ಕೃಷ್ಣರಾಜ ಸಾಗರ ಜಲಾಶಯದಿಂದ 50000 ಕ್ಯೂಸೆಕ್ ಬಿಡುಗಡೆ: ರಂಗನತಿಟ್ಟು ಪಕ್ಷಿಧಾಮ ಮುಳುಗಡೆ

ಮಂಡ್ಯ: ಕಾವೇರಿ ನದಿ ಉಕ್ಕಿ ಹರಿಯುತ್ತಿರುತ್ತಿದೆ. ವಿಶ್ವ ಪ್ರಸಿದ್ಧ ಕೃಷ್ಣರಾಜ ಸಾಗರ(ಕೆಆರ್‌ಎಸ್‌) ಜಲಾಶಯದಿಂದ 50,573 ಕ್ಯೂಸೆಕ್ ನೀರನ್ನು ನದಿಗೆ ಬಿಡುಗಡೆ ಮಾಡಲಾಗಿದ್ದು ಶ್ರೀರಂಗಪಟ್ಟಣದಲ್ಲಿರುವ ರಂಗನತಿಟ್ಟು ಪಕ್ಷಿಧಾಮದ ನಡುಗಡ್ಡೆಗಳು ಮುಳಗಡೆಯಾಗಿದೆ.

ಕೆಆರ್‌ಎಸ್‌ ಜಲಾಶಯದಿಂದ ನೀರು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ನದಿ ಪಾತ್ರದ ಪ್ರವಾಸಿತಾಣಗಳಲ್ಲಿ ಪ್ರವಾಹ ಭೀತಿ ಉಂಟಾಗಿದೆ. ರಂಗನತಿಟ್ಟು ಪಕ್ಷಿಧಾಮದಲ್ಲಿ ಬಹುತೇಕ ನಡುಗಡ್ಡೆಗಳು ಮುಳುಗಡೆಯಾಗಿದ್ದು, ನೀರಿನ ರಭಸಕ್ಕೆ ಪಕ್ಷಿಗಳ ಗೂಡುಗಳು ಕೊಚ್ಚಿ ಹೋಗಿವೆ. ಮರಗಳ ತುದಿಯಲ್ಲಿ ಗುಂಪು ಗುಂಪಾಗಿ ಕುಳಿತಿರುವ ಪಕ್ಷಿಗಳು ಗೂಡು ರಕ್ಷಣೆ ಮಾಡಿಕೊಳ್ಳಲು ಪರದಾಡುತ್ತಿವೆ. ನಿನ್ನೆಯಿಂದಲೇ ರಂಗನತಿಟ್ಟು ಪಕ್ಷಿಧಾಮದಲ್ಲಿ ಬೋಟಿಂಗ್ ಸಂಪೂರ್ಣ ಬಂದ್ ಆಗಿದೆ.

ಜಲಾಶಯದ ನೀರಿನ ಗರಿಷ್ಠ ಮಟ್ಟ 124.80 ಅಡಿಗಳಾಗಿದ್ದು ಇಂದು ಬೆಳಗ್ಗೆ 122.60 ಅಡಿ ನೀರು ಸಂಗ್ರಹವಾಗಿದೆ. 50,467 ಕ್ಯೂಸೆಕ್ ಒಳ ಹರಿವು ಇದ್ದು 50,573 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ. ಗರಿಷ್ಠ 49.452 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಇರುವ ಜಲಾಶಯದಲ್ಲಿ 46.434 ಟಿಎಂಸಿ ನೀರು ಸಂಗ್ರಹಗೊಂಡಿದೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, 50 ಸಾವಿರ ಕ್ಯೂಸೆಕ್‌ಗೂ ಅಧಿಕ ನೀರು ಜಲಾಶಯಕ್ಕೆ ಬರುತ್ತಿದೆ. ಅಷ್ಟೇ ಪ್ರಮಾಣದಲ್ಲಿ ನೀರನ್ನು ಹೊರ ಬಿಡಲಾಗುತ್ತಿದೆ. ಸಾಧಾರಣವಾಗಿ 122 ಅಡಿ ನೀರು ಸಂಗ್ರಹವಾದ ಬಳಿಕ ಎಷ್ಟು ಒಳ ಹರಿವು ಇದೆಯೋ ಅಷ್ಟೇ ಪ್ರಮಾಣದಲ್ಲಿ ನೀರನ್ನು ಬಿಡುಗಡೆ ಮಾಡಲಾಗುತ್ತದೆ.

ಮೈಸೂರಿನಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ನಿಮಿಷಾಂಬಾ ದೇವಾಲಯದ ಸ್ನಾನಘಟ್ಟ ಹಾಗೂ ಸಂಗಮದಲ್ಲಿ ಭಕ್ತರು ನೀರಿಗೆ ಇಳಿಯದಂತೆ ಬ್ಯಾರಿಕೇಡ್ ಅಳವಡಿಸಲಾಗಿದೆ. ಸ್ನಾನ ಘಟ್ಟದಲ್ಲಿ ಸುಮಾರು 25 ಮೆಟ್ಟಿಲುಗಳು ಮುಳುಗಡೆಯಾಗಿವೆ.  ಕಪಿಲ ನದಿ ಪಾತ್ರದಲ್ಲಿ ಅತಿ ಹೆಚ್ಚು ಮಳೆಯಾಗುತ್ತಿದ್ದು, ನದಿ ಪಾತ್ರದಲ್ಲಿ ಜನ, ಜಾನುವಾರು ಹೋಗದಂತೆ ನಂಜನಗೂಡು ತಹಶೀಲ್ದಾರ್ ಆದೇಶ ಹೊರಡಿಸಿದ್ದಾರೆ. ಕಪಿಲಾ ನದಿಯ ಅನತಿ ದೂರದಲ್ಲಿರುವ ಪರಶುರಾಮ ದೇವಾಲಯಕ್ಕೆ ಜಲಾಶಯದ ನೀರು ನುಗ್ಗಿ, ದೇವಾಲಯ ಆವರಣ ಸಂಪೂರ್ಣ ಜಲಾವೃತವಾಗಿದೆ. ಹದಿನಾರು ಕಾಲು ಮಂಟಪ ಕೂಡ ಮುಳುಗಡೆಯಾಗಿದೆ.

ಕಾವೇರಿ ಕೊಳ್ಳದ ಜನರಿಗೂ ಸಹ ಪ್ರವಾಹದ ಭೀತಿ ಎದುರಾಗಿದ್ದು, ಈಗಾಗಲೇ ಕಾವೇರಿ ನೀರಾವರಿ ನಿಗಮ ಕಾವೇರಿ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರಬೇಕೆಂದು ಸೂಚನೆ ನೀಡಿದೆ.

Donate Janashakthi Media

Leave a Reply

Your email address will not be published. Required fields are marked *