ಕೃಷ್ಣಗಿರಿ: ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಬೇಕಾದ ಶಾಲೆಯ ಶಿಕ್ಷಕರೇ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆಯೊಂದು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ನಡೆದಿದೆ.
ನಕಲಿ ಎನ್‌ಸಿಸಿ ಶಿಬಿರಗಳಲ್ಲಿ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಆರು ತಿಂಗಳ ನಂತರ, ಬರ್ಗೂರ್ ಸರ್ಕಾರಿ ಶಾಲೆಯ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಶಿಕ್ಷಕರನ್ನು ಬಂಧಿಸಲಾಗಿದೆ. ಬಾಲಕಿಯ ಸಂಬಂಧಿಕರು ಆರೋಪಿಗೆ ಮರಣದಂಡನೆ ವಿಧಿಸಬೇಕೆಂದು ಶಾಲೆಯ ಮುಂದೆ ಪ್ರತಿಭಟನೆ ನಡೆಸಿದರು.
50 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಲಾಯಿತು. ಅಧಿಕಾರಿಗಳೊಂದಿಗೆ ಮಾತುಕತೆಯ ನಂತರ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು. ಸೋಮವಾರ ಸಂಜೆ, ಬಾಲಕಿಯ ತಾಯಿ ಶಾಲೆಗೆ ತೆರಳಿ ಜನವರಿ 3 ರಿಂದ ಅನಾರೋಗ್ಯ ರಜೆಯಲ್ಲಿರುವ ತನ್ನ ಮಗಳ ಬಗ್ಗೆ ಯಾರೂ ಏಕೆ ವಿಚಾರಿಸಲಿಲ್ಲ ಎಂದು ಮುಖ್ಯೋಪಾಧ್ಯಾಯಿನಿ ಅವರನ್ನು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಲಾಭಕೋರ ಆರ್ಥಿಕತೆಯೂ ಅಮಾಯಕ ಜೀವಗಳೂ
ಇದರ ನಂತರ, ಮುಖ್ಯೋಪಾಧ್ಯಾಯಿನಿ ಮತ್ತು ಒಬ್ಬ ಶಿಕ್ಷಕಿ ಸಂತ್ರಸ್ತೆ ಬಾಲಕಿ ಮನೆಗೆ ಭೇಟಿ ನೀಡಿದ್ದಾರೆ, ಈ ವೇಳೆ ಜನವರಿ 2 ಮತ್ತು 3 ರಂದು 57, 48 ಮತ್ತು 37 ವರ್ಷ ವಯಸ್ಸಿನ ಮೂವರು ಶಿಕ್ಷಕರು ತನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಹೇಳಿದ್ದರು. ಮೂವರು ಪುರುಷರಲ್ಲಿ ಇಬ್ಬರು ಆಕೆಯ ತರಗತಿ ಶಿಕ್ಷಕರು ಎಂದು ಮೂಲಗಳು ತಿಳಿಸಿವೆ.
ಮರುದಿನ, ಬಾಲಕಿ ಮತ್ತು ಆಕೆಯ ತಾಯಿ, ಹಾಗೂ ಮುಖ್ಯೋಪಾಧ್ಯಾಯಿನಿ ಸೇರಿ ಬರ್ಗೂರ್ ಅಖಿಲ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದರು. ನಂತರ, ಕೃಷ್ಣಗಿರಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಸಂತ್ರಸ್ತೆಯನ್ನು ಭೇಟಿ ಮಾಡಿ, ಸರ್ಕಾರಿ ಕೃಷ್ಣಗಿರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಒನ್ ಸ್ಟಾಪ್ ಸೆಂಟರ್‌ಗೆ ಕಳುಹಿಸಿದ್ದಾರೆ.
ದೂರಿನ ಮೇರೆಗೆ, ಬರಗೂರು ಪೊಲೀಸರು ಪೋಕ್ಸೊ ಕಾಯ್ದೆಯ ಸೆಕ್ಷನ್ 5 (ಎಫ್) ಆರ್/ಡಬ್ಲ್ಯೂ 6 ರ ಅಡಿಯಲ್ಲಿ ತೀವ್ರ ಲೈಂಗಿಕ ದೌರ್ಜನ್ಯ ಮತ್ತು ಬಿಎನ್‌ಎಸ್‌ನ ಸೆಕ್ಷನ್ 329 (3) (ಕ್ರಿಮಿನಲ್ ಅತಿಕ್ರಮಣ) ಮತ್ತು 351 (2) (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಬುಧವಾರ, ಮುಖ್ಯ ಶಿಕ್ಷಣ ಅಧಿಕಾರಿ (ಪ್ರಭಾರ) ಎ ಮುನಿರಾಜ್ ಮತ್ತು ಜಿಲ್ಲಾ ಶಿಕ್ಷಣ ಅಧಿಕಾರಿ (ಪ್ರಾಥಮಿಕ) ಥಾಮ್ಸನ್ ಶಾಲೆಗೆ ಭೇಟಿ ನೀಡಿದರು. ಸಿಇಒ ಸೂಚನೆಯ ಮೇರೆಗೆ, ಮೂವರು ಆರೋಪಿ ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ.
ಟಿಎನ್‌ಐಇ ಜೊತೆ ಮಾತನಾಡಿದ ಕೃಷ್ಣಗಿರಿ ಕಲೆಕ್ಟರ್ ಸಿ ದಿನೇಶ್ ಕುಮಾರ್, ಮಗು ಗರ್ಭಿಣಿಯಾಗಿತ್ತು ಮತ್ತು ಗರ್ಭಪಾತಕ್ಕೆ ಒಳಗಾಗಿದೆ ಎಂಬ ವದಂತಿಗಳನ್ನು ನಿರಾಕರಿಸಿದರು. ಜಿಲ್ಲಾಡಳಿತ ದೂರಿನ ಮೇರೆಗೆ ತ್ವರಿತವಾಗಿ ಕಾರ್ಯನಿರ್ವಹಿಸಿರುವುದಾಗಿ ತಿಳಿಸಿದ್ದಾರೆ. ಬಾಲಕಿಗೆ ಕೌನ್ಸೆಲಿಂಗ್ ನೀಡಲಾಯಿತು ಮತ್ತು ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಯಿತು ಎಂದು ಅವರು ಹೇಳಿದರು.
ರಾಜ್ಯ ಸರ್ಕಾರದ ವಿರುದ್ಧ ಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಖಂಡಿಸಿದ್ದು, ಈ ಆಡಳಿತದಲ್ಲಿ ತಮಿಳುನಾಡಿನಲ್ಲಿ ವಿದ್ಯಾರ್ಥಿನಿಯರು ಮತ್ತು ಮಹಿಳೆಯರಿಗೆ ಸುರಕ್ಷತೆ ಇಲ್ಲ ಎಂದು ಆರೋಪಿಸಿದ್ದಾರೆ.
ಡಿಎಂಕೆ ಸರ್ಕಾರವು ಈ ಸ್ಥಿತಿಯ ಬಗ್ಗೆ ನಾಚಿಕೆಪಡಬೇಕು ಮತ್ತು ಮೂವರು ಆರೋಪಿಗಳಿಗೆ ಗರಿಷ್ಠ ಶಿಕ್ಷೆ ವಿಧಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ನಕಲಿ ಎನ್‌ಸಿಸಿ ಶಿಬಿರಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ 120 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು, 23 ಜನರನ್ನು ಬಂಧಿಸಲಾಗಿದೆ ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಇದನ್ನೂ ನೋಡಿ: ‘ಉಪ್ಪಿಟ್ಟು ಬೇಡ.. ಬಿರಿಯಾನಿ, ಚಿಕನ್ ಫ್ರೈ ಬೇಕು’ ಅಂಗನವಾಡಿ ಬಾಲಕನ ಬೇಡಿಕೆಗೆ ಸ್ಪಂದಿಸಿದ ಎಡರಂಗ ಸರ್ಕಾರ