ಮೈಸೂರು: ಸಂಶೋಧನ ವಿದ್ಯಾರ್ಥಿನಿಯನ್ನು ಮನೆಗೆ ಕರೆಸಿಕೊಂಡು ಪ್ರಾಧ್ಯಾಪಕನೋರ್ವ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದ್ದು, ಈ ಸಂಬಂಧ ಸಂತ್ರಸ್ತೆ ಹಾಗೂ ಆರೋಪಿಯ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ.
ಮೈಸೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ| ರಾಮಚಂದ್ರಪ್ಪ ವಿರುದ್ಧ ಇಂಥದ್ದೊಂದು ಆರೋಪ ಕೇಳಿ ಬಂದಿದೆ. ಇವರ ಪತ್ನಿ ಇದೇ ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಪ್ರಾಧ್ಯಾಪಕಿ.
ಸಂತ್ರಸ್ತೆಯು ರಾಮಚಂದ್ರಪ್ಪರ ಮಾರ್ಗದರ್ಶನದಲ್ಲಿ ಪಿಎಚ್‌ಡಿ ಮಾಡುತ್ತಿದ್ದು, ಗುರುವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಕರೆಸಿಕೊಂಡು ಅತ್ಯಾಚಾರ ಎಸಗಿದ್ದು, ಯುವತಿ ಸಹಾಯಕ್ಕಾಗಿ ಕೂಗಿದ್ದಾಳೆ ಎನ್ನಲಾಗಿದೆ. ಆಗ ಕಾಲೇಜಿನಿಂದ ಮನೆಗೆ ಮರಳಿದ ಪತ್ನಿಗೆ ವಿಷಯ ತಿಳಿದು ಸಂತ್ರಸ್ತೆ ಯೊಂದಿಗೆ ಪೊಲೀಸರಿಗೆ ದೂರು ನೀಡಿದ್ದಾರೆ.
ಪತಿ ವಿರುದ್ಧವೇ ಆಕ್ರೋಶ: ತನ್ನ ಪತಿಯ ವಿರುದ್ಧವೇ ಆಕ್ರೋಶ ಹೊರಹಾಕಿರುವ ಪ್ರಾಧ್ಯಾಪಕಿ, “ಪ್ರೊ| ರಾಮಚಂದ್ರಪ್ಪ ಮಾನಸಗಂಗೋತ್ರಿಯಲ್ಲಿ ಹಲವು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಆದರೆ ಈ ಬಗ್ಗೆ ಯಾವುದೇ ಆಧಾರ ಸಿಕ್ಕಿರಲಿಲ್ಲ. ಆದ್ದರಿಂದ ಹಿಂದೆ ಈತನ ವಿರುದ್ಧ ದೂರು ನೀಡಲಾಗಲಿಲ್ಲ. ಗುರುವಾರ ಸ್ಪಷ್ಟ ಸಾಕ್ಷ್ಯ ಸಿಕ್ಕಿದ್ದು, ಸಂತ್ರಸ್ತೆಯೊಂದಿಗೆ ಪೊಲೀಸರಿಗೆ ದೂರು ನೀಡಿದ್ದೇನೆ’ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಆರೋಪಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಸಂತ್ರಸ್ತೆ ಯನ್ನು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ.