819 ಕೋಟಿ ರೂ. ಸಾರ್ವಜನಿಕ ಹಣ ಲೂಟಿ ಮಾಡಿದ ರಮೇಶ್ ಜಾರಕಿಹೊಳಿ: ಲಕ್ಷ್ಮಣ್ ಗಂಭೀರ ಆರೋಪ

ಬೆಂಗಳೂರು : ಬಿಜೆಪಿ ಶಾಸಕ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮೇಲೆ ಕಾಂಗ್ರೆಸ್ ಭ್ರಷ್ಟಾಚಾರದ ಆರೋಪ ಮಾಡಿದ್ದು, ಸಾರ್ವಜನಿಕರ 819 ಕೋಟಿ ಹಣ ಲೂಟಿ ಮಾಡಿರುವ ಬಗ್ಗೆ ದಾಖಲೆಗಳನ್ನು ಬಿಡುಗಡೆಗೊಳಿಸಿದೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್‌ ಪಕ್ಷದ ಪ್ರಧಾನ ಕಾರ್ಯದರ್ಶಿ ಎಂ. ಲಕ್ಷಣ್ ಮಾತನಾಡಿ, ರಮೇಶ್ ಜಾರಕಿಹೊಳಿ ಸಮ್ಮಿಶ್ರ ಸರ್ಕಾರ ಬೀಳಿಸಿದ ರೂವಾರಿ. ಅವರು 819 ಕೋಟಿ ರೂ. ಸಾರ್ವಜನಿಕ ಹಣ ಲೂಟಿ ಮಾಡಿದ್ದಾರೆ. ಅಮಿತ್ ಶಾ, ದೇವೇಂದ್ರ ಫಡ್ನವೀಸ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ವಂಚನೆ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ. ಇದುವರೆಗೆ ರಮೇಶ್ ಜಾರಕಿಹೊಳಿಗೆ ಒಂದು ನೊಟೀಸ್ ಸಹ ನೀಡಲಾಗಿಲ್ಲ ಎಂದರು.

ರಮೇಶ್ ಜಾರಕಿಹೊಳಿ ಮಗ, ಮಗಳು, ಸೊಸೆ ಸೇರಿ ಎಂಟು ಜನ ಸೌಭಾಗ್ಯ ಲಕ್ಷ್ಮೀ ಸಕ್ಕರೆ ಸಂಸ್ಥೆಯ ಪ್ರಮುಖರು. ಸಂಸ್ಥೆಯಲ್ಲಿ ಅವ್ಯವಹಾರ ನಡೆದಿದ್ದು, ಸೌಭಾಗ್ಯ ಲಕ್ಷ್ಮಿ ಸಕ್ಕರೆ ಸಂಸ್ಥೆಯಲ್ಲಿ ಅವರೇ ಬರೆದಿರುವ ದಾಖಲೆ ಬಿಡುಗಡೆ ಮಾಡುತ್ತಿದ್ದೇನೆ. ಅಭಿನಂದನ್ ಪಾಟೀಲ್ ರಮೇಶ್ ಜಾರಕಿಹೊಳಿಯ ಬೇನಾಮಿ ಆಸ್ತಿಯ ಒಡೆಯ. ಅಭಿನಂದನ್ ಪಾಟೀಲ್ ಹೆಸರಲ್ಲಿ ಒಂದು ಕಂಪನಿ ಇದೆ. ಸೌಭಾಗ್ಯ ಲಕ್ಷ್ಮೀ ಸಂಸ್ಥೆ ಲಾಭದಾಯಕವಿಲ್ಲವೆಂದು ಘೋಷಣೆ ಮಾಡಿದ್ದಾರೆ. ಆದರೂ ಅಲ್ಲಿ ಕಬ್ಬನ್ನುಅರೆಯುತ್ತಾ ಇದ್ದಾರೆ. ಅದರಿಂದ ಲಾಭ ಬರುತ್ತಿದೆ. ಲಾಭಾಂಶ ಮಾತ್ರ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರುಗಳಿಗೆ ಹೋಗುತ್ತಿದೆ. ರಮೇಶ್‌ ಜಾರಕಿಹೊಳಿ ಕುಟುಂಬಸ್ಥರೇ ಆಡಳಿತ ಮಂಡಳಿ ಸದಸ್ಯರಾಗಿದ್ದಾರೆ ಎಂದರು.

ಸೌಭಾಗ್ಯ ಲಕ್ಷ್ಮಿ ಸಕ್ಕರೆ ಸಂಸ್ಥೆ ಹಲವು ಬ್ಯಾಂಕುಗಳಲ್ಲಿ ಸಾಲ ಮಾಡಿದೆ. ಎಷ್ಟು ಜನರಿಗೆ ಸಾಲ ಕೊಡಬೇಕು ಅಂತ ಅವರೇ ದಾಖಲೆ ಸಲ್ಲಿಸಿದ್ದಾರೆ. ಇದರ ತನಿಖೆಯೂ ನಡೀತಿದೆ. ಅಭಿನಂದನ್ ಪಾಟೀಲ್, ರಮೇಶ್ ಜಾರಕಿಹೊಳಿಯವರ ಬೇನಾಮಿ. ಇವರ ಅರಿಹಂತ್ ಸೊಸೈಟಿಯಿಂದ 48 ಕೋಟಿ ರೂ ಸಾಲ ಪಡೆದಿದ್ದಾರೆ. 578 ಕೋಟಿ ರೂ ಸಾಲವನ್ನು ವಿವಿಧ ಡಿಸಿಸಿ ಬ್ಯಾಂಕುಗಳಿಂದ ರಮೇಶ್ ಜಾರಕಿಹೊಳಿ ಪಡೆದಿದ್ದಾರೆ ಎಂದರು.

156 ಕೋಟಿ ರೂ. ಆದಾಯ ತೆರಿಗೆ ಕಟ್ಟದೇ ರಮೇಶ್ ಜಾರಕಿಹೊಳಿ ವಂಚನೆ ಮಾಡಿದ್ದಾರೆ. ಅಪೆಕ್ಸ್ ಬ್ಯಾಂಕಿನಿಂದ ಸೌಭಾಗ್ಯ ಲಕ್ಷ್ಮಿ ಸಕ್ಕರೆ ಸಂಸ್ಥೆಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ್ 2021ರಲ್ಲಿ ನೊಟೀಸು ಕೊಟ್ಟಿದ್ದಾರೆ. ಸೌಭಾಗ್ಯ ಲಕ್ಷ್ಮಿ ಶುಗರ್ ಕಂಪೆನಿ ಸಾಲ ಮರುಪಾವತಿಸಿಲ್ಲ. ಕಂಪೆನಿಯ ಆಸ್ತಿಗಳನ್ನು ಸ್ವಾಧೀನ ಪಡಿಸಿಕೊಳ್ಳುವ ಬಗ್ಗೆ ಉಲ್ಲೇಖ ಇದೆ ಎಂದು ಎಂ. ಲಕ್ಷ್ಮಣ್‌ ವಿವರಿಸಿದರು.

ಸಾಲ ಹಿಂದುರಿಗಿಸಿದ ಹಿನ್ನಲೆ ನಿಮ್ಮ ಆಸ್ತಿ ಮುಟ್ಟುಗೋಲು ಹಾಕಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿಗಳಿಗೆ ನೊಟೀಸ್ ಕೊಡುತ್ತಾರೆ. ಜಿಲ್ಲಾಧಿಕಾರಿ ಇಲ್ಲಿ ತನಕ ಏನೂ ಕ್ರಮಕೈಕೊಂಡಿಲ್ಲ. ಬಳಿಕ ರಮೇಶ್ ಕೋರ್ಟ್ ಮೊರೆ ಹೋದಾಗ ನ್ಯಾಯಾಲಯ ಒಂದು ನಿರ್ದೆಶನ ನೀಡಿ ಮೊದಲು ನೀವು ಪಡೆದ ಸಾಲದ ಅರ್ಧ ಪಾವತಿ ಮಾಡಿ ಎಂದು ಸೂಚನೆ ನೀಡಿದೆ. ಆದರೆ ನ್ಯಾಯಾಲಯದ ಸೂಚನೆಯನ್ನು ಉಲ್ಲಂಘಿಸಿದ್ದಾರೆ. ಅದಾದ ಬಳಿಕ ಮತ್ತೆ ಅಫೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ್ ನ್ಯಾಯಾಲಯದ ಸೂಚನೆಯ ಹಿನ್ನಲೆ ಮತ್ತೆ ನೋಟೀಸು ನೀಡುತ್ತಾರೆ. ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಮನವಿ ಮಾಡುತ್ತಾರೆ. ಸೌಭಾಗ್ಯ ಲಕ್ಷ್ಮೀ ಸಕ್ಕರೆ ಸಂಸ್ಥೆ 900 ಕೋಟಿ ಗೂ ಹೆಚ್ಚಿನ ಆಸ್ತಿ ಮೌಲ್ಯ ಹೊಂದಿದೆ, ರಮೇಶ್ ಜಾರಕಿಹೊಳಿ ಇಷ್ಟು ತಪ್ಪು ಮಾಡಿದರೂ ಐಟಿ, ಇಡಿ ಏನೂ ಮಾಡುತ್ತಿದೆ? ಅಮಿತ್ ಶಾ ಏನು ಮಾಡುತ್ತಿದ್ದಾರೆ. ಸರ್ಕಾರ ಬೀಳಿಸುತ್ತಾರೆ ಎನ್ನುವ ಭಯವೇ ನಿಮಗೆ? ಅಥವಾ ಸರ್ಕಾರ ತಂದವರು ಎನ್ನುವ ಕಾಳಜಿಯೆ? ಎಂದು ಲಕ್ಷ್ಮಣ್‌ ಪ್ರಶ್ನಿಸಿದರು.

ಬೆಂಗಳೂರಿನಲ್ಲಿ ಇರುವ ಜಾರಿ ನಿರ್ದೇಶನಾಲಯ(ಇಡಿ) ಕಚೇರಿಯಲ್ಲಿ ನಾನು ದೂರು ದಾಖಲು ಮಾಡುತ್ತೇನೆ. ರಮೇಶ್ ಜಾರಕಿಹೊಳಿ ವಂಚನೆ ವಿರುದ್ಧ ದೂರು ಕೊಡುವೆ. ನಂತರ ಹೈಕೋರ್ಟ್ ನಲ್ಲಿ ಐಟಿ ವಿರುದ್ಧ ಅರ್ಜಿ ಸಲ್ಲಿಸುವೆ. ಐಟಿಯವರು ರಮೇಶ್ ಜಾರಕಿಹೊಳಿಗೆ ಕೇವಲ ಒಂದು ನೋಟೀಸು ಕೊಟ್ಟು ಸುಮ್ಮನಾಗಿದೆ. ಐಟಿ ಸರ್ಕಾರದ ಕೈಗೊಂಬೆಯಾಗಿ ಇದೆಯಾ ಎಂದು ಅವರು ಪ್ರಶ್ನಿಸಿದರು.

Donate Janashakthi Media

Leave a Reply

Your email address will not be published. Required fields are marked *