ಹೊಸದಿಲ್ಲಿ: ಖ್ಯಾತ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ವಿಡಿಯೋ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ ದೆಹಲಿ ಪೊಲೀಸರು ಬಂಧಿಸಿದ್ದಾಗಿ ಶನಿವಾರ ಹೇಳಿದ್ದಾರೆ. ಪೊಲೀಸರು ಲ್ಯಾಪ್‌ಟಾಪ್ ಮತ್ತು ಮೊಬೈಲ್ ಅನ್ನು ಕೂಡಾ ವಶಪಡಿಸಿಕೊಂಡಿದ್ದು, ಅಳಿಸಿದ ಡೇಟಾವನ್ನು ಹಿಂಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ವರದಿಯಾಗಿದೆ. ಆರೋಪಿಯನ್ನು ಆಂಧ್ರಪ್ರದೇಶದ ಗುಂಟೂರು ನಿವಾಸಿ ಈಮನಿ ನವೀನ್ (23) ಎಂದು ಗುರುತಿಸಲಾಗಿದೆ.
ಸುಮಾರು ಎರಡು ತಿಂಗಳ ಹಿಂದೆ ನಟಿ ರಶ್ಮಿಕಾ ಮಂದಣ್ಣ ಅವರು ಲಿಫ್ಟ್‌ಗೆ ಪ್ರವೇಶಿಸುತ್ತಿರುವ ಡೀಪ್‌ಫೇಕ್ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಈ ವೀಡಿಯೊ ವೈರಲ್ ಆದ ನಂತರ ಬಲಪಂಥೀಯರು ಅವರ ವಿರುದ್ಧ ಅಶ್ಲೀಲ ಹೇಳಿಕೆಯನ್ನು ನೀಡಿದ್ದರು. ಇದರ ಬಳಿಕ ಸ್ವತಃ ರಶ್ಮಿಕಾ ಅವರೇ ವಿಡಿಯೊ ತನ್ನದಲ್ಲ ಎಂದು ಹೇಳಿಕೆ ನೀಡಿದ್ದರು. ಅಲ್ಲದೆ, ಈ ಬಗ್ಗೆ ಹಲವಾರು ಮಾಧ್ಯಮಗಳು ಫ್ಯಾಕ್ಟ್‌ಚೆಕ್ ವರದಿಗಳನ್ನು ಮಾಡಿದ್ದವು.
ಇದನ್ನೂ ಓದಿ: ‘ಗಾಜಾದ ಅನ್ಯಾಯದ ಯುದ್ಧ ನಿಲ್ಲಿಸಿ’ | ಅಲಿಪ್ತ ಚಳವಳಿಯ ಸಮ್ಮೇಳನದಲ್ಲಿ ಆಫ್ರಿಕಾ ನಾಯಕರ ಒತ್ತಾಯ
ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಅಪ್ಲೋಡ್ ಆದ ನಂತರ ದೆಹಲಿ ಪೊಲೀಸ್ ವಿಶೇಷ ಸೆಲ್ ನವೆಂಬರ್ 10 ರಂದು ಪ್ರಕರಣವನ್ನು ಕೈಗೆತ್ತಿಕೊಂಡಿತ್ತು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 465 (ನಕಲಿ) ಮತ್ತು 469 (ಪ್ರತಿಷ್ಠೆಗೆ ಹಾನಿ ಮಾಡುವ ಉದ್ದೇಶದಿಂದ ನಕಲಿ) ಅಡಿಯಲ್ಲಿ ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯ 66C ಮತ್ತು 66E ಸೆಕ್ಷನ್‌ಗಳ ಅಡಿಯಲ್ಲಿ ಅಂದು ಪ್ರಕರಣ ದಾಖಲಿಸಲಾಗಿತ್ತು. ಕಪ್ಪು ಉಡುಪಿನಲ್ಲಿ ಲಿಫ್ಟ್‌ಗೆ ಪ್ರವೇಶಿಸುತ್ತಿರುವ ಬೇರೊಬ್ಬ ಮಹಿಳೆಯ ಮೂಲ ವೀಡಿಯೊವನ್ನು ಬಳಸಿ ರಶ್ಮಿಕಾ ಅವರ ಮುಖವನ್ನು ಆರೋಪಿಗಳು ಮಾರ್ಫ್ ಮಾಡಿದ್ದರು.
ಆರೋಪಿ ನವೀನ್ ಬಿ.ಟೆಕ್ ಓದುತ್ತಿದ್ದು, 2019 ರಲ್ಲಿ ಗೂಗಲ್ ಗ್ಯಾರೇಜ್‌ನಿಂದ ಡಿಜಿಟಲ್ ಮಾರ್ಕೆಟಿಂಗ್‌ನಲ್ಲಿ ಡಿಜಿಟಲ್ ಸರ್ಟಿಫಿಕೇಶನ್ ಕೋರ್ಸ್ ಅನ್ನು ಪೂರ್ಣಗೊಳಿಸಿದ್ದಾನೆ ಎಂದು ವರದಿಯಾಗಿದೆ. ಆರೋಪಿಯು ಮೂರು ಫ್ಯಾನ್ ಪೇಜ್‌ಗಳನ್ನು ನಡೆಸುತ್ತಿದ್ದರು, ಅದರಲ್ಲಿ ಒಂದು ರಶ್ಮಿಕಾ ಮಂದಣ್ಣ ಅವರದ್ದಾಗಿದೆ. ಈ ಪೇಜ್ ಸಾಕಷ್ಟು ಫಾಲೋವರ್ಸ್ ಇಲ್ಲದ ಕಾರಣ ಆರೋಪಿ ರಶ್ಮಿಕಾ ಅವರ ಡೀಪ್ ಫೇಕ್ ವಿಡಿಯೊ ರಚಿಸಿದ್ದನು. ಅದನ್ನು ಅಕ್ಟೋಬರ್ 13 ರಂದು ಇನ್ಸ್‌ಟಾಗ್ರಾಂನ ಪೇಜ್‌ನಲ್ಲಿ ಪೋಸ್ಟ್ ಮಾಡಿದ್ದನು. ಇದರ ನಂತರ ಅದರ ಫಾಲೋವರ್ 90 ಸಾವಿರದಿಂದ ಒಂದು ಲಕ್ಷದಷ್ಟು ಹೆಚ್ಚಾಗಿದೆ ಎಂದು ವರದಿ ಹೇಳಿದೆ.
ಡೀಪ್ ಫೇಕ್ ವಿಡಿಯೊ ವೈರಲ್ ಆದ ನಂತರ ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯು) ದೂರು ನೀಡಿತ್ತು. ಇದರ ನಂತರ ಪೊಲೀಸರು ‘ಡೀಪ್‌ಫೇಕ್’ ವೀಡಿಯೊ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು. “ನಮ್ಮ ಸೂಚನೆಯ ನಂತರ, ದೆಹಲಿ ಪೊಲೀಸರು ರಶ್ಮಿಕಾ ಮಂದಣ್ಣ ಅವರ ನಕಲಿ ವಿಡಿಯೋ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು” ಎಂದು ಮಾಜಿ ಡಿಸಿಡಬ್ಲ್ಯೂ ಅಧ್ಯಕ್ಷೆ ಸ್ವಾತಿ ಮಲಿವಾಲ್ ಎಕ್ಸ್‌ನಲ್ಲಿ ಬರೆದಿದ್ದರು.
ವಿಡಿಯೊ ನೋಡಿ: ಸಂಯುಕ್ತ ಹೋರಾಟ ಕರ್ನಾಟಕ ನಾಯಕರ ಜೊತೆ ಸಿಎಂ ಮಾತುಕತೆ : ಸಿಎಂ ನೀಡಿದ ಭರವಸೆಗಳೇನು? Janashakthi Media