ ಪ್ರಯಾಣ. ಒಟ್ಟು ಒಬ್ಬ ಕಾರ್ಮಿಕ ಹದಿಮೂರುವರೆ ಗಂಟೆಗಳನ್ನು ಫ್ಯಾಕ್ಟರಿಗಾಗಿ ಕಳೆಯುತ್ತಾನೆ.

ರಾಜ್ಯ ಬಿಜೆಪಿ ಸರ್ಕಾರ ‘ಕರ್ನಾಟಕ ಕಾರ್ಖಾನೆಗಳ ಕಾಯ್ದೆ’ಗೆ ತಿದ್ದುಪಡಿ ತಂದು ಮೂರು ಮುಖ್ಯ ಬದಲಾವಣೆಗಳನ್ನು ಮಾಡಿದೆ. ಮೊದಲನೇಯದು, 8 ಗಂಟೆಗಳ ಕೆಲಸದ ಅವಧಿಯನ್ನು 12 ಗಂಟೆವರೆಗೆ ಹೆಚ್ಚಿಸಿಕೊಳ್ಳಲು ಅವಕಾಶ ನೀಡಿದೆ. ವಾರಕ್ಕೆ 48 ಗಂಟೆ, ದಿನಕ್ಕೆ 8 ಗಂಟೆ ದುಡಿಮೆ ಎಂಬ ಇದುವರೆಗೂ ಇದ್ದ ಕಾನೂನು ಇರುವುದಿಲ್ಲ. ಎರಡನೇಯದಾಗಿ ಕಾರ್ಮಿಕರಿಗೆ ಮಧ್ಯಂತರ ವಿಶ್ರಾಂತಿಯನ್ನು 5 ಗಂಟೆ ಬದಲಾಗಿ 6 ಗಂಟೆಗೆ ಹೆಚ್ಚಿಸಲಾಗಿದೆ. ಮೂರನೇಯದಾಗಿ ಮಹಿಳೆಯರು ರಾತ್ರಿ ಪಾಳಿ (ಶಿಫ್ಟ್) ಯಲ್ಲಿ ಕೆಲಸ ಮಾಡಲು ಅನುವು ಮಾಡಿಕೊಡಲಾಗಿದೆ. ಈ ಮೂರು ಮುಖ್ಯ ಬದಲಾವಣೆಗಳನ್ನು ತರಾತುರಿಯಲ್ಲಿ ತರಲಾಗಿದೆ. ಅದೂ ಅಸೆಂಬ್ಲಿ ಚುನಾವಣೆ ಹೊಸ್ತಿಲಲ್ಲಿ!

ಇದನ್ನು ಓದಿ: ಕಾರ್ಖಾನೆಗಳಲ್ಲಿ ಕಾರ್ಮಿಕರ ದುಡಿಮೆಯ ಅವಧಿ 9 ರಿಂದ 12 ಗಂಟೆಗೆ ಹೆಚ್ಚಳ; ಮಸೂದೆ ಅಂಗೀಕರಿಸಿದ ರಾಜ್ಯ ಸರ್ಕಾರ

ಹೊಸ ತಿದ್ದುಪಡಿಯಂತೆ ವಾರದ ದುಡಿಮೆ 48 ಗಂಟೆ ಮಾತ್ರವೇ ಇದ್ದು, ದಿನದ ದುಡಿಮೆಯನ್ನು 12 ಗಂಟೆವರೆಗೂ ವಿಸ್ತರಿಸಬಹುದಾಗಿದೆ. ಅಂದರೆ ಒಂದು ವಾರ ಮಾಡಬಹುದಾದ ದುಡಿಮೆಯನ್ನು ಕೇವಲ ನಾಲ್ಕು ದಿನಗಳಲ್ಲಿ ಮಾಡಿ ಮುಗಿಸಬೇಕು! ಉಳಿದ ಮೂರು ದಿನ ಆತ/ಕೆ ದುಡಿಮೆಯಿಂದ ಮುಕ್ತಿ ಹೊಂದಬಹುದು! ವಾರದಲ್ಲಿ ನಾಲ್ಕು ದಿನ ಮಾತ್ರವೇ ಕೆಲಸ, ಮೂರು ದಿನ ಫ್ರೀ ಆಗಿ ಓಡಾಡಿಕೊಂಡಿರಬಹುದಲ್ಲವೇ? ಇದು ತಕ್ಷಣಕ್ಕೆ ಸರಿ ಎನಿಸಲೂ ಸಾಧ್ಯವಿದೆ!

ಕೇಂದ್ರ ಸರ್ಕಾರ ಕಾರ್ಪೋರೇಟ್ ಧಣಿಗಳನ್ನು ತೃಪ್ತಿಪಡಿಸಲು ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಿ ನಾಲ್ಕು ಸಂಹಿತೆಗಳನ್ನಾಗಿ (ಕೋಡಿಫಿಕೇಷನ್) ಈಗಾಗಲೇ ರೂಪಿಸಿದೆ. ಹೀಗಾಗಿ ಇದನ್ನು ಅನುಸರಿಸಿ ರಾಜ್ಯದ ಡಬಲ್ ಇಂಜಿನ್ ಸರ್ಕಾರ ರಾಜ್ಯದ ಕಾರ್ಪೋರೇಟ್ ಕುಳಗಳನ್ನು ಖುಷಿಪಡಿಸಲು ಕಾಯ್ದೆಗೆ ತಿದ್ದುಪಡಿ ತಂದಿದೆ.

8 ಗಂಟೆಗಳ ದುಡಿಮೆ ಎಂಬುದು ಬಂಡವಾಳಶಾಹಿ ವ್ಯವಸ್ಥೆ ನೀಡಿದ ಬಳುವಳಿಯೇನಲ್ಲ! ಇದರ ಹಿಂದೆ ಧೀರೋದ್ದಾತ ಹೋರಾಟದ ರಕ್ತ ಚರಿತ್ರೆ ಇದೆ. 8 ಗಂಟೆ ದುಡಿಮೆ, 8 ಗಂಟೆ ವಿಶ್ರಾಂತಿ, 8 ಗಂಟೆ ನಿದ್ರೆ ಎಂಬ ನೀತಿಗಾಗಿ ಅಂದಿನ ಕಾರ್ಮಿಕರು ಸಮರಶೀಲ ಚಳವಳಿಗಳನ್ನು ನಡೆಸಿ ಬಲಿದಾನಗೈದಿದ್ದಾರೆ.

ಇದನ್ನು ಓದಿ: ಸಬ್ಸಿಡಿ ಕಡಿತ ಮಾಡಿ ರೈತ-ಕಾರ್ಮಿಕರ-ಕೂಲಿಕಾರರೊಂದಿಗೆ ಸರಕಾರ ಚೆಲ್ಲಾಟವಾಡುತ್ತಿದೆ; ಮೀನಾಕ್ಷಿ ಸುಂದರಂ

8 ಗಂಟೆ ಕೆಲಸದ ಅವಧಿಯ ಕಾನೂನು ಬಳೆದು ಬಂದ ಬಗೆ

1880ರ ಹೊತ್ತಿಗೆ ಪ್ರಪಂಚದಲ್ಲೇ ಅತಿ ವೇಗವಾಗಿ ಬೆಳೆಯುತ್ತಿದ್ದ ಅಮೆರಿಕಾದ ಚಿಕಾಗೋ ನಗರ, ಅಗ್ಗದ ದರದಲ್ಲಿ ಸಿಗುವ ಭೂಮಿ ಕಾರಣಕ್ಕಾಗಿ ಬಂಡವಾಳದಾರರ ಸ್ವರ್ಗವಾಗಿ ಬದಲಾಗುತ್ತಿತ್ತು. ಸಮನಾಂತರವಾಗಿ ಕಾರ್ಮಿಕ ವರ್ಗವೂ ಬೆಳೆಯುತ್ತಿತ್ತು. 14 ಗಂಟೆಗಳ ನಿರಂತರ ಕೆಲಸ, ಕಾರ್ಮಿಕರ ರಕ್ಷಣೆಗೆ ಕಾನೂನುಗಳೇ ಇಲ್ಲದ ಕಾಲದಲ್ಲಿ ಬರ್ಬರ ಶೋಷಣೆಯನ್ನು ಪ್ರಶ್ನಿಸುವಂತಿರಲಿಲ್ಲ. ಹರಿವು ಹೆಚ್ಚಾದಾಗ ಕಟ್ಟೆ ಒಡೆಯಲೇಬೇಕು ಎಂಬಂತೆ ಸಣ್ಣ ಪ್ರಮಾಣದ ಪ್ರತಿಭಟನೆಗಳು ಶುರುವಾಗಿದ್ದವು. ಪ್ರತಿಭಟನೆಯನ್ನು ಹೊಸಕಿ ಹಾಕುವ ಪ್ರಭುತ್ವದ ಪಾಶವೀಕೃತ್ಯದ ವಿರುದ್ಧ ಕಾರ್ಮಿಕರ ಪ್ರತಿಭಟನೆಗಳು ಹೆಚ್ಚಾದವೇ ವಿನಃ ಸೊರಗಲಿಲ್ಲ.

ಇದೇ ವೇಳೆಗೆ ಇಲ್ಲಿನ ಸರ್ಕಾರಿ ನೌಕರರು 14 ಗಂಟೆಯಿಂದ 10 ಗಂಟೆ ದುಡಿಮೆಯ ಬೇಡಿಕೆಗೆ ನಡೆಸಿದ ಹೋರಾಟ ಫಲಸಿಕ್ಕಿ ಅಂತಿಮವಾಗಿ ಈ ಹೋರಾಟ ಗೆಲುವಿನ ತಾರ್ಕಿಕ ಅಂತ್ಯ ಕಂಡಿದ್ದು ಆ ಕಾಲದ ಐತಿಹಾಸಿಕ ಹೋರಾಟ.

ಈ ಹೋರಾಟವೇ 8 ಗಂಟೆ ದುಡಿಮೆಯ ಹೋರಾಟಕ್ಕೂ ಸ್ಪೂರ್ತಿ ನೀಡಿತು. 8 ಗಂಟೆ ದುಡಿಮೆ ಉಳಿದ 16 ಗಂಟೆ ವಿಶ್ರಾಂತಿ ಮತ್ತು ನಿದ್ರೆಗೆ ಅಗತ್ಯ ಎಂದು ವೈಜ್ಞಾನಿಕ ಮತ್ತು ತಾತ್ವಿಕ ತಳಹದಿ ಮೇಲೆ ಬೇಡಿಕೆಯನ್ನಿಟ್ಟು ಹೋರಾಟಗಳು ಶುರುವಾದವು. ಇದಕ್ಕೆ ಬಹು ಮುಖ್ಯ ಕಾರಣ, ನಿರುದ್ಯೋಗ ಭಾರಿ ಪ್ರಮಾಣದಲ್ಲಿ ಹೆಚ್ಚುತ್ತಿತ್ತು. ಯಾಂತ್ರೀಕರಣ ಮತ್ತು ಆಂತರಿಕ ಯುದ್ಧದ ಕಾರಣದಿಂದಾಗಿ ಆರ್ಥಿಕ ಬಿಕ್ಕಟ್ಟು ತಲೆದೋರಿ ನಿರುದ್ಯೋಗ ಉಲ್ಬಣಿಸಿತ್ತು.  ನಿರುದ್ಯೋಗವನ್ನು ನಿಯಂತ್ರಣಕ್ಕೆ ತರುವ ವಿಚಾರದಲ್ಲಿ ಈ ಬೇಡಿಕೆಗೆ ಮಹತ್ವ ಬಂದಿತ್ತು. ಅಷ್ಟು ಮಾತ್ರವಲ್ಲದೇ ಮನುಷ್ಯನ ದುಡಿಮೆಯ ಸಾಮರ್ಥ್ಯ ಧರಿಸಿ, ಇಂದು ದುಡಿದು ನಾಳೆಯೂ ಅದೇ ಚೈತ್ಯನ್ಯದೊಂದಿಗೆ ಕಾರ್ಖಾನೆಗೆ ದುಡಿಮೆಗೆ ಬರಬೇಕಿದ್ದಲ್ಲಿ ಹೆಚ್ಚಿನ ವಿಶ್ರಾಂತಿ ಅತ್ಯಗತ್ಯ ಎಂಬುದನ್ನು ಅಧ್ಯಯನಗಳಿಂದ ಕಂಡುಕೊಳ್ಳುವ ಪ್ರಯತ್ನವೂ ನಡೆಯಿತು. ಆದರೆ ಬಂಡವಾಳದಾರರು ಕಾರ್ಮಿಕ ಸಂಘಟನೆಗಳ ಈ ಬೇಡಿಕೆಗೆ ಕಿಮ್ಮತ್ತು ಕೊಡಲಿಲ್ಲ. ಮಾತ್ರವಲ್ಲ ಪ್ರಭುತ್ವವನ್ನು ಬಳಸಿ ಹೋರಾಟವನ್ನು ಶತಾಯಗತಾಯ ಹತ್ತಿಕ್ಕುವ ದಾಳಿಗಳನ್ನು ನಡೆಸಲಾಯಿತು. ಈ ಮಧ್ಯೆ 1867 ರಲ್ಲಿ ಇಲಿನಾಯ್ ಪ್ರಾಂತದ ಶಾಸನಸಭೆಯು ಶಾಸನ ಮಂಡಿಸಿ 8 ಗಂಟೆಗಳ ಕೆಲಸ ಕಾಯ್ದೆಬದ್ಧವೆಂದು ಘೋಷಿಸಿತು.

ಇದನ್ನು ಓದಿ: ರಾಜ್ಯ ಸರ್ಕಾರದ ಕಾರ್ಖಾನೆಗಳ ಕಾಯ್ದೆ ತಿದ್ದುಪಡಿ ವಿರೋಧಿಸಿ ಒಂದು ದಿನದ ಕೈಗಾರಿಕಾ ಮುಷ್ಕರಕ್ಕೆ ಕಾರ್ಮಿಕ ಸಂಘಟನೆಗಳ ಕರೆ

ಪರಿಣಾಮವಾಗಿ 8 ಗಂಟೆ ಕೆಲಸದ ಬೇಡಿಕೆಗಾಗಿ ನಡೆಯುತ್ತಿದ್ದ ಹೋರಾಟಗಳು ಮೊನಚು ಪಡೆದುಕೊಂಡವು. ಚಿಕಾಗೋ ನಗರದ ಇತಿಹಾಸದಲ್ಲೇ ಎಂದೂ ಕೇಳರಿಯದ ರೀತಿಯ ಕಾರ್ಮಿಕರ ಮೆರವಣಿಗೆಗಳು ಸಾಗಿದವು. ಹನ್ನರೆಡು ಸಾವಿರ ಕಾರ್ಖಾನೆಗಳ ಸುಮಾರು 3 ಲಕ್ಷದ 40 ಸಾವಿರ ಕಾರ್ಮಿಕರು ತಮ್ಮ ಕೆಲಸಗಳನ್ನು ನಿಲ್ಲಿಸಿ ಬೀದಿಗಿಳಿದಿದ್ದರು. ಈ ಹೋರಾಟವೇ ಮೇ 1 ಕಾರ್ಮಿಕ ದಿನದ ಘೋಷಣೆಗೆ ಕಾರಣವಾಯ್ತು ಎಂಬುದು ಇತಿಹಾಸ.

ಹೋರಾಟ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಬಾಂಬ್ ಸ್ಪೋಟಿಸುತ್ತದೆ. ಗೋಲಿಬಾರ್, ಲಾಠಿ ಚಾರ್ಜ್, ಬಂಧನ, ನರಕವನ್ನೂ ನಾಚಿಸುವಂತೆ ಪೊಲೀಸ್ ಪಾಶವೀಕೃತ್ಯ ನಡೆಯುತ್ತದೆ. ನಂತರ ವಿಚಾರಣೆಯ ನಾಟಕ ನಡೆದು 7 ಜನ ಹೋರಾಟಗಾರರನ್ನು ದೇಶದ್ರೋಹಿ, ವಿದ್ವಂಶಕ ಕೃತ್ಯ ನಡೆಸಿದರು ಎಂದು ದೂರಿ ಗಲ್ಲು ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ಕೆಲವರಿಗೆ 15 ವರ್ಷಗಳ ಕಠಿಣ ಶಿಕ್ಷೆಯನ್ನು ವಿಧಿಸಲಾಗುತ್ತದೆ. ಇದು ಐತಿಹಾಸಿಕ ‘ಹೇ ಮಾರ್ಕೆಟ್ ಪ್ರಕರಣ’  ಎಂದು ಚರಿತ್ರೆಯಲ್ಲಿ ದಾಖಲಾಗಿದೆ. ಹೀಗಾಗಿ ಎಂಟು ತಾಸಿನ ದುಡಿಮೆಯ ಹಕ್ಕು ಕಾರ್ಮಿಕರ ಬಲಿದಾನ ಕೊಡುಗೆ ನಾವೆಲ್ಲ ಅನುಭವಿಸುತ್ತಿದ್ದೇವೆ ಎಂಬ ಅರಿವು ಇರಬೇಕು.

8 ಗಂಟೆ ದುಡಿಮೆ ನೀತಿಯನ್ನು ಜಗತ್ತಿನಾದ್ಯಂತ ಇದೀಗ ಅನುಸರಿಸಲಾಗುತ್ತಿದೆ. ಇಂಟರ್ ನ್ಯಾಷನಲ್ ಲೇಬರ್ ಆರ್ಗನೈಸೇಶನ್ (ಐಎಲ್ಓ) ಇದನ್ನು ನಿಯಮಬದ್ಧಗೊಳಿಸಿದೆ. ಮುಂದುವರಿದು, ವಿಜ್ಞಾನ ತಂತ್ರಜ್ಞಾನದಲ್ಲಾಗಿರುವ ಆವಿಷ್ಕಾರಗಳಿಂದಾಗಿ ಶರವೇಗದ ಉತ್ಪಾದನೆಗೆ ದಾರಿ ಮಾಡಿಕೊಟ್ಟಿದೆ. ಇದರ ಜತೆಯಲ್ಲೇ ಜಗತ್ತಿನಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಪ್ರಮಾಣವೂ ಹೆಚ್ಚತೊಡಗಿದೆ. (ನಿರುದ್ಯೋಗ ಬಂಡವಾಶಾಹಿ ವ್ಯವಸ್ಥೆಯ ಒಂದು ಭಾಗ ಎಂಬುದು ಬೇರೆಯಾಗಿ ಹೇಳಬೇಕಿಲ್ಲ) ಹೀಗಾಗಿ ಕೆಲಸದ ಅವಧಿಯನ್ನು ವಾರದಲ್ಲಿ 35 ಗಂಟೆ, 5 ದಿನ ದುಡಿಮೆ, ದಿನದ ದುಡಿಮೆಯನ್ನು 7 ಗಂಟೆಗೆ ಇಳಿಸಬೇಕೆಂಬ ಕೂಗು ಕೇಳಿ ಬರುತ್ತಿದೆ. ಇದಕ್ಕೆ ತದ್ವಿರುದ್ಧವಾಗಿ ರಾಜ್ಯದ ಬಿಜೆಪಿ ಸರ್ಕಾರ ಕೆಲಸ ಅವಧಿಯನ್ನು ಹೆಚ್ಚಿಸಿ ಐಎಲ್ಓ ನಿಯಮಾವಳಿಗೆ ವಿರುದ್ಧವಾಗಿ ನಡೆದುಕೊಂಡಿದೆ.

ಇದನ್ನು ಓದಿ: ದುಡಿಯುವ ವರ್ಗಕ್ಕೆ ಕೆಲಸದ ಅವಧಿ ಹೆಚ್ಚಳದ ಶಿಕ್ಷೆ

ತರಾತುರಿಯ ಏಕಪಕ್ಷೀಯ ನಿರ್ಧಾರ

ಸರ್ಕಾರ ಇಂತಹ ಮಹತ್ವದ ಕಾಯ್ದೆಯೊಂದಕ್ಕೆ ತಿದ್ದುಪಡಿ ತರುವ ಮುನ್ನ ಕಾರ್ಮಿಕ ಸಂಘಟನೆಗಳೊಂದಿಗೆ ಕನಿಷ್ಟ ಚರ್ಚಸಬೇಕಿತ್ತು. ಸಾಧಕ-ಬಾಧಕಗಳ ಬಗ್ಗೆ ಚಿಂತಿಸಿ, ತಜ್ಞರ ಜತೆ ಸಮಾಲೋಚಿಸಿ ತೀರ್ಮಾನಕ್ಕೆ ಬರುವುದು ಜವಾಬ್ದಾರಿ ಇರುವವರ ನಡೆ. ಆದರೆ ಬೊಮ್ಮಾಯಿ ಅವರು ಚುನಾವಣೆ ಹೊಸ್ತಿಲಲ್ಲಿ ಇರುವಾಗ ಕಾಯ್ದೆಗೆ ತರಾತುರಿಯಲ್ಲಿ ತಿದ್ದುಪಡಿ ತರುವ ತುರ್ತು ಏನಿತ್ತು ಎಂಬುದನ್ನು ಈವರೆಗೂ ಹೇಳಿಲ್ಲ. ನಿರುದ್ಯೋಗದ ಪ್ರಮಾಣ ಏರುತ್ತಿರುವುದನ್ನು ಅವರದೇ ಅಂಕಿಅಂಶಗಳು ದೃಢಪಡಿಸಿವೆ. ಹೀಗಿದ್ದೂ  ಶಾಸನ ಸಭೆಯಲ್ಲೂ ಚರ್ಚೆಯನ್ನೇ ನಡೆಸದೇ ಕಾಯ್ದೆ ಪಾಸು ಮಾಡಲಾಗಿದೆ.

12 ಗಂಟೆ ಕೆಲಸದ ಅವಧಿಯಿಂದ ಕಾರ್ಮಿಕರು ಮತ್ತು ಕಾರ್ಖಾನೆ ಅವಲಂಬಿತರಿಗೆ ಒದಗುವ ಅಪಾಯಗಳು

  1. ಮನೆಯಿಂದ ಕೆಲಸದ ಸ್ಥಳ ತಲುಪುವ ಪ್ರಯಾಣದ ವೇಳೆ ಸೇರಿ ಅವನ/ಳ ವಿಶ್ರಾಂತಿಗೆ ಅವಕಾಶ ಇರುವುದಿಲ್ಲ
  2. ಕಾರ್ಮಿಕನ/ಳ ಕೆಲಸದ ಸಮಯದಲ್ಲಿ ಮಧ್ಯಂತರ ವಿಶ್ರಾಂತಿಯನ್ನು 5 ಗಂಟೆ ಬದಲಾಗಿ 6 ಗಂಟೆಯ ನಂತರ ನೀಡುವುದರಿಂದ ದುಡಿಮೆಯ ಸಾಮರ್ಥ್ಯ ಕ್ಷೀಣಿಸುತ್ತದೆ.
  3. ಇದು ಕಾರ್ಮಿಕನ/ಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.
  4. ಹೆಚ್ಚಿನ ಸಮಯ ಕಾರ್ಖಾನೆಯಲ್ಲೇ ಕಳೆಯುವುದರಿಂದ ಕುಟುಂಬದ ಜತೆಗಿನ ಸಂಬಂಧಗಳು ಸಡಿಲಗೊಳ್ಳುತ್ತವೆ ಮತ್ತು ಇವುಗಳಿಂದಾಗಿ ಭವಿಷ್ಯದಲ್ಲಿ ಸಾಮಾಜಿಕ ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತದೆ.
  5. ಈಗಿರುವ ಮೂರು ಪಾಳಿ (ಶಿಫ್ಟ್) ಬದಲಾಗಿ ಎರಡು ಪಾಳಿಯಲ್ಲೇ ಅಗತ್ಯವಿರುವ ಉತ್ಪಾದನೆ ಆಗುವುದರಿಂದ ಹೆಚ್ಚುವರಿ (Surplus) ಕಾರ್ಮಿಕರನ್ನು ಕೆಲಸದಿಂದ ತೆಗೆಯಲಾಗುತ್ತದೆ. ಇದರಿಂದ ಕಾರ್ಮಿಕರ ಕುಟುಂಬಗಳು ಬೀದಿಗೆ ಬೀಳುತ್ತವೆ.
  6. ಹೆಚ್ಚುವರಿ ಕಾರ್ಮಿಕರನ್ನು ಕೆಲಸದಿಂದ ತೆಗೆಯುವಾಗ ಹೆಚ್ಚು ವೇತನ ಪಡೆಯುವ ಖಾಯಂ ಕಾರ್ಮಿಕರನ್ನು ಟಾರ್ಗೆಟ್ ಮಾಡಿ ತೆಗೆಯಲಾಗುತ್ತದೆ. ಕಾರ್ಖಾನೆಯಲ್ಲಿ ಪೂರ್ತಿಯಾಗಿ ಖಾಯಂಯೇತರ ಕಾರ್ಮಿಕರಿಂದ ಕಡಿಮೆ ಕೂಲಿಗೆ ದುಡಿಸಿಕೊಳ್ಳಲಾಗುತ್ತದೆ.
  7. ಆರು ದಿನಗಳ ಕೆಲಸದ ಬದಲಾಗಿ ನಾಲ್ಕು ದಿನ ಮತ್ತು ಎರಡು ಪಾಳಿಯಲ್ಲಿ ಮಾತ್ರವೇ ಕೆಲಸ ನಡೆಯುವುದರಿಂದ ಅವಲಂಬಿತ ಉದ್ಯೋಗಿಗಳು ನಿರುದ್ಯೋಗಿಗಳಾಗುತ್ತಾರೆ. ಉದಾಹರಣೆಗೆ ಕ್ಯಾಂಟೀನ್ ನಡೆಸುವವರು ಮತ್ತು ಇಲ್ಲಿನ ಕಾರ್ಮಿಕರು, ಟ್ಯಾಕ್ಸಿ, ಕ್ಯಾಬ್ ಚಾಲಕರು, ಸಣ್ಣಪುಟ್ಟ ಚಿಲ್ಲರೆ ವ್ಯಾಪಾರಿಗಳು ಉದ್ಯೋಗ ನಷ್ಟಕ್ಕೆ ಒಳಗಾಗುತ್ತಾರೆ.
  8. ಮಹಿಳೆಯರಿಗೆ ರಾತ್ರಿ ಪಾಳಿ (ಶಿಫ್ಟ್) ಗೆ ಅವಕಾಶ ಮಾಡಿಕೊಟ್ಟಿರುವುದರಿಂದ ಅವರ ಸುರಕ್ಷತೆ ಸಮಸ್ಯೆಗಳು ಉದ್ಭವಿಸಲಿವೆ. ಮಹಿಳೆಯರ ಮೇಲೆ ಹಿಂಸೆ, ದೌರ್ಜನ್ಯ, ಲೈಂಗಿಕ ಕಿರುಕುಳ, ಅತ್ಯಾಚಾರದಂತಹ ಪ್ರಕರಣಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಮಹಿಳೆಯರ ಸುರಕ್ಷತೆಯ ಹೊಣೆಯನ್ನು ಯಾರು ಹೊರುತ್ತಾರೆ ಎಂಬ ಪ್ರಶ್ನೆಗೆ ಸ್ಪಷ್ಟತೆ ಇಲ್ಲ.

ಈ ತಿದ್ದುಪಡಿಯಿಂದ ಮಾಲೀಕರಿಗೆ ಆಗುವ ಅನುಕೂಲಗಳೇನು?

  1. 12 ಗಂಟೆ ಕೆಲಸದ ಅವಧಿಯ ಎರಡು ಶಿಫ್ಟ್ ಗಳಲ್ಲಿ ತನಗೆ ಅಗತ್ಯವಿರುವ ಉತ್ಪಾದನೆಯನ್ನು ತೆಗೆಯುವುದರಿಂದ ಮಾಲೀಕರ ಉತ್ಪಾದನಾ ವೆಚ್ಚ ತಗ್ಗುತ್ತದೆ (Operational Expense) ಇದರಿಂದ ಹೆಚ್ಚು ಲಾಭ ದೊರೆಯುತ್ತದೆ.
  2. ಹೆಚ್ಚುವರಿ ಕಾರ್ಮಿಕರನ್ನು ಕೆಲಸದಿಂದ ತೆಗೆಯುವುದರಿಂದ ಕಾರ್ಮಿಕರ ವೇತನದ ಪಾಲು ಮಾಲೀಕರ ಪಾಲಾಗುತ್ತದೆ.
  3. ಎರಡೇ ಶಿಫ್ಟ್ ಗಳು ಇರುವುದರಿಂದ ಸಾರಿಗೆ ವೆಚ್ಚ, ಕ್ಯಾಂಟೀನ್ ಇತ್ಯಾದಿ ವೆಚ್ಚಗಳು ಮಾಲೀಕರಿಗೆ ಉಳಿತಾಯ ಆಗಲಿದೆ.
  4. ಕಡಿಮೆ ಅವಧಿಯಲ್ಲಿ ಉತ್ಪಾದನೆ ಆಗುವುದರಿಂದ ಹೆಚ್ಚುವರಿ ಕೆಲಸ (Over time) ನೀಡಬೇಕಿದ್ದ ಎರಡು ಪಟ್ಟು (Incentive) ಮಾಲೀಕರಿಗೆ ಉಳಿತಾಯ ಆಗಲಿದೆ.

ಹೊಸ ಕಾಯ್ದೆಯಂತೆ ಬಿಡದಿಯಲ್ಲಿ ಕೆಲಸ ಮಾಡುವ ಬಾಷ್ (ಮೈಕೋ) ಕಾರ್ಮಿಕನೊಬ್ಬ ಇದೀಗ ತನ್ನ ಹದಿನೇಳುವರೆ ಗಂಟೆ ಸಮಯವನ್ನು ಫ್ಯಾಕ್ಟರಿಗಾಗಿ ಮೀಸಲಿಡಬೇಕು! ಇದು ಎಲ್ಲ ಕಾರ್ಮಿಕರ ಕಥೆಯೂ ಹೌದು. ‘ಬಂಡವಾಳಶಾಹಿ ವ್ಯವಸ್ಥೆ ಕಾರ್ಮಿಕರನ್ನು ಯಂತ್ರಗಳಂತೆಯೇ ನೋಡುತ್ತದೆ, ಮನುಷ್ಯರಂತೆ ಅದು ನೋಡುವುದಿಲ್ಲ!’ ರಾಜ್ಯ ಸರ್ಕಾರದ ಈ ತಿದ್ದುಪಡಿ, ಮಾಲೀಕರು ತಮ್ಮ ಲಾಭ ಹೆಚ್ಚಿಸಿಕೊಳ್ಳಲು ದಾರಿ ಮಾಡಿಕೊಟ್ಟಿದೆ ವಿನಃ, ಇದರಲ್ಲಿ ಕಾರ್ಮಿಕರ ಹಿತಾಸಕ್ತಿ ಎಳ್ಳಷ್ಟೂ ಇಲ್ಲ. ಮಾಲೀಕರ ಹಿತಕ್ಕಾಗಿ ಕಾರ್ಮಿಕರನ್ನು ಬಲಿ ನೀಡುವ ಈ ಕಾಯ್ದೆಯನ್ನು ಒಪ್ಪೊಕೊಳ್ಳಬೇಕೇಕೆ?

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *