ರಸ್ತೆಗುಂಡಿ ಮುಚ್ಚದೆ ನಿರ್ಲಕ್ಷ್ಯ : ಮಂಗಳೂರು ಪಾಲಿಕೆ ವಿರುದ್ಧ ಆಕ್ರೋಶ

ಮಂಗಳೂರು: ಸುರತ್ಕಲ್, ಕಾನ, ಎಮ್ಆರ್‌ಪಿಎಲ್, ಜನತಾ ಕಾಲನಿ ರಸ್ತೆ ದುರಸ್ಥೆ, ಗುಂಡಿಗಳನ್ನು ಮುಚ್ಚದ ಮಂಗಳೂರು ನಗರ ಪಾಲಿಕೆ ಬೇಜವಾಬ್ದಾರಿತನ ಖಂಡಿಸಿ ಕಾನ ಜಂಕ್ಷನ್‌ನಲ್ಲಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್(ಡಿವೈಎಫ್ಐ) ನೇತೃತ್ವದಲ್ಲಿ ಮೆರವಣಿಗೆ ನಡೆಸಿ ಮಂಗಳೂರು ನಗರ ಪಾಲಿಕೆ ಭೂತ ದಹಸಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ “ಶಾಸಕ ಭರತ್ ಶೆಟ್ಟಿ ಅಭಿವೃದ್ದಿ ಕಾಮಗಾರಿಗಳನ್ನು ನಡೆಸುವುದರಲ್ಲಿ  ದಯನೀಯ ವೈಫಲ್ಯ ಕಂಡಿದ್ದಾರೆ. ಹಿಂದಿನ ಶಾಸಕರ ಅವಧಿಯಲ್ಲಿ ಮಂಜೂರಾಗಿದ್ದ ಹೊಸ ರಸ್ತೆ ನಿರ್ಮಾಣ ಯೋಜನೆ ಭರತ್ ಶೆಟ್ಟಿಯವರ ಬೇಜವಾಬ್ದಾರಿತನದಿಂದ ರದ್ದುಗೊಂಡಿದೆ. ಸುರತ್ಕಲ್, ಕೃಷ್ಣಾಪುರ ಮಾರುಕಟ್ಟೆ ಕಾಮಗಾರಿಗಳಿಗೂ ತಡೆ ಬಿದ್ದಿದೆ. ಅಭಿವೃದ್ದಿ ಕಾರ್ಯ ನಡೆಸಲಾಗದ ಭರತ್ ಶೆಟ್ಟರು ಮತೀಯ ಭಾವನೆಗಳನ್ನು ಕೆರಳಿಸಿ ತನ್ನ ವೈಫಲ್ಯಗಳನ್ನು ಮುಚ್ಚಿಡಲು ನೋಡುತ್ತಿದ್ದಾರೆ. ಪ್ರತಿಯೊಂದು ಕಾಮಗಾರಿಯಲ್ಲಿ ನಲವತ್ತು ಶೇಕಡಾ ಪರ್ಸಂಟೇಜ್ ಹೊಡೆಯುವ ಬಿಜೆಪಿ ಸರಕಾರದ ಭ್ರಷ್ಟಾಚಾರದಿಂದ ಸರಕಾರದ ಖಜಾನೆ ಖಾಲಿಯಾಗಿದೆ. ಕನಿಷ್ಟ ತೇಪೆ ಕಾರ್ಯ ನಡೆಸಲೂ ನಗರ ಪಾಲಿಕೆ ಹಣದ ಕೊರತೆ ಎದುರಿಸುತ್ತಿರುವುದು ಬಿಜೆಪಿ ಆಡಳಿತ ನಡೆಸಲು ನಾಲಾಯಕ್ ಎಂಬುದಕ್ಕೆ ಸಾಕ್ಷಿ ಎಂದು ಆರೋಪಿಸಿದರು. ಹದಿನೈದು ದಿನಗಳ ಒಳಗಡೆ ರಸ್ತೆಗಳು ದುರಸ್ಥಿಗೊಳ್ಳದಿದ್ದಲ್ಲಿ ಶಾಸಕರ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು.

ಜಿಲ್ಲಾಧ್ಯಕ್ಷ ಬಿ ಕೆ ಇಮ್ತಿಯಾಜ್ ಮಾತನಾಡಿ ʻʻಹಿಂದಿನ ಶಾಸಕರ ಅವಧಿಯಲ್ಲಿ‌ ಇದೇ ರಸ್ತೆಯ ದುರವಸ್ಥೆ ಮುಂದಿಟ್ಟು ರಾಜಕೀಯ ಲಾಭ ಪಡೆದಿದ್ದ ಭರತ್ ಶೆಟ್ಟರು ಗೆದ್ದಮೇಲೆ ಈ ರಸ್ತೆಯ ಅಭಿವೃದ್ದಿಯ ಕುರಿತು ಅನಾದಾರ ತೋರಿಸುತ್ತಿದ್ದಾರೆ. ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿಗಳನ್ನು ನಗರದ ಕೆಲವೆ ಪ್ರದೇಶಗಳಿಗೆ ಅನಗತ್ಯ ಪೋಲು ಮಾಡಲಾಗುತ್ತಿದೆ. ಸುರತ್ಕಲ್ ಪ್ರದೇಶಕ್ಕೆ ಸ್ಮಾರ್ಟ್ ಸಿಟಿ ಅನುದಾನ ಮೀಸಲಿಡದೆ ತಾರತಮ್ಯ ಎಸಗಲಾಗುತ್ತಿದೆ. ಕಾನ, ಜನತಾ ಕಾಲನಿ ರಸ್ತೆ ಅಭಿವೃದ್ದಿಗೊಳಿಸದಿದ್ದಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದುʼʼ ಎಂದು ಎಚ್ಚರಿಸಿದರು.

ಎಂ.ಆರ್.ಪಿ.ಎಲ್ ಮತ್ತು ಇತರ ಬೃಹತ್ ಕೈಗಾರಿಕೆಗಳಿಗೆ ಬರುವ ಬೃಹತ್ ಘನ ವಾಹನಗಳ ಓಡಾಟದಿಂದಾಗಿ ಮುಖ್ಯರಸ್ತೆ ಸಂಪೂರ್ಣ ಹಾಳಾಗಿ ಹೋಗಿದೆ. ಜನರ ಹೋರಾಟದ  ಪ್ರತಿಫಲವಾಗಿ 2017ರಲ್ಲಿ 60 ಕೋಟಿ ವೆಚ್ಚದ 4 ಕಿ‌.ಮೀ ಚತುಷ್ಪಥ ರಸ್ತೆಗೆ  ಮಂಜೂರಾದ ಯೋಜನೆಯನ್ನು ಶಾಸಕ ಭರತ್ ಶೆಟ್ಟಿಯವರು ತಡೆ ಹಿಡಿಯಲು ಯಶಸ್ವಿಯಾಗಿದ್ದ ಶಾಸಕರು ಮತ್ತೆ ಹೊಸ ಟೆಂಡರ್ ಮಾಡಿಸಿ ರಸ್ತೆ ಅಭಿವೃದ್ಧಿ ಮಾಡಿಸಲು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ಸುರತ್ಕಲ್, ಕಾನ, ಜನತಾ ಕಾಲೊನಿ ಮತ್ತು ಎಂ.ಆರ್.ಪಿ.ಎಲ್ ವರೆಗಿನ ರಸ್ತೆ ಅಭಿವೃದ್ಧಿ ಪಡಿಸಲು ಅಸಾಧ್ಯವಾದರೆ ನಾಗರಿಕ ವೇದಿಕೆಯ ಮೂಲಕ  ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಡಿವೈಎಫ್ಐ ಮುಖಂಡರಾದ ಶ್ರೀನಾಥ್ ಕುಲಾಲ್, ಮಕ್ಸೂದ್ ಬಿ ಕೆ, ಅಜ್ಮಾಲ್ ಅಹ್ಮದ್, ಜೋಯ್ ಡಿಸೋಜ, ಮುಹಮ್ಮದ್, ಜಾಯ್, ಅಬೂಬಕ್ಕರ್ ಬಾವ, ನವಾಜ್ ಕುಳಾಯಿ ಗಿರೀಶ್ ಜನತಾ ಕಾಲೊನಿ, ಮೆಹಬೂಬ್ ಖಾನ್, ಫ್ರಾನ್ಸಿಸ್ ಕಾನ, ಟ್ಯಾಂಕರ್ ಚಾಲಕರ ಸಂಘದ ಅಧ್ಯಕ್ಷರಾದ ಬಾಲು, ರಿಕ್ಷಾ ಚಾಲಕರ ಸಂಘದ ಪ್ರಮುಖರಾದ ಹಂಝ, ಇಬ್ರಾಹಿಂ, ಲಕ್ಷ್ಮೀಶ, ಬಶೀರ್ ಮುಂತಾದವರಿದ್ದರು.

Donate Janashakthi Media

Leave a Reply

Your email address will not be published. Required fields are marked *