2011–2025 ರ ಪೊಲೀಸ್ ಅಂಕಿ-ಅಂಶಗಳು ಬಹಿರಂಗ
ಬೆಂಗಳೂರು: ಪೊಲೀಸ್ ಇಲಾಖೆ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ, ಕಳೆದ 14 ವರ್ಷಗಳಲ್ಲಿ ಅತ್ಯಾಚಾರ ಮತ್ತು ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳ (POCSO) ಪ್ರಕರಣಗಳ ಸಂಖ್ಯೆ ನಿರಂತರವಾಗಿ ಹೆಚ್ಚಾಗಿದ್ದರೂ, ದೋಷಾರೋಪಣೆ ಹಾಗೂ ಶಿಕ್ಷೆ ಪ್ರಮಾಣ ಅತ್ಯಂತ ಕಡಿಮೆಯಾಗಿದೆ ಎಂಬುದು ಗಂಭೀರ ಚಿಂತೆಗೆ ಕಾರಣವಾಗಿದೆ.
2011ರಲ್ಲಿ 122 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದರೆ, ಕೇವಲ 14 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆ ಆಗಿದೆ. 2013 ರಲ್ಲಿಯೂ ಇದೇ ಸ್ಥಿತಿ ಮುಂದುವರಿದು 74 ಪ್ರಕರಣಗಳಿಗೆ ಕೇವಲ 2 ದಂಡನೆಗಳು ಮಾತ್ರ ದಾಖಲಾಗಿವೆ. 2014 ರಿಂದ POCSO ಪ್ರಕರಣಗಳು ತೀವ್ರ ಏರಿಕೆಯಾಗಿದ್ದು, 329 ಪ್ರಕರಣಗಳಲ್ಲಿ 51 ದಂಡನೆಗಳು ಮಾತ್ರ ನಡೆದಿವೆ.
2017 ರಿಂದ 2022 ರವರೆಗೆ ಅತ್ಯಾಚಾರ ಪ್ರಕರಣಗಳ ಸಂಖ್ಯೆ 100–150ರ ನಡುವೆಯೇ ಇರುವುದು ಕಂಡುಬಂದರೂ, ವರ್ಷಕ್ಕೆ 0ರಿಂದ 2ರಷ್ಟು ಮಾತ್ರ ಶಿಕ್ಷೆಗಳು ನಡೆದಿರುವುದು ನ್ಯಾಯಾಂಗ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಕುಸಿಯುವಂತೆ ಮಾಡಿದೆ.
ಇದನ್ನೂ ಓದಿ: ರಾಯಚೂರು | ಮಹಿಳೆಯರು, ಮಕ್ಕಳ ರಕ್ಷಣೆಗಾಗಿ ವಿಶೇಷ ಅಕ್ಕ ಪಡೆ ರಚನೆ
ವಿಶೇಷವಾಗಿ 2022, 2023, 2024 ಮತ್ತು 2025ರಲ್ಲಿ ಅತ್ಯಾಚಾರ ಪ್ರಕರಣಗಳಿಗೆ ಒಂದು ಕೂಡ ದಂಡನೆ ಆಗದಿರುವುದು ದಾಖಲೆಗಳಲ್ಲಿ ಸ್ಪಷ್ಟವಾಗಿದೆ.
POCSO ಪ್ರಕರಣಗಳ ಸ್ಥಿತಿ ಇನ್ನಷ್ಟು ಆತಂಕಕಾರಿಯಾಗಿದೆ. 2023ರಲ್ಲಿ 628 ಪ್ರಕರಣಗಳು ದಾಖಲಾಗಿದ್ದರೂ ಕೇವಲ 20 ದಂಡನೆಗಳು, 2024 ರಲ್ಲಿ 643 ಪ್ರಕರಣಗಳಿಗೆ ಕೇವಲ 1 ಶಿಕ್ಷೆ, 2025ರಲ್ಲಿ (ನವೆಂಬರ್ವರೆಗೆ) 533 ಪ್ರಕರಣಗಳಿಗೆ ಶೂನ್ಯ ದಂಡನೆ ದಾಖಲಾಗಿದೆ.
ಈ ಅಂಕಿ-ಅಂಶಗಳು ತನಿಖಾ ವಿಳಂಬ, ಸಾಕ್ಷ್ಯ ಸಂಗ್ರಹದ ಕೊರತೆ, ನ್ಯಾಯಾಲಯಗಳಲ್ಲಿ ಪ್ರಕರಣಗಳು ವರ್ಷಗಟ್ಟಲೆ ಮುಂದೂಡಲ್ಪಡುವುದು ಹಾಗೂ ರಾಜಕೀಯ–ಆಡಳಿತಾತ್ಮಕ ಒತ್ತಡಗಳಿರುವುದನ್ನು ಸೂಚಿಸುತ್ತವೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಸಾಮಾಜಿಕ ಕಾರ್ಯಕರ್ತರು ಮತ್ತು ಕಾನೂನು ತಜ್ಞರು, “ಪ್ರಕರಣ ದಾಖಲಾಗುವುದು ಸಾಕಾಗುವುದಿಲ್ಲ, ತಪ್ಪಿತಸ್ಥರಿಗೆ ಶಿಕ್ಷೆ ಆಗದಿದ್ದರೆ ಅಪರಾಧಿಗಳಿಗೆ ಧೈರ್ಯ ಹೆಚ್ಚುತ್ತದೆ” ಎಂದು ಎಚ್ಚರಿಸಿದ್ದಾರೆ. ಈ ಹಿನ್ನೆಲೆದಲ್ಲಿ ತನಿಖಾ ವ್ಯವಸ್ಥೆ ಬಲಪಡಿಸುವುದು, ವೇಗದ ನ್ಯಾಯಾಲಯಗಳು, ಸಾಕ್ಷಿಗಳ ರಕ್ಷಣಾ ವ್ಯವಸ್ಥೆ ಮತ್ತು ಪೊಲೀಸ್–ಪ್ರಾಸಿಕ್ಯೂಷನ್ ಹೊಣೆಗಾರಿಕೆ ನಿಶ್ಚಿತಗೊಳಿಸುವ ಅಗತ್ಯ ತೀವ್ರವಾಗಿದೆ ಎಂದಿದ್ದಾರೆ.
ಪ್ರಶ್ನೆ ಒಂದೇ: ಅಪರಾಧಗಳು ಹೆಚ್ಚುತ್ತಿವೆ, ಆದರೆ ಶಿಕ್ಷೆ ಯಾಕೆ ಕಾಣುತ್ತಿಲ್ಲ? ನ್ಯಾಯ ಯಾವಾಗ ಸಂತ್ರಸ್ತರ ಮನೆ ಬಾಗಿಲಿಗೆ ತಲುಪಲಿದೆ? ಎಂಬ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿಯುತ್ತಿವೆ ಎಂದು ಜನಪರ ಸಂಘಟನೆಗಳು ಆರೋಪಿಸಿವೆ.
ಇದನ್ನೂ ನೋಡಿ: ಮರ್ಯಾದೆಗೇಡು ಹತ್ಯೆ ನಿಷೇಧ ಕಾಯ್ದೆಗಾಗಿ ಪತ್ರ ಚಳವಳಿ Janashakthi Media
