ರಸ್ತೆ ಗುಂಡಿ ತಪ್ಪಿಸಲು ಹೋಗಿ ಕೆಳಗೆ ಬಿದ್ದ ದ್ವಿಚಕ್ರ ವಾಹನ ಸವಾರರು: ತಾಯಿ-ಮಗಳಿಗೆ ಗಾಯ

ಬೆಂಗಳೂರು: ನಗರದ ರಸ್ತೆ ಗುಂಡಿ ತಪ್ಪಿಸಲು ಹೋಗಿ ದ್ವಿಚಕ್ರದಲ್ಲಿ ಚಲಿಸುತ್ತಿದ್ದ ಅಮ್ಮ, ಮಗಳು ಕೆಎಸ್‍ಆರ್‌ಟಿಸಿ ಬಸ್ ಚಕ್ರಕ್ಕೆ ಸಿಲುಕಿ ಗಂಭೀರವಾಗಿ ಗಾಯಗೊಂಡ ಘಟನೆಯೊಂದು ನಡೆದಿದೆ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ನಿರ್ಲಕ್ಷ್ಯಕ್ಕೆ ಇದೀಗ ಮತ್ತೆ ಮಹಿಳೆಯೋರ್ವರು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ವಸಂತನಗರದ ನಿವಾಸಿ ಉಮಾದೇವಿ (42), ವನಿತಾ (22) ಗಾಯಗೊಂಡ ತಾಯಿ-ಮಗಳು.

ಈ ಘಟನೆಯು ರಾಜಾಜಿನಗರ ಬಳಿಯ ಸುಜಾತ ಚಿತ್ರಮಂದಿರ ಸಮೀಪ ನಡೆದಿದೆ. ದ್ವಿಚಕ್ರ ವಾಹನ ಕೆಎಸ್‍ಆರ್‌ಟಿಸಿ ಬಸ್‍ಗೆ ಡಿಕ್ಕಿ ಹೊಡೆದ ಪರಿಣಾಮ ಉಮಾದೇವಿ ಅವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ರವಾನಿಸಲಾಗಿದೆ. ಜೊತೆಗೆ ವನಿತಾ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಘಟನೆಗೆ ಸಂಬಂಧಿಸಿದಂತೆ ಮಲ್ಲೇಶ್ವರಂ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಚಿಕಿತ್ಸೆಗಾಗಿ ಇಬ್ಬರನ್ನು ರಾಜಾಜಿನಗರದ ಇಎಸ್ಐ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಆದರೆ, ಉಮಾದೇವಿ ಅವರ ಸ್ಥಿತಿ ಚಿಂತಾಜನಕವಾಗಿದೆ. ಘಟನೆ ಸಂಬಂಧ ಮಲ್ಲೇಶ್ವರ ಸಂಚಾರ ಪೊಲೀಸರು ಬಸ್ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಘಟನೆ ಬಗ್ಗೆ ಪ್ರತ್ಯಕ್ಷದರ್ಶಿ ಜಮೀರ್ ಎಂಬುವರು ಮಾತನಾಡಿ, ಬೈಕ್​ನಲ್ಲಿ ಬರುತ್ತಿದ್ದ ಇಬ್ಬರು ಮಹಿಳೆಯರು ರಸ್ತೆ ಗುಂಡಿ ಇರುವ ಕಾರಣ ಒಮ್ಮೆಲೇ ಬ್ರೇಕ್ ಹಾಕಿ‌ ನಿಲ್ಲಿಸಿದ್ದರು. ಕೂಡಲೇ ನಿಲ್ಲಿಸಿದ್ದರಿಂದ ಸೂಟ್ಕರ್ ಬಿದ್ದಿದೆ. ಹಿಂದೆ ಕೂತಿದ್ದ ಉಮಾ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಮಹಿಳೆಯ ಕಾಲ ಮೇಲೆ ಬಸ್ ಹತ್ತಿದೆ. ಘಟನೆಗೆ ರಸ್ತೆಗುಂಡಿನೇ‌ ಕಾರಣ ಎಂದು ಆರೋಪಿಸಿದ್ದಾರೆ.

ಡಿಸಿಪಿ ಕುಲದೀಪ್ ಜೈನ್ ಮಾತನಾಡಿ, ಬೆಳಗ್ಗೆ ಕೆಎಸ್‍ಆರ್‌ಟಿಸಿ ಬಸ್ ಅಪಘಾತದಿಂದ ತಾಯಿ, ಮಗಳು ಗಾಯಗೊಂಡಿದ್ದಾರೆ. ವಾಹನ ಚಲಾಯಿಸುತ್ತಿದ್ದ ಮಗಳು ವನಿತಾ ಹಾಗೂ ತಾಯಿ ಉಮಾದೇವಿಗೆ ಅಪಘಾತವಾಗಿದೆ. ಹಿಂಬದಿ ಕುಳಿತಿದ್ದ ಉಮಾ ಪರಿಸ್ಥಿತಿ ಗಂಭೀರವಾಗಿದೆ. ಘಟನೆ ಸಂಬಂಧ ಕೆಎಸ್‍ಆರ್‌ಟಿಸಿ ಚಾಲಕನನ್ನ ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *