ಬೆಂಗಳೂರು: ರಂಗಭೂಮಿಯಲ್ಲಿ ಬೆಳಕಿನ ಸಂಯೋಜನೆಯಲ್ಲಿ ಅತ್ಯಂತ ದೀರ್ಘಕಾಲಿಕವಾಗಿ ಸೇವೆ ಸಲ್ಲಿಸಿದ ರಂಗಕರ್ಮಿ ವಿ. ರಾಮಮೂರ್ತಿ (86) ಅವರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಅವರು ಕೆಲ ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.
ರಂಗಭೂಮಿಯಲ್ಲಿ ನಿರ್ದೇಶನ, ಅಭಿನಯ, ಮೂಕಾಭಿನಯ, ರಂಗವಿನ್ಯಾಸ, ಬೆಳಕು ವಿನ್ಯಾಸ, ರಂಗಸಂಗೀತ, ಪ್ರಸಾಧನ ಹಾಗೂ ವಸ್ತ್ರವಿನ್ಯಾಸ ಸೇರಿದಂತೆ ರಂಗಭೂಮಿಯ ಎಲ್ಲ ವಿಭಾಗಗಳಲ್ಲಿ ಪರಿಣತಿ ಸಾಧಿಸಿದ್ದ ಹಲವಾರು ತಂಡಗಳ ನಾಟಕಗಳಿಗೆ ಬೆಳಕಿನ ಸಂಯೋಜನೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ.
ಇದನ್ನು ಓದಿ: ಇದು ವ್ಯಾಕ್ಸೀನ್ ರಾಷ್ಟ್ರವಾದವಲ್ಲ, ವ್ಯಾಕ್ಸೀನ್ ವರ್ಣಬೇಧ !!
1935ರ ಮಾರ್ಚ್ 24ರಂದು ಬೆಂಗಳೂರಿನ ಕಲ್ಯಾಣನಗರಿಯಲ್ಲಿ ಅವರು ಜನಿಸಿದರು. ಏಳು ಜನ ಸಹೋದರ ಸಹೋದರಿಯರಲ್ಲಿ ರಾಮಮೂರ್ತಿಯವರು ನಾಲ್ಕನೇಯವರು. ಮೂಲತಃ ಆಂದ್ರಪ್ರದೇಶದ ವೆಲ್ಲಾಲೂರು ಮೂಲದವರಾದ ಇವರ ಮಾತೃಭಾಷೆ ತೆಲುಗು.
ತಂದೆಯವರ ನಾಟಕ ಬಗೆಗೆಗಿನ ವಿಶೇಷ ಕಾಳಜಿಯಿಂದಾಗಿ ರಂಗಭೂಮಿ ಪ್ರವೇಶಿಸಲು ಪ್ರೇರಣೆ ನೀಡಿತು. ಅಲ್ಲದೆ ಅವರ ಸೋದರ ಮಾವ ಅವರಿಗೂ ಕಲೆಯ ಬಗ್ಗೆ ಆಸಕ್ತಿ ಇದ್ದಿತು. ಗುಬ್ಬಿ ನಾಟಕ ಕಂಪನಿಯ ನಾಟಕಗಳಿಂದ ಹೆಚ್ಚು ಪ್ರಭಾವಿತರಾಗಿದ್ದು ರಾಮಮೂರ್ತಿರವರು ಗುಬ್ಬಿ ಕಂಪನಿ ಪ್ರದರ್ಶನದ ಹಲವಾರು ಜನಪ್ರಿಯ ನಾಟಕಗಳ ನೋಡುತ್ತಿದ್ದರು.
ರಾಷ್ಟ್ರೀಯ ನಾಟಕ ಶಾಲೆಯ ವಿದ್ಯಾರ್ಥಿಯಾಗಿ ಅನುಭವ ಪಡೆದ ರಾಮಮೂರ್ತಿ ಅವರು. ಎನ್‌ಎಸ್‌ಡಿ ಸೇರಿದಂತೆ ರಾಷ್ಟ್ರೀಯ ಮತ್ತು ವಿದೇಶಗಳಲ್ಲಿಯೂ ರಂಗತಂಡಗಳೊಂದಿಗೆ ವಿವಿಧ ಕಲಾಪ್ರಕಾರಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.
ಇದನ್ನು ಓದಿ: ಕರೋನಾ ಎರಡನೇ ಅಲೆಯಿಂದಾಗಿ ಪಾತಾಳಕ್ಕೆ ಕುಸಿದ ಮೈಸೂರು ಪ್ರವಾಸೋದ್ಯಮ
ರಂಗಭೂಮಿಯಲ್ಲಿ ಬೆಳಕಿನ ಸಂಯೋಜನೆಯಲ್ಲಿ ದಶಕಗಳ ಕಾಲ ಕಾರ್ಯನಿರ್ವಹಿಸುವುದರೊಂದಿಗೆ ಹಲವಾರು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಸಿರಿಪುರಂದರ, ಹಳ್ಳಿಯ ಚಿತ್ರಗಳು, ಜೋಡಿದಾರರು ನಿರ್ದೇಶಿಸಿದ್ದಾರೆ. ಅಲ್ಲದೆ, ನಾಟಕಗಳಲ್ಲಿ ಅಭಿನಯ ಮಾಡಿದ್ದಾರೆ ಮತ್ತು ಸಿನಿಮಾ, ಕಿರುತೆರೆಗಳಲ್ಲೂ ಅಭಿನಯಿಸಿದ್ದಾರೆ. ರಂಗಕೃತಿಗಳ ಅನುವಾದಕರಾಗಿಯೂ ಕೆಲಸ ಮಾಡಿದ ಅವರು ಇಂಗ್ಲೀಷ್ ನಿಂದ ಕನ್ನಡಕ್ಕೆ ಕನ್ನಡದಿಂದ ಇಂಗ್ಲೀಷಿಗೆ ಹಾಗೂ ಕನ್ನಡದಿಂದ ತೆಲುಗಿಗೆ ಮತ್ತು ತೆಲುಗು ಮತ್ತು ಹಿಂದಿಯಿಂದ ಕನ್ನಡಕ್ಕೆ ಭಾಷಾಂತರ ಮಾಡಿದ್ದಾರೆ.
ರಂಗಭೂಮಿಯ ತಾಂತ್ರಿಕತೆ ವಿಭಾಗಗಲ್ಲಿ ಅತ್ಯಂತ ಆಸಕ್ತಿ ಮತ್ತು ಒಲವಿನಿಂದ ತೊಡಗಿಸಿಕೊಳ್ಳುತ್ತಿದ್ದರು. ರಾಮಮೂರ್ತಿಯವರು 1957ರಲ್ಲಿ ಸ್ಥಾಪಿಸಿದ ಲಲಿತ ಕಲಾನಿಕೇತನ ತಂಡ ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡಿತ್ತು.
ದೇಶದ ವಿವಿಧೆಡೆ ಸುಮಾರು 50ಕ್ಕೂ ಹೆಚ್ಚು ರಂಗಶಾಲೆಗಳಿಗೆ ಸಲಹೆಗಾರರಾಗಿ, 8 ವಿಶ್ವವಿದ್ಯಾಲಯಗಳ ರಂಗಭೂಮಿ ವಿಭಾಗಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.
ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಬಿ.ವಿ.ಕಾರಂತ ಸ್ಮೃತಿ ಪುರಸ್ಕಾರ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಅವರಿಗೆ ಸಂದಿವೆ.