ಬೆಂಗಳೂರು: ಪೋಷಕ ಕಲಾವಿದೆ ಸುನೇತ್ರಾ ಪಂಡಿತ್ ಅವರು ರಸ್ತೆ ಅಪಘಾತದಿಂದ ತೀವ್ರವಾಗಿ ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಿರುತೆರೆಯ ಖ್ಯಾತ ನಟಿ ಸುನೇತ್ರಾ ಪಂಡಿತ್ ಅವರು ರಸ್ತೆ ಅಪಘಾತಕ್ಕೆ ಒಳಗಾಗಿದ್ದಾರೆ. ಬೆಂಗಳೂರಿನಲ್ಲಿ ಈ ಘಟನೆ ನಡೆದಿದ್ದು, ನಟಿಗೆ ಗಂಭೀರ ಗಾಯ ಆಗಿದೆ. ನೆನ್ನೆ (ಮೇ 7) ತಡರಾತ್ರಿ ಚಿತ್ರೀಕರಣ ಮುಗಿಸಿಕೊಂಡು ಮನೆಗೆ ತೆರಳುವಾಗ ಅಪಘಾತ ಸಂಭವಿಸಿದೆ.
ಸುನೇತ್ರಾ ಪಂಡಿತ್ ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಎನ್.ಆರ್. ಕಾಲೋನಿಯ 9ನೇ ಅಡ್ಡರಸ್ತೆಯಲ್ಲಿ ಅವೈಜ್ಞಾನಿಕ ಹಂಪ್ ಮತ್ತು ರಸ್ತೆ ಗುಂಡಿ ಕಾರಣದಿಂದ ಅಪಘಾತವಾಗಿದೆ. ಬಸವನಗುಡಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ನಡೆದಿದೆ. ಗಂಭೀರವಾಗಿ ಗಾಯಗೊಂಡಿರುವ ಸುನೇತ್ರಾ ಪಂಡಿತ್ ಅವರಿಗೆ ತೀವ್ರ ರಕ್ತಸ್ರಾವ ಆಗಿದೆ. ಸ್ಥಳೀಯರ ಸಹಾಯದಿಂದ ಕೂಡಲೇ ಅವರನ್ನು ಬಸವನಗುಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು ಎಂಬ ಮಾಹಿತಿ ಲಭ್ಯವಾಗಿದೆ.
ಸುನೇತ್ರಾ ಪಂಡಿತ್ ಅವರನ್ನ ಬಸವನಗುಡಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆಸ್ಪತ್ರೆಯಲ್ಲಿ ನಟಿ ಸುನೇತ್ರಾ ಪಂಡಿತ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಅಂತ ಹೇಳಲಾಗುತ್ತಿದೆ. ವೈದ್ಯರು ಹಾಗೂ ಕುಟುಂಬಸ್ಥರು ಇನ್ನಷ್ಟೇ ಸುನೇತ್ರಾ ಪಂಡಿತ್ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ನೀಡಬೇಕಿದೆ.
ರಾಜ್ಯ ರಾಜಧಾನಿ ಬೆಂಗಳೂರಿನ ರಸ್ತೆಗಳ ದುಸ್ಥಿತಿ ಗಂಭೀರವಾಗಿದೆ. ಅವೈಜ್ಞಾನಿಕ ಹಂಪ್, ಎಲ್ಲೆಂದರಲ್ಲಿ ಕಾಣಿಸುವ ಹೊಂಡಗಳು, ಕಾಮಗಾರಿಗಳ ಕಾರಣದಿಂದಾದ ಗುಂಡಿಗಳು ಎಲ್ಲ ಕಡೆ ಕಾಣಸಿಗುತ್ತವೆ. ಸಾವಿನ ಮನೆಯ ಬಾಗಿಲಿನಂತೆ ಎದುರಾಗುವ ಇಂಥ ರಸ್ತೆಗಳಲ್ಲಿ ವಾಹನ ಸವಾರರು ಜೀವ ಬಿಗಿ ಹಿಡಿದುಕೊಂಡು ಸಾಗಬೇಕಾದ ಸ್ಥಿತಿ ಇದೆ. ಪ್ರತಿ ದಿನ ಒಂದಿಲ್ಲೊಂದು ಅಪಘಾತ ಪ್ರಕರಣ ವರದಿ ಆಗುತ್ತಲೇ ಇರುತ್ತದೆ. ಈಗ ಪೋಷಕ ಕಲಾವಿದೆ ಸುನೇತ್ರಾ ಪಂಡಿತ್ ಅವರಿಗೆ ಅಪಘಾತ ಆಗಿರುವ ಸುದ್ದಿ ಕೇಳಿ ಅವರ ಆಪ್ತರು ಮತ್ತು ಅಭಿಮಾನಿಗಳು ಮರುಗುವಂತಾಗಿದೆ.
ಖ್ಯಾತ ನಟ ರಮೇಶ್ ಪಂಡಿತ್ ಅವರ ಪತ್ನಿ ಸುನೇತ್ರಾ ಪಂಡಿತ್ ಹಲವಾರು ನಟಿಯರಿಗೆ ಹಿನ್ನಲೆ ದ್ವನಿಯನ್ನು ನೀಡಿದ್ದಾರೆ. ಕನ್ನಡದ ಕಿರುತೆರೆಯಲ್ಲಿ ಸುನೇತ್ರಾ ಪಂಡಿತ್ ಹೆಚ್ಚು ಖ್ಯಾತಿ ತಂದುಕೊಟ್ಟ ಧಾರವಾಹಿ ‘ಸಿಲ್ಲಿ ಲಲ್ಲಿ’ ಯಲ್ಲಿ ಹಾಸ್ಯ ಪಾತ್ರಗಳಲ್ಲಿ ಅವರು ಭರಪೂರ ಮನರಂಜನೆ ನೀಡಿದ್ದಾರೆ. ಎಲ್ಲ ಬಗೆಯ ಪಾತ್ರಗಳಿಗೂ ಜೀವ ತುಂಬವ ಮೂಲಕ ಜನಮನ ಗೆದ್ದಿದ್ದಾರೆ. ಹಲವು ವರ್ಷಗಳಿಂದ ಬಣ್ಣದ ಲೋಕದಲ್ಲಿ ಇರುವ ಅವರು, ಈಗಲೂ ಸಕ್ರಿಯರಾಗಿದ್ದಾರೆ. ಅನೇಕ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.
ಕೊರೊನಾದಿಂದ ಸಹೋದರಿಯನ್ನು ಕಳೆದುಕೊಂಡಿದ್ದ ಸುನೇತ್ರಾ ಪಂಡಿತ್
2021ರಲ್ಲಿ ಕೊರೊನಾ ಸಾಂಕ್ರಾಮಿತೆ ತೀವ್ರತೆಯಿಂದಾಗಿ ಸುನೇತ್ರಾ ಪಂಡಿತ್ ಅವರ ಕುಟುಂಬದಲ್ಲೂ ದುಃಖ ಆವರಿಸಿತ್ತು. ಕೊರೊನಾ ವೈರಸ್ನಿಂದಾಗಿ ಅವರ ಸಹೋದರಿ ಸರಿತಾ ಅಸುನೀಗಿದರು. ಆ್ಯಂಬುಲೆನ್ಸ್‌ಗಳ ಅಸಮರ್ಪಕತೆ ಹಾಗೂ ಜನರ ನಿರ್ಲಕ್ಷ್ಯದ ಬಗ್ಗೆ ಸುನೇತ್ರಾ ಪಂಡಿತ್ ಹಾಗೂ ರಮೇಶ್ ಪಂಡಿತ್ ಅವರು ಬೇಸರ ವ್ಯಕ್ತಪಡಿಸಿದ್ದರು.