ರಾಷ್ಟ್ರಪತಿ ರಬ್ಬರ್ ಸ್ಟ್ಯಾಂಪ್ ಆಗಬಾರದು: ಯಶವಂತ್ ಸಿನ್ಹಾ

ಬೆಂಗಳೂರು: ರಾಷ್ಟ್ರದ ವಿವಿಧ ರಾಜ್ಯಗಳಿಗೆ ಭೇಟಿ ನೀಡಿ ಶಾಸಕರಿಂದ ಮತಯಾಚಿಸುತ್ತಿರುವ ಅವರು ಯಶವಂತ್‌ ಸಿನ್ಹಾ ಅವರು ಇಂದು ರಾಜ್ಯ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರನ್ನು ಭೇಟಿ ಮಾಡಿ ಮತ ಯಾಚಿಸಿದರು.

ರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸುವರು ಎಂದಿಗೂ ರಬ್ಬರ್ ಸ್ಟ್ಯಾಂಪ್ ಆಗಬಾರದು. ನಾನು ಆಯ್ಕೆಯಾದರೆ ಸಂವಿಧಾನಕ್ಕೆ ಮಾತ್ರ ಉತ್ತರದಾಯಿತ್ವ ಆಗಿದ್ದೇನೆ. ಆಡಳಿತ ಪಕ್ಷದ ಅಭ್ಯರ್ಥಿಯೂ (ದ್ರೌಪದಿ ಮುರ್ಮು) ಹಾಗೆಯೇ ಇರಬೇಕು ಎಂದು ಬಯಸುತ್ತೇನೆ. ಆಡಳಿತ ಪಕ್ಷದ ಅಭ್ಯರ್ಥಿ ಇದನ್ನು ಗಮನಿಸಲಿ ಎಂದು ಯಶವಂತ್‌ ಸಿನ್ಹಾ ಹೇಳಿದರು.

ಆಡಳಿತ ಪಕ್ಷದ ಅಭ್ಯರ್ಥಿ ಅದನ್ನು ಪರಿಪಾಲಿಸಲಿ. ದೇಶದಲ್ಲಿ ಕೋಮು ಧ್ರುವೀಕರಣ ಆಗುತ್ತಿರುವುದನ್ನು ತಡೆಯುವ ಕೆಲಸವಾಗಬೇಕಿದೆ. ಎರಡು ದಿನಗಳ ಹಿಂದೆ ಸುಪ್ರೀಂ ಕೋರ್ಟ್ ಬಿಜೆಪಿಯ ಮಾಜಿ ವಕ್ತಾರೆಯ ಬಗ್ಗೆ ತನ್ನ ಅಭಿಪ್ರಾಯ ಹೇಳಿದೆ. ನ್ಯಾಯಾಂಗ ಸಂವಿಧಾನಕ್ಕೆ ಉತ್ತರ ಕೊಡುತ್ತದೆ ರಾಜಕೀಯ ಪಕ್ಷಗಳಿಗೆ ಅಲ್ಲವೆಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಹೇಳಿರುವುದನ್ನು ನಾನು ಸ್ವಾಗತಿಸುತ್ತೇನೆ ಅವರಿಗೆ ನನ್ನ ಅಭಿನಂದನೆ ಸಲ್ಲಿಸುತ್ತೇನೆ. ಆದರೆ, ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪ್ರಕಟಣೆಗಳು ಬರುತ್ತಿರುವುದು ದೇಶದ ದೌರ್ಭಾಗ್ಯ. ರಾಮಮಂದಿರ ತೀರ್ಪು ಬಂದಾಗ ಇಡೀ ದೇಶವೇ ಮೌನವಾಗಿ ಸ್ವಾಗತಿಸಿದೆ. ಈಗ ಅವರ(ನೂಪುರ್‌ ಶರ್ಮಾ ವಿರುದ್ಧ ತೀರ್ಪು ಬಂದಾಗ ನ್ಯಾಯಾಂಗ ನಿಂದಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ರಾಷ್ಟ್ರಪತಿ ಚುನಾವಣೆಗೆ ಪ್ರತಿಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿರುವ ಯಶವಂತ್ ಸಿನ್ಹಾ, ಬೆಂಗಳೂರು ನಗರದ ವಸಂತ ನಗರದ ಖಾಸಗಿ ಹೋಟೆಲ್​ನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಭಾಗವಹಿಸಿದ ಕಾಂಗ್ರೆಸ್ ಶಾಸಕರಲ್ಲಿ ಮತಯಾಚಿಸಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್, ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು. ಕಾಂಗ್ರೆಸ್ ಪಕ್ಷದ ಶಾಸಕರು, ವಿಧಾನ ಪರಿಷತ್ ಸದಸ್ಯರು, ರಾಜ್ಯಸಭೆ ಹಾಗೂ ಲೋಕಸಭೆ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಸಿನ್ಹಾರಿಗೆ ತಮ್ಮ ಮತವನ್ನು ನೀಡುವ ಭರವಸೆಯನ್ನು ಕಾಂಗ್ರೆಸ್ ನಾಯಕರು ನೀಡಿದ್ದಾರೆ.

ಈಗಾಗಲೇ ತಮಿಳುನಾಡು, ಹೈದರಾಬಾದ್ ಮೂಲಕ ಬೆಂಗಳೂರಿಗೆ ಆಗಮಿಸಿದ್ದಾರೆ. ಸಂಜೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಜುಲೈ18ರಂದು ರಾಷ್ಟ್ರಪತಿ ಆಯ್ಕೆಗೆ ಚುನಾವಣೆ ನಡೆಯಲಿದ್ದು, 21ರಂದು ಫಲಿತಾಂಶ ಪ್ರಕಟವಾಗಲಿದೆ.

Donate Janashakthi Media

Leave a Reply

Your email address will not be published. Required fields are marked *