ಹುಬ್ಬಳ್ಳಿ : ಹವಾ ಮಾಡಲು ಹೋಗಿ ರಾಷ್ಟ್ರಧ್ವಜಕ್ಕೆ ಬಿಜೆಪಿ ಮುಖಂಡ ಮೊಗಲಿಶೆಟ್ಟರ್ರಿಂದ ಅವಮಾನ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆಯ ಸದಸ್ಯೆಯ ಪತಿಯೇ ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದವರು. ಪಾಲಿಕೆ ಸದಸ್ಯೆ ಸೀಮಾ ಮೊಗಲಿಶೆಟ್ಟರ್ ಅವರ ಪತಿ ಬಿಜೆಪಿ ಮುಖಂಡ ಸಿದ್ದು ಮೊಗಲಿಶೆಟ್ಟರ್ ಅವರಿಂದ ರಾಷ್ಟ್ರ ಧ್ವಜಕ್ಕೆ ಅವಮಾನವಾಗಿದೆ.
ತಮ್ಮ ವಾರ್ಡ್ ಜನರಿಗೆ ಹರ್ ಘರ್ ತಿರಂಗಾ ಅಭಿಯಾನ ತಿಳಿಸುವ ಭರದಲ್ಲಿ ಸಿದ್ದು ಮುಗಲಿಶೆಟ್ಟರ್ ಅವರು ಒಂದು ಕೈಯಲ್ಲಿ ಧ್ವಜವನ್ನು ಎತ್ತಿ ಹಿಡಿದರೆ , ಇನ್ನೊಂದು ಕೈಯಲ್ಲಿದ್ದ ಧ್ವಜವನ್ನು ಶೂಗೆ ತಾಗಿಸಿ ಹಿಡಿದುಕೊಂಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಧ್ವಜದ ಮಹತ್ವವನ್ನೇ ಮರೆತು ಚಪ್ಪಲಿ ಮೇಲೆ ಇರಿಸಿದ ಸಿದ್ದು ಮುಗಲಿಶೆಟ್ಟರ್ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿದೆ . ಪಾಲಿಕೆ ಸದಸ್ಯೆಯ ಪತಿಯ ಈ ನಡೆಗೆ ಸಾರ್ವಜನಿಕ ವಲಯದಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ . ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದ ಬಿಜೆಪಿ ಮುಖಂಡನ ಮೇಲೆ ಕಾನೂನು ಕ್ರಮಕ್ಕೆ ಜನರು ಒತ್ತಾಯಿಸಿದ್ದಾರೆ .