ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ನಾಡಹಬ್ಬ ದಸರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ

ಮೈಸೂರು: ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ಇಂದು(ಸೆಪ್ಟಂಬರ್‌ 26) ಐತಿಹಾಸಿಕ ನಾಡಹಬ್ಬ ದಸರಾ ಮಹೋತ್ಸವ-2022ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಬೆಳ್ಳಿ ಅವರು ಪಲ್ಲಕ್ಕಿಯಲ್ಲಿ ಪವಡಿಸಿರುವ ನಾಡದೇವಿ ಚಾಮುಂಡೇಶ್ವರಿ ಮೂರ್ತಿಗೆ ಆರತಿ ಬೆಳಸುವ ಮೂಲಕ ವಿದ್ಯುಕ್ತ ಚಾಲನೆ ನೀಡಿದರು.

ಇದೇ ಮೊದಲ ಬಾರಿಗೆ ದಸರಾ ಉದ್ಘಾಟನೆಯಲ್ಲಿ ಭಾಗಿಯಾದ ಭಾರತದ ಪ್ರಥಮ ಪ್ರಜೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತಮ್ಮ ಭಾಷಣದಲ್ಲಿ ಕೆಲವು ಕನ್ನಡದಲ್ಲಿ ಮಾತಗಳನ್ನು ಆಡಿದರು. ದೇವಿ ಚಾಮುಂಡೇಶ್ವರಿಗೆ ನನ್ನ ಮನಃಪೂರ್ವಕ ನಮಸ್ಕಾರಗಳು, ಎಲ್ಲ ಸಹೋದರ ಸಹೋದರಿಯರಿಗೆ ನನ್ನ ಹೃದಯಪೂರ್ವಕ ನಮಸ್ಕಾರಗಳು ಎಂದು ರಾಷ್ಟ್ರಪತಿ ಕನ್ನಡದಲ್ಲಿ ಎರಡು ವಾಕ್ಯ ಹೇಳಿದರು. ನೆರೆದಿದ್ದ ಜನರು ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು.

ಮೈಸೂರು ದಸರಾ ಭಾರತೀಯ ಸಂಸ್ಕೃತಿಯ ಗೌರವ ಹೆಚ್ಚಿಸಿದೆ. ಕರ್ನಾಟಕದಲ್ಲಿ ಜೈನ ಮತ್ತು ಬೌದ್ಧ ಪರಂಪರೆಗಳು ಬೆಸೆದುಕೊಂಡಿವೆ. ಆದಿಶಂಕರಾಚಾರ್ಯರು ಪೀಠ ಸ್ಥಾಪಿಸಿ ನಾಡಿನ ಘನತೆ ಹೆಚ್ಚಿಸಿದ್ದಾರೆ. ಬಸವಣ್ಣನವರು ಅನುಭವ ಮಂಟಪದ ಮೂಲಕ ಸಮಾನತೆ ಮತ್ತು ಪ್ರಜಾಪ್ರಭುತ್ವದ ಆಶಯ ಸಾರಿ ಹೇಳಿದರು. ಅನುಭವ ಮಂಟಪದ ಮೂಲಕ ಅಧ್ಯಾತ್ಮಿಕ ಮತ್ತು ಸಾಮಾಜಿಕ ಚರ್ಚೆಗಳು ನಡೆಯುತ್ತಿದ್ದವು ಎಂದು ರಾಷ್ಟ್ರಪತಿ ಹೇಳಿದರು.

ಕರ್ನಾಟಕವು ಮಹಿಳಾ ಸಮಾನತೆಗೂ ಹೆಸರುವಾಸಿ. ಮಹಿಶಾಸುರ ಸೇರಿದಂತೆ ಹಲವು ರಾಕ್ಷಸರನ್ನು ದೇವಿ ಸಂಹಾರ ಮಾಡಿ ಜನರನ್ನು ರಕ್ಷಿಸಿದ್ದಾಳೆ. ದೇವಿಯು ಶಕ್ತಿ ಸ್ವರೂಪಳೂ ಹೌದು, ತಾಯಿಯಾಗಿ ಭಕ್ತರನ್ನು ಕಾಪಾಡುವ ತಾಯಿ ಸ್ವರೂಪಳೂ ಹೌದು. ದಸರಾ ಎನ್ನುವುದು ಸ್ತ್ರೀಶಕ್ತಿಯ ಆರಾಧನೆ ಮಾಡುವ ಹಬ್ಬ. ಕರ್ನಾಟಕದಲ್ಲಿ ಕಿತ್ತೂರು ಚೆನ್ನಮ್ಮಾ, ಓಬವ್ವರಂಥ ಮಹಾನ್ ಹೋರಾಟಗಾರ್ತಿಯರು ಇದ್ದ ನಾಡು. ಮಹಿಳೆಯರು ಹಲವು ಆಯಾಮಗಳಲ್ಲಿ ಈಗ ಪ್ರಗತಿ ತೋರುತ್ತಿದ್ದಾರೆ. ಅವರಿಗೆ ನಾವು ಇನ್ನಷ್ಟು ಬಲ ತುಂಬಬೇಕಿದೆ ಎಂದರು.

ಮುಖ್ಯಮಂತ್ರಿ ಬೊಮ್ಮಾಯಿ ಮಾತನಾಡಿ, ಈ ಬಾರಿ ದಸರಾ ಮಹೋತ್ಸವ ಬಹಳ ವಿಶೇಷತೆಗಳಿಂದ ಕೂಡಿದೆ. ಕಳೆದ ಎರಡು ಬಾರಿ ಕೋವಿಡ್‌ ಕಾರಣದಿಂದ ಅರಮನೆಗಷ್ಟೇ ಸೀಮಿತವಾಗಿದ್ದ ದಸರಾ ಹಬ್ಬದ ಗತವೈಭವ ನೆನಪಿಸಿಕೊಳ್ಳುವಂತೆ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಯಿತು. ದುಡಿಯುವ ರೈತರು, ಕಾರ್ಮಿಕರು, ಸಾಮಾನ್ಯ ಜನರು ಮನೆಮನೆಗಳಲ್ಲಿ ನಾಡಹಬ್ಬ ಆಚರಿಸುತ್ತಿದ್ದಾರೆ ಎಂದರು.

ನಾಡನ್ನು ಸಮೃದ್ಧಿಯಾಗಿಡಲು ತಾಯಿ ಚಾಮುಂಡೇಶ್ವರಿಗೆ ಪ್ರಾರ್ಥನೆ ಸಲ್ಲಿಸಿದ್ದೇನೆ. ದೇವಿ ನಮ್ಮ ಪ್ರಾರ್ಥನೆಗೆ ಓಗೊಟ್ಟು ನಮಗೆ ಆಶೀರ್ವಾದ, ಶಕ್ತಿ ಕೊಡುತ್ತಾಳೆ. ಇದು ನಮ್ಮ ಸೌಭಾಗ್ಯ. ಮೈಸೂರು ಮಹಾರಾಜರ ಕಾಲದಿಂದ ದೇವಿಯ ಪೂಜೆಯನ್ನು ಪ್ರಜಾಪ್ರಭುತ್ವ ಬಂದ ಮೇಲೆ ಮುಂದುವರಿಸಿಕೊಂಡು ಹೋಗಿದ್ದೇವೆ. ಗತಕಾಲದ ವೈಭವದ ಜೊತೆಗೆ ಇಂದಿನ ಪ್ರಸ್ತುತ ಕಾಲದ ಸಮಗ್ರ ಕನ್ನಡ ನಾಡಿನ ಶ್ರೇಯೋಭಿವೃದ್ಧಿಯೂ ಮುಖ್ಯ. ಹತ್ತು ಹಲವು ನೈಸರ್ಗಿಕ ಸವಾಲುಗಳನ್ನು ಎದುರಿಸಿ ಜನಕಲ್ಯಾಣದ ಕಡೆಗೆ ದಾಪುಗಾಲು ಹಾಕುತ್ತಿದ್ದೇವೆ ಎಂದು ತಿಳಿಸಿದರು.

ವೇದಿಕೆಯಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಖಾತೆ ಸಚಿವ ಪ್ರಹ್ಲಾದ್ ಜೋಶಿ, ಕೇಂದ್ರದ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಶಾಸಕ ಜಿ.ಟಿ.ದೇವೇಗೌಡ ಸೇರಿದಂತೆ ಮೈಸೂರಿನ ಶಾಸಕರು ಹಾಜರಿದ್ದರು.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಚಾಮುಂಡಿ ಬೆಟ್ಟಕ್ಕೆ ಆಗಮಿಸುತ್ತಿದ್ದ ಹಾಗೇ ದೇವರ ದರ್ಶನ ಪಡೆದರು. ದೇವಸ್ಥಾನವನ್ನು ವೀಕ್ಷಿಸಿ, ಮಾಹಿತಿಗಳನ್ನು ಪಡೆದುಕೊಂಡರು. ಬಳಿಕ ಉದ್ಘಾಟನಾ ಸಮಾರಂಭದ ಮುಖ್ಯ ವೇದಿಕೆಗೆ ಆಗಮಿಸುತ್ತಿದ್ದಂತೆಯೇ ಪೊಲೀಸ್‌ ಪಡೆಯಿಂದ ಭವ್ಯ ಸ್ವಾಗತ ನೀಡಲಾಯಿತು.

Donate Janashakthi Media

Leave a Reply

Your email address will not be published. Required fields are marked *