ಯಾವುದೇ ಒಂದು ರಾಷ್ಟ್ರದ ಭವಿಷ್ಯ ಶಾಲಾ ಕೊಠಡಿಗಳಲ್ಲಿ ರೂಪಿಸಲ್ಪಡುತ್ತದೆ ಎಂಬ ಕೊಠಾರಿ ಆಯೋಗದ ವರದಿಯ ಪ್ರಾರಂಭಿಕ ವಾಕ್ಯವು ಸಾರ್ವಕಾಲಿಕವಾದುದು. ಇದೊಂದು ಬೆಲೆಗಟ್ಟಲಾಗದ ವಸ್ತುಗಳನ್ನು ಉತ್ಪಾದಿಸುವ ಕ್ಷೇತ್ರ. ಡಾ ಬಿ ಆರ್ ಅಂಬೇಡ್ಕರರವರು ಹೇಳುವಂತೆ ಶಿಕ್ಷಣವು ಮಕ್ಕಳ ಗುರಿಯನ್ನು ರೂಪಿಸುವಂತೆ ಮಾಡುತ್ತದೆ. ಗುಲಾಮಗಿರಿಯನ್ನು ತೊಡೆದು ಹಾಕಲು ಶಿಕ್ಷಣವೇ ಒಂದು ಅಸ್ತ್ರವೆಂದು ನಂಬಿದ್ದರು.
ಇದು ಸೋಷಿತರಲ್ಲಿ ಜಾಗೃತಿ ಯನ್ನು ಮೂಡಿಸಿ ಅವರ ಸಾಮಾಜಿಕ ಸ್ಥಿತಿ, ಆರ್ಥಿಕ ಸುಧಾರಣೆ ಮತ್ತು ರಾಜಕೀಯ ಸ್ವಾತಂತ್ರ್ಯವನ್ನು ಪಡೆಯಲು ಸಾಧ್ಯವಾಗುತ್ತದೆ. ಶಿಕ್ಷಣದಿಂದ ಯಾರನ್ನೂ ವಂಚಿತರನ್ನಾಗಿ ಮಾಡಬಾರದು ಇದು ಈ ದೇಶದ ಎಲ್ಲಾ ಜನರನ್ನು ತಲುಪಬೇಕು ಮತ್ತು ಸೋಷಿತ ವರ್ಗದವರನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬಾರದು ಅವರಿಗೆ ಕಡಿಮೆ ವೆಚ್ಚದಲ್ಲಿ ಶಿಕ್ಷಣ ಸಿಗಬೇಕು ಎಂಬ ಆಶಯ ಹೊಂದಿದ್ದರು. ಶಿಕ್ಷಣದ ಮಹತ್ವ ಇಂದು ಜನಸಾಮಾನ್ಯರಿಗೂ ಅರ್ಥವಾಗುತ್ತಿದೆ. ಅದರ ಪರಿನಾಮ ಇಂದು ರಾಜ್ಯದ ಜನಸಂಖ್ಯೆಯಲ್ಲಿ ಸರಾಸರಿ 25ರಷ್ಟು ಪಾಲು ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಂಡಿರುವ ವಿದ್ಯಾರ್ಥಿಗಳದ್ದೇ ಇದೆ. 1ನೇ ತರಗತಿಯಿಂದ ಸ್ನಾತಕೋತ್ತರ ಪದವಿಯಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ 1,62,19,664ರಷ್ಟಿದೆ. ವಿದ್ಯಾಭ್ಯಾಸಕ್ಕೆ ಎಲ್ಲರೂ ಮಹತ್ವ ಕೊಡುತ್ತಿದ್ದಾರೆ. ಶಿಕ್ಷಣದಿಂದ ಮಾತ್ರವೇ ಅಭಿವೃದ್ಧಿ ಸಾಧ್ಯವಿದೆ ಎಂದು ಮನವರಿಕೆಯಾಗುತ್ತಿದೆ ಎಂದೇ ಅರ್ಥ.
- ನಮ್ಮ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ 1ತರಗತಿಯಿಂದ-5ನೇತರಗತಿವರಗೆ 24,94,183, 6ರಿಂದ 8ನೇ ತರಗತಿವರೆಗೆ 13,66,020, 9-10 ರವರಗೆ 5,97,332, ಒಟ್ಟು 44,57,535ರಷ್ಟಿದೆ. –
- ಖಾಸಗಿ ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿ ವಿದ್ಯಾರ್ಥಿಗಳ 1-8ನೇ ತರಗತಿಯವರೆಗೆ 82,17,287
9-10ನೇ ತರಗತಿಯವರೆಗೆ 99,17,752 ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 1,43,75,287(ಒಂದು ಕೋಟಿ ನಲ್ವತ್ಮೂರು ಲಕ್ಷ ಎಪತ್ತೈದು ಸಾವಿರ ಎರಡುನೂರ ಎಂಬತ್ತೇಳು) – - ರಾಜ್ಯದಲ್ಲಿ ಸರ್ಕಾರಿ ಶಾಲೆಗಳು ಕಿರಿಯ, ಹಿರಿಯ ಪ್ರಾಥಮಿಕ, ಪ್ರೌಢ ಶಾಲೆಗಳು ಒಟ್ಟು 48,393, ಅನುದಾನಿತ 6830, ಅನುದಾನ ರಹಿತ ಶಾಲೆಗಳು 20581 –
- 2017-18 ರಲ್ಲಿ ಪದವಿಪೂರ್ವ ಕೋರ್ಸ್ ಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳ ಸಂಖ್ಯೆ ಪ್ರಥಮ ಪಿಯುಸಿ 647596, ದ್ವೀತಿಯ ಪಿಯುಸಿ 539951 ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 11, 87,547 –
- ಸರ್ಕಾರಿ ಪಿಯು ಕಾಲೇಜುಗಳು 1229, ಅನುದಾನಿತ 796, ಅನುದಾನ ರಹಿತ 3034, ಮಹನಾಗರ ಪಾಲಿಕೆ 13, ವಿಭಜಿತ 162 ಒಟ್ಟು ಪಿಯು ಕಾಲೇಜುಗಳು –
- ಪದವಿ ಕಾಲೇಜುಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ತಾಂತ್ರಿಕ ಕೋರ್ಸುಗಳನ್ನೊಳಗೊಂಡಂತೆ 13,71,757 ವಿದ್ಯಾರ್ಥಿಗಳು, ಇದರಲ್ಲಿ ಸರ್ಕಾರಿ ಪದವಿ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳ ಸಂಖ್ಯೆ 4,60,124 ವಿದ್ಯಾರ್ಥಿಗಳು.
- ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಪದವಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ 1,96,706.
ಇದನ್ನು ಓದಿ : ಶೈಕ್ಷಣಿಕ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ವಿದ್ಯಾರ್ಥಿ ಸಂಘಟನೆಯಿಂದ ಪ್ರತಿಭಟನೆ
ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ವಿದ್ಯಾರ್ಜನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕನಸುಗಳನ್ನು ಹೊತ್ತುಕೊಂಡು ನನಸು ಮಾಡಿಕೊಳ್ಳಬೇಕೆಂಬ ಹಂಬಲ ಹೊಂದಿದ್ದಾರೆ. ಎಲ್ಲಾ ಪಾಲಕರಿಗೂ ತಮ್ಮ ಮಕ್ಕಳು ನಮ್ಮಂತೆ ಕೂಲಿ ನಾಲಿ ಮಾಡಿಕೊಂಡು ಅತ್ಯಂತ ಕಷ್ಟದ ಜೀವನ ಬೇಡ ಅವರಾದರೂ ಒಂದು ಸುಭದ್ರ ಬದುಕು ಕಟ್ಟಿಕೊಳ್ಳಲಿ, ನಮಗೆ ಎಷ್ಟೇ ಕಷ್ಟವಾದರೂ ಚಿಂತೆ ಇಲ್ಲ. ಮಕ್ಕಳು ಓದಿ ದೊಡ್ಡ ಮನುಷ್ಯರಾಗಲಿ ಎಂದು ತಂದೆ ತಾಯಿಗಳು ಕನಸು ಕಾಣುತ್ತಿರುತ್ತಾರೆ.
ಶಿಕ್ಷಣದ ಮಹತ್ವವನ್ನು ಅರಿತ ಮಾಜಿ ರಾಷ್ಟ್ರಪತಿಗಳಾದ ಡಾ. ಸರ್ವಪಲ್ಲಿ ರಾಧಕೃಷ್ಣ ಅವರು ತಮ್ಮ ಜನ್ಮ ದಿನಾಚರಣೆಯನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲು ಕರೆಕೊಡುತ್ತಾರೆ. ಆ ಮೂಲಕ ಶೈಕ್ಷಣಿಕ ರಂಗದ ಸಮಸ್ಯೆಗಳನ್ನು ಮೆಲಕು ಹಾಕುವ, ಸುಧಾರಣೆ ತರುವ ಪ್ರಯತ್ನವಾಗಲಿ ಎಂಬ ಆಶಯವಿತ್ತು. ಆಶಯದಂತೆ ಅವರ ಜನ್ಮ ದಿನಾಚರಣೆಯ ಅಂಗವಾಗಿ ದೇಶದಾದ್ಯಂತ ಅಂದು ಶಿಕ್ಷಕರ ಬಗ್ಗೆ ತುಂಬಾ ಆದರ್ಶದ ಮಾತುಗಳನ್ನಾಡಲಾಗುತ್ತದೆ. ಎಲ್ಲಾ ರಂಗದಲ್ಲಿನ ಸಾಧಕರು ತಮ್ಮ ಸಾಧನೆಗೆ ಶಿಕ್ಷಕರೇ ಕಾರಣರು. ನಮ್ಮ ಬಾಳಿಗೆ ಬೆಳಕು ನೀಡಿದವರು, ನಮ್ಮಲ್ಲಿ ಉತ್ಸಾಹ ತುಂಬಿ ನಮ್ಮನ್ನು ಬೆಳೆಸಿದವರು. ಗುರುವಿಲ್ಲದೆ ಗುರಿಯನ್ನು ತಲುಪುವುದು ಬಹಳ ಕಷ್ಟ. ಭರವಸೆಯನ್ನು ಹೆಚ್ಚಿಸುವ, ಕನಸನ್ನು ಸಾಕಾರಗೊಳಿಸುವ, ಕಲಿಕಾ ಆಸಕ್ತಿಯನ್ನು ಹುಟ್ಟು ಹಾಕುವ ಸೂತ್ರದಾರನೇ ಶಿಕ್ಷಕ, ವಿದ್ಯರ್ಥಿಗಳ ಭವಿಷ್ಯವು ಶಿಕ್ಷಣದಲ್ಲಿದ್ದರೆ ಅದನ್ನು ಸಾಕಾರಗೊಳಿಸುವ ಸೂತ್ರ ಶಿಕ್ಷಕರಲ್ಲಿರುತ್ತದೆ. ಶಿಕ್ಷಕರ ಕುರಿತು ಸಭೆ ಸಮಾರಂಭಗಳಲ್ಲಿ ಹೀಗೆ ಹಾಡಿ ಹೊಗಳಲಾಗುತ್ತದೆ. ಶುಭಾಶಯಗಳ ಭರಪೂರವೇ ಹರಿದು ಬರುತ್ತವೆ.
ಇದನ್ನು ಓದಿ : ತಕ್ಷಣವೇ SC-ST ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮಂಜೂರು ಮಾಡಲು ವಿದ್ಯಾರ್ಥಿ ಸಂಘಟನೆಗಳ ಒತ್ತಾಯ
ಆದರೆ ವಾಸ್ತವಿಕವಾಗಿ ಶೈಕ್ಷಣಿಕ ರಂಗದಲ್ಲಿ ಶಿಕ್ಷಕರಾಗಿ, ಉಪನ್ಯಾಸಕರಾಗಿ ಕೆಲಸ ಮಾಡುವ ಶಿಕ್ಷಕರು ಯಾವ ಸ್ಥಿತಿಯಲ್ಲಿದ್ದಾರೆ ಎಂಬುದನ್ನು ಅವಲೋಕಿಸುವ ಕೆಲಸಗಳು ಆಗುತ್ತಿಲ್ಲ. ದೇಶದ ನಿರ್ಮಾಣದಲ್ಲಿ ಶಿಲ್ಪಿಗಳಾಗಿ ಕೆಲಸ ಮಾಡುವ ಶಿಕ್ಷಕರಲ್ಲಿ ಬಹುಪಾಲು ಅತಿಥಿ ಶಿಕ್ಷಕರು/ಅತಿಥಿ ಉಪನ್ಯಾಸಕರೇ ಇದ್ದಾರೆ. ಇಂದು ಅತಿಥಿ/ತಾತ್ಕಾಲಿಕ ಶಿಕ್ಷಕರು ತಲೆ ಎತ್ತಿ ಶಿಕ್ಷಕರು ಎಂದು ಹೇಳಿಕೊಳ್ಳಲಾಗದ ಸ್ಥಿತಿ ನಿರ್ಮಾಣವಾಗಿದೆ. ಖಾಯಂ ಶಿಕ್ಷಕರು ಮತ್ತು ತಾತ್ಕಾಲಿಕ ಶಿಕ್ಷಕರ ನಡುವೆ ದೊಡ್ಡ ಕಂದಕ ಸೃಷ್ಠಿ ಮಾಡಲಾಗಿದೆ. ಕೆಲಸ ಮಾಡುವ ವಿಧಾನ ಒಂದೇಯಾಗಿದ್ದರೂ ವೇತನ ತಾರತಮ್ಯ, ಕೆಲಸದ ಅವಧಿ, ಅವರನ್ನು ನಡೆಸಿಕೊಳ್ಳುವ ರೀತಿ ಇದೆಲ್ಲವೂ ಅತಿಥಿ ಶಿಕ್ಷಕ/ಉಪನ್ಯಾಸಕರಲ್ಲಿ ಒಂದು ರೀತಿ ಕೀಳಿರಿಮೆ, ಜಿಗುಪ್ಸೆ ಉಂಟಾಗುವಂತೆ ಮಾಡುತ್ತದೆ. ಅರ್ಹತೆ ಮತ್ತು ಪ್ರತಿಭೆ ಒಂದೇಯಾಗಿದ್ದರೂ ಅತಿಥಿ/ತಾತ್ಕಾಲಿಕ ಶಿಕ್ಷಕ/ಉಪನ್ಯಾಸಕ ಅನ್ನುವ ಕಾರಣಕ್ಕೆ ಇವರನ್ನೂ ಸಮಾಜದಲ್ಲಿ ಕೀಳಾಗಿ ನೋಡಲಾಗುತ್ತದೆ. ವಿದ್ಯಾರ್ಥಿಗಳ ಎದುರಲ್ಲೆ ಅತಿಥಿ ಶಿಕ್ಷಕ/ಉಪನ್ಯಾಸಕರನ್ನು ಅವಮಾನಿಸಲಾಗುತ್ತದೆ. ವಿದ್ಯಾರ್ಥಿಗಳಲ್ಲಿಯೂ ಓಹ್ ಇವರು ಅತಿಥಿಗಳಾ! ಎಂದು ಯೋಚಿಸುವಂತೆ ಮಾಡಿ ವಿದ್ಯಾರ್ಥಿಗಳು ಇವರನ್ನು ಗಂಭೀರವಾಗಿ ಪರಿಗಣಿಸದಂತಹ ವಾತವರಣ ನಿರ್ಮಾಣವಾಗಿರುತ್ತದೆ. ವರ್ಷದಲ್ಲಿ ಕೇವಲ 7-8ತಿಂಗಳು ಮಾತ್ರವೇ ಕೆಲಸ ಉಳಿದ ಅವಧಿಯಲ್ಲಿ ಮತ್ತೆ ನಿರುದ್ಯೋಗ, ಇದರ ನಡುವೆ ಜನ ಕೇಳುವ ಕುಹಕದ ಪ್ರಶ್ನೆಗೆ ಉತ್ತರ ಕೊಡಲು ಮುಜುಗರಪಡಬೇಕಾದ ಸನ್ನಿವೇಶವಿದೆ. ಶಿಕ್ಷಕರ ಇಂತಹ ದುಸ್ಥಿತಿಗೆ ಯಾರು ಹೊಣೆಗಾರರು, ಸರ್ಕಾರ ಕಾಲಕಾಲಕ್ಕೆ ಖಾಲಿಯಾಗಿರುವ ಹುದ್ದೆಗಳನ್ನು ಭರ್ತಿ ಮಾಡಿಕೊಂಡಿದ್ದರೆ ಈ ಅತಿಥಿ/ತಾತ್ಕಾಲಿಕ/ಹೊರಗುತ್ತಿಗೆ ಈ ಪದದಡಿ ಕೆಲಸ ಮಾಡಬೇಕಾದ ಅನಿವಾರ್ಯತೆಯೇ ಇವರಿಗೆ ಬರುತ್ತಿರಲಿಲ್ಲ. ಆದರೆ ಸರ್ಕಾರಗಳ ತಪ್ಪು ನೀತಿಗಳಿಂದಾಗಿ ಇಂದು ಶೈಕ್ಷಣಿಕ ರಂಗದಲ್ಲಿ ಕೆಲಸ ಮಾಡುವ ಉಪನ್ಯಾಸಕರು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ ಇದರಿಂದ ಸಮಾಜಕ್ಕೆ ಯಾವ ಸಂದೇಶ ಹೋಗುತ್ತದೆ ಎಂಬುದನ್ನು ಆಲೋಚಿಸಬೇಕಿದೆ.
ಇಂದು ಕೊರೊನಾ ಮಹಾಮಾರಿಯಿಂದಾಗಿ ಲಾಕ್‍ಡೌನ್ ಆದಾಗಿನಿಂದಲೂ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಅತಿಥಿ ಶಿಕ್ಷಕರಾಗಿರುವ 22500 ಜನ, ಪಿಯು ಕಾಲೇಜಿನಲ್ಲಿ 8-10 ಸಾವಿರ ಅತಿಥಿ ಉಪನ್ಯಾಸಕರು, ಪದವಿ ಕಾಲೇಜುಗಳಲ್ಲಿ 15500ಜನ ಅತಿಥಿ ಉಪನ್ಯಾಸಕರು, ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡುವ 2500 ಜನ ಅತಿಥಿ ಉಪನ್ಯಾಸಕರು ಕೆಲಸವಿಲ್ಲದೇ ಅತಂತ್ರರಾಗಿದ್ದಾರೆ. ಇಂದು ಅನಿವಾರ್ಯವಾಗಿ ಕೆಲವರು ರಸ್ತೆ ಬದಿಗಳಲ್ಲಿ ಹಣ್ಣು/ತರಕಾರಿ ಮಾರುವ, ಉದ್ಯೋಗ ಖಾತ್ರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ನಾನು ಶಿಕ್ಷಕ ಅಂತ ಹೇಗೆ ಹೆಮ್ಮೆ ಪಟ್ಟುಕೊಳ್ಳಲಿ? ವಿದ್ಯಾರ್ಥಿಗಳಿಗೆ ಹೇಗೆ ನಾನು ಆದರ್ಶದ ಮಾತುಗಳನ್ನು ಹೇಳಲಿ? ನನ್ನ ಈ ಬದುಕು ಗಮನಿಸಿದ ಮಕ್ಕಳು ನನ್ನನ್ನು ಆದರ್ಶವಾಗಿ ಸ್ವೀಕರಿಸುತ್ತಾರೆ ಎಂದು ಹೇಗೆ ನಂಬಲಿ? ಶಿಕ್ಷಕ ವೃತ್ತಿಯಲ್ಲಿದ್ದಾಗ ನನ್ನನ್ನು ನೋಡಿದ ಮಕ್ಕಳು ನಾನು ಇವತ್ತು ತಳ್ಳುವ ಗಾಡಿಯಲ್ಲಿ ತರಕಾರಿ ಮಾರುತ್ತಿದ್ದದ್ದನ್ನು ನೋಡಿದರೆ ಅವರ ಮನಸ್ಸಿನ ಮೇಲೆ ಎಂತಹ ಪರಿಣಾಮವಾಗಬಹುದೆಂದು ಹೇಗೆ ನಿರೀಕ್ಷೆ ಮಾಡಲಿ? ಇಡೀ ಶಿಕ್ಷಣ ನಿಂತಿರುವುದೇ ಶಿಕ್ಷಕರ ಮೇಲೆ. ಆದರೆ ಶಿಕ್ಷಕರ ಭವಿಷ್ಯ ಇಂದು ಡೊಲಾಯಮಾನವಾಗಿದೆ. ವಿದ್ಯಾರ್ಥಿಗಳ ಬಾಳು ಬೆಳಗಬೇಕಾದ ಶಿಕ್ಷಕರ ಬಾಳು ಕತ್ತಲೆಯಲ್ಲಿದೆ.