ಬೆಂಗಳೂರು: ಹಿಜಾಬ್, ಕೇಸರಿ ಶಾಲು ವಿವಾದದ ಹೆಸರಿನಲ್ಲಿ ವಿದ್ಯಾರ್ಥಿಗಳ ನಡುವೆ ಕೋಮು ವಿಭಜನೆ ಸೃಷ್ಟಿಸುತ್ತಿರುವುದನ್ನು ಖಂಡಿಸಿ ರಾಜ್ಯಾದ್ಯಂತ ರಾಷ್ಟ್ರ ಧ್ವಜ ಹಿಡಿದು ವಿದ್ಯಾರ್ಥಿಗಳ ಮಾನವ ಸರಪಳಿ ನಿರ್ಮಿಸಿ ವಿದ್ಯಾರ್ಥಿಗಳ ಐಕ್ಯತೆ ಮತ್ತು ಸೌಹಾರ್ದತೆಯನ್ನು ಕಾಪಾಡಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್‌ಎಫ್‌ಐ) ರಾಜ್ಯ ಸಮಿತಿ ಕರೆ ನೀಡಿದೆ.
ಇಂದಿನಿಂದ ಫೆಬ್ರವರಿ 9-10, 2022ರಂದು ರಾಜ್ಯಾದ್ಯಂತ ಎಲ್ಲಾ ಕಾಲೇಜುಗಳ ಎದುರು ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಸಂಘಟಿತರಾಗಿ ದೇಶದ ತ್ರಿವರ್ಣ ಧ್ವಜ, ಸಂವಿಧಾನದ ಪೀಠಿಕೆ, ಸಾವಿತ್ರಿ ಬಾಯಿ ಫುಲೆ, ಭಗತ್ ಸಿಂಗ್, ಮಹಾತ್ಮ ಗಾಂಧೀಜಿ, ಅಂಬೇಡ್ಕರ್, ಸುಭಾಷ್ ಚಂದ್ರ ಬೋಸ್, ಕುವೆಂಪು, ಕನಕದಾಸರು, ನಾರಾಯಣ ಗುರು ಮುಂತಾದ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸೌಹಾರ್ದತೆಯ ಸಮಾಜಕ್ಕಾಗಿ ಶ್ರಮಿಸಿದವರ ಭಾವಿಚಿತ್ರಗಳನ್ನು ಹಿಡಿದು ಸಂದೇಶಗಳನ್ನು ಸಾರಬೇಕು ಎಂದು ಕರೆ ನೀಡಿದೆ.
ಕೋಮು ಸೌಹಾರ್ದತೆಗೆ ಸಂಬಂಧಿಸಿದ ಘೋಷಣಾ ಫಲಕಗಳನ್ನು ಹಿಡಿದು ಶಿಕ್ಷಣ, ಸಂವಿಧಾನ, ಕೋಮು ಸಾಮರಸ್ಯದ ಮಹತ್ವದ ಕುರಿತು ಜಾಗೃತ ವಿಚಾರಗಳನ್ನು ಪ್ರಚುರಪಡಿಸಲು ತಿಳಿಸಿದೆ.
ಪ್ರಸ್ತುತ ವಿದ್ಯಾರ್ಥಿ ಸಮುದಾಯ ಎದುರಿಸುತ್ತಿರುವ ಶೈಕ್ಷಣಿಕ ಸಮಸ್ಯೆಗಳನ್ನು ದೊಡ್ಡ ಪ್ರಮಾಣದಲ್ಲಿ ಇವೆ. ಆ ಮೂಲಕ ʻʻಸರ್ವರಿಗೂ – ಶಿಕ್ಷಣ ಸರ್ವರಿಗೂ ಉದ್ಯೋಗ” ಎಂಬ ಎಸ್ಎಫ್ಐ ಘೋಷಣೆಯನ್ನು ವಿದ್ಯಾರ್ಥಿಗಳ ಎಡೆಗೆ ಕೊಂಡೊಯ್ಯಲು ಎಸ್‌ಎಫ್‌ಐ ಕರೆ ನೀಡಿದೆ.
ಈ ಎಲ್ಲ ಅಂಶಗಳನ್ನು ಪಾಲಿಸಿ ಕೋಮುವಾದದ ಹುನ್ನಾರಗಳಿಗೆ ವಿದ್ಯಾರ್ಥಿಗಳು ಬಲಿಯಾಗದೆ ಸೌಹಾರ್ದತೆಗಾಗಿ ವಿದ್ಯಾರ್ಥಿಗಳು ಎಂಬ ಕಾರ್ಯಕ್ರಮಗಳನ್ನು ರೂಪಿಸಲು ಸಂಘಟನೆ ಕರೆ ನೀಡಿದ್ದು, ಸಾಧ್ಯವಿರುವ ಕಡೆಗಳಲ್ಲಿ ಎಲ್ಲ ಜಾತ್ಯಾತೀತ ಸಮಾನ ಮನಸ್ಕ ಸಂಘಟನೆಗಳನ್ನು ಜೊತೆಗೂಡಿ ಸೇರಿಕೊಂಡು ಕಾರ್ಯಕ್ರಮಗಳನ್ನು ರೂಪಿಸಬೇಕೆಂದು ತಿಳಿಸಿದೆ.