ಅಟ್ಲಾಂಟಾ : ರಿಚ್ ಹೋಮಿ ಕ್ವಾನ್.. ಈತನ ಹೆಸರು ಕೇಳಿದ್ರೆ ಸಾಕು ಅಮೆರಿಕದ ಪಡ್ಡೆ ಹೈಕ್ಳಿಗೆ ರೋಮಾಂಚನ.. ಅಮೆರಿಕ ದೇಶದ ಜಾರ್ಜಿಯಾ ರಾಜ್ಯದ ಅಟ್ಲಾಂಟಾ ನಗರದ ನಿವಾಸಿಯಾದ ಈತ, ಅಮೆರಿಕ ದೇಶದ ಅತಿ ದೊಡ್ಡ ರ‍್ಯಾಪ್ ಸ್ಟಾರ್.. 34 ವರ್ಷ ವಯಸ್ಸಿನ ಈ ರ‍್ಯಾಪರ್ ಇದೀಗ ನಿಗೂಢ ರೀತಿಯಲ್ಲಿ ಸಾವಿಗೀಡಾಗಿದ್ದಾನೆ. ಆತನ ಸಾವಿಗೆ ಕಾರಣ ಏನು ಅನ್ನೋದನ್ನ ವೈದ್ಯರು ಇನ್ನೂ ಬಹಿರಂಗಪಡಿಸಿಲ್ಲ ಎಂದು ಟೈಮ್ಸ್ ನೌ ವರದಿ ಮಾಡಿದೆ.
ಹ್ಯಾಮ್ಡೆನ್ ಫಾರೆಸ್ಟ್ ಡ್ರೈವ್ ಎಸ್‌ಡಬ್ಲ್ಯೂ ಎಂಬಲ್ಲಿ ಈತನ ನಿವಾಸ ಇದೆ. ತನ್ನ ಮನೆಯಲ್ಲೇ ರಿಚ್ ಹೋಮಿ ಕ್ವಾನ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ. ಈತನ ಸ್ಥಿತಿಯನ್ನು ಗಮನಿಸಿದ ಗೆಳತಿ ಆಂಬರ್ ವಿಲಿಯಮ್ಸ್ ಕೂಡಲೇ ತುರ್ತು ವೈದ್ಯಕೀಯ ನೆರವು ಕೋರಿ ಕರೆ ಮಾಡಿದ್ದರು. ಅಟ್ಲಾಂಟಾ ಪೊಲೀಸರೂ ಕೂಡಾ ಸ್ಥಳಕ್ಕೆ ಧಾವಿಸಿದ್ದರು.
911 ನಂಬರ್‌ಗೆ ತುರ್ತು ಕರೆ ಮಾಡಿದ್ದ ರಿಚ್ ಹೋಮಿ ಕ್ವಾನ್ ಅವರ ಗರ್ಲ್ ಫ್ರೆಂಡ್, ತನ್ನ ಗೆಳೆಯ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಾನೆ ಎಂದು ಮಾಹಿತಿ ನೀಡಿದ್ದಳು. ತಮ್ಮ ಮಗನನ್ನು ಶಾಲೆಯಿಂದ ಮನೆಗೆ ಕರೆ ತರಲು ಆಕೆ ಹೋಗಿದ್ದಳು. ಮನೆಗೆ ಬಂದು ನೋಡಿದಾಗ ಆತ ಮಲಗಿದಂತೆ ಕಂಡು ಬಂದಿದ್ದ. ಆಕೆ ಕೆಲ ಕಾಲ ಸುಮ್ಮನಿದ್ದಳು. ಎಷ್ಟು ಹೊತ್ತಾದರೂ ರಿಚ್ ಹೋಮಿ ಕ್ವಾನ್ ಎಚ್ಚರಗೊಳ್ಳದ ಹಿನ್ನೆಲೆಯಲ್ಲಿ ಆತನ ಬಳಿ ಬಂದು ಪರಿಶೀಲನೆ ನಡೆಸಿದಾಗ ಆತನ ಬಾಯಿಯಿಂದ ನೊರೆ ಬಂದಿತ್ತು. ಜೊತೆಯಲ್ಲೇ ಆತನ ನಾಡಿ ಮಿಡಿತವೂ ಇರಲಿಲ್ಲ ಎಂದು ರಿಚ್ ಹೋಮಿ ಕ್ವಾನ್ ಗೆಳತಿ ಆಂಬರ್ ವಿಲಿಯಮ್ಸ್ ಪೊಲೀಸರಿಗೆ ವಿವರಿಸಿದ್ದಾರೆ.
ಇದನ್ನೂ ಓದಿ : ಅತ್ಯಾಚಾರ ಮತ್ತು ಕೊಲೆ ಪ್ರಕರಣ; ಮನೆಯಿಂದ ನಾಪತ್ತೆಯಾಗಿದ್ದ ಯುವತಿ ಶವವಾಗಿ ಪತ್ತೆ
ಆಂಬರ್ ವಿಲಿಯಮ್ಸ್ ತುರ್ತು ವೈದ್ಯಕೀಯ ಸೇವೆಗೆ ಕರೆ ಮಾಡಿದ್ದ ವೇಳೆ ವೈದ್ಯರು ರಿಚ್ ಹೋಮಿ ಕ್ವಾನ್‌ನ ಮನೆಗೆ ದೌಡಾಯಿಸುವ ಮುನ್ನವೇ ಪ್ರಥಮ ಚಿಕಿತ್ಸೆ ಕುರಿತಾಗಿ ದೂರವಾಣಿ ಮೂಲಕವೇ ಮಾಹಿತಿ ನೀಡುತ್ತಿದ್ದರು. ಅಸ್ವಸ್ಥ ವ್ಯಕ್ತಿಯ ಉಸಿರಾಟ ಕಾಯ್ದುಕೊಳ್ಳಲು ನೆರವಾಗುವಂತೆ ಸಲಹೆ ನೀಡಿದ್ದರು. ಆದರೆ, ವೈದ್ಯರು ಆತನ ಮನೆಗೆ ಧಾವಿಸುವ ಹೊತ್ತಿಗಾಗಲೇ ಆತ ಪ್ರಾಣ ಬಿಟ್ಟಿದ್ದ. ಇದೀಗ ಆತನ ಮರಣೋತ್ತರ ಪರೀಕ್ಷೆಗೆ ಶವವನ್ನು ರವಾನಿಸಲಾಗಿದ್ದು, ರಿಚ್ ಹೋಮಿ ಕ್ವಾನ್‌ನ ರ‍್ಯಾಪ್ ಸಂಗೀತ ಪ್ರೇಮಿಗಳು ಆಘಾತದಲ್ಲಿದ್ದಾರೆ. ಆತನ ಬಾಯಿಯಲ್ಲಿ ನೊರೆ ಬರಲು ಮಾದಕ ವಸ್ತುಗಳ ಓವರ್ ಡೋಸ್ ಕಾರಣ ಇರಬಹುದು ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ, ಪೊಲೀಸರ ತನಿಖೆ ಹಾಗೂ ವೈದ್ಯರು ನಡೆಸುವ ಮರಣೋತ್ತರ ಪರೀಕ್ಷೆಯ ಬಳಿಕವಷ್ಟೇ ಈ ಕುರಿತಾಗಿ ಅಧಿಕೃತ ಮಾಹಿತಿ ಲಭ್ಯವಾಗಲಿದೆ.