ರಸ್ತೆ ಅವ್ಯವಸ್ಥೆಯಿಂದ ಎರಡೂವರೆ ಗಂಟೆ ಸಂಚಾರ ದಟ್ಟಣೆ; ಶಾಲೆಗೆ ಗೈರಾದ ಮಕ್ಕಳು-ಮೌನ ಪ್ರತಿಭಟನೆ

ಬೆಂಗಳೂರು: ಬಿಬಿಎಂಪಿ ರಸ್ತೆಗಳ ಹಾಳಾದ ಅವ್ಯವಸ್ಥೆಯಿಂದಾಗಿ ಜನರು ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದು, ನಗರದಲ್ಲಿ ವಾಹನ ಸಂಚಾರವೆಂಬುದು ದುಸ್ತರಕ್ಕೆ ತಲುಪಿದೆ. ಸಂಚಾರಿ ದಟ್ಟಣೆಯಿಂದಾಗಿ  ಜನರ ನಿತ್ಯದ ಗೋಳು ಕೇಳುವವರೇ ಇಲ್ಲದಂತಾಗಿದೆ.

ಇದೀಗ ಸಂಚಾರ ದಟ್ಟಣೆಯಿಂದ ಒಂದೆಡೆ ಕೆಲಸ ನಿಮಿತ್ತ ಜನರು ಮತ್ತೊಂದೆಡೆ ಶಾಲಾ ಮಕ್ಕಳು ನರಕಯಾತನೆ ಅನುಭವಿಸಿರುವುದು ವರದಿಯಾಗಿದ್ದು, ಬೆಂಗಳೂರಿನ ಬಿಬಿಎಂಪಿ ಮಹದೇವಪುರ ವಲಯ ವ್ಯಾಪ್ತಿಯ ಪಣತ್ತೂರು ಎಸ್‌ ಕ್ರಾಸ್‌ ಬಳಿ ಗಂಟೆಗಟ್ಟಲೇ ಸಂಚಾರಿ ದಟ್ಟಣೆಯಲ್ಲಿ ಸಿಲುಕಿರುವ ಘಟನೆ ನಡೆದಿದೆ.

ಇಲ್ಲಿ ಸರಿಸುಮಾರು, ಎರಡೂವರೆ ಗಂಟೆ ಸಂಚಾರ ದಟ್ಟಣೆಯುಂಟಾಗಿ ಮಕ್ಕಳು ಸಮಯಕ್ಕೆ ಸರಿಯಾಗಿ ಶಾಲೆ ತಲುಪಲಾಗದೆ ಹಿಂತಿರುಗಿರುವ ಘಟನೆ ನಡೆದಿದೆ. ಇದರಿಂದ ಆಕ್ರೋಶಗೊಂಡ ನಾಗರಿಕರು ಮೇಣದ ಬತ್ತಿ ಬೆಳಗಿಸಿ ಹಾಗೂ ಮೊಬೈಲ್‌ ಬೆಳಕು ಪ್ರದರ್ಶಿಸುವ ಮೂಲಕ ಮೌನ ಪ್ರತಿಭಟನೆ ನಡೆಸಿದ್ದಾರೆ.

ಹಾಳಾದ ರಸ್ತೆಯಿಂದಾಗಿ ಪ್ರತಿನಿತ್ಯವು ಸೃಷ್ಟಿಯಾಗುವ ಸಂಚಾರ ದಟ್ಟಣೆಯಲ್ಲಿ ಸುಮಾರು 2 ಗಂಟೆ 30ನಿಮಿಷ ಶಾಲಾ ಮಕ್ಕಳು ಸಿಲುಕಿದ್ದರು. ಇದರಿಂದ ಕೆಲವು ಮಕ್ಕಳು ಮನೆಗೆ ಮರಳಿದ್ದು, ಶಾಲೆಗೆ ಗೈರಾಗಿದ್ದಾರೆ. ಹಲವರು ಮಕ್ಕಳಿಗೆ ಶಾಲಾ ಕಲಿಕೆ ಸಮಯವು ವ್ಯತ್ಯಯವಾಗಿದೆ. ಈ ಸಂಬಂಧ ಚಿಕ್ಕ ಮಕ್ಕಳು ಹಾಗೂ ಪೋಷಕರು ಮೇಣದ ಬತ್ತಿ ಹಿಡಿದು ಪ್ರತಿಭಟನೆ ಮಾಡಿದರು.

ಪ್ರತಿಭಟನೆಯಲ್ಲಿ ಮಕ್ಕಳು ಶಾಲೆಗೆ ತೆರಳಲು ಸುಗಮ ಸಂಚಾರದ ವ್ಯವಸ್ಥಿತ ರಸ್ತೆ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಸಂಗಪ್ಪ ದೇಸಾಯಿ ಎನ್ನುವವರು ಈ ಬಗ್ಗೆ ಟ್ವಿಟರ್‌ನಲ್ಲಿ ವಿಡಿಯೊ ಒಂದು ಹಂಚಿಕೊಂಡಿದ್ದು, ಬುಧವಾರ ಬಳಗೆರೆ–ಪಣತ್ತೂರು ರಸ್ತೆಯ ಮೂಲಕ ಸಾಗುವಾಗ ಪಣತ್ತೂರು ಕ್ರಾಸ್‌ ಬಳಿ ಎರಡೂವರೆ ಗಂಟೆಗಳಿಗೂ ಹೆಚ್ಚು ಕಾಲ ಸಂಚಾರ ದಟ್ಟಣೆಯಲ್ಲಿ ಸಿಲುಕಿರುವುದನ್ನು ವಿದ್ಯಾರ್ಥಿಗಳೇ ವಿವರಿಸಿದ್ದಾರೆ. ಶಾಲೆಯಿಂದ ಮಕ್ಕಳು ಸರಿಯಾದ ಸಮಯಕ್ಕೆ ಮನೆಗೆ ಬರಲು ಸಾಧ್ಯವಾಗುತ್ತಿಲ್ಲ. ಪದೇಪದೇ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಪೋಷಕರು ದೂರಿದ್ದಾರೆ.

ರಸ್ತೆ ಸರಿಪಡಿಸುವ ವಿಚಾರದಲ್ಲಿ ಸ್ಥಳೀಯ ಜನಪ್ರತಿನಿಧಿಗಳು ತಲೆಕೆಡಿಸಿಕೊಂಡಿಲ್ಲ. ಕೇಳಿದರೆ ಮಳೆಗಾಲ, ಅತೀವ ಮಳೆಯಿಂದಾಗಿ ಕೆಲಸ ನಿಂತುಕೊಂಡಿದೆ ಎಂದು ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ ಎಂದು ಸ್ಥಳೀಯರ ದೂರಿದ್ದಾರೆ.  ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಾರು, ವಾಹನಗಳನ್ನು ರಸ್ತೆ ಬದಿಯಲ್ಲೇ ನಿಲ್ಲಿಸಿರುತ್ತಾರೆ. ಇದರಿಂದ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಈ ಎಲ್ಲ ಸಮಸ್ಯೆಗಳಿಗೆ ವ್ಯವಸ್ಥೆ ರಸ್ತೆ ಕಲ್ಪಿಸುವುದೊಂದೆ ಪರಿಹಾರವಾಗಿದೆ. ಈ ಬಗ್ಗೆ ಸರ್ಕಾರಿ, ಬಿಬಿಎಂಪಿ ಅಧಿಕಾರಿಗಳು ಗಮನ ಹರಿಸಬೇಕಿದೆ.

ಇಲ್ಲಿನ ಸುತ್ತಲ ಪ್ರದೇಶಗಳಲ್ಲಿ ರಸ್ತೆ ಕಾಮಗಾರಿ ಯೋಜನೆ ಕೈಗೆತ್ತಿಕೊಂಡು ಸುಮಾರು 4 ವರ್ಷಗಳಾದರೂ ಈವರೆಗೂ ಪೂರ್ಣಗೊಂಡಿಲ್ಲ. ಬಡಾವಣೆಗಳಿಂದ ಮುಖ್ಯರಸ್ತೆ ಸಂಪರ್ಕಿಸುವ ಉಪ ರಸ್ತೆಗಳಲ್ಲಿ ಕಾಮಗಾರಿ ಕೆಲಸಗಳು ನಿಧಾನಗತಿಯಲ್ಲಿ ಸಾಗಿದೆ.

ಪ್ರತಿಭಟನೆಗೆ ಪ್ರತಿಕ್ರಿಯಿಸಿರುವ ಹಲವರು, ಈ ಪ್ರದೇಶಕ್ಕೂ ಪ್ರಧಾನಿ ನರೇಂದ್ರಮೋದಿ ಭೇಟಿ ನೀಡಲಿ ಎಂದು ಒತ್ತಾಯಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *