ಬೆಂಗಳೂರು | ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ರಂಗ ಮಹೋತ್ಸವ–ಪರಿಷೆ ಉದ್ಘಾಟನೆ

ಬೆಂಗಳೂರು: ಪ್ರಸ್ತುತ ಸ್ಥಿತಿಗತಿಯ ಬಗ್ಗೆ ಒಂದೆಡೆ ರಂಗಭೂಮಿಯ ಮಾತು ಮಂಥನ ನಡೆದರೆ, ಇನ್ನೊಂದೆಡೆ ವಿವಿಧ ರಂಗ ತಂಡಗಳಿಂದ ರಂಗ ಗೀತೆಗಳ ಗಾಯನ. ಮತ್ತೊಂದೆಡೆ ನಾಟಕಗಳ ಪ್ರದರ್ಶನ.

ಕರ್ನಾಟಕ ನಾಟಕ ಅಕಾಡೆಮಿ ಮತ್ತು ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆ ಜಂಟಿಯಾಗಿ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಮಾಧ್ಯಮ ಸಹಯೋಗದಲ್ಲಿ ಒಂದೇ ಸೂರಿನಡಿ ಅನಾವರಣಗೊಂಡಿದ್ದು ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಆರು ದಿನಗಳ ‘ಭಾರತ ರಂಗ ಮಹೋತ್ಸವ’ ಹಾಗೂ ‘ರಂಗ ಪರಿಷೆ’ಗೆ ಭಾನುವಾರ ಚಾಲನೆ ದೊರೆಯಿತು.

ವಿವಿಧ ರಂಗ ತಂಡಗಳಿಂದ ರಂಗ ದಿಗ್ಗಜರ ಛಾಯಾಚಿತ್ರ, ನಾಟಕಗಳ ದೃಶ್ಯಾವಳಿಯ ಪ್ರದರ್ಶನ ಗಮನ ಸೆಳೆಯಿತು. ಐದು ವೇದಿಕೆಗಳಲ್ಲಿ ನಾಟಕಗಳ ಪ್ರದರ್ಶನ ಹಾಗೂ ರಂಗ ಗೀತೆಗಳ ಗಾಯನದ ಜತೆಗೆ ರಂಗಭೂಮಿಗೆ ಸಂಬಂಧಿಸಿದ ಚಟುವಟಿಕೆಗಳು ನಡೆದವು. ಪುಸ್ತಕ ಮಳಿಗೆ, ಆಹಾರ ಮಳಿಗೆಗಳೂ ಪರಿಷೆಯ ಭಾಗವಾಗಿದ್ದವು.

ಇದನ್ನೂ ಓದಿ : ರೈತರ ಆತ್ಮಹತ್ಯೆ ಪ್ರಕರಣ: 2,443 ಕುಟುಂಬಕ್ಕೆ ಪರಿಹಾರ ನೀಡಲಾಗಿದೆ – ಎನ್‌. ಚಲುವರಾಯ ಸ್ವಾಮಿ

ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಭಾರತ ರಂಗ ಮಹೋತ್ಸವವನ್ನು ಉದ್ಘಾಟಿಸಿದರು. ನಟ ಪ್ರಕಾಶ್ ರಾಜ್ ಅವರು ರಂಗ ಪರಿಷೆ ವಿಶೇಷ ಸಂಚಿಕೆ ಬಿಡುಗಡೆ ಮಾಡಿದರು. ನಟಿ ಉಮಾಶ್ರೀ ಅವರಿಗೆ ಉತ್ಸವದ ಗೌರವ ಪ್ರದಾನ ಮಾಡಲಾಯಿತು. ಜಾನಪದ ವಿದ್ವಾಂಸ ಗೊ.ರು. ಚನ್ನಬಸಪ್ಪ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ. ಗಾಯಿತ್ರಿ, ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವೆ ಕೆ.ಟಿ. ಶಾಂತಲಾ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್‌.ಎನ್. ಮುಕುಂದರಾಜ್, ರಂಗಪರಿಷೆ ನಿರ್ದೇಶಕ ಬಿ. ಸುರೇಶ ಮೊದಲಾದವರು ಪಾಲ್ಗೊಂಡಿದ್ದರು.

40 ವರ್ಷ ಪೂರೈಸಿರುವ ‘ಅಂತರಂಗ’ ಹವ್ಯಾಸಿ ನಾಟಕ ತಂಡ ಮತ್ತು ‘ಕದಂಬ ರಂಗ ವೇದಿಕೆ’ ರಂಗ ತಂಡಕ್ಕೆ ಇದೇ ವೇಳೆ ರಂಗ ಗೌರವ ನೀಡಿ ಸನ್ಮಾನಿಸಲಾಯಿತು.

ಸಾಣೇಹಳ್ಳಿಯ ತರಳಬಾಳು ಶಾಖಾಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಉತ್ಸವ ಗೌರವ ಪ‍್ರದಾನ ಮಾಡಲಾಯಿತು. ಇದಕ್ಕೂ ಮೊದಲು ರಂಗ ಪರಿಷೆಗೆ ಚಾಲನೆ ನೀಡಲಾಯಿತು.  ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ, ರಂಗ ಪರಿಷೆ ಸಂಯೋಜಕ ಶಶಿಧರ ಭಾರಿಘಾಟ್ ಮೊದಲಾದವರು ಉಪಸ್ಥಿತರಿದ್ದರು.

ವಿವಿಧ ರಂಗ ತಂಡಗಳು ಬೆನ್ನೆಲುಬಾಗಿ ನಿಂತ ಪರಿಣಾಮ ಈ ಪರಿಷೆ ಸಾಧ್ಯವಾಗುತ್ತಿದೆ’ ‘ರಂಗ ಪರಿಷೆಗೆ ಅಗತ್ಯ ನೆರವು ನೀಡುವುದಾಗಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಭರವಸೆ ನೀಡಿದ್ದಾರೆ. ಆದ್ದರಿಂದ ಈ ರಂಗ ಪರಿಷೆ ಮಾಡುತ್ತಿದ್ದೇವೆ. ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ ಹೇಳಿದರು.

‘ಕನ್ನಡ ಭಾಷೆ ಉಳಿಸುವಲ್ಲಿ ಕನ್ನಡ ರಂಗಭೂಮಿ ದೊಡ್ಡ ಶಕ್ತಿಯಾಗಿ ಕಾರ್ಯನಿರ್ವಹಿಸಲಿದೆ. ಆದ್ದರಿಂದ ರಾಜ್ಯ ಸರ್ಕಾರವು ಆಯ್ದ ಶಾಲೆಗಳಲ್ಲಾದರೂ ರಂಗ ಶಿಕ್ಷಕರನ್ನು ನೇಮಕ ಮಾಡಬೇಕು. ನಾವೆಲ್ಲ ಒಂದು ಎಂಬ ಭಾವ ಮೂಡಲು ನಾಟಕ ಸಹಕಾರಿ. ರಂಗ ಶಿಕ್ಷಕರ ನೇಮಕದ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದರು.

ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ‘ರಂಗಭೂಮಿಗೆ ಹೆಚ್ಚು ಅನುದಾನ ನೀಡಿದರೆ ರಂಗ ಸಂಸ್ಕೃತಿ ಬೆಳೆಯಲು ಸಾಧ್ಯ. ಆದ್ದರಿಂದ ಸರ್ಕಾರವು ರಂಗಾಯಣಗಳು ಹಾಗೂ ರಂಗ ಚಟುವಟಿಕೆ ಕೈಗೊಂಡಿರುವ ಸಂಘ–ಸಂಸ್ಥೆಗಳಿಗೆ ಅಗತ್ಯ ಅನುದಾನ ಒದಗಿಸಬೇಕು. ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ನಾಟಕ ಸಹಕಾರಿ. ರಂಗ ಶಿಕ್ಷಕರ ನೇಮಕಾತಿಗೆ ಸರ್ಕಾರ ಆದ್ಯತೆ ನೀಡಬೇಕು. ಕನಿಷ್ಠ ನೂರು ಶಿಕ್ಷಕರನ್ನಾದರೂ ನೇಮಕ ಮಾಡಬೇಕು’ ಎಂದು ಆಗ್ರಹಿಸಿದರು.

ಇದನ್ನೂ ನೋಡಿ : ಗಾಂಧೀಜಿಯವರ ವಿಚಾರಗಳೊಂದಿಗೆ ಮುಖಾಮುಖಿ ಆಗಬೇಕಿದೆ – ಬರಗೂರು ರಾಮಚಂದ್ರಪ್ಪ Janashakthi Media

Donate Janashakthi Media

Leave a Reply

Your email address will not be published. Required fields are marked *